ಮಡಿಕೇರಿಯಲ್ಲಿ….

ಬೆಂಗಳೂರಿಗೆ ಬಂದ ಮೇಲೆ ಊರ ಮೇಲಿನ ಪ್ರೀತಿಯೇಕೋ ಜಾಸ್ತಿಯಾಗಿತ್ತು. ಸ್ಕೂಲಿನ ಫ್ರೆಂಡ್ಸೆಲ್ಲಾ ಮತ್ತೆ ಹತ್ತಿರವಾಗಿದ್ದರು. ಲಾಂಗ್ ವೀಕೆಂಡಲ್ಲಿ ಊರಿನ ಕಲ್ಲು ಬೆಂಚಿನ ಮೇಲೆ ಕುಳಿತು, ತಂಗಾಳಿಯೊಡನೆ ಪದೇ ಪದೇ ಹಳೇ ನೆನಪುಗಳ ಜೊತೆ ಕಾಲದ ಹಿಂದೆ ಹೋಗುತ್ತಿದ್ದೆವು. ಅಕ್ಕ ಪಕ್ಕದ ಮನೆಯವರೆ ಆದ ಕಾರಣ ಮಾತುಕಥೆ ಗಂಟೆ ಗಟ್ಟಲೆ ಮಿತಿಯಿಲ್ಲದೆ ಸಾಗುತಿತ್ತು. ಹೀಗೆ ಸುಮಾರು ಇಪ್ಪತ್ತು ವರ್ಷದ ಹಳೇ ಪರಿಚಯ ಈಗ ಮತ್ತೆ ಹೊಸತಾಗಿತ್ತು. ಇಂಥ ಟೈಮಲ್ಲಿ ಪ್ಲಾನಾಗಿದ್ದು ಈ ಮಡಿಕೇರಿ ಟ್ರಿಪ್ಪು.

image

ಸ್ಕೂಲು ಫ್ರೆಂಡ್ಸ್ ಗಳಾದರೂ ಬದುಕಿನಲ್ಲಿ ಎಲ್ಲರೂ ಬಹಳಷ್ಟು ದೂರ ನಡೆದು ಬಿಟ್ಟಿದ್ದರು. ಒಂದೊಂದು ರೀತಿಯಲ್ಲಿ ಸೆಟಲ್ ಆಗಿರುವ ಎಲ್ಲರೂ ಎಲ್ಲ ದೊಡ್ಡಸ್ತಿಕೆಯ ಹೊರೆ ಕಳಚಿಟ್ಟು ತುಂಬಾ ಎಕ್ಸೈಟ್ ಆಗಿ ತಯಾರಾಗಿದ್ದೆವು. ಯಾರಿಗೂ ಮುಂದಿನ ಅರಿವಿರುವುದಿಲ್ಲವಲ್ಲ ಅದಕ್ಕೆ.

image

ಇಲ್ಲಿಂದ ಒಬ್ಬ ಗೆಳೆಯನ ಕಾರಿನಲ್ಲಿ ಹೊರಟ ನಾವು ಮಡಿಕೇರಿಯ ಹೋಮ್ ಸ್ಟೇ ತಲುಪಿದೆವು. ಅಲ್ಲಿನ ತಿರುಗಾಟದ ಬಗೆಗೆ ಇನ್ನು ಹೇಳಬಹುದು. ಆದರೆ ನಮ್ಮೆಲ್ಲರ ಬದುಕನ್ನೇ ಬದಲಿಸಬಹುದಾಗಿದ್ದ ಘಟನೆಯೊಂದು ಅಲ್ಲಿ ನನ್ನ ಚಿಂತೆಗೀಡುಮಾಡಿತು. ಅದರ ಮುಂದೆ ಟ್ರಿಪ್ಪಿನ ಎಲ್ಲ ಮಜ-ಮಸ್ತಿಗಳು ಗೌಣವಾಗಿ ಬಿಟ್ಟಿದೆ. ಅದಕ್ಕೆ ನಾನು ನೇರವಾಗಿ ಅದೇ ವಿಚಾರಕ್ಕೆ ಬರುತ್ತೇನೆ.

image

image

ಆಗ ಗಂಟೆ ಇನ್ನು ರಾತ್ರಿ ಒಂಭತ್ತು. ದಿನವಿಡೀ ದಣಿದು ಡಿನ್ನರ್ ಮುಗಿಸಿ ನಮ್ಮ ಹೋಮ್ ಸ್ಟೇ ಕಡೆಗೆ ನಡೆದು ಕೊಂಡು ಹೊರಟಿದ್ದೆವು. ಅಲ್ಲಿ ಬಹಳ ಬೇಗ ಕತ್ತಲಾಗಿತ್ತು ಅಥವಾ ಜನರು ಬೇಗ ಹೊದ್ದು ಮಲಗಿ ಬಿಡುತ್ತಾರೆ. ಸುತ್ತಲೂ ಗವ್ವೆನ್ನುವ ಕತ್ತಲು, ಒಂದೇ ರಾಗದಲ್ಲಿ ಹಾಡಿದಂತೆ ಕೂಗುವ ಆ ಹಕ್ಕಿಯ ಗುಯ್ ಶಬ್ದ.  ಮಾತೆಲ್ಲಾ ಇಲ್ಲದೆ ಎಲ್ಲರೂ ಸುಮ್ಮನೇ ನಡೆಯುತ್ತಿದ್ದೆವು. ಚಿಕ್ಕದಾದ ಟಾರು ರೋಡಿನ ಎಡಕ್ಕೆ ಹಸುರಿನ ಚಾದರ ಹೊದೆಸಿದ್ದ ಪುಟ್ಟ ಬೆಟ್ಟ, ಬಲಕ್ಕೆ ಅದೇ ಚಾದರ ಹಾಸಿದ್ದ ಕಡಿದಾದ ಧರೆ. ಹೀಗೆ ಕಾಡಿನ ಮಧ್ಯೆ ನೀರವ ಮೌನವ ಕದಡದೆ ನಾವು ಸಾಗುತ್ತಿದ್ದೆವು. ಎಲ್ಲ ಕಡೆ ಕಪ್ಪು ಕತ್ತಲೆಯೇ ತುಂಬಿ ಏನೋ ಎಲ್ಲರ ಮನದಲ್ಲೂ ಸಣ್ಣನೆಯ ಢವ ಢವ ಶುರುವಾಗಿತ್ತು.

image

ಅಷ್ಟರಲ್ಲಿ ನನ್ನ ಚಪ್ಪಲಿಯ ಬಾರ್ ಲೂಸಾಗಿ ಕಿತ್ತು ಬಂದಿತು. ಆದರೆ ಹಿಂದಿದ್ದ ನಾನು ನಿಂತದ್ದು ಯಾರಿಗೂ ಗೊತ್ತಾಗಲಿಲ್ಲ. ಒಂದೆರಡು ನಿಮಿಷದಲ್ಲಿ ಉಂಗುಷ್ಠದ ತೂತಕ್ಕೆ ಕಿತ್ತ ಬಾರನ್ನು ಜತನದಿಂದ ತುರುಕಿ ತಲೆ ಎತ್ತಿದಾಗ ಅವನು ನಿಂತಿದ್ದ. ಅವನೆಂದರೆ ನಮ್ಮ ಜೊತೆಯಲೇ ಬಂದ ಅದ ಹಳೇ ಸ್ನೇಹಿತ. ದೂರದ ಬೆಟ್ಟದ ತುದಿಯಲ್ಲಿ ಕಣ್ಣು ಕೀಲಿಸಿದ್ದ ಅವನು ನನಗಾಗಿ ಕಾದು ನಿಂತಿರುವುದೇ ಆಶ್ಚರ್ಯವೆನಿಸಿತು. ಬಾ ಎಂದು ಕರೆದು ನಾ ಮುಂದೆ ಹೆಜ್ಜೆ ಹಾಕ ತೊಡಗಿದೆ. ಎರಡು ಕೈಗಳನ್ನು ಅಗಲ ಮಾಡಿ ಚಿಕ್ಕ ಮಕ್ಕಳ ಹಾಗೆ ಆಟವಾಡುತ್ತಾ ಅವನು ಹಿಂದೆ ಬರುತ್ತಿದ್ದ. ತಿರುಗಿ ನೋಡಿದಾಗ ನಡಿಗೆ ಜೋರಾಗಿ ರಸ್ತೆಯ ಎಡ ಬಲ ಓಡುತ್ತಿದ್ದ. ಮೊದಲೇ ಹಿಂದಿದ್ದ ನಾವು ಈಗ ಮತ್ತಷ್ಟು ಹಿಂದೆ ಉಳಿದೆವು. ಎಷ್ಟು ಕರೆದರೂ ಹೋಮ್ ಸ್ಟೇ ದಿಕ್ಕಿನಲ್ಲಿ ಬರಲೇ ಇಲ್ಲ. ಆಗಲೇ ವೆಹಿಕಲ್ ಒಂದು ರಭಸದಿಂದ ಬಂದಿದ್ದು. ತಕ್ಷಣ ನನ್ನ ಜೊತೆ ಬಂದು ಮಾಮೂಲಿನಂತೆ ನಡೆಯ ತೊಡಗಿದ. ನನಗೂ ವಿಚಿತ್ರ ಅನಿಸಲಿಲ್ಲ ಸ್ವಲ್ಪ ಹೊತ್ತಿನಲ್ಲಿ ನಾವು ನಮ್ಮ ಗುಂಪು ಸೇರಿಕೊಂಡೆವು.

ಕಾರ್ಡ್ಸ ಆಡುವುದು ನಮೆಗೆಲ್ಲರಿಗೂ ಏನೋ ಒಂಥರಾ ಮಜ. ಮೊದಲು ಹಾವು ಏಣಿ, ಲೂಡೋ, ಬಿಸಿನೆಸ್ ಆಡುತಿರುವಂತೆ ಆಗೀಗ ಕಾರ್ಡ್ಸ ಕೂಡ ಆಡುತ್ತೇವೆ. ಹೀಗೆ ಬುಕ್ ಮಾಡಿದ್ದ ಎರಡು ರೂಮುಗಳಲ್ಲಿ ಒಂದರಲ್ಲಿ ನಮ್ಮ ಆಟ ಶುರುವಾಯಿತು. ನಗು ಕೀಟಲೆಯಿಂದ ರಂಗೇರಿದ್ದ ಆಟದ ಮಧ್ಯೆ ಬಾತರೂಮಿನಲ್ಲಿ ನೀರು ಬಿಟ್ಟ ಶಬ್ದ ಕೇಳಿಸಿತು. ಎಲ್ಲರೂ ಇಲ್ಲೇ ಇದ್ದೆವು ಆದರೂ ಅಲ್ಲಿ ಜೋರಾಗಿ ನೀರಿನ ಶಬ್ದ. ಎಲ್ಲ ಒಟ್ಟಾಗಿ ಎದ್ದು ಹೋಗಿ ನೋಡಿದರೆ ಅಲ್ಲಿ ಏನು ಇಲ್ಲ ಶಬ್ದವೂ ಇಲ್ಲ. ಇದೇ ತರಹ ಮೂರು ಸರಿಯಾಯಿತು.  ಎಲ್ಲರ ಎದೆ ತಾಳ ಮದ್ದಳೆಯಷ್ಟು ಜೋರಾಗಿ ಹೊಡೆದುಕೊಳ್ಳುತ್ತಿತ್ತು. ಎಂದೂ ದೇವರನ್ನು ಅಷ್ಟು ನೆನಸಿಲ್ಲದ ನಾವುಗಳು ಅಲ್ಲಿ ಗಾಯತ್ರಿ ಮಂತ್ರ ಹೇಳಲು ಶುರುಮಾಡಿದೆವು.

ಹೋಮ್ ಸ್ಟೇ ಬುಕ್ ಮಾಡಿದವನ ಮೇಲೆ ನನ್ನ ಸಿಟ್ಟು ತಿರುಗಿತ್ತು. ಅವನೇ ಈಗಷ್ಟೇ ಹೇಳಿದಂತೆ ರಸ್ತೆಯಲ್ಲಿ ವಿಚಿತ್ರವಾಗಿ ಆಡಿದವನು. ಎಲ್ಲೋ ಆನ್ ಲೈನ್ ಲಿ ಬುಕ್ ಮಾಡಿದ್ದ. ಅವರ ಪರಿಚಯವಾಗಲಿ, ಗುರುತಾಗಲಿ ಯಾರಿಗೂ ಇರಲಿಲ್ಲ. ಒಬ್ಬರು ಅಜ್ಜ ಅವರ ಮನೆಗೆ ತಾಗಿಕೊಂಡಿದ್ದ ಅಕ್ಕಪಕ್ಕದ ಎರಡು ರೂಮುಗಳನ್ನು ನಮಗೆ ಕೊಟ್ಟಿದ್ದರು. ಅಂತೂ ನೀರಿನ ಶಬ್ದ ಆ ಅಜ್ಜನ ಮನೆಯಿಂದಲೇ ಬರುತ್ತಿದೆ. ತೀರ ತೆಳುವಾದ ಗೋಡೆಯಾದ ಕಾರಣ ನಮಗೆ ಹಾಗೆ ಕೇಳಿಸುತ್ತಿದೆ !! ಎಂದು ನಮಗೆ ನಾವೇ ಸಮಾಧಾನ ಮಾಡಿಕೊಂಡೆವು. ಅಲ್ಲಿ ಕಾರ್ಡ್ಸ ಆಡುವುದು ಕೂಡ ನಮಗೆ ಭಯವಾಯಿತು. ಹೇಗೂ ಅಲೆದಲೆದು ಸುಸ್ತಾಗಿದ್ದುದರಿಂದ ನಮಗೆ ನಿದ್ದೆ ಕಣ್ಣ ರೆಪ್ಪೆ ಮೇಲೆ ಕುಳಿತಿತ್ತು. ನಾನು ಮತ್ತು ಇನ್ನೊಬ್ಬ (ಇವನು ನನಗಿಂತ ಚಿಕ್ಕವನು ವರಸೆಯಲ್ಲಿ ತಮ್ಮನಾಗಬೇಕು) ಇನ್ನೊಂದು ರೂಮಿಗೆ ಹೋದೆವು. ಭಯವು ಇನ್ನಷ್ಟು ಕಾಡತೊಡಗಿತು, ಚಿಕ್ಕವನಾದ್ದರಿಂದ ನಾನೇ ಏನಾದರೂ ಆದರೆ ನೋಡಿಕೊಳ್ಳಬೇಕು ಎಂಬ ತಲೆಬಿಸಿ ಬೇರೆ.

ಆದರೂ ಮೆತ್ತನೆಯ ಬಿಳಿ ಹಾಸಿಗೆ, ತಂಪಾದ ಮಡಿಕೇರಿಯ ತಂಗಾಳಿ, ತುಂಬಾ ದಣಿದ ದೇಹ, ನೆಮ್ಮದಿಯಿಂದಿದ್ದ ಮನಸ್ಸು ಬಹಳ ಬೇಗ ಗಾಢ ನಿದ್ದೆ ಬಂದಿತ್ತು. ಇಹ ಲೋಕದ ಪರಿವೇ ಇಲ್ಲದೆ ಪ್ರಜ್ಞೆ ತಪ್ಪಿದಂತೆ ಮಲಗಿದ್ದೆವು. ಆಗಲೇ ಎಲ್ಲೋ ಕರೆದ ಧ್ವನಿ. ನನಗೆ ಎಚ್ಚರವಾಯಿತು ಅವನೇ ನಮ್ಮಿಬ್ಬರನ್ನು ಕರೆಯುತ್ತಿದ್ದ. ತುಂಬಾ ಮೆಲುದನಿಯಿಂದ ಅಕ್ಕರೆಯಿಂದ ಮಕ್ಕಳನ್ನು ಕರೆಯುವ ಹಾಗೆ ಕೇಳಿಸುತ್ತಿತ್ತು. ಒಂದು ಗಂಟೆ ರಾತ್ರಿಯಲ್ಲಿ ಅಂಥ ಕೂಗು… ಏಕೋ ಬಾಗಿಲು ತೆರೆಯಲು ಧೈರ್ಯ ಬರಲಿಲ್ಲ. ಅಷ್ಟರಲ್ಲಿ ನನ್ನ ಜೊತೆಗಿರುವನು ಎದ್ದು ಬಾಗಿಲು ತೆರೆಯಲು ಬಂದ. ನಾನೆಷ್ಟು ಬೇಡವೆಂದರು ಇವನು ತೆರೆದಾಗಿತ್ತು. ಅವನು ಅಲ್ಲೇ ನಿಂತಿದ್ದ, ಭೂತ ಪ್ರೇತವೇನೂ ಕಾಣಿಸಲಿಲ್ಲ,  ಮಾಮೂಲಾಗೇ ಇದ್ದ. ಏನಾಯಿತು ಎಂದರೆ ಹಸಿವು ಎಂದು ಅಳಲಾರಂಭಿಸಿದ. ಅಪರಾತ್ರಿಯಲ್ಲಿ ಅವನ ಆ ಸಣ್ಣ ಅಳು ನನಗೆ ಅತಿ ಕರ್ಕಶವಾಗಿ ಕೇಳಿಸಿತು. ಹೇಗಾದರೂ ಸಾಗಹಾಕಿದರೆ ಸಾಕೆಂದು ಅಲ್ಲಿದ್ದ ಬಾಳೆಹಣ್ಣು ಕೊಟ್ಟು ಕಳಿಸಲು ನೋಡಿದೆ. ಆದರೆ ಅಲ್ಲಿ ಇರಲಿಲ್ಲ ಅದು ಅವರ ರೂಮಲ್ಲೇ ಬಿಟ್ಟು ಬಂದುದು ನೆನಪಾಯಿತು. ಕೊನೆಗೆ ಅಲ್ಲೇ ಹೋಗಿ ಅದನ್ನು ಅವನಿಗೆ ತೋರಿಸಿದ್ದು ಆಯಿತು.

ಆದರೆ ಆ ರೂಮಲ್ಲಿ ನಮ್ಮ ಇನ್ನೊಬ್ಬ ಸ್ನೇಹಿತನಿರಲಿಲ್ಲ. ಎಲ್ಲಿ ಎಂದರೆ ಹಸಿವಾಯಿತು ತಿಂದು ಬಿಟ್ಟೆ ಎಂದು ನಗತೊಡಗಿದ. ನಾನು ಸಾಕು ತಮಾಷೆ ಎಂದು ಬಾತರೂಂ ನೋಡಿದೆ ಆದರೆ ಅದು ಕೂಡ ಬಾಗಿಲು ತೆರೆದು ಕೊಂಡು ಖಾಲಿಯಾಗಿತ್ತು. ಎಲ್ಲಿ ಎಂದು ಗದರಿಸಿ ಕೇಳಿದರೆ ಮತ್ತೆ ಅದೇ ಉತ್ತರ , ಅಷ್ಟರಲ್ಲಿ ಕೊಟ್ಟ ಒಂದು ಚಿಪ್ಪು ಬಾಳೆಹಣ್ಣು ಖಾಲಿಯಾಗಿ ಮತ್ತೆ ಹಸಿವು ಅನ್ನತೊಡಗಿದ. ಅವನು ಅದನ್ನು ತಿಂದಿದನ್ನೇ ನಾವು ನೋಡಿರಲಿಲ್ಲ ಆದರೂ ಅದು ಎಲ್ಲೂ ಕಾಣಲಿಲ್ಲ. ಏನೂ ಮಾಡಲೂ ತೋಚದೆ ನಾನು ರೂಮಿಂದ ಹೊರಗೆ ಬಂದೆ ಹಸಿವು ಎಂದು ಬಂದ ಅವನು ನಮ್ಮನ್ನೇ ತಿನ್ನುವಂತೆ ನೋಡುತ್ತಿದ್ದ. ಆಗ ಪಕ್ಕದಲ್ಲಿ ಆ ಮನೆಯವರ ಕಪ್ಪು ನಾಯಿಯೊಂದು ಬಂದು ಬೊಗಳ ತೊಡಗಿತು. ಅದರ ಹಿಂದೆ ಹೋದರೆ ಇನ್ನೊಬ್ಬ ಸ್ನೇಹಿತ ರಕ್ತದ ಮಡುವಿನಲ್ಲಿ ಬಿದ್ದಿದ್ದ. ನಾವು ಭಯದಿಂದ ಎತ್ತಲು ಹೋಗುವಾಗ ಇವನ ಅಳು ಗಹಗಹಿಸುವ ನಗುವಾಗಿ ಬದಲಾಯಿತು.

ಅಷ್ಟರಲ್ಲಿ ಕಿರುಚಿ ಕೂಗಿದ ನಾನು ನಿದ್ರೆಯಿಂದ ಎದ್ದಿದ್ದೆ. ಸದ್ಯ ಕನಸಿದು ಎಂದು ನೆಮ್ಮದಿಯಿಂದ ನಿಟ್ಟುಸಿರು ಬಿಟ್ಟು ಎದ್ದು ರೆಡಿಯಾಗಿ ನಮ್ಮ ಮುಂದಿನ ಗುರಿಯಾದ ತಲಕಾವೇರಿಗೆ ಹೊರೆಟೆವು. ಕಾರಿನಲ್ಲಿ ಅವನು ಮತ್ತೆ ಹಸಿವು ಎಂದು ನನ್ನ ಕಣ್ಣನ್ನೇ ನೋಡುತ್ತಾ ಕೇಳಿದಾಗ ಇವನಿಗೆನಾದರೂ ನನ್ನ ಕನಸು ಕಾಣಿಸಿತೇ ಎಂದು ಗಾಬರಿಯಾಗಿದ್ದೆ. ಆದರೆ ಬಾಳೆಹಣ್ಣಿಗೆ ಹುಡುಕಿದಾಗ ರಾತ್ರಿ ಇದ್ದದು ಈಗ ಇರಲಿಲ್ಲ. ಇವನನ್ನೇ ತಿಂತೀನಿ ಬಿಡು ಅಂತ ನಗುತ್ತಾ ಕಾರ್ ಸ್ಲೋ ಮಾಡಿದಾಗ ಆ ಜೋಕಿಗೆ ಅಳಬೇಕೋ ನಗಬೇಕೋ ತಿಳಿಯಲಿಲ್ಲ.

19 thoughts on “ಮಡಿಕೇರಿಯಲ್ಲಿ….

  1. ಆ ನೀರಿನ ಸದ್ದು, ರಸ್ತೆಯ ವಿಚಿತ್ರ ವರ್ತನೆ ಮತ್ತುನ ಕೊನೆಯಲ್ಲಿನ ಜೋಕು ನಿಜವಾಗಿಯೂ ನಡೆದಿದ್ದೊ ಅಥವಾ ಅದು ನಿಮ್ಮ ಕಲ್ಪನೆಯ ಮೂಸೆಯಿಂದ ಬಂದ ಸರಕೊ ?

    ‘ಅನುಭವ’ ಕಥಾನಕ ಮಾತ್ರ ಸುಪರ್ ಆಗಿದೆ – ಡಿಸಪಾಯಿಂಟ ಆದ ಒಂದೆ ಒಂದು ಟ್ವಿಸ್ಟ್ ಅಂದರೆ – ಅದು ಕನಸಾಗಿ ಬಿಟ್ಟಿದ್ದು 😛

    Liked by 2 people

    1. 😄 😄 😄 😄 😄 dhanyavadagalu…
      ಆದರೆ ನಾ ನಿಮ್ಮ ಮೊದಲ ಮೂರು ಪ್ರಶ್ನೆಗಳಿಗೆ ಉತ್ತರ ಕೊಡಲ್ಲ… ಅದು ನಿಗೂಢವಾಗಿಯೇ ಇರಲಿ ಅಲ್ಲವಾ? ?

      Liked by 2 people

      1. ಅಂದ ಹಾಗೆ ನನ್ನ ಊಹೆಯ ಪ್ರಕಾರ ಕೊನೆಯಲ್ಲಿನ ‘ಹಸಿವು’ ಎಂದಿದ್ದು ಮತ್ತು ಅವನನ್ನೆ ತಿನ್ನುವೆ ಎಂದ ಜೋಕು ನಿಜವಿರಬೇಕು – ಅದರ ಎಳೆ ಹಿಡಿದು ಮಿಕ್ಕಿದ್ದೆಲ್ಲ ಸೊಗಸಾಗಿ ಹೆಣೆದ ಕಥೆಯೆಂದು ನನ್ನ ಅನಿಸಿಕೆ..😜😜

        Liked by 1 person

  2. ಕೊನೆವರೆಗೂ ಕುತೂಹಲ ಹಿಡ್ದಿಟ್ಟಿತ್ತು ಕಣೇ… ನಿನ್ನ ಬರಹಕ್ಕೊಂದು :* …. ❤

    Liked by 1 person

  3. ಎರಡು ವಿಷಯದಲ್ಲಿ ನಾ ಬೆಸ್ತು ಬಿದ್ದೆ. ಒಂದು ಕನಸಿನ ನಿಗೂಡ ಕಥೆ ಇನ್ನೊಂದು……..ಹೇಳಲ್ಲ. Guess!☺

    Liked by 1 person

  4. ಒಂದ್ ವಿಷ್ಯ ಹೇಳಲಾ ?
    ಹೋದ ಜನ್ಮದಲ್ಲಿ ನೀವು ಆ ಬಾಳೆಹಣ್ಣಿನ ಸಿಪ್ಪೆ ಆಗಿದ್ರಿ , ಈ ಕಥೆ ಓದಿದವರೆಲ್ಲ ಹಣ್ಣಿನ ಭಾಗಗಳಾಗಿದ್ರು , ಕನಸಿನಲ್ಲಿ ಬಾಳೆಹಣ್ಣು ಕೇಳಿದ ಪುಣ್ಯಾತ್ಮ ಕರಡಿಯಾಗಿದ್ದ,
    ಮುಂದಕ್ಕೆ ಏನಾಯ್ತು ಅಂತ ಈ ಕಾಮೆಂಟ್ ನೋಡ್ತೀರಲ್ಲ ಅವತ್ತಿನ ದಿನ ರಾತ್ರಿ ಕನಸಲ್ಲಿ ಬಂದು ನಾನೇ ಹೇಳ್ತೀನಿ .. 😂😂😂😂

    Like

Leave a comment