ಕೇಳು ಕೃಷ್ಣಾ – ಹೇಳು ಪಾರ್ಥ

ನನಗೆ “ರಾಮ‌ ರಾಮ ರೇ” ನೋಡಿದ್ರಾ ಹೇಗಿದೆ ? ಕ್ಲಾಸ್ ಮೂವಿ ಅಂತಾರೆ ತಿಥಿ ತರಹನಾ ? ಈ ಪ್ರಶ್ನೆ ಕೇಳುವಾಗ ಕೂಡ , ಕೇಳು  ಕೃಷ್ಣ – ಹೇಳು ಪಾರ್ಥ ಹಾಡು ಕಿವಿಯಲ್ಲಿ ಪ್ರತಿಧ್ವನಿಸುತಿತ್ತು. ನೋಡಿದವರೊಬ್ಬರು “ತಿಥಿ raw ಮೂವಿ , ಇದು ಕ್ಲಾಸ್ ಮೂವಿ , ಹೋಗಿ ನೋಡಿ ಚೆನ್ನಾಗಿದೆ” ಅಂದರು.
ಹೀಗೆ ಸ್ವಲ್ಪ ದಿನಗಳಿಂದ ದೂರ ಇದ್ದ ರಾಮ ರಾಮ ರೇ ಅನ್ನುವ ಸಿನಿಮಾ ನೋಡಲೇ ಬೇಕೆಂಬ ಕಾತರ ಹೆಚ್ಚಾಗಿದ್ದು.

ರಾಮ ರಾಮ ರೇ ಅಂದರೆ ಏನೆಂದು ಸಿನಿಮಾ ನೋಡಿದ ಮೇಲೆಯೂ ಅರ್ಥವಾಗಿಲ್ಲ. ಈ ಸಿನಿಮಾ , ಬೇರೆ ಸಿನಿಮಾದ ಹಾಗಲ್ಲ,  ಹೀರೋಯಿನ್, ಫೈಟಿಂಗ್, ಕ್ಲೈಮಾಕ್ಸ್, ಹೀರೋ, ಕಥೆ ಇನ್ನೂ ಯಾವುದೇ ಬಯಕೆಗಳಿಗೂ ಇದರಲ್ಲಿ ಜಾಗವಿಲ್ಲ. ಅವೆಲ್ಲಕ್ಕಿಂತ ವಿಭಿನ್ನವಾಗಿ, ವಿಶೇಷವಾಗಿ ಯೋಚನೆಗೆ ಹಚ್ಚುತ್ತಾ ಕಥೆಯು ವಾಸ್ತವದಂತಾಗಿ ನಮ್ಮನ್ನು ಒಳಗೆಳೆದುಕೊಳ್ಳುವ ಒಂದು ಸುಂದರ ಅನುಭವ ಇದು.

ಗುರಿಗಿಂತ ಪಯಣದಲ್ಲೇ ಜೀವನ ಅನ್ನುವಂತೆ ಕೊನೆಯ ಕ್ಲೈಮಾಕ್ಸಿಗಿಂತ ಅಲ್ಲಿನ ಯಾತ್ರೆಯೇ ಹೆಚ್ಚು ಮನಸ್ಸು ತಟ್ಟುತ್ತದೆ. “ಭೂಮಿಯಾಚೆ ಮನುಷ್ಯ ದಾಟಿದರೂ ಇನ್ನೂ ಜಾತಿಯ ಬೇಲಿ ದಾಟಲು ಆಗಿಲ್ಲ”ಎನ್ನುವುದು ಇಲ್ಲಿನ ಸಂಭಾಷಣೆಯ ತೂಕಕ್ಕೆ ಒಂದು ಉದಾಹರಣೆ ಅಷ್ಟೇ. ಕಥೆಯಲ್ಲಿನ ನೈಜ ತಿರುವು, ಆಡಂಬರವಿಲ್ಲದ ಹಾಸ್ಯ ಮನಸ್ಸು ಗೆಲ್ಲುತ್ತದೆ. ಪ್ರತಿಯೊಂದು ಪಾತ್ರವನ್ನು ಬಹಳ ಎಚ್ಚರಿಕೆಯಿಂದ ರೂಪಿಸಿದ್ದಾರೆ. ಇದರಿಂದ ಯಾರೂ ಕೂಡ ಹೀರೋ ಅನಿಸದೆ ಎಲ್ಲಾ ಪಾತ್ರಗಳೂ ಹತ್ತಿರವಾಗಿ ಒಬ್ಬೊಬ್ಬರಲ್ಲಿ ಒಂದೊಂದು ಗುಣ ಮನಸಲ್ಲೇ ನಿಲ್ಲುತ್ತದೆ. ನಿತ್ಯ ಜೀವನವೇ ಕಣ್ಣ ಮುಂದೆ ಬರುವಂತೆ ಕೃತಕ ಸೊಬಗಿನ ಹಂಗಿಲ್ಲದ ಅಪ್ಪಟ ಬದುಕಿನ ಹುಟ್ಟು ಸಾವುಗಳ ಸಾಂಗತ್ಯ ಇಲ್ಲಿದೆ. ರಂಗಭೂಮಿ ‌ನಾಟಕದ ಘಮ ತುಂಬಿರುವ ಈ ಚಿತ್ರ ಸುಪ್ತವಾಗಿ ಪ್ರೇಕ್ಷಕನಲ್ಲಿ ಅಡಗಿರುವ ಆಧ್ಯಾತ್ಮಿಕ ಪ್ರಜ್ಞೆಯನ್ನು ತಟ್ಟುತ್ತದೆ. ಹಾಗೆಂದು ಇದು ಸಿರೀಯಸ್ ಸಿನಿಮಾ ಅಲ್ಲ ಸತ್ಯಕ್ಕೆ ಹತ್ತಿರವಾಗುವ ನೋಟ ಅನ್ನಬಹುದು.

ಇದರಲ್ಲಿ ಸಿನಿಮಾಟೋಗ್ರಫ ಅತ್ಯದ್ಭುತವಾಗಿ ಮೂಡಿ ಬಂದಿದೆ. ಬಿಸಿಲಿನ , ಬಯಲಿನ ನೈಜ ಚಿತ್ರಣ ತೀರ ಮನಸಿಗೆ ತಟ್ಟುತ್ತದೆ. ನಿರ್ದೇಶಕರ  ಚಾಕಚಕ್ಯತೆ ಹಾಡುಗಳ ಸಾಹಿತ್ಯದಲ್ಲಿ ತುಂಬಾ ಚೆನ್ನಾಗಿ ಕಾಣಿಸುತ್ತದೆ. ಈಗಾಗಲೇ ಮನಗೆದ್ದಿರುವ ಹಾಡುಗಳೇ ಇದಕ್ಕೆ ಸಾಕ್ಷಿ. ಎಲ್ಲಾ ಹಾಡುಗಳ ಒಳಾರ್ಥ ಚಿತ್ರದ ಸಾರಾಂಶದಂತೆ ಇದ್ದು ಡೌನಲೋಡ್ ಮಾಡಿದ ಹಾಡಿನ ಜೊತೆ ಚಿತ್ರವೂ ಕೂಡ ನಿಮಗೆ ಕಾಡುತ್ತದೆ.

ಎಲ್ಲಾ ಕಲಾವಿದರೂ ಹೊಸಬರಾದರೂ ನಟನೆಯಲ್ಲಿ ನೂರಕ್ಕೆ ಇನ್ನೂರು ಅಂಕ ಪಡೆದಿದ್ದಾರೆ. ತೀರ ಸಿಟಿಯಲ್ಲಿ ಕುಳಿತು ನಮ್ಮ ಜಂಜಾಟದ ನಡುವೆಯೂ ಇಂತ ಚಿತ್ರಗಳಲ್ಲಿ ಈಗಲೂ ಕಳೆದು ಹೋಗುತ್ತೇವೆ ಅಂದರೆ‌ ಅದು ಅದ್ಬುತ ನಟನೆಯ ಶಕ್ತಿ. ಎಲ್ಲರೂ ಅವರವರ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ. ಸರಳವಾಗಿ ಈ ಅನನ್ಯವಾದ ಸದಭಿರುಚಿ, ಸೃಜನಾತ್ಮಕ ಚಿತ್ರವನ್ನು ಕನ್ನಡಿಗರಿಗೆ ನೀಡಿದ ನಿರ್ದೇಶಕ ಸತ್ಯ ಪ್ರಕಾಶ ಅವರಿಗೆ ಅಭಿನಂದನೆಗಳು ಮತ್ತು ಅನಂತ ಧನ್ಯವಾದಗಳು.

ಇಷ್ಟು ಬರೆದರೂ ಇದನ್ನು ವಿವರಿಸಿವುದು ಕಷ್ಟ . ಚಿತ್ರ ಮಂದಿರಕ್ಕೆ ಹೋಗಿ “ರಾಮ ರಾಮ ರೇ” ಅನ್ನುವ ಅಪೂರ್ವ ಅನುಭವವನ್ನು ಅನುಭವಿಸಿ .

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s