ಕಮ್ಮರಡಿ ಜಾತ್ರೆ

ಊರು ಅಂದರೆ ನಮಗೆಲ್ಲರಿಗೂ ಮನೆಯ ನಂತರ ಮನಸಿಗೆ ಹತ್ತಿರವಾಗುವ ಮತ್ತೊಂದು ಅಚ್ಚು ಮೆಚ್ಚಿನ ಜಾಗ. ಇಲ್ಲಿಯೂ ಕೂಡ ನಮ್ಮ ಮನೆಯ ಹಾಗೆಯೇ ಒಂದು ದೊಡ್ಡ ಸಂಸಾರವಿದೆ. ಅದರಲ್ಲಿ ಸುಖ ದುಃಖಗಳ ಕಥೆಯಿದೆ, ನೆಮ್ಮದಿಯ ಆಚರಣೆಯಿದೆ, ನಂಬುವ ಸಂಪ್ರದಾಯವಿದೆ, ದುಡಿಯುವ ಕಸುಬಿದೆ, ಕಣ್ಣೀರಿಡಿಸುವ ಪ್ರೀತಿಯಿದೆ, ಕಂಡರಾಗದ ದ್ವೇಷವಿದೆ, ದೆವ್ವದ ಭಯವಿದೆ, ದೈವದ ಭಕ್ತಿಯಿದೆ ಎಲ್ಲಾ ಕೂಡಿ ಕೊಂಡಿರುವ ಒಂದು ಹಳೇ ಆಲದ ಮರದ ಹಾಗೆ.
ಇಂತದೇ ಒಂದು ಊರು ಕಮ್ಮರಡಿ. ಸಹ್ಯಾದ್ರಿಯ ಸೆರಗಲ್ಲಿ, ತುಂಗಾ ತೀರದಲ್ಲಿರುವ ಒಂದು ಸಣ್ಣ ಗ್ರಾಮ. ಇದು ಶಿವಮೊಗ್ಗ ,ಚಿಕ್ಕಮಗಳೂರು ಎರಡೂ ಜಿಲ್ಲೆಗೂ ಅರ್ಧ ಸೇರುತ್ತದೆ. ಇಲ್ಲಿ ಊರ ಜನರನ್ನು ಸೇರಿಸುವ, ಒಟ್ಟಾಗಿ ಸಂಭ್ರಮಿಸುವ ಹತ್ತು ಹಲವು ಹಬ್ಬಗಳಿವೆ. ಶಿವರಾತ್ರಿ, ನವರಾತ್ರಿ, ರಾಮ ನವಮಿ, ಗಣೇಶನ ಹಬ್ಬ ಹೀಗೆ ಸಾಕಷ್ಟು. ಆದರೆ ಯುಗಾದಿ ಮಾತ್ರ ಇಲ್ಲಿ ವಿಶೇಷ ಏಕೆಂದರೆ ಅದೇ ದಿನ ಗ್ರಾಮದೇವರು ಶ್ರೀ ಸಿದ್ದಿವಿನಾಯಕನ ಜಾತ್ರೆಯಿರುವುದರಿಂದ ಇದು ಐದು ದಿನಗಳ ಸರಣಿ ಮಹೋತ್ಸವಗಳೊಂದಿಗೆ ಬೆಸೆದುಕೊಂಡು ಕೊಂಚ ಜೋರಾಗಿಯೇ ಆಚರಿಸಲ್ಪಡುತ್ತದೆ. ಸಿದ್ದಿ ವಿನಾಯಕ ದೇವರನ್ನು ನೋಡಿದ ಕೂಡಲೇ ನೀವು ಲಿಂಗ ಎಂದು ಬಿಡುವಿರಿ. ಆದರೆ ಇದು ದುಂಡೀರಾಜ ಸ್ವರೂಪ ಗಣಪತಿ, ಕೌಂಡಿನ್ಯ ಮಹರ್ಷಿಗಳು ಕೈಯಾರೆ ಅರ್ಚಿಸಿದ ಸಾಲಿಗ್ರಾಮ ಸ್ವರೂಪಿ, ಇದನ್ನು ನೂರಾರು ವರ್ಷಗಳ ಹಿಂದೆ ತುಂಗಾನದಿಯಿಂದ ಹೊತ್ತು ತಂದು ಪ್ರತಿಷ್ಠಾಪಿಸಿದ ಇತಿಹಾಸವಿದೆ.

ದೇವಸ್ಥಾನದ ಸುಣ್ಣ ಬಣ್ಣದ ಕೆಲಸದಿಂದ ಜಾತ್ರೆಯ ಸಡಗರ ಊರಿನ ಮನೆ-ಮನೆ ಮುಟ್ಟುತ್ತದೆ. ಊರಿನ ಜನರು ಸೇರಿ ಪ್ರಾಕಾರ, ಗೋಡೆಗಳು, ಜಗಲಿ, ಯಾಗ ಶಾಲೆ, ಕಲ್ಯಾಣ ಮಂಟಪ, ಅಡಿಗೆ ಕೊಟ್ಟಿಗೆ, ಹಣ್ಣು ಕಾಯಿ ಕಟ್ಟೆ, ದೇವರ ಕೊಳ ಹೀಗೆ ಎಲ್ಲಾ ಅಂಗಗಳನ್ನು ಕೊಳಕ್ಕೆ ಮೋಟರು ಇಟ್ಟು ಪೈಪಿನಿಂದ ನೀರು ಹರಿಸಿ ತೊಳೆಯುತ್ತಾರೆ. ದೇಗುಲಕ್ಕೆ ಕೆರೆಯೇ ಹರಿದು ಬಂದ ಹಾಗೆ ಕಾಣುವ ಈ ಶುದ್ದಿ ಪರ್ವ ಪೂರ್ಣ ಜಲಾವೃತವಾಗಿರುತ್ತದೆ. ನಂತರ ಗೋಪುರ, ರಥದ ಕಟ್ಟೆ, ದ್ವಾರ ಪಾಲಕರು, ಮುಂಭಾಗ ಎಲ್ಲದಕ್ಕೂ ಬಣ್ಣ ಬಳಿಯುತ್ತಾರೆ. ಅವರವರ ಮನೆಗಳಲ್ಲಿ ಬರುವ ನೆಂಟರಿಗಾಗಿ ಮನೆಯನ್ನು ತೊಳೆದು ಇನ್ನೂ ಅಂದಗೊಳಿಸುತ್ತಾರೆ. ಈ ಎರಡು ವಾರಗಳಲ್ಲಿ ದೇವಸ್ಥಾನದ ತುಂಬಾ ಜನ, ಪೂಜೆ, ಪ್ರಾರ್ಥನೆಯ ಜೊತೆಗೆ ಅಣಿಗೊಳಿಸುವ ಸಡಗರವೂ ಸೇರಿಕೊಳ್ಳುತ್ತದೆ.


ನಂತರ ವಿದ್ಯುತ್ ದೀಪಾಲಂಕಾರ ಮತ್ತು ಮೈಕ್ ಸೆಟ್ ಹಾಡುಗಳ ಜೋಡಣೆ. ಊರಿನ ಇಸ್ಲಾಂ ಧರ್ಮದವರೇ ಇದಕ್ಕೆ ವರ್ಷಗಳಿಂದ ತಮ್ಮ ಕೊಡುಗೆ ನೀಡುತ್ತಾ ಬಂದಿದ್ದಾರೆ. ಜನರೇಟರುಗಳನ್ನು ಹೊತ್ತು ತಂದು ಜೋಡಿಸಿ ಚಂದದ ದೀಪಗಳನ್ನು ದೇವಸ್ಥಾನಕ್ಕೆ ಮತ್ತು ಇಡೀ ಊರಿಗೆ ಅಲಂಕರಿಸಿ ಕಂಗೊಳಿಸುವಂತೆ ಮಾಡುತ್ತಾರೆ. ರಥೋತ್ಸವದ ಅಷ್ಟು ದಿನ ಎಲ್ಲಾ ಕಡೆ ವಿದ್ಯುತ್, ದೀಪಗಳು ಮತ್ತು ಗ್ಯಾಸ್ ಲೈಟ್ ಹೀಗೆ ಅವಶ್ಯವಿರುವ ಎಲ್ಲಾ ಸೌಲಭ್ಯಗಳನ್ನು ಸೇವೆಯಾಗಿ ನೀಡುತ್ತಾರೆ. ಕೆಲಸದವರು, ಅರ್ಚಕರು ಅನ್ನದೇ ದೇವಸ್ಥಾನದಲ್ಲಿ ಎಲ್ಲರ ಗಲಾಟೆ, ಅಟ್ಟದಿಂದ ಇಳಿಸುವ ಪಾತ್ರೆಗಳನ್ನು ತಿಕ್ಕುವ, ಅಡಿಗೆಯವರಿಗೆ ಸಾಮಾನು ತಂದು ಕೊಡುವ ಗಡಿಬಿಡಿ‌ , ಎಲ್ಲಾ ಸೇರಿ ಶಾಂತಿ ಮೌನದಿಂದ ಇರುತ್ತಿದ್ದ ಜಾಗ ಕಲರವದಿಂದ ತುಂಬಿ ಗಲಾಟೆ ಹಬ್ಬಿ ಕೊಳ್ಳುತ್ತದೆ.
ಹೊಸ ಸಂವತ್ಸರದ ಮೊದಲ ದಿನ ಚೈತ್ರ ಶುದ್ಧ ಪಾಡ್ಯದಂದು ವರುಷದ ಮೊದಲ ಪೂಜೆ ಗಣಪತಿಗೆ ನೀಡಿ ಆರಂಭಸಿದಂತೆ ವರ್ಧಂತಿ ಉತ್ಸವದೊಂದಿಗೆ ಜಾತ್ರೆ ಆರಂಭವಾಗುತ್ತದೆ. ದೇವರನ್ನು ಉತ್ಸವ ಮೂರ್ತಿಯಾಗಿ ತಲೆಯ ಮೇಲೆ ಹೊತ್ತು ವಾದ್ಯಗಳೊಂದಿಗೆ ದೇವಸ್ಥಾನದ ಪ್ರಾಂಗಣದಲ್ಲಿ ಸುತ್ತುತ್ತಾರೆ. ದೇವರನ್ನು ಗುಡಿಯ ಒಳಗೆ ಅಲ್ಲದೆ ಪೂರ್ಣ ಬೆಳಕಿನಲ್ಲಿ ಹೊರಗೆ ನೋಡುವ ಸಂಭ್ರಮದ ಅಚ್ಚರಿಯಿದು. ಚಂಡೆ ಮತ್ತು ವಾದ್ಯ ಸೇರಿ ಜಾತ್ರೆಗೆ ಧ್ವನಿಯನ್ನು ಕೊಡುತ್ತಾರೆ. ಲಯಬದ್ಧವಾದ, ಘೋಷದಂತೆ ಮೊಳಗುವ ಚಂಡೆ ಕೇಳುತ್ತಿದ್ದರೆ ಭಕ್ತಿ ಭಾವದೊಂದಿಗೆ ತಾನೇ ತಾನಾಗಿ ಧ್ಯಾನಸ್ಥ ಸ್ಥಿತಿಯೊಂದು ಅಂತ ಗದ್ದಲದಲ್ಲೂ ಆವರಿಸುತ್ತದೆ. ಕುಣಿಯುವಂತೆ ಕಿವಿಗಳನ್ನು ಹೊಕ್ಕುವ ಚಂಡೆ ನಾದ ದೇವರ ವಿಶ್ವರೂಪವನ್ನು ಇನ್ನೂ ಪಸರಿಸುತ್ತಾ ಸಾಗುತ್ತದೆ.

ನಂತರ ಸಹಸ್ರ ಮೋದಕ ಹೋಮ, ಹಿಂದೆ ಒಂದು ದೊಡ್ಡ ದೋಣಿಯಲ್ಲಿ ಅಷ್ಟ ದ್ರವ್ಯವನ್ನು ನೈವೇದ್ಯಕ್ಕಾಗಿ ತಯಾರಿಸುತ್ತಿದ್ದರು. ಅದಕ್ಕೆ ಊರಿನ ತರುಣರು ಬಂದು ಕೈ ಹಾಕಿ ಸಹಕರಿಸುತ್ತಿದ್ದರು. ಆದರೆ ನಂತರದಲ್ಲಿ ಜನಬಳಗ ಕಡಿಮೆಯಾಗಿ ಸಾವಿರ ಮೋದಕಕ್ಕೆ ನಿಂತುಕೊಂಡಿತು. ಹೊಸ ವರ್ಷದ ಆರಂಭಕ್ಕೆ ಅಂದು ಪಂಚಾಂಗ ಶ್ರವಣವನ್ನು ಮಾಡಲಾಗುತ್ತದೆ.
ಇದರ ಜೊತೆಗೆ ಹತ್ತಿಪ್ಪತ್ತು ಅಂಗಡಿಗಳು ಬಂದು ನಿಜವಾದ ಜಾತ್ರೆಯ ಕಳೆಯನ್ನು ಊರಿಗೆ ತರಿಸುತ್ತಾರೆ. ಮನೆಯ ಅಕ್ಕ ಪಕ್ಕಗಳಲ್ಲಿ, ರೋಡಿನ ಅಂಚಲ್ಲಿ, ಎಲ್ಲೋ ಖಾಲಿ ಬಿದ್ದ ಸ್ವಲ್ಪ ಜಾಗದಲ್ಲಿ ಅಂಗಡಿ ಕೂಡಿಸುತ್ತಾರೆ. ನೀಲಿ ಟಾರ್ಪಾಲುಗಳು ಧ್ವಜದಂತೆ ಹಾರುತ್ತಿರುತ್ತದೆ. ಕೊಳೆ ಕಸ ತುಂಬಿದ ಮೋರಿಗಳೆಲ್ಲಾ ಶೃಂಗರಿಸಿಕೊಂಡು ಚಂದಗಾಣುತ್ತವೆ. ಬಳೆ, ಸರ, ಆಟಿಕೆಗಳು ದಿನನಿತ್ಯಕೆ ಹೊಸ ಬೆಳಕನ್ನು ತಂದು ರಂಗು ಮೂಡಿಸುತ್ತದೆ. ತೀರ್ಥಹಳ್ಳಿ, ಶೃಂಗೇರಿ ಬಸ್ಸುಗಳಿಗೆ ಹೋಗಲು ಜಾಗವಿಲ್ಲದೆ ಅವುಗಳ ಹಾರ್ನು ಹಿಮ್ಮೇಳದಂತೆ ಸಾಥ್ ನೀಡುತ್ತದೆ. ಊರಿನ ತುಂಬಾ ಹೊಸ ಮುಖಗಳು, ಹಳೆ ಮುಖಗಳ ಹೊಸ ವರ್ಚಸ್ಸು ತುಂಬಿಕೊಂಡು ಜಾತ್ರೆ ಶುರುವಾಗುತ್ತದೆ.

ಎರಡನೇ ದಿನ ಧ್ವಜಾರೋಹಣ ನಾವೆಲ್ಲಾ ಕರೆಯುವ ಹಾಗೆ ‘ಗರುಡನ ಕಟ್ಟೋದು’. ಜಾತ್ರೆ ಮುಗಿಯುವವರೆಗೆ ದೇವರು ಎಲ್ಲೂ ಹೋಗ ಕೂಡದೆಂದು ಆತನ ವಾಹನವನ್ನೇ ಕಟ್ಟುವ ಕ್ರಮವಿದು‌. ಆದರೆ ಗಣೇಶನ ವಾಹನ ಇಲಿ, ಇದು ಪದಶಃ ಗರುಡನ ಕಟ್ಟುವುದಲ್ಲ. ಆದರೆ ವಿಷ್ಣು ದೇಗುಲಗಳಲ್ಲಿ ಹಾಗೆ ಕರೆದು ರೂಢಿಯಷ್ಟೆ. ಈ ದಿನ ಊರಲ್ಲಿ ಇದ್ದವರು ಗರುಡನ ಬಿಚ್ಚುವ ತನಕ ಊರು ದಾಟುವ ಹಾಗಿಲ್ಲ ಎಂದು ಊರವರು ಹೇಳುತ್ತಾರೆ. ನಂತರ ರಂಗಪೂಜೆ, ಗರ್ಭಗುಡಿಯ ದ್ವಾರದಿಂದ ಧ್ವಜ ಸ್ತಂಭದ ತನಕ ಒಂದು ಹಲಗೆಯನ್ನಿಟ್ಟು ಮೂವತ್ತೆರಡು ದೇವತೆಗಳನ್ನು ಆವಾಹನೆ ಮಾಡುತ್ತಾರೆ. ಅಲ್ಲಿ ಪಂಚಕಜ್ಜಾಯದ ಪ್ರಸಾದವನ್ನಿಟ್ಟು ಪೂಜೆಯನ್ನು ಪ್ರಾರಂಭಿಸುತ್ತಾರೆ. ಇದೊಂದು ತುಂಬಾ ಮುಖ್ಯಪೂಜೆಯಾಗಿದ್ದು ಇದನ್ನು ನೋಡಲು ದೂರ ದೂರದಿಂದ ಬಂದು ಮಧ್ಯರಾತ್ರಿಯವರೆಗೂ ಪಾಲ್ಗೊಳ್ಳುತ್ತಾರೆ. ರಾತ್ರಿಯ ಒಂದೂವರೆಯ ತನಕವೂ ವಾದ್ಯ ಮೇಳಗಳು ತುಂಬಿಕೊಂಡು ಇರುಳಿಗೂ ಹಗಲಿಗೂ ವ್ಯತ್ಯಾಸವೇ ಇಲ್ಲದಂತೆ ಮಾಡಿ ಬಿಡುತ್ತದೆ.

ಚೈತ್ರ ಶುದ್ದ ಚೌತಿಯಂದು ಬ್ರಹ್ಮ ರಥೋತ್ಸವ. ಈ ದಿ‌ನ ಸುತ್ತ ಮುತ್ತ ಊರಿನ ಜನರೆಲ್ಲಾ ಬಂದು ಸೇರುತ್ತಾರೆ. ಜಾತ್ರೆಯ ಮೆರುಗು ಬೆಳಗಿನಿಂದಲೇ ಮಿಂಚ ತೊಡಗುತ್ತದೆ‌. ರಥದ ಕಟ್ಟೆಯಿಂದ ಹೋದ ವರುಷ ನಿಲ್ಲಿಸಿದ ರಥವನ್ನು ಬಿಡಿಸಿ, ತೊಳೆದು, ಮದುವಣಗಿತ್ತಿಯಂತೆ ಸಿಂಗರಿಸುತ್ತಾರೆ. ದೇವರನ್ನು ರಥದ ಮೇಲೆ ಕೂರಿಸುವ ಸಮಯಕ್ಕೆ ಶಾಲಾ ಮುಖ್ಯೋಪಾಧ್ಯಯರನ್ನು, ಪೋಲೀಸರನ್ನು , ಸಮಿತಿಯವರನ್ನು, ತಂತ್ರಿಗಳನ್ನು, ವಾದ್ಯದವರನ್ನು , ಗ್ರಾಮ ಪಂಚಾಯಿತಿಯವರನ್ನು, ಪರ ಊರಿನ ಮುಖ್ಯಸ್ಥರನ್ನು ಹೀಗೆ ಮುಂತಾದವರನ್ನು ಕರೆಸಿ ತಿದಿಗಾಳಿ ಸೇವೆಯೆಂದು ಕಾಯಿ ಒಡೆಸುತ್ತಾರೆ. ಅಂದರೆ  ಜನರಿಗೆ, ಆಸ್ತಿ ಪಾಸ್ತಿಗಳಿಗೆ ರಥೋತ್ಸವ ಆಗುವಾಗ, ರಥ ಸಾಗುವಾಗ ಏನು ಹಾನಿಯಾಗದಿರಲಿ ಎಂದು ಪ್ರಾರ್ಥಿಸುತ್ತಾರೆ. ನಂತರ ನಿಧಾನಕ್ಕೆ ಸಾಗುವ ರಥಕ್ಕೆ ಏಲಕ್ಕಿ ಕಾಳು, ಅಕ್ಕಿ, ಭತ್ತ, ನಾಣ್ಯಗಳನ್ನು ಮೇಲಿಂದ ಹಾಕುತ್ತಾರೆ‌. ಮಾರ್ಚ್ ಬಿಸಿಲಿನ ಮಧ್ಯಾಹ್ನ ಹನ್ನೆರಡು ಗಂಟೆ ಸಮಯದಲ್ಲಿ ಜನರಾಶಿಯ ಮಧ್ಯೆ ಸುಡುವ ಟಾರು ರೋಡಿನಲ್ಲಿ ಬರೀ ಕಾಲಿನಲ್ಲಿ ಇದನ್ನು ಹೆಕ್ಕಲು ಮಕ್ಕಳು ದೊಡ್ಡವರು ನುಗ್ಗಾಡುವ ರೀತಿಯೇ ಬೇರೆ. ಸಿಕ್ಕಿತೆಂದರೆ ಆ ವರ್ಷದ ಎಲ್ಲಾ ಪರೀಕ್ಷೆ ಪಾಸಾಯಿತೆಂದೇ ಮಕ್ಕಳಿಗೆ ನಂಬುಗೆ. ಮಧ್ಯಾಹ್ನ ಬಂದ ಸಮಸ್ತ ಭಕ್ತಾದಿಗಳಿಗೆ ಊಟ ಬಡಿಸುತ್ತಾರೆ. ದೇವಸ್ಥಾನದ ಪ್ರಾಂಗಣ, ಅಕ್ಕ ಪಕ್ಕದ ಛತ್ರ ಹೀಗೆ ಸಿಕ್ಕಲೆಲ್ಲಾ ಎಲೆ ಹಾಕಿದರೂ ಸಂಜೆಯ ತನಕ ಐದು , ಆರು ಪಂಕ್ತಿಗಳ ತನಕವೂ ಸುಗ್ರಾಸ ಭೋಜನ ನಡೆಯುತ್ತಲೇ ಇರುತ್ತದೆ.

ರಾತ್ರಿ ರಥವನ್ನು ಹೆಂಗಸರು, ಮಕ್ಕಳು ಕೂಡ ಎಳೆಯಲು ಬರುತ್ತಾರೆ‌. ಅವರಿವರೆನ್ನದೆ ಎಲ್ಲರೂ ಕೈ ಹಾಕಿ ಹಗ್ಗ ಹಿಡಿಯಲು ಜಾಗವೇ ಇಲ್ಲದೇ ಕಿತ್ತಾಡುವುದೂ ಇದೆ. ಇಲ್ಲಿ ರಥಕ್ಕೆ ಗುಜ್ಜು ಹಿಡಿಯುವ ಆಚಾರಿಗಳ ಪಾತ್ರ ಪ್ರಮುಖವಾಗುತ್ತದೆ. ರಸ್ತೆಯ ಉಬ್ಬು ತಗ್ಗುಗಳಿಗೆ ಓಲಾಡುತ್ತಾ ದೈತ್ಯ ರಥ ನಿಧಾನವಾಗಿ ಪ್ರತಿ ಮನೆಗಳಿಗೂ ಹೋಗುತ್ತದೆ. ಎಲ್ಲೂ ತೊಂದರೆಯಾಗದಂತೆ ಜನರನ್ನೂ, ರಥವನ್ನೂ ಸಂಭಾಳಿಸುತ್ತಾ ಸಾಗುತ್ತಾರೆ. ದಾರಿಯಲ್ಲಿ ಹಣ್ಣು ಕಾಯಿ ನೀಡಿ ನಮಸ್ಕಾರ ಮಾಡುತ್ತಾರೆ. ಚಂಡೆಯ ಸದ್ದು, ವಾದ್ಯಗಳು, ದೇವರ ಜೈಕಾರ, ಮಂತ್ರೋಚ್ಛಾರಗಳು ಸೇರಿ ಭಕ್ತಿಯ ಭಾವವನ್ನು ಸಮಸ್ತರಿಗೂ ಹೊದೆಸಿರುತ್ತದೆ.

ರಥ ಮೇಲೆ ಹೋಯಿತೆಂದರೆ ಕೆಳಗೆ ಅಂಗಡಿ ನೋಡಲು ಹೋಗುವ ನೆಂಟರ ತಂಡಗಳು. ಮಬ್ಬು ಬೆಳಕಿನಲ್ಲಿ ಮಿಂಚುವ ಜರಿ ಲಂಗ ತೊಟ್ಟು ನಮ್ಮ ಊರನ್ನೇ ಬೆರಗಾಗಿ ನೋಡುವ ಅದ್ಭುತ ಕ್ಷಣವದು. ನಾಳೆ ಸ್ಕೂಲಿನಲ್ಲಿ ಸಿಗುವ ಗೆಳತಿ ಅಲ್ಲಿ ಸಿಕ್ಕರೆ ನೂರಾರು ವರ್ಷದ ನಂತರ ಸಿಕ್ಕಷ್ಟು ಸಂತಸಪಟ್ಟು ಅವಳನ್ನು ಮಾತಾಡಿಸುತ್ತಾ ರಸ್ತೆಯ ಮಧ್ಯೆ ನಿಲ್ಲುವುದು. ಬೆಳಿಗ್ಗೆ ನೋಡಿಟ್ಟ ಅಡಿಗೆ ಆಟದ ಸಾಮಾನನ್ನು ಅಮ್ಮನ ಸೆರೆಗಿಗೆ ಜೋತು ಬಿದ್ದು ಕೊಡಿಸಿ ಕೊಳ್ಳುವ ಹಠವದು. ಇವತ್ತು ಎಲ್ಲಾ ಜಾಸ್ತಿ ನಾಳೆ ಸಂಜೆಗೆ ರೇಟು ಕಮ್ಮಿಯೆಂದು ಅಮ್ಮ ಕರೆದೊಯ್ಯುವಾಗ ಬಿಟ್ಟು ಬರಲಾರದೆ ಇನ್ನೊಂದು ಗುಂಪಿನ ಜೊತೆ ಸೇರುವ ಚೇಷ್ಟೆ ಅದು. ಮೈಕಿನಲ್ಲಿ ಐಸ್ ಕ್ರೀಮು ತಿನ್ನಲು ಬನ್ನಿ ಬನ್ನಿಯೆಂದು ಕರೆಯುತ್ತಿದ್ದರೆ ಟಿವಿ ಕಾರ್ಯಕ್ರಮವೆಂದು ಆಶ್ಚರ್ಯದಿಂದ ನೋಡುತ್ತಾ ನಿಲ್ಲುತ್ತಿದ್ದೆವು. ಒಂದು ಹತ್ತು ಸಲ ತಿರುಗಿ ಎಲ್ಲಾ ಅಂಗಡಿಯವರ ರೇಟು ಗೊತ್ತಾಗಿ ಕೊನೆಗೂ ಬೇಕಾದ್ದನ್ನು ತರುವಾಗ ಮನೆಯಲ್ಲಿ ಹೊಸ ಸಂಭ್ರಮ.
ಇನ್ನೇನೂ ಮುಗಿಯುತ್ತಾ ಬಂದಿತು ಜಾತ್ರೆ. ಎಷ್ಟೋ ಮನೆಗಳಲ್ಲಿ ಮದುವೆಯಾಗಲು, ಆರೋಗ್ಯ ಸರಿಯಾಗಲು ಹಾಗೇ ಹೀಗೆಯೆಂದು ಹರಕೆ ಹೊತ್ತಿರುತ್ತಾರೆ. ಅಂತ ಒಂದು ಹರಕೆಯೇ ತೊಲಾಭಾರ(ತುಲಾಭಾರ). ಹರಕೆ ಹೇಳಿ ಕೊಂಡವರ ತೂಕದಷ್ಟು ಅಕ್ಕಿಯನ್ನೋ, ನಾಣ್ಯವನ್ನು ದೇವರ ಎದುರು ಒಂದು ದೊಡ್ಡ ತಕ್ಕಡಿಯಲ್ಲಿ ತೂಕಮಾಡಿ, ಮೂರು ಸುತ್ತು ಸುತ್ತಿಸಿ ದೇವಸ್ಥಾನಕ್ಕೆ ಅರ್ಪಿಸುತ್ತಾರೆ. ಇನ್ನೊಂದು ಹರಕೆಯೆಂದರೆ ಹಸುಗೂಸುಗಳನ್ನು ರಥದ ಅಡಿ ಹಾಕುವುದು. ಇದು ಹೇಳಿಕೊಂಡಷ್ಟು ಭೀಕರವಾಗಿಲ್ಲ. ಒಂದು ಕಡೆಯಿಂದ ಒಬ್ಬರು ಮಗುವನ್ನು ರಥದ ಕೆಳಗೆ ಕೊಡುತ್ತಾರೆ ಇನ್ನೊಂದು ಕಡೆ ಕೆಳಗೆ ತೆಗೆದು ಕೊಳ್ಳುತ್ತಾರೆ.

ಇನ್ನೊಂದು ಸ್ವಾರಸ್ಯಕರ ಪೂಜಾವಿಧಿಯೆಂದರೆ ‘ಸಂಧಾನ’.ಇದೊಂದು ನಾಟಕದ ತರಹ, ಅರ್ಚಕರೊಬ್ಬರು ಅರಮನೆಯ ಅಂತಃಪುರದವರಂತೆ ಮಾತನಾಡುತ್ತಾರೆ. ತಂತ್ರಿಗಳು ಗಣಪತಿಯಂತೆ ಯುದ್ಧ ಮುಗಿಸಿಕೊಂಡು ಬಂದು ಅರಮನೆಗೆ ಬರುತ್ತಾರೆ. ದೇವಸ್ಥಾನದ ಹೊರಗೆ ರಥದ ಕಟ್ಟೆಯಲ್ಲಿ ಇದು ನಡೆಯುವುದರಿಂದ ಊರಿನ ಜನರು ಸೇರಿ ಈ ಹಾಸ್ಯದಲ್ಲಿ ತೊಡಗುತ್ತಾರೆ. ನಂತರ ಸಂಜೆ ಗರುಡನನ್ನು ಬಿಚ್ಚಿ ಧ್ವಜವನ್ನು ಇಳಿಸುತ್ತಾರೆ. ಆಗಲೇ ಬಂದ ನೆಂಟರೆಲ್ಲಾ ಕೆಂಪು ಬಸ್ಸನ್ನು ಹತ್ತಿ ಕಮ್ಮರಡಿಯ ಜಾತ್ರೆಯನ್ನು ಸವಿಯುತ್ತಾ ಸಾಗುತ್ತಾರೆ. ಅತಿಥಿಗಳೆಲ್ಲಾ ಖಾಲಿಯಾದ ಬಣ ಬಣದೊಂದಿಗೆ ಉಳಿದ ಕಾರ್ಯಕ್ರಮಗಳು ಸಾಗುತ್ತವೆ.

ಕೊನೆ ದಿನ ರಾತ್ರಿ ದೇವಸ್ಥಾನ ಸಮಿತಿಯವರು ಸೇರಿ ವಂದನಾರ್ಪಣೆ ಮಾಡುತ್ತಾರೆ. ನಡೆಸಿ ಕೊಟ್ಟ ತಂತ್ರಿಗಳು, ಅರ್ಚಕರು, ಸ್ವಯಂ ಸೇವಕರು, ಹಣ್ಣು ಕಾಯಿ ಒಡೆಯಲು ನಿಂತು ಕೊಳ್ಳುವ ಯುವಕರು, ರಥ ಕಟ್ಟುವವರು, ದೀವಟಿಗೆಯವರು, ಅಡುಗೆ ಭಟ್ಟರು, ವಾದ್ಯದವರು, ದೀಪಾಲಂಕಾರದವರು, ತೊಳೆಯುವ ಬಳಿಯುವ ಕೆಲಸದವರು ಹೀಗೆ ಎಲ್ಲರ ಪಾತ್ರ ಹೆಸರು ಹೇಳಿ ಗಣಪತಿ ಒಳ್ಳೆಯದು ಮಾಡಲಿ ಎಂದು ಹರಸುತ್ತಾರೆ. ಹಿಂದಿನ ಸಾಲಲ್ಲಿ ಚಪ್ಪಾಳೆ ತಟ್ಟುತ್ತಾ ಕೂರುವ ನಾವು ಮತ್ತೆ ಐದು ದಿನ ಹಿಂದೆ ಹೋಗಬಾರದೆ ಎಂದು ಕೊಳ್ಳುವ ಮನಸನ್ನು ಮತ್ತೆ ಮತ್ತೆ ಹಿಂದೆ ಕರೆಯುತ್ತಿರುತ್ತೇವೆ.

ಜಾತ್ರೆಯೆಂದರೆ ಊರು ಮತ್ತೆ ಮನೆಯಾಗುವ ಸಡಗರ, ಸಂಬಂಧಿಗಳು ಬೇರು ಹುಡುಕಿ ಕೊಂಡು ಬರುವ ಸಂಭ್ರಮ, ಹಳೇ ಸ್ನೇಹಿತರು ಹಳೇ ಮಣ್ಣಿನಲ್ಲಿ ಸಿಗುವ ಸಂತೋಷ, ಒಟ್ಟಿನಲ್ಲಿ ನಮ್ಮತನಕ್ಕೆ ಸಂಸ್ಕಾರ ನೀಡುವ ಸುಂದರ ಸಂಸ್ಕೃತಿ.

19 thoughts on “ಕಮ್ಮರಡಿ ಜಾತ್ರೆ

  1. ಕಮ್ಮರಡಿ ಹೆಸರಲ್ಲೇ ಏನೋ ಇದೆ ಒಂದ್ ಬಾರಿ ಭೇಟಿ ಕೊಡಲೇಬೇಕು ಅನ್ನಿಸಿದೆ.
    ಮೋದಕ ಕೊಡ್ತೇವೆ ಅಂದರೆ ಈಗಲೇ…😁

    ಆದರೆ ಆ ಸಂಧಾನ ಪೂಜಾ ವಿಧಾನದ ಬಗ್ಗೆ ಇನ್ನಷ್ಟು ಮಾಹಿತಿ ಇದ್ದರೆ ಚೆನ್ನಾಗಿರುತ್ತಿತ್ತು .

    Liked by 1 person

    1. ಹೌದು ವಿಶೇಷ… ಮೋದಕ ಖಂಡಿತಾ ಕೊಡೋಣ.. ಸಂಧಾನದ ಬಗ್ಗೆ ಇನ್ನೂ ಸೇರಿಸಲು ಟ್ರೈ ಮಾಡ್ತೇನೆ .. ಧನ್ಯವಾದಗಳು

      Liked by 1 person

  2. ಅಬ್ಬಾ.. ನನ್ನ ತವರೂರು ಕಮ್ಮರಡಿ… ಬಹಳ ಚೆನ್ನಾಗಿ ವಿವರಿಸಿದ್ದೀರಿ… ನಿನ್ನೆ ನಡೆದ ಜಾತ್ರೆಗೆ ನಾನು ಹೋಗಿ ಬಂದಷ್ಟೇ ಖುಷಿ ಆಯ್ತು… ಧನ್ಯವಾದಗಳು…

    Liked by 1 person

  3. ಈ ಲೇಖನಕ್ಕೆ ನಿಲುಮೆಯ ರಾಜ್ಯ ಮಟ್ಟದ ಲೇಖನ ಸ್ಪರ್ಧೆಯಲ್ಲಿ ಬಹುಮಾನ ಬಂದಿರುವುದು ತಿಳಿದು ತುಂಬಾ ಸಂತೋಷವಾಯಿತು. ಅಭಿನಂದನೆಗಳು ಗೆಳತಿ💐

    Liked by 1 person

  4. ಸಂಬಂಧಿಗಳು ಬೇರು ಹುಡುಕಿ ಕೊಂಡು ಬರುವ ಸಂಭ್ರಮ, ಹಳೇ ಸ್ನೇಹಿತರು ಹಳೇ ಮಣ್ಣಿನಲ್ಲಿ ಸಿಗುವ ಸಂತೋಷ, ಒಟ್ಟಿನಲ್ಲಿ ನಮ್ಮತನಕ್ಕೆ ಸಂಸ್ಕಾರ ನೀಡುವ ಸುಂದರ ಸಂಸ್ಕೃತಿ.ನನ್ನ ಬಾಲ್ಯ ದ ಕ್ಷಣಗಳನ್ನು ಮೆಲುಕು ಹಾಕಿದೆ.ನನ್ನ ಬಾಲ್ಯ ಕೂಡ ಚಿಕ್ಕಮಗಳೂರು-ಶೃಂಗೇರಿ-ಶಿವಮೊಗ್ಗೆಯಲ್ಲಿ ಕಳೆಯಿತು ಎನ್ನುವುದೇ ಖುಷಿ ಕೊಡುವ ವಿಚಾರ.. ಧನ್ಯವಾದಗಳು..

    Liked by 1 person

  5. ಸಂಬಂಧಿಗಳು ಬೇರು ಹುಡುಕಿ ಕೊಂಡು ಬರುವ ಸಂಭ್ರಮ, ಹಳೇ ಸ್ನೇಹಿತರು ಹಳೇ ಮಣ್ಣಿನಲ್ಲಿ ಸಿಗುವ ಸಂತೋಷ, ಮತ್ತೆ ಹಿಂದೆ ನನ್ನ ಬಾಲ್ಯದ ನೆನಪುಗಳನ್ನು ಮೆಲುಕು ಹಾಕುವಂತಾಯ್ತು.. ಬಹಳ ಸ್ವಾರಸ್ಯಕರವಾಗಿ ಮೂಡಿಬಂದಿದೆ..ನನ್ನ ಬಾಲ್ಯದ ದಿನಗಳನ್ನು ನಾನು ಚಿಕ್ಕಮಗಳೂರು-ಶೃಂಗೇರಿ-ಶಿವಮೊಗ್ಗದಲ್ಲಿ ಕಳೆದೆ.. ಧನ್ಯವಾದಗಳು

    Like

Leave a comment