ಸಿನಿಮೀಯ

ಸಿನಿಮಾ ಅಂದರೆ ಅದೊಂದು ಮೂರು ಗಂಟೆಗಳ ಮನ ರಂಜನೆ. ಇದೂ ಕೂಡ ಪುಸ್ತಕದ ತರಹ ಯಾವುದೋ ಕಥೆ, ಯಾವುದೋ ಪಾತ್ರ , ಯಾವುದೋ ಸಂಭಾಷಣೆ, ಎಲ್ಲಿಯದೋ ಹಾಡು. ಇದು ಲಕ್ಷಾಂತರ ಜನರಿಗೆ ಬದುಕು ಕಟ್ಟಿ ಕೊಟ್ಟಿದೆ . ಇದರಲ್ಲಿ ಅದೆಷ್ಟೋ ಜನ ತಾರೆಗಳಾಗಿ ಮಿಂಚಿದ್ದಾರೆ. ಇನ್ನೆಷ್ಟೋ ಜನರನ್ನು ಇದು ಹತ್ತಿರಕ್ಕೆ ಸೆಳೆಯುತ್ತದೆ. ಹೀಗೆ ಈ ಮಾಯೆಯ ಜೀವನದಲ್ಲಿ ಇನ್ನೊಂದು ಮಾಯೆಯ ಪ್ರಪಂಚವೆಂದರೆ ಅದು ಸಿನಿಮಾರಂಗ.

ನಮಗೆ ಗೊತ್ತು , ಒಬ್ಬ ನಾಯಕ ನಟನಾಗಲು ಕಥೆ, ಸಂಭಾಷಣೆ, ಹಾಡು, ಮೇಕಪ್, ಕುಸ್ತಿ , ಸ್ಟಂಟ್ ಹೀಗೆ ಹತ್ತು ಹಲವಾರು ಮುಖಗಳನ್ನು ಪ್ರಸ್ತುತ ಪಡಿಸಬೇಕಾಗುತ್ತದೆ. ಅದರಲ್ಲಿ ಒಬ್ಬೊಬ್ಬರು ಒಂದೊಂದು ಕಡೆ ಶ್ರಮ ಹಾಕುತ್ತಾರೆ. ಆದರೆ ಕೊನೆಗೆ ನಾವು ಹೀರೋನನ್ನು ಮಾತ್ರವೇ ಇದೆಲ್ಲರ ಹಿಂದೆ ಇರುವ ಕೈ ಎಂದು ಭಾವಿಸಿ ಆರಾಧಿಸುತ್ತೇವೆ.

ಈ ಸಿನಿಮಾಗಳಲ್ಲೂ ಕೂಡ ಸಾಕಷ್ಟು ವಿಧಗಳಿವೆ. ಅಂದರೆ ಕೆಲವೊಂದು ಸಿನಿಮಾಗಳು ಪ್ರೀತಿಯೊಡನೆ ಸುತ್ತಿ, ಫೈಟುಗಳೊಡನೆ ಸಾರ್ಥಕಗೊಂಡು, ವಿಲನ್ ಜೈಲಿಗೆ ಹೋಗುವುದರೊಂದಿಗೆ ಮುಗಿಯುತ್ತದೆ. ಇದು ಸಾಂಪ್ರದಾಯಿಕವಾಗಿ ನಡೆದು ಬಂದಿರುವ ಸಿನಿಮಾ ರೂಪುರೇಷೆಯ ಮೇಲೆ ರಚನೆಗೊಳ್ಳುವ ಚಿತ್ರಗಳು. ಇವುಗಳಿಗೆ ಉತ್ತಮ ನಟ, ಸುಂದರ ನಟಿ, ಮಧುರ ಹಾಡುಗಳು, ಸಾಹಸ ಇವಾವುದೆ ಚೆನ್ನಾಗಿದ್ದರೂ ಸಾಕು ಚಿತ್ರ ಚೆನ್ನಾಗಿದೆ ಅನಿಸಿಕೊಂಡು ಪ್ರೇಕ್ಷಕರ ಮನ ಗೆಲ್ಲುತ್ತದೆ. 

ಇದನ್ನು ಬಿಟ್ಟರೆ ವಿಚಿತ್ರ ಕಥೆಯುಳ್ಳ ಪ್ರೇಕ್ಷಕನ ಮನಸನ್ನು ಸಂಶೋಧನೆಗೆ , ಕೆಲವೊಮ್ಮೆ ಭಯಕ್ಕೆ ತಳ್ಳುವ ಚಿತ್ರಗಳು. ಥ್ರಿಲ್ಲರ್, ಹಾರರ್, ಸಸ್ಪೆಂನ್ಸ್ ಚಿತ್ರಗಳು ಇಲ್ಲಿ ನಮೂದಿಸ ಬಹುದು. ಇವುಗಳು ಮನಸ್ಸಿನ ಮೇಲೆ ಭೀಬತ್ಸ ರಸವನ್ನು ಹರಿಸಿ ಮನರಂಜನೆಯನ್ನು ನೀಡುತ್ತದೆ. ಒಮ್ಮೊಮ್ಮೆ ಯಾವ ಚಿತ್ರಗಳನ್ನು ನೋಡಿದರೂ ಏನೂ ತಿಳಿದು ಕೊಳ್ಳುವಂತದು ಇರದಿದ್ದಾಗ ನನಗೆ ವಯಕ್ತಿಕವಾಗಿ ಹಾರರ್ ಸಿನಿಮಾಗಳುಮಾತ್ರವೇ ನಿಜವಾದ ಸಿನಿಮಾ ಅನಿಸಿದ್ದು ಉಂಟು.

ಇನ್ನು ಸಿನಿಮಾದಲ್ಲಿ ಸಮಾಜಕ್ಕಾಗಿ ಮೆಸೇಜೊಂದನ್ನು ಕೊಡುವ, ಇನಸ್ಪೈರ್ ಮಾಡುವಂತಹ ಚಿತ್ರಗಳು. ಇವನ್ನು ನೋಡಿ ಹೊರಬರುವಾಗ ನಿಮ್ಮಲಿ ನೀವು ಏನೋ ಒಂದು ಬದಲಾವಣೆಯನ್ನು ನಿಮಗೆ ಗೊತ್ತಿಲ್ಲದಂತೆ ಮಾಡಿರುತ್ತೀರಿ. ಇಂತಹ ಚಿತ್ರಗಳು ವಿರಳವಾದರೂ ವರ್ಷಗಳೇ ಕಳೆದರೂ ನಾವಿದನ್ನು ಕುಳಿತು ನೋಡುತ್ತೇವೆ. ಏನೋ ಒಂದು ಮುಗುಳ್ನಗುವಿನೊಂದಿಗೆ ಆಸ್ವಾದಿಸುತ್ತವೆ.

ಇನ್ನೊಂದು ತರನಾದ ಚಿತ್ರವೆಂದರೆ‌ ಇದಕ್ಕೆ ಕಥೆಯಾಗಲಿ, ಕೊನೆ ಮೊದಲಾಗಲಿ ಇರುವುದಿಲ್ಲ. ಇದು ಅಭಿರುಚಿಯ ಚಿತ್ರ. ಯಾರದೋ ಮನೆಯಂಗಳದಲ್ಲಿ ಶುರುವಾಗಿ ದಿನನಿತ್ಯದ ಜಂಜಡಗಳೇ ಮುಕ್ಕಾಲು ಭಾಗ ಸಿನಿಮಾದಲ್ಲಿ ಸೆರೆ ಹಿಡಿಯಲಾಗುತ್ತದೆ. ಇವು ನೈಜ ಜೀವನದ ಕನ್ನಡಿಗಳು, ಮನ ಮುಟ್ಟುವ ಪಾತ್ರಗಳು. ಇದರಲ್ಲಿ ಸಂಭಾಷಣೆಯೇ ಜೀವಾಳ, ಈ ಚಿತ್ರಗಳನ್ನು ನೋಡಲು ಮನಸ್ಥಿತಿ ಬೇಕು. ಇವು ಹಿಟ್ ಆಗುವುದು ಕಡಿಮೆ . ಟಿವಿಯಲ್ಲಿ ಬಂದಾಗಲೋ , ಹೇಗೋ ಆಕಸ್ಮಿಕವಾಗಿ ನೋಡಿದಾಗ ಇವು ಪುಸ್ತಕವೊಂದನ್ನು ಓದಿದಂತಹ ಅನುಭವ ಕೊಡುತ್ತದೆ. 

ಇನ್ನು ಅದೆಷ್ಟೋ ವಿಧಗಳಿವೆ. ಎಲ್ಲಾ ಚಿತ್ರಗಳಲ್ಲಿಯೂ ಮನುಷ್ಯ ಹುಡುಕುವುದು ತನ್ನ ಮರೆಯಲು ಸ್ವಲ್ಪ ಸಮಯವನ್ನು, ಕೆಲವೊಮ್ಮೆ ತನ್ನ ಕಂಡು ಕೊಳ್ಳಲು ಸ್ವಲ್ಪ ಸಹಾಯವನ್ನು. ಚಿತ್ರಗಳೆಂದರೆ ಮನರಂಜನೆಯ ಜೊತೆ ಪಾಠ ಕೂಡ. ಇವುಗಳಿಗೆ ಸಮಾಜವೊಂದನ್ನು ಒಳ್ಳೆಯ ದಿಕ್ಕಿನಲ್ಲಿ ನಡೆಸುವ ಶಕ್ತಿಯಿದೆ. ಎಲ್ಲಾ ವರ್ಗದ ಪ್ರೇಕ್ಷಕರಿರುವ ಇದಕ್ಕೆ ಅದ್ಬುತ ಶಕ್ತಿ ಇದೆ. ಇಂದು ಸಾಕಷ್ಟು ದುಡ್ಡು, ಕಲೆ, ವಿದ್ಯೆ, ಹೆಸರು, ಕನಸು ಹೊತ್ತಿರುವ ವಿಚಿತ್ರ ಸ್ಥಳವಿದು. ಇಲ್ಲಿ ಬದುಕು ಕಟ್ಟಿ ಕೊಂಡವರಿದ್ದಾರೆ , ಕಳೆದು ಕೊಂಡವರಿದ್ದಾರೆ.

ಇಷ್ಟೆಲ್ಲಾ ಹರಟೆಗೆ ಕಾರಣವಾಗಿದ್ದು ಒಂದು ಚಿತ್ರ. ‘ನೀರು ದೋಸೆ’ ಇದು ಎಂತಹ ಚಿತ್ರವೆನ್ನುವ ಗೊಂದಲಕ್ಕೆ ಬಿದ್ದೆ. ಅದೆಷ್ಟೋ ಮುಖ ತಿರುಗಿಸುವಂತಹ ಸಂಭಾಷಣೆ ಇದೆ ಇದರಲ್ಲಿ. ಅರ್ಥವಾಗದಷ್ಟು ಪೋಲಿಯಾಗಿ ಡೈಲಾಗಗಳನ್ನು ಪೋಲು ಮಾಡಲಾಗಿದೆ. ಆದರೂ ಕೂಡ ಇದರಲ್ಲಿ ಒಂದು ಮಿಡಿತವಿದೆ. ಏನೋ ಕಳೆದು ಕೊಳ್ಳುವ, ತಿಳಿದು ಕೊಳ್ಳುವ ಹಪಹಪಿಯಿದೆ‌ . ಇಂತಹ ಚಿತ್ರಗಳಿಂದ ಹೀಗೂ ಉಂಟೆ ಎಂಬಂತಹ ಮನಸ್ಸಿನ ಅತೀ ಆಳದ ಪದರಗಳನ್ನು ನೋಡಬಹುದು. ಏನೋ ನೆನಪಾದಂತಾಗಿ, ತೀರ ಒಳಗೆ ಎಳೆದುಕೊಂಡು ಕಣ್ಣೀರು ಹಾಕಿಸಬಹುದು. ಒಟ್ಟಿನಲ್ಲಿ ಚಿತ್ರವೆಂದರೆ ನೂರು ಜೀವಗಳ , ಜೀವನಗಳ ಮೂರು ಗಂಟೆಯ‌ ಪರೀಕ್ಷೆ . ನೋಡುಗರೇ ಇಲ್ಲಿ ಅಂಕ ಕೊಡುವ ಟೀಚರಗಳು‌. ನಮ್ಮ ನಮ್ಮ ಖುಷಿಗೆ ನಾವು ಮಾರ್ಕ್ಸ ಕೊಡುತ್ತೇವೆ. ಪಾಸಾದರೆ ಇಬ್ಬರಿಗೂ ಖುಷಿ, ಫೇಲಾದರೆ ಸಮಯ ವ್ಯರ್ಥ ಮಾಡಿದಕ್ಕಾಗಿ ಬೇಸರ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s