ಗ್ಯಾಸಲೈಟಿನ ಪುರಾಣ

ಅಂತೂ ಇಂತೂ ಜಗಳ ಆಡಿ ರಿಮೋಟ್ ಸಿಕ್ಕಿತ್ತು. ಇನ್ನೇನು ಚಾನೆಲ್ ಚೇಂಜ್ ಮಾಡಬೇಕು ಅನ್ನುವಷ್ಟರಲ್ಲಿ ಕರೆಂಟ್ ಹೋಯ್ತು. ಇನ್ನು ಹೇಗಿದ್ರೂ ಬೆಳಗಿನ ತನಕ ಕರೆಂಟ್ ಬರಲ್ಲ. ಟಿವಿ ನೋಡ್ತಾ , ಅಡಿಕೆ ಸುಲಿತಾ ಇದ್ದ ಸಿದ್ದಹಸ್ತರು ಈಗ ಕತ್ತಲಲ್ಲೇ ಶಬ್ಧ ಮುಂದುವರಿಸಿದ್ದರು.

ಕತ್ತಲಲ್ಲಿ ಗ್ಯಾಸ್ ಲೈಟಿಗಾಗಿ ತಡಕಾಡುತ್ತಾ ನಾನು ಹೊರಟೆ. ಅಮ್ಮ ಹಿಂದಿನಿಂದ ಕತ್ತಿ ನಿಧಾನ ಎಂದು ಹೇಳುತ್ತಲೇ ಇದ್ದಳು. ಆದರೆ ನನಗೆ ಎಲ್ಲರ ಜಾಗ, ಎಲ್ಲರ ಕತ್ತಿ ಸ್ಪಷ್ಟವಾಗಿ ಗೊತ್ತು. ಜಾರುವ ಸಿಪ್ಪೆ ಮೇಲೆ ಉರುಳಾಡದೆ ಸಾವರಿಸಿಕೊಂಡು ಹೊರಟೆ.

ಗ್ಯಾಸ್ ಲೈಟ್ ಎಂದರೆ ನಮ್ಮ ಮನೆಯ ಒಂದು ಅವಿಭಾಜ್ಯ ಅಂಗ ಅಥವಾ ಒಬ್ಬ ಸದಸ್ಯ. ಇದು ಯಾವಾಗ ಬಂತು , ಎಲ್ಲಿಂದ ಬಂತು ಎನ್ನುವ ಇತಿಹಾಸ ನನಗೆ ಗೊತ್ತಿಲ್ಲ. ಆದರೆ ಆಗಾಗ ಊರವರಿಗೆ ಸಹಾಯ ಮಾಡಿ ಅಲ್ಲಿ ಇಲ್ಲಿ ಅಲೆದಾಡಿ ಮನೆಗೆ ಬರುತಿತ್ತು. ಆಗ ಅದನ್ನು ತಂದು ಬಹಳ ಜಾಗರೂಕವಾಗಿ ಇಡಬೇಕಿತ್ತು. ಅದೊಂದು ಪ್ರತಿಷ್ಟೆಯ ಕೆಲಸ. ಅದನ್ನು ಅಪ್ಪನೇ ಮಾಡಬೇಕಿತ್ತು , ಕೆಲವೊಮ್ಮೆ ಕೈ ಬಿಡುವಿಲ್ಲದಾಗ ಅಪ್ಪ ಯಾರಿಗಾದರೂ ಹೇಳುವುದಿತ್ತು. ಇಲ್ಲಿ ಯಾರಿಗೆ ಹೇಳುವರು  ಎನ್ನುವುದರ ಮೇಲೆ ಆತ ಎಷ್ಟು ನಂಬಿಕಸ್ಥ ಎಂದು ನಾನು ನಿರ್ಧಾರ ಮಾಡುತಿದ್ದೆ.

ಗ್ಯಾಸ್ ಲೈಟ್ ತಂದು ಇಡುವುದು ಯಾವುದೋ ಭಾರವಾದನ್ನು ತಂದು ಇಟ್ಟಂತಲ್ಲ. ಅದಕ್ಕೆ ಅದರದೇ ಆದ ನಾಜೂಕು, ಶಕ್ತಿ ಎರಡೂ ಬೇಕಿತ್ತು. ಸಾಧಾರಣವಾಗಿ ಅಪ್ಪ ನನಗೆ ಇದನ್ನು ಹೇಳುತ್ತಲೇ ಇರಲಿಲ್ಲ. ಅದನ್ನು ತರುವಾಗ ಗೋಡೆಗೆ ತಾಗಿಸಿದರೆ ಅದರ ಸುತ್ತಲಿನ ಗ್ಲಾಸ್‌ ಒಡೆಯುತಿತ್ತು. ಇಡುತ್ತಾ ಸ್ವಲ್ಪ ಜೋರಾಗಿ ಇಟ್ಟರೆ ಮ್ಯಾಂಟಲ್ ಪುಡಿಯಾಗುತಿತ್ತು. ಇದಕ್ಕೆ ಗ್ಲಾಸ್ ದೇಹದಂತೆ , ಮ್ಯಾಂಟಲ್ ಹೃದಯದಂತೆ ಎಂದು ಅನ್ನಿಸುತಿತ್ತು.

ಸುತ್ತಲಿನ ಗ್ಲಾಸ್ ಮುರಿಯುತ್ತಿದುದು ಅಪರೂಪ. ಮುರಿದರೆ ಅದನ್ನು ಹೊರಗೆ ಕೊಟ್ಟು ಅಪ್ಪ ಹಾಕಿಸುತ್ತಿದ್ದರು. ಆದರೆ ಮ್ಯಾಂಟಲ್ ಹೋದರೆ ಮಾತ್ರ ಮನೆಯಲ್ಲೇ ಅದಕ್ಕೆ heart transplantation ಆಗಿತಿತ್ತು. ಆಗ ನಾವೆಲ್ಲ ಅದರ ಸುತ್ತ ಕುಳಿತು ಈ ವಿಸ್ಮಯವನ್ನು ನೋಡುತ್ತಿದ್ದೆವು. ಹಳೇ ಟಿವಿಗಳಿಗೆ ಇರುವ ಚಾನೆಲ್ ನಾಬಿನಂತೆ ಇಲ್ಲೂ ಕೂಡ ಒಂದು ಕಂಟ್ರೋಲ್ ನಾಬ್ ಇತ್ತು. ಅದನ್ನು ಜೋರಾಗಿ ತಿರುಗಿಸಿದಾಗ ಬೆಂಕಿ ಹತ್ತಿಕೊಂಡು ಉರಿದು ಬೆಳಕಾಗುತಿತ್ತು.

ಇನ್ನೂ ಅದರ ಶಬ್ಧ , ಅದೊಂದು ಗುಯ್ಗುಡುವ ಶಬ್ಧವಿದೆ. ಮನೆಯಲೆಲ್ಲಾ ಕರೆಂಟು ಹೋದರೆ ಬೆಳಕಿನ ಜೊತೆ ಈ ಶೃತಿ ಪೆಟ್ಟಿಗೆಯಂತ ನಾದವೂ ಸೇರಿ ಕೊಳ್ಳತಿತ್ತು. ಕರೆಂಟಿದ್ದರೆ ಟಿವಿ, ಆಟ ಎಂದು ಸದಾ ಬಿಸಿಯಾಗಿರುತ್ತಿದ್ದ ನಮಗೆ ಈ ಗ್ಯಾಸ್ ಲೈಟು ಹಚ್ಚಿದಾಗಲೇ ಹೋಂವರ್ಕಿನ ನೆನಪಾಗುತಿತ್ತು. ನಾವೆಲ್ಲರೂ ಅದರ ಸುತ್ತ ಕುಳಿತುಕೊಂಡು ಕಾಪಿ ತಿದ್ದುತ್ತಿದ್ದೆವು. ಯಾರಾದರೂ ಒಂದು ಹುಳವನ್ನು ಹಿಡಿದು ಗ್ಯಾಸ್ ಲೈಟಿಗೆ ತಿನ್ನಲು ಕೊಡುತ್ತಿದುದು ಇತ್ತು. ಕೆಲವೊಮ್ಮೆ ಓಡಿ ಬಂದು ಆತ್ಮಹತ್ಯೆ ಮಾಡಿಕೊಳ್ಳುವ ಕೀಟಗಳನ್ನು ನಾವು ತದೇಕ ಚಿತ್ತದಿಂದ ನೋಡುತ್ತಾ ಕುಳಿತು ಬಿಡುತಿದ್ದೆವು.

ಇಷ್ಟೆಲ್ಲಾ ಹಿನ್ನೆಲೆಯಿದ್ದ ಗ್ಯಾಸ್ ಲೈಟನ್ನು ಈಗ ನಾನು ತರಲು ಹೊರಟಿದ್ದೆ. ಅದನ್ನು ಯಾವುದೋ ಮೂಲೆಯಲ್ಲಿ ನೋಡಿದ ನೆನಪು. ಚೌಕಿಯ ನಾಲ್ಕು ಮೆಟ್ಟಿಲು ಹತ್ತಿ, ಮಾಳಿಗೆ ದಾಟಿ, ನಡು ಮನೆಯ ಏಣಿ ಮೆಟ್ಟಿಲಿನ ಕೆಳಗೆ ಕೈ ಹಾಕಿದಾಗ ಸಿಕ್ಕಿತು. ಅದರ ಹಿಡಿಯನ್ನು ಭದ್ರವಾಗಿ ಎರಡು ಕೈಯಲ್ಲಿ ಹಿಡಿದು ಎತ್ತಿದೆ. ಅದೆಷ್ಟು ಭಾರ, ತೂರಾಡುತ್ತಾ ತೆಗೆದು ಕೊಂಡೆ. ಮತ್ತದೆ ದಾರಿಯಲ್ಲಿ ಬಂದು ಮೆಟ್ಟಲು ಇಳಿವಾಗ ಕೂಡ ನಾನು ಎಲ್ಲೂ ತಾಗಿಸಲಿಲ್ಲ. ಇನ್ನು ಇಡುವಾಗ ಜಾಗರೂಕವಾಗಿ ನಿಧಾನವಾಗಿ ನೆಲದ ಮೇಲೆ ಪ್ರತಿಷ್ಠಾಪಿಸಿದೆ. ಅಂತೂ ಗ್ಯಾಸ್ ಲೈಟನ್ನು ತಂದು ಇಡುವ ಸಿದ್ಧಿ ನನಗೆ ಲಭಿಸಿತು ಎನ್ನುವ ಸಂತೋಷವಾಯಿತು. ಅದೇ ಖುಷಿಯಲ್ಲಿ ಅದರ ಹಿಡಿಯನ್ನು ಬಿಟ್ಟೆ, ಅರ್ಧ ವೃತ್ತಾಕಾರದಲ್ಲಿ ಹೋಗಿ ಕುಟ್ಟಿ ಬಿಟ್ಟಿತ್ತು. ಅದರ ಟಣ್ ಎಂಬ ಶಬ್ಧದಿಂದಲೇ ಮ್ಯಾಂಟಲ್ ಚೂರು ಚೂರಾಗಿದೆ ಎಂದು ಅರ್ಥವಾಯಿತು. ಮುಂದಿನದು ಅಪ್ಪ ಅಮ್ಮ ಇದನ್ನು ಮರೆತು ನನ್ನನ್ನು ಹುಡುಕುವ ತನಕ ಪಕ್ಕದ ಮನೆಯಲ್ಲಿ ಪಗಡೆ ಆಡುವುದು ಎಂದು ಪ್ಲಾನ್ ಹಾಕಿಕೊಂಡು ಗ್ಯಾಸ್ ಲೈಟನ್ನು ಅಲ್ಲೇ ಅನಾಥವಾಗಿ ಬಿಟ್ಟು ಓಡಿದೆ.

Leave a comment