ಐಟಿಯೆಂಬ ಹೊಸತನದ ಹೊಸ್ತಿಲಲಿ

ತೊಂಭತ್ತರ ದಶಕದ ಮೊದಲು ಸಂಬಳ ತರುವ ಕೆಲಸವೆಂದರೆ ಕಾಲೇಜ್, ಬ್ಯಾಂಕ್, ಪೋಸ್ಟ್, ಸರ್ಕಾರಿ ಕಛೇರಿಗಳು ಇವು ಮಾತ್ರವೇ ಕಣ್ಣಿಗೆ ಕಾಣುತಿತ್ತು. ಆದರೆ ಅದೊಮ್ಮೆ IT ಭಾರತಕ್ಕೆ ಬಂತು ನೋಡಿ ಜನಮನದ ದಿಕ್ಕೇ ಬದಲಾಯಿತು. IT ಭಾರತಕ್ಕೆ ಬಂತು ಅನ್ನುವುದಕಿಂತ ಇಲ್ಲಿಯೂ ಕೂಡ ಹುಟ್ಟಿಕೊಂಡಿತು ಅನ್ನಬಹುದು. ಇದಕ್ಕೆ ಮೊದಲಿಗೆ ನಾಂದಿ ಹಾಡಿದ್ದು TCS , ನಂತರದಲ್ಲಿ ಇನ್ಫೋಸಿಸ್ ಅನಂತರದಲ್ಲಿ ಬಂದ ಕಂಪನಿಗಳಿಗೆ ಈಗ ಲೆಕ್ಕವೇ ಇಲ್ಲದಂತಾಗಿದೆ. ಈಗ ಇದರ ಬೆಳವಣಿಗೆಯ ಪರಿ ಒಂದು ಇತಿಹಾಸ. ಆಗಾಧವಾಗಿ ಹಬ್ಬಿಕೊಂಡಿರುವ ರೆಂಬೆ ಕೊಂಬೆಗಳು ಸಾಕಷ್ಟು ಜನರಿಗೆ ಆಸರೆಯಾಗಿ ನಿಂತಿವೆ.

ಹಾಗಾದರೆ ಇಲ್ಲಿರುವ ಅಷ್ಟು ಕೆಲಸವಾದರೂ ಏನು ಎಂದುಕೊಂಡರೆ ಮುಖ್ಯವಾಗಿ ಇದನ್ನು ನಾಲ್ಕು ಭಾಗವಾಗಿ ವಿಭಾಜಿಸುತ್ತಾರೆ. ಮೊದಲನೆಯದು ‘ಬಿಪಿಓ’ ಅಂದರೆ ಬಿಸಿನೆಸ್ ಪ್ರೋಸೆಸ್ ಔಟ್ ಸೋರ್ಸಿಂಗ್ , ನಿಮಗೆ ಕೋಕೊ ಕೋಲಾದಂತ ಕಂಪೆನಿಗಳು ಗೊತ್ತಿರಬಹುದು. ಇವು ತಮ್ಮ ಒಂದು ಭಾಗವನ್ನು ಅಂದರೆ ಲೆಕ್ಕಾಚಾರ ನಿರ್ವಹಣೆ, ಗ್ರಾಹಕ ವಿಭಾಗ ಅಥವಾ ಉದ್ಯೋಗಿಗಳ ನಿರ್ವಹಣೆ ಹೀಗೆ ಒಂದು ಪ್ರೋಸೆಸನ್ನು ಬೇರೆ ಕಡೆಗೆ ಗುತ್ತಿಗೆ ಕೊಡುತ್ತಾರೆ. ಇದರಿಂದಾಗಿ ಅದರ ನಿರ್ವಹಣೆಯ ಹೊಣೆ ಹೆಚ್ಚು ತಲೆಬಿಸಿ ಇಲ್ಲದೆ ಕಡಿಮೆ ಖರ್ಚಿನಲ್ಲಿ ಆಗುತ್ತದೆ. ಇನ್ನೊಂದು ‘ಐಟಿ ಸರ್ವೀಸಸ್’ ಇವು ಜನರಿಗೆ ಅನುಕೂಲವಾಗುವಂತೆ ಮೊಬೈಲ್ , ಬ್ಯಾಂಕ್ ಅಪ್ಲಿಕೇಶನ್, ರೇಲ್ವೇ ಪೋರ್ಟಲ್ ಹೀಗೆ ಕೆಲವು ಸಾಫ್ಟವೇರ್ ಆಧಾರಿತ ಸೇವೆಯನ್ನು ನೀಡುತ್ತದೆ. ‘ಸಾಫ್ಟವೇರ್ ಪ್ರಾಡಕ್ಟಗಳು’ ಅಂದರೆ ಗೂಗಲ್, ಫೇಸ್ ಬುಕ್ ನಂತಹ ಉತ್ಪನ್ನಗಳು. ಕೊನೆಯದಾಗಿ ‘ಹಾರ್ಡವೇರ್’ ಅಂದರೆ ಲ್ಯಾಪ್ ಟಾಪ್, ಕಂಪ್ಯೂಟರ್ ಮತ್ತು ಇನ್ನಿತರ ವಸ್ತುಗಳು.

ಇಂತ ದೊಡ್ಡ ದೊಡ್ಡ ಯೋಜನೆಗಳಲ್ಲಿ ದುಡಿಯುವ ಜನರ ಚಿಕ್ಕ ಚಿಕ್ಕ ವಿಭಾಗಗಳಿರುತ್ತದೆ. ಆ ಗುಂಪುಗಳಲ್ಲಿ ಬೇರೆ ಬೇರೆ ಸ್ತರದಲ್ಲಿ ಕೆಲಸಗಳನ್ನು ಹಂಚಿರುತ್ತಾರೆ. ಹೀಗೆ ಕೆಲಸಕ್ಕೆ ಸೇರಿಕೊಂಡು ದುಡಿಯಲು, ಇಂತಹ ದೊಡ್ಡ ತಂತ್ರಜ್ಞಾನದ ರಥದ ಒಂದು ಭಾಗವಾಗಲು ಇರಬೇಕಾದ ಅರ್ಹತೆಯೇನು? ಇದಕ್ಕೆಂದೇ ಬಿಟೆಕ್, ಬಿಇ ಇನ್ನೂ ಹಲವಾರು ಕೋರ್ಸಗಳು, ವಿಷಯಗಳು ಇವೆ. ಐಟಿಯಿಂದಾಗಿ ವಿದ್ಯಾಭ್ಯಾಸದಲ್ಲಿ ಮಹತ್ತರ ಬದಲಾವಣೆಗಳಾಗಿದೆ. ಹೊಸ ಹೊಸ ಎಂಜಿನಿಯರಿಂಗ್ ಕಾಲೇಜುಗಳು ಹುಟ್ಟಿಕೊಂಡು ಜನರು ಈ ಕೋರ್ಸಗಳಿಗಾಗಿ ಮುಗಿ ಬಿದ್ದಿದ್ದಾರೆ. ಈಗೀಗ ಯಾರು ಬೇಕಾದರೂ ಪದವಿ ಪೂರ್ಣವಾಗಿದ್ದರೆ ಸೇರಿಕೊಳ್ಳಬಹುದು. ಎಲ್ಲರೂ ಹೇಳುವಂತೆ ಓದುವುದಕ್ಕೂ, ಅಲ್ಲಿನ ಕೆಲಸಕ್ಕೂ ಬಹಳಷ್ಟು ವ್ಯತ್ಯಾಸ ಇರುವುದರಿಂದ ಮೂರು ತಿಂಗಳಿನಿಂದ ಆರು ತಿಂಗಳ ತನಕ ಟ್ರೈನಿಂಗ್ ಕೊಟ್ಟು ನಂತರ ಕೆಲಸ ಪ್ರಾರಂಭವಾಗುತ್ತದೆ.

ಭಾರತ ಜಾಗತಿಕ ಮಟ್ಟದಲ್ಲಿ ಈ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಇಲ್ಲಿನ ಆರ್ಥ ವ್ಯವಸ್ಥೆಗೆ ಕೂಡ ಐಟಿಯ ಕೊಡುಗೆ ಹೆಚ್ಚಿದೆ. ಇಲ್ಲಿ ಬೆಂಗಳೂರು ಐಟಿ ರಾಜಧಾನಿಯಾಗಿ ಮೆರೆಯುತ್ತಿದೆ. ಭಾರತದಲ್ಲಿರುವ 35% ಗಿಂತ ಹೆಚ್ಚು ಕಂಪೆನಿಗಳು ಇಲ್ಲೇ ಇವೆ. ಅಂದರೆ ಸುಮಾರು 5000 ಕಂಪೆನಿಗಳು ಇಲ್ಲಿ ನೆಲೆ ನಿಂತಿದೆ‌. ನಂತರದಲ್ಲಿ ಹೈದರಾಬಾದ್, ಚೆನ್ನೈ , ಮುಂಬೈ, ಡೆಲ್ಲಿ ಮತ್ತು ಪುಣೆಯ ಸ್ಥಾನ. ಭಾರತದಲ್ಲಿ ಒಟ್ಟು 28 ಲಕ್ಷ ಜನರು ನೇರ ಉದ್ಯೋಗಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಷ್ಟಲ್ಲದೆ 89 ಲಕ್ಷ ಜನರು ಇದರಡಿಗೆ ಪರೋಕ್ಷವಾಗಿ ದುಡಿಯುತ್ತಿದ್ದಾರೆ.

ಆಕರ್ಷಕ ಸಂಬಳ, ಕಂಪೆನಿಗೆ ಹೋಗಿ ಬರಲು ವಾಹನ, ಊಟ ತಿಂಡಿ ಕೂಡ, ಹೊರ ದೇಶ ಪ್ರಯಾಣ, ಬಡ್ತಿ ಹೀಗೆ ಸಾಕಷ್ಟು ಸೌಲಭ್ಯಗಳಿದ್ದರೂ ಇಲ್ಲಿನ ಬವಣೆ ಕೂಡ ಸಾಕಷ್ಟಿದೆ. ಗಂಟೆಯ ಮುಳ್ಳಿನ ಜೊತೆ ದುಡಿಯುವ, ನೈಟ್ ಶಿಫ್ಟನಲ್ಲಿ ನಿದ್ದೆ ಕಳೆದು ಕೊಳ್ಳುವ, ಮುಗಿಯದ ಮೀಟಿಂಗುಗಳು, ಟೀಂಗಳ ಬಗೆಹರಿಯದ ಸಮಸ್ಯೆಗಳು, ಓಡುತ್ತಿರುವ ಟೆಕ್ನಾಲಜಿಯ ವೇಗಕ್ಕೆ ಹೊಂದಿಕೊಳ್ಳಲಾರದೆ ನೌಕರ ನಲುಗುತ್ತಾನೆ. ಇಂದು ಆತ ಕೆಲಸದ ಒತ್ತಡದಿಂದ ಸಮಾಜದಿಂದ ವಿಮುಖನಾಗಿದ್ದಾನೆ ಎಂಬ ದೂರಿಗೂ ಗುರಿಯಾಗಿದ್ದಾನೆ. ಇಂತಹ ಕಂಪೆನಿಗಳು ಮಹಾನಗರದಲ್ಲೇ ಇರುವುದರಿಂದ ಜೀವನ ನಿರ್ವಹಣೆಯ ಖರ್ಚು ಹೆಚ್ಚಾಗಿ ಸಂಬಳ ಬಂದರೂ ಅದನ್ನು ಎಲ್ಲದಕ್ಕೂ ಹರಿದು ಹಂಚಿ ಹೋಗುತ್ತಿರುತ್ತದೆ. ಇದರ ಜೊತೆಗೆ ಆಗಾಗ ಬರುವ ರಿಸೆಷನ್ , ಎರಡು ತಿಂಗಳ ಗಡುವು ನೀಡಿ ಪಿಂಕ್ ಸ್ಲಿಪ್ ಎಂದು ನಿದ್ದೆ ಕೆಡಿಸಿ ಕೆಲಸ ಕಳೆದುಕೊಳ್ಳುವ ತಾಪತ್ರಯ. ಇವೆಲ್ಲಾ ತೊಂದರೆಗಳೊಂದಿಗೆ ಹೋರಾಡಿ ನುಜ್ಜು ಗುಜ್ಜಾಗುತ್ತಿರುವ ಐಟಿ ಉದ್ಯೋಗಿಯ ಬದುಕಿನ ಇನ್ನೊಂದು ಮುಖ.

ಇದಕ್ಕೆ ಪರಿಹಾರವನ್ನು ಯೋಚಿಸಿದರೆ, ಕೌಶಲ್ಯ ಇರುವ ವ್ಯಕ್ತಿ ಕೆಲಸ ಕಳೆದುಕೊಳ್ಳುವ ಬಗ್ಗೆ ಯೋಚಿಸುವ ಅಗತ್ಯವಿಲ್ಲ. ನಮ್ಮ ನಮ್ಮ ಕೌಶಲ್ಯ ಅಭಿವೃದ್ಧಿಯ ಕಡೆ ಗಮನ ಕೊಟ್ಟರಾಯಿತು. ಇದರ ಜೊತೆಗೆ ಬೇರೆ ದೇಶಗಳ ಆರ್ಥಿಕ ಬದಲಾವಣೆ, ನೀತಿ ನಿಯಮಗಳ ಬದಲಾವಣೆ, ಅಲ್ಲಿನ ಅವಲಂಬನೆಯನ್ನು ಕಡಿತಗೊಳಿಸಿ ಹೊಸ ಹೊಸ ಪ್ರೊಜೆಕ್ಟ್ ಗಳನ್ನು ಹುಡುಕಬೇಕಿದೆ. ಅದಲ್ಲದೆ ಬರಿಯ ಸೇವೆಯ (ಸರ್ವಿಸ್) ಕೆಲಸ ಮಾತ್ರಾವಲ್ಲದೆ ಸ್ವಂತ ಸಂಶೋಧನೆ, ಹೊಸ ತಂತ್ರಜ್ಞಾನದ ಆವಿಷ್ಕಾರಕ್ಕೆ ಒತ್ತು ನೀಡಿ ಸ್ವಾಯತ್ತತೆ ಪಡೆಯಬೇಕಾದ ಅವಶ್ಯಕತೆ ಇದೆ. ಪಾಶ್ಚಿಮಾತ್ಯ ದೇಶಗಳು ನಮ್ಮ ಮೇಲೆ ಅವಲಂಬಿತವಾಗುವ ಹಾಗೇ ಮಾಡಬೇಕಾದ ತುರ್ತು ಇದೆ. ಉದಾಹರಣೆಗೆ ಅಮೆರಿಕದ ವೀಸಾ ನಿಯಮವೊಂದು ನಮ್ಮ ನೆಲದ ಉದ್ಯೋಗಿಗಳಲ್ಲಿ ನಡುಕ ಹುಟ್ಟಿಸುವ ಪ್ರಮೇಯ ಬರುವ ಬದಲು ಅಮೆರಿಕಾವೆ ನಮ್ಮ ತಂತ್ರಜ್ಞಾನಕ್ಕೆ ಬೆಲೆಕೊಟ್ಟು ತನ್ನ ನಿಯಮ ನಿರೂಪಿಸುವ ಹಾಗಾಗಬೇಕು. ಭಾರತೀಯರ ಕೌಶಲ್ಯಗಳು ಬರಿ ದುಡಿತಕ್ಕೆ ಸೀಮಿತವಾಗಿದೆ. ಅದರ ಬದಲಾಗಿ ಸಂಶೋಧನೆಯತ್ತ ಮುಖ ಮಾಡಿ ಸ್ವಾಯತ್ತತೆ ಪಡೆಯಬೇಕಾದ ತುರ್ತು ಎಲ್ಲ ಕ್ಷೇತ್ರಗಳಿಗೂ ಇದೆ.

ಐಟಿಯಿಂದ ಸಂಸ್ಕೃತಿಯು ಮಾಸುತ್ತಿದೆ ಎಂಬ ದೊಡ್ಡ ಆರೋಪ ಇದೆ. ಪದವಿ ಮುಗಿಸಿ ಕೆಲಸಕ್ಕೆ ಸೇರಿದ ತಕ್ಷಣ ಕೈಯಲ್ಲಿ ಹಣ ಓಡಾಡುವುದರಿಂದ ಯುವಕರಲ್ಲಿ ಚಟಗಳು, ದುಡ್ಡು ಖಾಲಿ ಮಾಡುವ ಹೊಸ ಹೊಸ ಮಾರ್ಗಗಳು ಕಾಣುತ್ತದೆ. ಇದರಿಂದ ಆಧುನಿಕತೆಯ ಸ್ಪರ್ಶ ದೇಶದ ಮೂಲೆಗಳಿಗೆ ಹಬ್ಬುತ್ತಿದೆ‌. ಜನರು ಈಗ ಪರಿವರ್ತನೆಯ ಮಹಾಪರ್ವಕ್ಕೆ ಸಾಕ್ಷಿಯಾಗಿದ್ದಾರೆ. ಆದರೆ ಈ ಯುಗದ ವೇಗದೊಂದಿಗೆ, ಕಲಿತ ಸಂಸ್ಕಾರಗಳು ಸಡಿಲವಾಗಿ ಗೊಂದಲಮಯ ವಾತಾವರಣವೊಂದು ಸೃಷ್ಟಿಯಾಗಿದೆ.

ಒಟ್ಟಿನಲ್ಲಿ ಐಟಿಯ ಹೊಸ ಅಲೆ ಜನರನ್ನು ಮುನ್ನೆಡುಸುತ್ತಿದೆ. ಮನೆಗೊಬ್ಬರಂತೆ ದುಡಿದು ಅದೆಷ್ಟೋ ಕನಸುಗಳನ್ನು ಸಾಕಾರ ಮಾಡಿ ಕೊಂಡಿದ್ದಾರೆ. ಮೂಲಭೂತ ಸೌಕರ್ಯಗಳಾದ ಊಟ, ಬಟ್ಟೆಗೆ ದುಡಿದು ಇನ್ನಷ್ಟು ಸಾಹಸಗಳಿಗೆ ಕೈ ಹಾಕಲು ಈ ಉದ್ಯೋಗ ಹಲವರಿಗೆ ಪ್ರೇರಿಪಿಸುತ್ತದೆ. ಜೊತೆಗೆ ಮಾರಕ-ಪೂರಕ ಎರಡೂ ಪರಿಣಾಮಗಳು ಇದರೊಂದಿಗಿದೆ‌. ಕೇವಲ ಪಾಶ್ಚಾತ್ಯರನ್ನು ಅನುಕರಿಸದೆ ನಮ್ಮ ಮೂಲ ಬೇರುಗಳೊಂದಿಗೆ ಈ ನವೀನತೆಯಲ್ಲಿ ಪಕ್ವವಾಗಬೇಕು. ಬದಲಾವಣೆಯ ಜೊತೆಗೆ ಬುದ್ದಿಯನ್ನು, ಯೋಚನೆಗಳನ್ನು ಹುರಿಗೊಳಿಸಿ ಸಾಗಬೇಕಾಗಿದೆ.

Advertisements

2 thoughts on “ಐಟಿಯೆಂಬ ಹೊಸತನದ ಹೊಸ್ತಿಲಲಿ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s