ತರ್ಕದ ಬಗ್ಗೆ ತರ್ಕ

ಮಳೆಗಾಲದ ತಂಪು ಹೊತ್ತಿನಲ್ಲಿ ಸಂಜೆಯ ಸಣ್ಣ ಕಲರವದಲ್ಲಿ ಸಿಕ್ಕ ಪುಸ್ತಕವೇ ತರ್ಕ. ಅದೇನೋ ಅದರ ಆರಂಭವೇ ತುಂಬಾ ಹಿಡಿಸಿಬಿಟ್ಟಿತು. ಸ್ವಲ್ಪ ಹೊತ್ತು ಅದರಲ್ಲಿ ಕಳೆದು ಹೋದ ಅರಿವೇ ಆಗಲಿಲ್ಲ. ಸರಾಗವಾಗಿ ಓದಿಸಿಕೊಂಡು ಹೋಗುವ ನಿರೂಪಣೆ ಶ್ರೀರಂಗಪಟ್ಟಣದ ಗಾಂಜಾಂನಲ್ಲಿಯೇ ನಮ್ಮನ್ನು ಹಿಡಿದುಕೊಂಡು ಬಿಡುತ್ತದೆ.

ಅಲೌಕಿಕತೆ ಮೊದಲಿಂದಲೂ ಕುತೂಹಲಕರವಾಗಿ ಜೊತೆಯಾಗುತ್ತದೆ. ಆತ್ಮ , ಪರಮಾತ್ಮ, ಆಧ್ಯಾತ್ಮ, ವಿಜ್ಞಾನ ಎಲ್ಲವನ್ನೂ ಸರಳವಾಗಿ, ಸೌಮ್ಯವಾಗಿ ಹೇಳಿದ್ದಾರೆ ಅನಿಸಿತು. ಶ್ರೀ ಚಕ್ರಾರಾಧನೆ ಇದರ ಮುಖ್ಯ ಭೂಮಿಕೆ , ಅದರ ಬಗ್ಗೆ ವೈಜ್ಞಾನಿಕವಾಗಿ, ಧಾರ್ಮಿಕವಾಗಿ ಸಾಕಷ್ಟು ಮಾಹಿತಿ ಇದೆ‌. ಪೂಜೆ ಪುನಸ್ಕಾರಗಳನ್ನು ನವಿರಾಗಿ ವೈಜ್ಞಾನಿಕತೆಯೊಂದಿಗೆ ಮಿಳಿತಗೊಳಿಸಿ ಪ್ರೌಢವಾಗಿ, ಮನೋಜ್ಞವಾಗಿ ತೋರಿಸಿದ್ದಾರೆ.
ಸಾಕಷ್ಟು ವಿಚಾರಗಳಿಗೆ , ನಿಲುವುಗಳಿಗೆ , ಯೋಚನೆಗಳಿಗೆ ಕಿಡಿ ತಾಕುವುದು ‘ತರ್ಕ’ ಎಂಬ ಕುಲುಮೆಯಲ್ಲಿ ಕಾಯಿಸಿದಾಗ. ಇಂಥ ಅಗಾಧ ತರ್ಕ ಒಂದು ಕಾದಂಬರಿಯ ಚೌಕಟ್ಟಿನಲ್ಲಿ ಅದ್ಬುತವಾಗಿ ಮೂಡಿ ಬಂದಿದೆ. ಎಲ್ಲಾ ವಿಚಾರಗಳಿಗೂ ಏನು, ಏಕೆ , ಹೇಗೆ ಎಂದು ಶುರುವಾಗುವ ಪ್ರಶ್ನೆಗಳು ಸಾಧ್ಯವಿರುವಷ್ಟು ದೂರ ಉತ್ತರ ಕಂಡುಕೊಳ್ಳಲು ಅರಸುವಂತಾಗುತ್ತದೆ.
ಇಂತಹ ಗಟ್ಟಿ ವಿಚಾರಗಳ ಕೆಳಗೆ ಕಥೆ ಅತಿ ಸುಂದರವಾಗಿ ಹರಿಯುತ್ತದೆ‌. ‘ಪಿಂಡಾಂಡ’ ಎಂಬ ಪಾತ್ರ ಯಾವ ಆಯಾಮಕ್ಕೂ ಸಿಗದೆ ಎಲ್ಲದಕ್ಕೂ ಉತ್ತರ ನೀಡುತ್ತಾ ನಾಗ್ಡೂ ಬೇತಾಳನ ನೆನಪು ತರುತ್ತಾನೆ.
ಒಳ್ಳೆಯ ಪುಸ್ತಕ ಓದಿದ ನಂತರ ಯಾವುದು ಸರಿ? ಯಾವುದು ತಪ್ಪು? ಸರಿ ಎಂದರೆ ಏನು? ಹೀಗೆ ಕಣ್ಣಿಗೆ ಜಗತ್ತು ಇನ್ನೂ ವಿಸ್ತಾರವಾಗಿ ಕಾಣುತ್ತದೆ. ವಿಭಿನ್ನವಾಗಿ, ವಿಶಿಷ್ಟವಾಗಿ, ಇಷ್ಟವಾದ ಪುಸ್ತಕ.

3 thoughts on “ತರ್ಕದ ಬಗ್ಗೆ ತರ್ಕ

  1. ಕೆಲವು ದಿನಗಳಿಂದ ಈ ಮನಸ್ಸು ಆತ್ಮ ಮತ್ತು ಪರಮಾತ್ಮಗಳ ದುಂಬಾಲು ಬಿದ್ದಿದೆ. ಈ ಪುಸ್ತಕದ ‌ಅವಶ್ಯಕತೆ ಇದೆ ಅಂತ ಆಯ್ತು. ತಿಳಿಸಿದ್ದಕ್ಕೆ ಧನ್ಯವಾದಗಳು 🙂

    Liked by 1 person

Leave a comment