​ಮಳೆಗಾಲದ ಕಥೆಗಳು – ೧

ಏಕಾತನತೆಯಿಂದ ಒಂದೇ ಸಮನೇ ಸುರಿಯುತ್ತಿದ್ದ ಮಳೆಗೆ ರೋಸಿ ಹೋಗಿದ್ದಳು ಪರಿಮಳ. ಮೂಲೆ ಕೋಣೆಯಲ್ಲಿ ಬೆಚ್ಚಗೆ ಮಲಗಿ ನಿದ್ದೆಯಿಂದ ಈಗಷ್ಟೇ ಎದ್ದಿದ್ದಳು. ಏನೋ ಮಲಗಿದಷ್ಟೂ ನಿದ್ದೆ, ಬೆಳಕೇ ಕಾಣದ ಮಬ್ಬು ಮಬ್ಬು ದಿನಗಳನ್ನು ದೂಡಿ ಅವಳಿಗೂ ಸಾಕಾಗಿತ್ತು. ಎದ್ದು ಚಳಿಯಲ್ಲಿ ನಡುಗುತ್ತಾ ಬಂದು ಟಿವಿ ಹಾಕಿದಳು. ಉಹು , ಕರೆಂಟಿಲ್ಲ, ಸರಿಯೆಂದು ಒಂದು ಲೋಟ ಕಾಫಿ ಮಾಡಿಕೊಂಡು ಬಂದು ಕೂತಳು. ಗಂಟೆ ಇನ್ನೂ ಮಧ್ಯಾಹ್ನ ಮೂರುವರೆ ಮನೆಯವರೆಲ್ಲಾ ಏಳುವುದು ಐದು ಗಂಟೆಗೆ. ಮಾಡಲು ಬೇರೆನು ಕೆಲಸವಿಲ್ಲದೆ ಪೇಪರ್ ತಂದು ಎದುರಿಗೆ ಹಾಸಿ ಕೊಂಡಳು.
ಪರಿಮಳ ಪುಟ ತಿರುವುತ್ತಾ ತಿರುವುತ್ತಾ ಸಾಪ್ತಾಹಿಕ ಪುರವಣಿಯ ತನಕ ಬಂದಳು. ಇಡೀ ಪುಟಕ್ಕೆ ಸಾಕಾಗುವಂತೆ ಮಳೆಗಾಲದ ವೈಭವ ಎಂದು ದೊಡ್ಡ ಲೇಖನವೊಂದು ರಂಗು ರಂಗಾಗಿ ಕಂಡಿತು.
ಮಳೆಯೆಂದರೆ ಆಕಾಶ ಭೂಮಿಯ ತಬ್ಬಿಕೊಳ್ಳುವ ಪರಿ, ನೀರಿನ ಪ್ರೀತಿಗೆ ಗಿಡ ಮರಗಳೆಲ್ಲಾ ಮಜ್ಜನ ಮಾಡಿ ಹೊಸದಾಗಿ‌ ತೊನೆ ತೊನೆದು ಕಂಗಳಿಸುತ್ತವೆ. ಉಕ್ಕಿ ಹರಿವ ನದಿಯೇ ಭೂ ರಮೆಯ ಶೃಂಗಾರ ಪರ್ವದ ಸೂಚನೆ. ಪರಿಮಳಗೆ ಇದೆಲ್ಲಾ ಓದಿ ಯಾಕೋ ಸೋರುವ ಮನೆಯ ಮಾಡು, ಜೋರು ಮಳೆಗೆ ಜರಿದು ಬಿದ್ದ ಗೋಡೆಯ ನೆನಪಾಯಿತು.
ಸ್ಕೂಲಿಗೆ ಜೂನ್ ಒಂದಕ್ಕೆ ಹೊಸ ಛತ್ರಿ ಹಿಡಿದು ಹೋಗುವ ಸಂಭ್ರಮವೇ ಬೇರೆ. ಚರಂಡಿ ನೀರಿನ ಜೊತೆ ಎಲೆ ಬಿಟ್ಟು ಅದರ ಜೊತೆಯಲ್ಲಿ ಓಡುವ ಸಂಭ್ರಮ. ರೈನ್ ಕೋಟನ್ನು ಸೂಟಿನಂತೆ ಹಾಕಿಕೊಂಡು ಬೀಗುವ ಖುಷಿ. ಜಾರಿ ಬೀಳುವ ಬಿದ್ದಾಗ ಏಳದೆ ನಟಿಸುವ ಆ ಬಾಲ್ಯ , ಮಳೆಗಾಲದಲ್ಲೇ ನೀರಿಗೆ ಕಟ್ಟೆ ಕಟ್ಟುವಾಗಲೇ ಅರಳಿದ್ದೇನೋ ಅನಿಸುತ್ತದೆ. ಆದರೂ ಪರಿಮಳಳಿಗೆ ಮಳೆ ಹೆಚ್ಚಾಗಿ ಹಳ್ಳ ತುಂಬಿ ಸ್ಕೂಲಿಗೆ ಹೋಗಲಾರದೆ ಒಂದು ತಿಂಗಳ ಪಾಠ ತಪ್ಪಿ ಹೋಗಿ ಫೇಲಾದ ನೆನಪೇ ಕಾಡುತ್ತದೆ.
ಇನ್ನು ಕಳಲೇ ಹುಳಿ, ಹಲಸಿನ ಕಾಯಿ ಹಪ್ಪಳ, ಪತ್ರೊಡೆ ಮಳೆಗಾಲಕ್ಕೆಂದೇ ಮೀಸಲಾದ ಕೆಲವು ಖಾದ್ಯಗಳಲ್ಲಿ ಮೊದಲ ಪಂಕ್ತಿಯವು. ಅವೆಲ್ಲಾ ನೆನಸಿಕೊಂಡರೆ ಮಳೆಗಾಲ ಸ್ವರ್ಗಕ್ಕೆ ಕಿಚ್ಚು ಹಚ್ಚುವಷ್ಟು ಹೊಟ್ಟೆ ಕಿಚ್ಚು ತರುತ್ತದೆ. ಆದರೇಕೋ ಪರಿಮಳಗೆ ಮಾತ್ರ ಊಟ ತಿಂಡಿಯ ರುಚಿ ತಪ್ಪಿ ಹೋಗಿತ್ತು. ಮನೆಯಲ್ಲೂ ಕೂಡ ಏನೇ ಮಾಡಿ ಹಾಕಿದರೂ ಹೊಟ್ಟೆಗೆ ತುಂಬಲು ಏನಾದರೇನು ಎಂಬಂತೆ ತಿಂದು ಎದ್ದು ಹೋಗುತ್ತಿದ್ದರು. ಉಪ್ಪು ಕಡಿಮೆಯಾದ ದಿನ ಗೊಣ ಗೊಣ ಇದ್ದದ್ದೇ , ಆದರೆ ಚೆನ್ನಾಗಿದ್ದ ದಿನ ಮೌನದಲ್ಲೇ ಮುಗಿದು ಹೋಗುತಿತ್ತು.
ಪೇಪರನ್ನು ಅಲ್ಲೇ ಬಿಟ್ಟು ಖಾಲಿಯಾದ ಕಾಫಿ ಲೋಟದೊಡನೆ ಕಿಟಕಿಗೆ ಬಂದು ನಿಂತಳು.ಮಳೆ ನೆಲಕ್ಕೆ ಬಿದ್ದು ಪುಟಿದು ಹಾರುವುದನ್ನೇ ತದೇಕ ಚಿತ್ತದಿಂದ ದಿಟ್ಟಿಸುತ್ತಿದ್ದಳು. ತಾನು ನೆಟ್ಟ ಪುಟ್ಟ ತುಳಸೀ ಗಿಡ ಈ ಮಳೆಗೆ ಕುಣಿದು ಬೆಳೆದಿರುವಂತೆ ಕಂಡಿತು. ಗುಲಾಬಿಯ ದಳದ ಮೇಲೆ ಮುತ್ತು ನಿಂತಂತೆ ಹನಿ ನಿಂತು ಮೆರಗು ತಂದಿತ್ತು. ಅದೇನೋ ನೆನಪಾದಂತಾಗಿ ಮುಗುಳುನಗೆ ಮೂಡಿ ತುಂಟಿಯಂಚಲೇ ನಕ್ಕಳು. ಒಳಗೇ ಪರೀ.. ಎಂದು ಕರೆದಂತಾಗಿ ತಿರುಗಿ ನೋಡಿದಳು.
ಮಳೆಹನಿ ಭೂಮಿಗೆ ಬಂದು ಬೀಳುವಾಗ ನೆನಪನ್ನು ಹೊತ್ತು ತರುತ್ತವೇನೋ.. ಅದಕ್ಕೆ ಈ ಮೇಘ ಮಲ್ಹಾರಕೆ ಕೊನೆಗೂ ಅವಳು ಸೋತು ಈಗ ನನಗೂ ಮಳೆಗಾಲವೆಂದರೆ ಭಾರಿ ಇಷ್ಟ ಎಂದು ಕುಣಿಯುತ್ತಾಳೆ‌.

Advertisements

2 thoughts on “​ಮಳೆಗಾಲದ ಕಥೆಗಳು – ೧

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s