ಒಮ್ಮೆ ಹೀಗೆ ಬಸ್ಸಲ್ಲಿ….

ಊರು, ಮನೆಯೆಂದರೆ ಯಾರಿಗೆ ಇಷ್ಟವಿಲ್ಲ. ಅದೇನೇ ಜಗಳ, ಮುನಿಸು ಇದ್ದರೂ ನಮ್ಮ ಮನೆಗೆ, ಊರಿಗೆ ಮನಸು ಸದಾ ಹಾತೊರೆಯುತ್ತಲೇ ಇರುತ್ತದೆ. ಹೀಗೆ ನನಗೂ ನನ್ನ ಊರೆಂದರೆ ತುಂಬಾ ಸೆಳೆತ. ಇದಕ್ಕೆ ಕಾರಣ ಅಲ್ಲಿರುವ ಶಾಂತಿಯೋ, ಕೆಲಸವಿಲ್ಲದೆ ಆರಾಮಾಗಿ ಕಾಲಹರಣ ಮಾಡಬಹುದೆಂದೋ, ಅಮ್ಮನ ರುಚಿ ಕಟ್ಟಾದ ಅಡುಗೆ, ತಿಂಡಿಗಳೋ, ಅಪ್ಪನ ಸುಪರ್ದಿಯೊಳಗಿರುವ ಬೆಚ್ಚನೆಯ ಸುಖವೋ, ನನ್ನ ಮುದ್ದಿನ ಬೆಕ್ಕೋ ಹೀಗೆ ಯಾವುದೆಂದು ನನಗೇ ಇನ್ನು ಸ್ಪಷ್ಟವಾಗಿ ಗೊತ್ತಿಲ್ಲ. ಒಟ್ಟಿನಲ್ಲಿ ಹಾಳು ಬೆಂಗಳೂರಿಗೆ ಅತೀ ತದ್ವಿರುದ್ದವಾಗಿ ನಮ್ಮೂರು, ಮನೆ ನಂಗಿಷ್ಟ. ದುಡಿಮೆ, ಸ್ಥಾನ, ಉದ್ಯೋಗ ಕೊಟ್ಟ ಊರಿಗೆ ಹಾಳು ಎಂದು ಬಯ್ಯಬಾರದು ಸಾರಿ..

ಒಮ್ಮೆ ಏನಾಯಿತು ಎಂದರೆ ಹೀಗೆ ಒಂದು ವಾರದ ಸ್ವರ್ಗ ಸುಖವನ್ನು ಊರಲ್ಲಿ ಅನುಭವಿಸಿ ತಿರುಗಿ ಸಾಧನ ಕೇರಿ ಬೆಂಗಳೂರಿಗೆ ಹೊರಟಿದ್ದೆ. ಬೇಸರ ಹೊಟ್ಟೆಯಾಳದಿಂದ ಸದ್ದು ಮಾಡುತಿತ್ತು. ಊರಿಂದ ನನ್ನನ್ನು ಸ್ಲೀಪರ್ ಬಸ್ಸೊಂದು ಬಲವಂತವಾಗಿ ಎಳೆದೊಯ್ಯುತಿತ್ತು. ಆಫೀಸಿನ ಯೋಚನೆಯಿಂದ ಮನ ಇನ್ನಷ್ಟು ಮಂಕಾಗಿತ್ತು. 

ಒಮ್ಮೆ ಮನಸು ಸೋಮಾರಿಯಾಗಿ ಕುಳಿತಿತೆಂದರೆ ಅದನ್ನು ಎಬ್ಬಿಸಿ ಕೆಲಸಕ್ಕೆ ಕಳಿಸುವುದು ಕಷ್ಟ. ಅದರಲ್ಲೂ ಕೆಲಸದ ಒತ್ತಡದಿಂದ, ಸಮಸ್ಯೆಯ ಸುಳಿಗಳಲ್ಲಿ ಸಿಲುಕಿದ್ದರೆ ಅದು ಇನ್ನೂ ಕಷ್ಟ. ನನ್ನ ವಿಚಾರದಲ್ಲಿ ಹಾಗೆಯೇ ಆಗಿತ್ತು, ಆಫೀಸಿನಲ್ಲಿ ಸಮಸ್ಯೆಯೊಂದು ಉಲ್ಬಣಗೊಂಡಿತ್ತು. ನಾನು ರಜೆಯಲ್ಲಿ ಇದ್ದುದರಿಂದ ಅದನ್ನು ನೋಡಲು ಆಗಿರಲಿಲ್ಲ. ನನ್ನ ಕೈಯಿಂದಲೇ ತಪ್ಪೊಂದು ನುಸುಳಿ ಹೀಗೆ ಆಗಿತ್ತು. ಒಟ್ಟಿನಲ್ಲಿ ಪರಿಸ್ಥಿತಿ ಬಿಗಡಾಯಿಸುತ್ತಾ ಇತ್ತು. ಇದೆಲ್ಲರ ಯೋಚನೆಯಿಂದ ನಿದ್ರೆ ಕೂಡ ಬರದ ಹಾಗೆ ನಾನು ಹೊರಳಾಡುತ್ತಲೇ ಇಡೀ ರಾತ್ರಿ ಬಸ್ಸಿನಲ್ಲಿ ಕಳೆಯುವೆ ಎಂದೆನಿಸಿತು.

ಆಗ ಬಸ್ಸಿನಲ್ಲಿ ಒಬ್ಬ ದಂಪತಿಗಳ ಆಗಮನವಾಯಿತು. ಸುಮಾರು ಅರವತ್ತು ದಾಟಿದ ವಯಸ್ಸಿನ ಅವರು. ನನ್ನ ಸೀಟಿನ ಪಕ್ಕದಲ್ಲೇ ಮಲಗಲು ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದರು. ನನಗೂ ನೆಟ್ ವರ್ಕ್ ಸಿಗದ ಕಾರಣ ಅವರ ಮಾತಿನ ಕಡೆ ಗಮನ ಕೊಟ್ಟೆ. ಅವರು ಬೆಂಗಳೂರಿನ ಮಗನ ಮನೆಗೆ ಹೊರಟ್ಟಿದ್ದರು. 

ಗಂಡ ಆಗಾಗ “ಏನೆ ಎಲ್ಲಾ ಸರಿ ಇದೆಯಾ?” ಎಂದು ವಿಚಾರಿಸುತ್ತಿದ್ದರು. ಹೆಂಡತಿ ಅದಕ್ಕೆ ಹೂಂಗುಡುತ್ತಾ ಕುಳಿತಿದ್ದರು. ಸುಮಾರು ೧೨ ಗಂಟೆಗೆ ಶಿವಮೊಗ್ಗದಲ್ಲಿ ಗಾಡಿ ನಿಂತಿತು. ನನಗೆ ಸ್ವಲ್ಪವೂ ನಿದ್ದೆ ಬಂದಿರಲಿಲ್ಲ. ಹೆಂಡತಿ ರೆಸ್ಟ್ ರೂಮಿಗೆ ಹೋಗಿ ಬಂದು ಮಲಗಿದರು. ಗಂಡ “ನೋಡೇ … ಎಲ್ಲಾ ಸರಿ ಇದೆಯೇ ?” ಎಂದು ಮತ್ತೆ ಕೇಳಿದರು. ಈ ಸಲ ಹೆಂಡತಿ ಅದೇನ್ರಿ ಆಗಿಂದ ಹೀಗೆ ಕೇಳುತ್ತಿದ್ದೀರಿ ಅಂದರು. ಆಗ ಗಂಡ “ಮನಸ್ಸು ಹಿಂದಿನದಾಗಲಿ, ಮುಂದಿನದಾಗಲಿ ಯೋಚಿಸುತ್ತಲೇ ಇರುತ್ತದೆ. ಇವತ್ತಿನ ಪ್ರಯಾಣ ಬಿಟ್ಟು ನೀನು ಏನಾದರೂ ತಲೆಗೆ ಹಚ್ಚಿ ಕೊಂಡು ಕೂತಿರಬೇಡ” ಅಂದು ಕೇಳಿದೆ ಅಂದರು. ಅದಕ್ಕೆ ಹೆಂಡತಿ “ಅಯ್ಯೋ ಸೊಸೆ ಏನೆಂದು ಕೊಳ್ಳುತ್ತಾಳೋ ಯೋಚನೆ ನನಗೆ , ನಿಮಗೇನು ಗಂಡಸರು ಅಡಿಗೆ ಮನೆ ವಿಷಯ ಗೊತ್ತಾಗಲ್ಲ” ಅಂದರು. “ನಿನ್ನ ತಲೆ ನೀನು ಸರಿಯಾಗಿ ಮಗಳ ಹಾಗೆ ನೋಡು, ಸೊಸೆ ಏನಾದರೂ ಅಂದು ಕೊಳ್ಳಲಿ ಅದಕ್ಕೆ ತಲೆ ಕೆಡಿಸಿಕೊಳ್ಳಬೇಡ. ನೀನು ಸರಿ ಇದ್ದರೆ ಸಾಕು ಬೇರೆ ಎಲ್ಲಾ ಯೋಚನೆ ಮಾಡಲೇ ಬೇಡ” ಅಂದರು. “ನೀವು ಹೇಳೋದು ಸರಿ ಕಣ್ರೀ ಇನ್ನು ಯೋಚನೆ ಮಾಡಲ್ಲ” ಅಂದರು. “ಇನ್ನೇನಾದ್ರೂ ಯೋಚನೆನಾ” ಎಂದು ಕೇಳಿದರು. “ಹೂ, ರೀ ಮುಂಬಾಗಲ ಚಿಲಕ ಹಾಕಿಲ್ಲ ಅನಿಸತ್ತೆ” . “ಪರವಾಗಿಲ್ಲ ಬಿಡು , ಎದುರುಗಡೆ ಬೀಗ ಹಾಕಿದೀನಿ ತೊಂದರೆ ಇಲ್ಲ. ಇನ್ನೇನಾದರೂ ಯೋಚನೆನಾ ?”. “ಹಾ ಬೆಳಿಗ್ಗೆ ಬೆಂಗಳೂರು ಬಂದ ಕೂಡಲೇ ನನಗೆ ಸುಸ್ತಾಗತ್ತೆ”. “ಈಗಿಂದನೇ ಆ ಯೋಚನೆ ಯಾಕೆ ?”. “ಸರಿ ಕಣ್ರೀ ಎಲ್ಲಾ ಯೋಚನೆ ಮುಗೀತು”. “ಈಗ ನೆಮ್ಮದಿಯಾಗಿ ನಿದ್ದೆ ಮಾಡು ಮನಸು ಒಂದೇ ಭೂತಕಾಲದ ಚಿಂತೆ, ಇಲ್ಲ ಭವಿಷ್ಯದ ಚಿಂತೆ ಮಾಡತ್ತಾ ಇರತ್ತೆ ಕಣೆ . ಅದನ್ನ ಹಿಡಿದು ಹೀಗೆ ಸಮಾಧಾನ ಮಾಡುತ್ತಾ ಇರಬೇಕು” ಅಂದರು.

ನನಗೆ ಕೇಳಿದ್ದೆ ಇಷ್ಟು. ನನ್ನ ಮನಸ್ಸನ್ನ ಹಿಡಿದೆ. ಆಫೀಸಿನ ಚಿಂತೆಯನ್ನು ಮೊದಲು ಬಿಡಿಸಿದೆ. ನನ್ನ ಕೆಲಸ ನಾನು ಮಾಡಿದರೆ ಇನ್ನೇತಕೆ ಗೊಂದಲ ಅನಿಸತೊಡಗಿತು. ಇನ್ನು ಸಣ್ಣ ಪುಟ್ಟ ಪ್ರಶ್ನೆಗಳು ಏಳುತ್ತಲೇ ಎಲ್ಲದಕ್ಕೂ ಉತ್ತರಿಸುತ್ತಾ ಹೋದೆ. ಕೊನೆಗೊಮ್ಮೆ ಎಲ್ಲಾ ಮುಗಿದು ಮನಸ್ಸೇ ಪ್ರಶ್ನೆಗಳನ್ನು ಸೃಷ್ಟಿಸಲಾರಂಭಿಸಿತು. ಒಟ್ಟಿನಲ್ಲಿ ನಾನು ಸಮಸ್ಯೆಗಳನ್ನು ಎಷ್ಟು ಹಚ್ಚಿಕೊಂಡಿದ್ದೆ ಎಂದರೆ ಇರದೆ ಇರುವಾಗಲೂ ಅವನ್ನೇ ಹುಡುಕುತ್ತೇನೆಯೋ ಅನಿಸಿತು.

ನೋಡಿ , ಏನೋ ಬೇಸರಕ್ಕೆ, ಬೇಜಾರಿಗೆ ಮಂಕಾಗಿ ಕುಳಿತಾಗ ಸುಮ್ಮನೆ ಒಮ್ಮೆ ಮನಸನ್ನು ಸಮಾಧಾನಿಸಿ ಬಿಡಿ. ನಿಮಗೆ ಆ ದಂಪತಿಗಳು ಸಿಗದೆ ಹೋಗಬಹುದು, ಅವರ ಮಾತು ಕೇಳಿಸದೇ ಇರಬಹುದು ಅದಕ್ಕೇ ಈ ಕಥೆಯನ್ನು ನಿಮಗೆ ಹೇಳಬೇಕೆನಿಸಿತು, ಹೇಳಿದೆ ಅಷ್ಟೇ. 

Leave a comment