ಹೊಸ್ತಿಲು ದಾಟಿ ಹೊಸ ಚಿಗುರು

ಪೂರ್ವ ದಿಗಂತದಲ್ಲಿ ಮತ್ತದೇ ಹಳೆ
ಸೂರ್ಯನ ಆಗಮನ
ಸಂಸಾರ ಸಾಗರದಲ್ಲಿ ತೇಲಿ ಬಂತು
ಮತ್ತೊಂದು ದಿನ
ಕೇಳಿದರೂ ತಿರುಗದ ಮಡದಿ, ಮುಡಿದ
ಬಾಡಿದ ಹೂವಿನಂತೆ
ಸಕ್ಕರೆ ಹೆಚ್ಚಾಗಿ ರುಚಿಗೆಟ್ಟ ಕಪ್ಪು
ಕಾಪಿಯ ಗಸಿಯಂತೆ

ಮನೆಯಲ್ಲಿ ಸೆಕೆ ಮಿತಿ ಮೀರಿದೆ
ಹೆಪ್ಪುಗಟ್ಟಿದ ಮೌನವಿರಲು
ಬೀದಿ ಬಾಗಿಲ ರಂಗೋಲಿ ಮಾಸಿದೆ
ಕನಸಿನ ಬಣ್ಣ ಖಾಲಿಯಾಗಿರಲು
ಬೇಸರದ ನಿತ್ಯ ಶೋಕದಲಿ ದೀಪ
ಹಚ್ಚದೆ ಕತ್ತಲಾಗಿದೆ
ಮನದ ಮುಗಿಲಿನ ಹುಚ್ಚು ಮಳೆಗೆ
ಮನೆ ಅಸ್ತವ್ಯಸ್ತವಾಗಿದೆ

ಅಂಬೆಗಾಲಲ್ಲಿ ಗೆಜ್ಜೆಸದ್ದಿನ ಮೇಳದಲ್ಲಿ ಆಗ
ಬಾಲಸೂರ್ಯನ ಆಗಮನ
ಯಕ್ಷಿಣಿಯ ದಂಡದಲ್ಲಿ ರೂಪು ತಾಳಿತು
ಮಿಂಚುವ ಹೊಸ ದಿನ
ಹಾಲುಣಿಸುತ್ತಾ ನೋಡುತ್ತಾಳೆ ನನ್ನಾಕೆ
ಪ್ರೀತಿಯ ಕಂಗಳಲ್ಲಿ
ಬೆಳ್ಳಿಯ ವಳ್ಳೆಯಲಿ ಬಿಟ್ಟ ಹಾಲಹನಿ
ಹೊಳೆಯುವುದು ಮುತ್ತಂತೆ

ದೇವರ ಮನೆಯ ಪುಟ್ಟ ಗಂಟೆಯಂತೆ
ಮಗು ನಗುತಿರಲು
ಪುಟ್ಟ ಪಾದದ ಅಂಗಾಲಿನಲ್ಲಿ ಬರೆದ ಚಿತ್ರ
ಭವಿಷ್ಯದ ಕನಸಾಗಿರಲು
ತುಂಟತನಕ್ಕೆ  ಮನದ ತುಂಬಾ ಪ್ರೀತಿತುಂಬಿ
ಮನೆ ಬೆಳಕಾಗಿರಲು
ಕಂದನ ಕೈಯಲ್ಲಿ ಎಲ್ಲಾ ಚೆಲ್ಲಾಪಿಲ್ಲಿಯಾಗುತ್ತಲೇ
ಮೂಡುತ್ತಿದೆ ಶಾಂತಿ ಎದೆಯೊಳಗೆ

12 thoughts on “ಹೊಸ್ತಿಲು ದಾಟಿ ಹೊಸ ಚಿಗುರು

  1. ಚಿನ್ನದ ಗೊ೦ಬೆಯ೦ಥ
    ಮಗುವೊ೦ದು ಜೊತೆಯಲಿರಲು
    ಪ್ರತಿ ಹೆಜ್ಜೆಯಲು ಪ್ರೀತಿ ಚೆಲ್ಲಿರಲು
    ನಗೆ ಮುತ್ತುಗಳು ಎಲ್ಲೆಲ್ಲು ಹರಡಿರಲು
    ಕಿವಿಯಲಿ ತೊದಲು ನುಡಿಯ ಇ೦ಪಿರಲು
    ಮನೆಯಾಗುವುದು ನ೦ದನ
    ಬದುಕಾಗುವುದು ಪರಿಪೂರ್ಣ

    Liked by 2 people

  2. ಕಂದನ ಆಕ್ರಂದನಕ್ಕು ಹರುಷವುಕ್ಕಿಸುವ ಶಕ್ತಿಯಿರುವುದು ಇಹ ಸೋಜಿಗದ ವೈಚಿತ್ರಗಳಲ್ಲಿ ಒಂದು.. ಚೆಲ್ಲಾಪಿಲ್ಲಿಯಲ್ಲು ಒಪ್ಪ ಒರಣ ಕಾಣಲು ಸಾಧ್ಯವಾಗುವುದು ಹತ್ತಿರದಲ್ಲಿ ಕಂದನ ನೆರಳಿದ್ದಾಗ ಮಾತ್ರವೆ.. ಅದನ್ನೆ ತುಸು ಎತ್ತರ ಸ್ತರಕ್ಕೆ ಹೊಯ್ದರೆ – ಬದಲಾವಣೆಯೆನ್ನುವುದು ಜೀವನದ ಸಂಜೀವಿನಿಯಿದ್ದಂತೆ – ಏಕತಾನತೆಯಿಂದ ಮುಕ್ತವಾಗಿ ಮತ್ತೆ ಚಟುವಟಿಕೆಗೆ ತೊಡಗುವಂತೆ ಪ್ರೇರೇಪಿಸುವುದು ಅದರಿಂದಲೆ. ಇದನ್ನರಿತ ಋತುಗಳೂ ಕೂಡ ಅದೆ ನಿಯಮ ಪಾಲಿಸುತ್ತೆ ನೋಡಿ 😊

    Liked by 1 person

Leave a comment