ಡೈರಿ ಆಫ್ ಮಿಸೆಸ್ ಶಾರದ

ಅವತ್ತು ಆಗಿದ್ದು ಪವಾಡ ಅಂತ ಎಲ್ಲರೂ ಹೇಳ್ತಾರೆ. ನಂಗೂ ಹಾಗೆ ಅನಿಸತ್ತೆ. ಅದೊಂದು ಬೆಳಿಗ್ಗೆ ನಾನು ಮತ್ತು ನಮ್ಮ ಮನೆಯವರು, ನಮ್ಮ ಪುಟ್ಟ ಮಗು ಜೊತೆ ಚಿಕ್ಕಮ್ಮನ ಮಗಳ ಮನೆಗೆ ಹೊರಟಿದ್ವಿ. ರೋಡ್ ನೋಡ್ತಾನೆ ಇದ್ವಿ , ಲೇಟಾಯ್ತು ಅಂತ ಸ್ವಲ್ಪ ಸ್ಪೀಡಾಗಿ ಹೋಗ್ತಾ ಇದ್ರು. ಅದೆಲ್ಲಿತ್ತೋ ಫ್ಲೈ ಓವರ್ ಕೆಳಗೆ ಒಂದು ನಿಂತಿರೊ ಗಾಡಿಗೆ ನಮ್ಮ ಬೈಕ್ ಟಚ್ ಆಯ್ತು ಕಣ್ಣು ಬಿಡೋಷ್ಟರಲ್ಲಿ ನಾನು ರೋಡಿಗೆ ಬಿದ್ದಿದ್ದೆ, ನನ್ನ ಜೊತೆ ಇವರು ಕೂಡ ಬಿದ್ರು . ಆ ಕ್ಷಣಕ್ಕೆ ನಂಗೆ ಮಗು ಕಾಣಲಿಲ್ಲ, ಗಾಬರಿಯಾಗಿ ನೋಡಿದ್ರೆ ಮಗು ಬೈಕಲ್ಲೇ ಇತ್ತು , ಬೈಕು ಮುಂದೆ ಹೋಗ್ತಿದೆ. ಆಮೇಲೆ ಗೊತ್ತಾಗಿದ್ದು, ಸುಮಾರು 300 ಮೀಟರ್ ಮಗು ಗಾಡಿಲಿ ಹೋಗಿ ಡಿವೈಡರ್ ಮೇಲೆ ಹುಲ್ಲಿನ ಮೇಲೆ ಬಿದ್ದಿತ್ತು‌. ಆಶ್ಚರ್ಯ ಅಂದರೆ ಐದು ವರ್ಷದ ಮಗುಗೆ ಏನೂ ಪೆಟ್ಟಾಗಿರಲಿಲ್ಲ.

ಇದೆಲ್ಲಾ ಆದ ಮೇಲೆ ತಿಂಗಳಾನುಗಟ್ಟಲೆ ನಾನು ಅಡುಗೆ , ನಿದ್ರೆ ಊಟ , ಮನೆಕೆಲಸ, ಪಾಪುನ ನೋಡಿಕೊಳ್ಳೋದನ್ನು ಕೂಡ ಬಿಟ್ಟು ಇದನ್ನೆ ಮತ್ತೆ ಮತ್ತೆ ಯೋಚಿಸುತ್ತಾ ಇದ್ದೆ. ಅದು ಯಾಕೋ ಇದೊಂತರ ಪವಾಡ ಅನಿಸಿಬಿಡ್ತು. ಅದೇ ರೋಡಿಗೆ ಎಷ್ಟೋ ಸಲ ಹೋಗಿ ಏನಾಗಿರಬಹುದೆಂದು ಊಹಿಸಿಕೊಳ್ತಾ ಇದ್ದೆ.

ಇಷ್ಟೇ ಆಗಿದ್ರೆ ನಾ ನಿಮಗೆ ಇದನ್ನೆಲ್ಲಾ ಹೇಳುವ ಅಗತ್ಯ ಇರಲಿಲ್ಲ‌‌ . ಆ ಘಟನೆಯನ್ನ ಮರೆಯುವ ಹಂತಕ್ಕೆ ಬಂದಿದ್ದೆ‌. ಆದರೆ ಆಗಲೇ ನಂಜೊತೆ ಯಾರೋ ಇರುವ ಹಾಗೆ ಅನಿಸೋಕೆ ಶುರುವಾಗಿದ್ದು‌. ಬೈಕಲ್ಲಿ ಹಿಂದೆ ಕೂತ ಹಾಗೆ ಭಾರವಾಗ್ತಿತ್ತು, ಪಕ್ಕದಲ್ಲಿ ನಡೆದ ಹಾಗೆ ಸದ್ದು, ಪಕ್ಕ ನಿಂತು ನನ್ನನ್ನೆ ನೋಡುತ್ತಿರುವ ಹಾಗೆ. ಇದು ಭ್ರಮೆ ಅಂತ ನಾನು ಅಷ್ಟು ತಲೆ ಕೆಡಿಸಿಕೊಳ್ಳದೆ ಇರಲು ಪ್ರಯತ್ನಿಸಿದೆ. ಆದರೆ ಇದು ಭ್ರಮೆ ಅಲ್ಲ, ನಂಗೆ ಯಾರೋ ಹಿಂಬಾಲಿಸುತ್ತಿರುವುದು ಖಚಿತ ಆಗಿತ್ತು. ನನ್ನ ಮನೆಯೊಳಗೆ ಈಗ ನಾವು ಮೂರಲ್ಲದೆ ನಾಲ್ಕು ಜನ ಇದ್ದ ಹಾಗೆ ಆಗಿತ್ತು.

ನಾನು ನಡೀತಾ ನಂಜೊತೆಗೆ ಬೂಟ್ಸ್ ಹಾಕಿಕೊಂಡು ನಡೆಯುವ ಶಬ್ದ ಕೇಳೋಕೆ ಶುರು ಆಯ್ತು. ಕೆಲವೊಮ್ಮೆ ತೀರ ನಿಶ್ಯಬ್ದದಲ್ಲಿ ಯಾರದೋ ಉಸಿರಾಟ ಕೂಡ ಕೇಳುತ್ತಾ ಇತ್ತು. ಹೋದಲ್ಲಿ ಬಂದಲ್ಲಿ ಜೊತೆಗಿದ್ದ ಅನುಭವ ಆಗ್ತಾನೆ ಹೋಯ್ತು. ಗಂಡನಿಗೆ ಹೇಳಿದರೆ ಎಲ್ಲಿದೋ ಭ್ರಾಂತು ಅಂದರು. ಯಾರಿಗೂ ಅದು ಕೇಳ್ತಾನೂ ಇರಲಿಲ್ಲ. ಆದರೆ ನನಗೆ ದಿನೇ ದಿನೇ ಅದರ ಸದ್ದು, ಇರುವಿಕೆ ಸ್ಪಷ್ಟವಾಗ್ತಾ ಹೋಯ್ತು. ನಾನು ನಿದ್ದೆ ಮಾಡದೆ ವಾರ ಕಳೆದೆ, ಭಯದಲ್ಲೇ ಪೇಚಾಡುತ್ತಿದ್ದೆ. ಕೊನೆಗೊಮ್ಮೆ ಪಕ್ಕದ ಮನೆಯವರ ಕೂಡಿ ಒಬ್ಬ ಪೂಜಾರಿಯನ್ನು ನೋಡಲು ಕೂಡ ಹೋದೆ.

ಅಲ್ಲಿ ಆತ ಹೇಳಿದ್ದು ನನಗೆ ಸರಿ ಅನಿಸತ್ತೆ. ಈ ಜಗತ್ತಿನಲ್ಲಿ ನಾವು ಎಲ್ಲೇ ನಿಂತಿದ್ದರೂ ಕನಿಷ್ಟ ಹತ್ತು ಹೆಣಗಳು ನಮ್ಮ ಕಾಲ ಕೆಳಗಿರುತ್ತದೆ. ಅಷ್ಟು ತಲೆಮಾರುಗಳು ಆಗಿ ಹೋಗಿವೆ. ಈ ಆತ್ಮಗಳಲ್ಲಿ ಹಲವು ಈ ಲೋಕಕ್ಕೆ ಬರಲು ಆಗದೆ ಮುಂದೆ ಹೋಗಲು ಆಗದೆ ತ್ರಿಶಂಕು ಸ್ಥಿತಿಯಲ್ಲಿ ಇರುತ್ತವೆ. ಇವುಗಳಿಗೆ ನಮ್ಮ ಜಗತ್ತಿಗೆ ಬರಲು ಒಂದು ಆಮಂತ್ರಣ ಬೇಕು. ಅಂದರೆ ದುರ್ಬಲ ಮನಸ್ಸು, ಅವನ್ನೆ ಹುಡುಕುವ ಹಪಹಪಿ, ಆತ್ಮಗಳನ್ನು ನೋಡಲು ತವಕಿಸುವುದು ಹೀಗೆ ಮನಸ್ಸನ್ನು ಅವುಗಳ ಕಡೆಗೆ ತಿರುಗಿಸಿಟ್ಟರೆ ಅವು ಪ್ರವೇಶಿಸಲು ಅವಕಾಶ ಮಾಡಿಕೊಟ್ಟಂತಾಗುತ್ತದೆ.

ನನ್ನ ವಿಚಾರದಲ್ಲೂ ಹಾಗೆ ಆಗಿತ್ತು. ಪದೇ ಪದೇ ಮಗುವಿನ ಆಕ್ಸಿಡೆಂಟಿನಲ್ಲಿ ಆದ ಪವಾಡದ ಬಗ್ಗೆ ಯೋಚಿಸಿದ್ದೆ, ಹಿಂದಿನ ಕಾಣದ ಕೈಯನ್ನು ಹುಡುಕಿ ಹೊರಟಿದ್ದೆ. ಕೊನೆಗೂ ಅದು ಸಿಕ್ಕಿ ನನ್ನನ್ನೆ ತಗುಲಿಕೊಂಡಿತ್ತು. ಆ ಪೂಜಾರಿಗಳು ಹೇಳುವ ಪ್ರಕಾರ ಒಂದು ಆತ್ಮ ನನ್ನ ಜೊತೆಗೆ ಇತ್ತು, ನೆರಳಂತೆ ನನ್ನ ಹಿಂದೆ ಮುಂದೆ ಸುಳಿದು ನನ್ನನ್ನು ಆವರಿಸಿ ಕೊಂಡಿತ್ತು. ಇನ್ನು ಸ್ವಲ್ಪ ದಿನಗಳಲ್ಲೇ ನಾ ಅದರ ಸಂಪೂರ್ಣ ಸ್ವಾಧೀನವಾಗುವ ಸಾಧ್ಯತೆಯಿತ್ತು. ಅದೊಂದು ಸೈನಿಕನ ಹಾಗೆ ಅವರಿಗೆ ನನ್ನ ಪಕ್ಕವೇ ಗೋಚರಿಸಿತು ಎಂದು ಕೂಡ ಹೇಳಿದರು. ಈ ನೆಗೆಟಿವ್ ಶಕ್ತಿಯನ್ನು ದೂರ ಮಾಡಲು ಮನಸನ್ನು ಗಟ್ಟಿಗೊಳಿಸುವುದೊಂದೆ ಮಾರ್ಗ ಎಂದರು. ಅದೇ ಜಾಗಕ್ಕೆ ಹೋಗಿ ಅಲ್ಲಿ ಅದು ಪುನಃ ಬಿಟ್ಟು ಹೋಗಬಹುದು ಎಂದು ಸೂಚಿಸಿದರು.

ನಾನು ಮತ್ತದೇ ಕೆ.ಆರ್ ಮಾರ್ಕೆಟ್ ಮೇಲೆ ಇರುವ ಫ್ಲೈ ಓವರ್ ಮೇಲೆ ಹೋದೆ. ಆದರೆ ಬಿಟ್ಟು ಹೋಗುವ ಬದಲು ಒಂದಕ್ಕಿಂತ ಹೆಚ್ಚು ಆತ್ಮಗಳು ಮುತ್ತಿದಂತೆ ಅನಿಸಿತು, ಎಲ್ಲಾ ಸೈನಿಕರೂ ಸೇರಿ ನನ್ನ ಸುತ್ತ ಕೋವಿ, ಈಟಿ , ಭರ್ಜಿಗಳೊಡನೆ ಇರಿದಂತೆ ಆಯಿತು. ಅಲ್ಲಿಂದ ತಪ್ಪಿಸಿಕೊಂಡರೆ ಸಾಕೆಂದು ಓಡಿದೆ. ಮನೆಗೆ ಬಂದು ದಾರಿ ಕಾಣದಾಗಿ ಅಳುತ್ತಾ ಕುಳಿತೆ.

ನನ್ನ ಪುಟ್ಟ ಸಂಸಾರದಿಂದ ನಾನು ದೂರವಾದಂತೆ ದುಃಖವಾಗುತ್ತಿತ್ತು. ಏನೂ ಮಾಡಲು ತೋಚದೆ ಒಬ್ಬಂಟಿಯಾಗಿದ್ದೆ. ಹೌದು ಆ ಕ್ಷಣಕ್ಕೆ ಆ ಆತ್ಮ ಕೂಡ ನನ್ನ ಜೊತೆಯಿರದೆ ಒಬ್ಬಂಟಿಯಾದೆ. ಆ ಫ್ಲೈ ಓವರಗೂ ಸೈನಿಕರಿಗೂ ಏನೋ ಸಂಬಂಧವಿರುವಂತೆ ತೋರಿತು. ಮೊಬೈಲನಲ್ಲಿ ಈ ಕೆ ಆರ್ ಮಾರ್ಕೆಟ್ ಫೈ ಓವರ್ ಬಗ್ಗೆ ಹುಡುಕ ತೊಡಗಿದೆ.

ಅದೊಂದು ಕೆರೆ ಆಗಿತ್ತು . ಅಲ್ಲಿ ಒಂದು ಭಯಂಕರ ಯುದ್ದ ಕೂಡ ನಡೆದಿತ್ತು. ಅದೇ ಮೂರನೇ ಆಂಗ್ಲ-ಮೈಸೂರು ಸಮರ ಅದರಲ್ಲೇ ಕಾರ್ನವಾಲೀಸ್ ಬಂದು ಬೆಂಗಳೂರು ಕೋಟೆಯನ್ನ ವಶಪಡಿಸಿಕೊಂಡಿದ್ದ. ಟಿಪ್ಪುವಿನ ಸೈನ್ಯ ಇಲ್ಲಿ ಹೋರಾಡಿತ್ತು. ಬಹಾದ್ದೂರ ಖಾನ್ ಅನ್ನುವ ಸೇನಾಧಿಪತಿ ತನ್ನ 2000 ಸೈನಿಕರ ಜೊತೆ ಇಲ್ಲಿ ವೀರಾವೇಶದಿಂದ ಹೋರಾಡಿದ್ದ. ಆತನ ನೆನಪಿಗೆ ಈಗಲೂ ಅಲ್ಲೊಂದು ದರ್ಗಾ ಇದೆ. ಹದಿನೈದು ದಿನ ನಿರಂತರವಾಗಿ ನಡೆದ ಈ ಸಮರದಲ್ಲಿ ಬ್ರಿಟಿಷರು ‌ಕೊನೆಗೆ ಎಲ್ಲಾ ಯುದ್ಧ ನಿಯಮಗಳನ್ನು ಮುರಿದು ಮಧ್ಯರಾತ್ರಿಯಲ್ಲಿ ಕಳ್ಳರಂತೆ ಹೊಂಚು ಹಾಕಿ ಕೋಟೆ ವಶಪಡಿಸಿಕೊಂಡರು. ಹೆಣಗಳನ್ನು, ಕೋಟೆಯ ಅವಶೇಷಗಳನ್ನು ಅಲ್ಲಿದ್ದ ಕೆರೆಗೆ ತುಂಬಿ ಅದನ್ನು ಮುಚ್ಚಿಸಿದರು. ಅದನ್ನು ಸಿದ್ದಿಕಟ್ಟೆ ಎಂದು ನಾಮಕರಣ ಮಾಡಿ ವ್ಯಾಪಾರ ವ್ಯವಹಾರಗಳ ಜಗಳಿಯಾಗಿ ಮಾಡಿದರು. ಅದೇ ಈಗಿನ ಜನನಿಬಿಡ ಕೆ ಆರ್ ಮಾರ್ಕೆಟಿನ ಬುನಾದಿ‌. ಹೀಗೆ ಆ ಗುಲಾಬಿಗಳ, ಅರಿಶಿಣ , ಕುಂಕುಮಗಳ, ಜನರ, ವ್ಯಾಪಾರಿಗಳ ಗದ್ದಲಗಳ ನಡುವೆ ಅಲ್ಲೊಂದು ಹೋರಾಟದ , ರಕ್ತಪಾತದ, ಸಮೂಹ ಸಮಾಧಿಯಾದ ಮೂಕ ರೋದನವಿದೆ.

ಅದು ಹೇಗೋ ನನಗದು ಕೇಳಿಸಿತು. ಮುಂದೇನು ಮಾಡುವುದೋ ಗೊತ್ತಾಗಲಿಲ್ಲ. ಯಾರಿಗೆ ಇದನ್ನೆಲ್ಲಾ ಹೇಳಲಿ, ನನ್ನ ಜೊತೆ ನಡೆದಾಡುತ್ತಿರುವ ಆತ್ಮಕ್ಕೇನು ಬೇಕು , ತಿಳಿಯದಾದೆ. ಅಷ್ಟಕ್ಕೂ ಆ ಆತ್ಮ ನನಗೆ ಮತ್ತೆ ಅನುಭವ ಆಗಲೇ ಇಲ್ಲ. ಈಗ ಭ್ರಮೆಯೇನೋ ಅನ್ನುವಷ್ಟು ಮಸುಕಾಗಿದೆ. ಸುಮ್ಮನೆ ಹೀಗೆ ಬಂದು ಹೋದ ನೆನಪಾಗಿದೆ. ಏನೋ ನನ್ನ ಗಂಡ ಹೇಳುವ ಹಾಗೆ ಇದೆಲ್ಲಾ ನನ್ನ ಭ್ರಾಂತು ಇರಬಹುದು. ಆದರೆ ಈಗಲೂ ಕೆ ಆರ್ ಮಾರ್ಕೆಟ್ ನಡುವೆ ಹೋಗುವಾಗ ಒಮ್ಮೆ ಕಳೆದು ಹೋಗುತ್ತೇನೆ. ಮತ್ತೆ ಆ ಆತ್ಮ ಸಿಕ್ಕಿತೇನೋ ಎಂದು ಕೇಳಿಸಿಕೊಳ್ಳಲು ಮೌನವಾಗಿ ಕಾಯುತ್ತೇನೆ.

Leave a comment