ಹೀಗೆ ಒಂದು ಮಧ್ಯಾಹ್ನ

ಸುಮಾರು ನಾಲ್ಕು ಮೈಲಿ ಆಗಲ್ವಾ ಹಂಗಾದ್ರೆ , ಇಲ್ಲಿಂದ ಪೇಟೆಗೆ? ಹೇಗೆ ಒಬ್ಬಳೇ ನಡಕೊಂಡು ಹೋಗುದು? ಸಂಜೆಯಾದ್ರೂ ಹೋಗಕ್ಕೆ ಆಗತ್ತಾ? ಅದೂ ಇಲ್ಲ. ಮಕ್ಕಳು ಮನೆಗೆ ಬಂದಾಗ ನಾ ಇಲ್ಲ ಅಂದ್ರೆ ಆಳಕ್ಕೆ ಶುರು ಮಾಡುತ್ವೆ, ಇವರಿಗೂ ಸಿಡಿಸಿಡಿ ಸಿಟ್ಟು ಬರತ್ತೆ, ಇನ್ನು ಅತ್ತೆಯ ವರಾತ ಮುಗಿಯದೇ ಇಲ್ಲ. ಹಾಗಂತ ಹೇಳಿ ಪೇಟೆಗೆ ಹೋಗದೆ ಇರಕ್ಕೂ ಆಗಲ್ಲ.

ಇವತ್ತಿಗೆ ಎಂಟು ದಿನಕ್ಕೆ ತಮ್ಮನ ಮದುವೆ ಅದಕ್ಕೆ ಚೂರು ಮೈ ಮಂಡೆ ಮಾಡ್ಕಳಾಣ ಅಂತ. ಪೇಟೇಲಿ ಒಂದು ಬ್ಯೂಟಿ ಪಾರ್ಲರ್ ಆಗಿದೆ ಅಲ್ಲಿ ಹೋಗಿ ಬಂದರೆ ಮದ್ವೆಮನೆಗೆ ಹೋಗಕ್ಕೆ ಸರಿ ಆಗ್ತಿತ್ತು. ಇಲ್ಲ ಅಂದ್ರೆ ಈ ಮುಖ , ಕೂದಲು ಹೀಗೆ ಹೋದರೆ ನೋಡಿದವರು ಏನು ಅನ್ಕೋತಾರೆ, ಇವರಿಗೆ ಇದೆಲ್ಲಾ ಅರ್ಥ ಆಗಲ್ಲ.

ಅದಕ್ಕೆ ನಾ ಒಬ್ಬಳೇ ಒಂದಿನ ಹನ್ನೊಂದು ಗಂಟೆ ಮೇಲೆ ಎಲ್ಲಾ ಕೆಲಸ ಬೇಗ ಬೇಗ ಮಾಡಿಟ್ಟು ಹೊರಟೆ. ಇವರು ಅವತ್ತು ಅಡಿಗೆಗೆ ಹೋಗದೆ ಮನೆ ಬದಿನೇ ಇದ್ರು. ಇರಕ್ಕಾದ್ರೂ ಒಂದು ಗಾಡಿ ಇದೆ ಮನೇಲಿ. ಆದರೆ ನನ್ನ ಅಲ್ಲಿ ಬಿಟ್ಟು ಆಮೇಲೆ ಕರಕೊಂಡು ಬಂದ್ರೆ ನಂಗೆ ಹೇಗೂ ಒಂದು ಸ್ನಾನ ಆಗಬೇಕು, ಇವರಿಗಂತೂ ಜನಿವಾರ ಕೂಡ ಬದಲಾಯಿಸಬೇಕು. ಒಂದೆರಡು ಸಲ ಹೀಗೆ ಆಗಿದಕ್ಕೆ ಒಂದು ವಾರ ಗಣ ಬಂದಿತ್ತು .ನನ್ನ ತಿರುಗಿಯೂ ನೋಡ್ತಿರಲಿಲ್ಲ.

ಉರಿ ಬಿಸಲಲ್ಲಿ ಇಷ್ಟು ದೂರ ಬಂದ್ರೆ ಆ ಬ್ಯೂಟಿ ಪಾರ್ಲರ ತುಂಬಾ ಜನ. ಊರಿಗೊಬ್ಳೆ ಪದ್ಮಾವತಿ ತರ ಇರೋದು ಅದೊಂದೆಯ. ನಂಗೆ ಯಾರಾದ್ರೂ ನೋಡಿದ್ರೆ ಅಂತ ಬೇರೆ. ಮದುವೆಯಾದ ಹೆಂಗಸಿಗೆ ಇದೆಂಥಾ ಹುಚ್ಚು ಅನ್ಕೊಳೋದಿಲ್ವಾ? ಹೌದು ನಂಗೇನಕೆ ಬೇಕು,  ಆದರೆ ಮದುವೆ ಮನೆ ಅಂತಾದ ಮೇಲೆ,  ಅದರಲ್ಲೂ ಕಲಶಗಿತ್ತಿ ಚೂರು ಎದ್ದು ಕಾಣೋದು ಬೇಡ್ವಾ?
ಕೂದಲು ಒಂಚೂರು ಕತ್ತರಿಸಿ ಕೊಂಡು ಮುಖಕ್ಕೆ ಏನಾದ್ರೂ ಮಾಡಿಸೋಣ ಅಂದರೆ ನಾನೂರು, ಐನೂರು ಅಂತ ಹೇಳ್ತಾಳೆ. ನಾನು ದುಡಿಯದಾಗಿದ್ರೆ ಏನಾದ್ರು ಮಾಡ ಬಹುದಿತ್ತು. ಆದರೆ ಮನೇಲಿ ನಾಲ್ಕಾಣೆಗೂ ಲೆಕ್ಕ ಕೋಡೋದು ಅಂದ ಮೇಲೆ ಯಾರಿಗೆ ಬೇಕು. ಅದಕ್ಕೆ ಯಾವದಾದ್ರೂ ಒಂದು ವಾರಕ್ಕೆ ಬೆಳ್ಳಗಾಗೋ ಕ್ರೀಮ್ ಇದ್ಯಾ ಅಂತ ಕೇಳಿದೆ. ಅವರಿಗೆ ದುಡ್ಡಾಗದೆ ಇದ್ದ ಮೇಲೆ ಹೀಗೆಲ್ಲಾ ಪುಕ್ಕಟೆ ಸಲಹೆ ಕೊಡ್ತಾರ? ಇಲ್ಲವೇ ಇಲ್ಲ ಏನಾದ್ರೂ ಫೇಶಿಯಲ್ ಮಾಡಿಸ್ಕೊಳ್ಲಿ ಅಂತಾನೆ ಅವಳದು.

ನಾ ಅಷ್ಟೆಲ್ಲಾ ದುಡ್ಡು ತಗೊಂಡು ಹೋಗಿರಲಿಲ್ಲ. ಅದಲ್ಲದೆ ದುಡ್ಡಿದ್ದೋರು ಏನು ಮಾಡಿದ್ರು ನಡೆಯುತ್ತೆ, ನಾವೆಲ್ಲಾ ಮುಖಕ್ಕೆ ಬಣ್ಣ ಮೆತ್ಕೊಂಡು  ಹಪ್ಪಟೆ ಸೀರೆ ಉಟ್ಕೊಂಡ್ರೆ ನಗ್ತಾರಷ್ಟೆ. ಅದಕ್ಕೆ ಇವೆಲ್ಲದರ ಗೊಡವೆಯೇ ಬೇಡ. ಮದುವೆ ಹಿಂದಿನ ಹೋಗಿ ಮುಗಿದ ತಕ್ಷಣ ಹೊರಟರಾಯಿತು. ಈಗಾಗಲೇ ಗಂಟೆ ಒಂದು, ಅತ್ತೆಗೆ ಸಿಟ್ಟು ಬಂದು ಕೂಗಾಡದಿದ್ರೆ ಸಾಕು ನಾ ಹೊರಡ್ತೀನಿ.

4 thoughts on “ಹೀಗೆ ಒಂದು ಮಧ್ಯಾಹ್ನ

  1. ಎಂಥಾ ಮಾರಾಯ್ತಿ ಒಬ್ಬೊಬ್ಬ್ಳೆ ಬಡಬಡಾಯ್ಸ್ತಿ… ಡೆಟಾ ಪ್ಯಾಕ್ ಇಲ್ವಾ? 😛

    Like

Leave a comment