ಆನಂದಮಯ ಈ ಜಗಹೃದಯ ದೇವರ ದಯೆ ಕಾಣೋ

image

ಸುರಿವ ಮಳೆ, ಕೊರೆಯುವ ಚಳಿ, ಬೆಳಗಿನ ಎಳೆ ಬಿಸಿಲು, ತಂಪಾದ ಗಾಳಿ, ಹರಿಯುವ ನೀರು, ತಣ್ಣನೆಯ ನೆರಳು, ಕಾಲ ಕಾಲಕ್ಕೆ ವರದಂತೆ ಸಿಗುವ ಬಗೆ ಬಗೆಯ ಹಣ್ಣುಗಳು, ಎಲ್ಲೋ ಅಜ್ಞಾತವಾಗಿ ಬೆಳೆದು ಹೆಸರು ಹೇಳಬಾರದು ಎಂಬ ನಿಗೂಢದೊಡನೆ ಕಷಾಯವಾಗಿ ಹೊಟ್ಟೆ ಸೇರುವ ಔಷಧಿ ಗಿಡ, ಕಾಡಿನ ಕತ್ತಲೆಯಲ್ಲಿ ಹುಟ್ಟಿದ ಚಿತ್ರ ವಿಚಿತ್ರ ಹುಳ ಹುಪ್ಪಟೆಗಳು, ತಮ್ಮವೇ ವಿಶೇಷ ಶಕ್ತಿಯಿಂದ ಜೀವಿಸುತ್ತಿರುವ ಲಕ್ಷಾನುಲಕ್ಷ ಜೀವಸಂಕುಲಗಳು, ಭೂಮಿಯನ್ನು ಆವರಿಸಿರುವ ಸುಧಾ ಸಮುದ್ರವಂತೂ ಕೋಟಿ-ಕೋಟಿ ಜಲಚರಗಳಿಗೆ ಇನ್ನೊಂದು ಪ್ರಪಂಚ, ವಿಶಾಲ ಮರುಭೂಮಿ, ಎತ್ತರದ ಹಿಮ ಪರ್ವತಗಳು ಇವೆಲ್ಲವನ್ನೂ ನೆನೆಸಿಕೊಂಡರೇನೆ ಖುಷಿಯ ನಗುವೊಂದು ಮೂಡುತ್ತದೆ. ಹೀಗೆ ನಮ್ಮನೆಲ್ಲ ಹೊತ್ತಿರುವ ,ಕಾಯುತ್ತಿರುವ ಪ್ರಕೃತಿಯು ಅದೆಂಥೆಂತ ವ್ಯಚಿತ್ರ್ಯಗಳನ್ನು ಕಣ್ಣ ಮುಂದೆಯೇ ತೆರೆದಿಟ್ಟಿದೆ.

ಆದರೆ ನಾವು ಮಾತ್ರ ನಮ್ಮ ಮನೆ, ಆಫೀಸು, ಕಾರು,ಅಪಾರ್ಟ್ಮೆಂಟಗಳಲ್ಲಿ ಸೇರಿಕೊಂಡು ಇವೆಲ್ಲದರಿಂದ ದೂರಾಗಿಬಿಟ್ಟಿದ್ದೇವೆ. ಈಗಂತೂ ಕೇವಲ ಬಾಗಿಲು ತೆರೆದಿಟ್ಟುಕೊಂಡು ಆರಾಮಾಗಿ ಇರುವಂತಹ ಸ್ವತಂತ್ರ ಕೂಡ ಇಲ್ಲವಾಗಿದೆ. ದಿನ ಬೆಳಗಾದರೆ ಮನೆಗೆ ಕನ್ನ, ಹಗಲಲ್ಲೇ ದರೋಡೆಯಂತಹ ಸುದ್ದಿಗಳೇ ತುಂಬಿರುವಾಗ ನಮ್ಮ ಬೀಗ ಹಾಕಿದ ಗೂಡಿಗಿಂತ ಯಾವುದೂ ಸುರಕ್ಷಿತ ಅನ್ನಿಸಲಾರದು. ಅಷ್ಟಾಗಿಯೂ ಈ ಗೂಡನ್ನು ತೊರೆದು ಬಂದರೆ ಕಾಣಿಸುವದು ಮತ್ತಷ್ಟು ಇಂತದೆ ಮುಚ್ಚಿದ ಅಪಾರ್ಟ್ ಮೆಂಟುಗಳು.

ಗುಡ್ಡ-ಬೆಟ್ಟವನ್ನು ಚಾರಣವೆನ್ನುತ್ತ ಹತ್ತಿದ್ದರೂ, ಅಳಿದು ಉಳಿದಿರುವ ದೂರದ ಬ್ಯೂಟಿಫುಲ್ ನೇಚರಿನ ಕಡೆಗೆ ಟ್ರಿಪ್ಪು ಹೋದರೂ,ವೀಕೆಂಡುಗಳಲ್ಲಿ ನಾವೆಷ್ಟೇ ಪ್ರಕೃತಿಗೆ ಹೀಗೆ ಹತ್ತಿರವಾದರೂ ಅವು ಕೇವಲ ಫೋಟೋ ಸ್ಪಾಟುಗಳಾಗುತ್ತವೆ ಹೊರತು ಜೀವನದ ಒಳಗೆ ಆತ್ಮೀಯವಾಗಿ ಅಂಟಿಕೊಳ್ಳುವುದಿಲ್ಲ, ನಮ್ಮ ಧಾವಂತದ ಜೀವನದಲ್ಲಿ ಬರಲು ಅವುಗಳಿಗೆ ಅವಕಾಶವು ಇಲ್ಲ. ನಮ್ಮ ಬ್ಯುಸಿ,ಪ್ರೆಷರ್, ಟೆನ್ಶನ್ ತುಂಬಿರುವ ಆಫೀಸಿನ ಚೇಂಬರುಗಳಲ್ಲಿ ಕಳೆದು ಹೋಗಿರುವಾಗ ಯಾರೋ ಬಂದು ‘ಇಟ್ಸ್ ರೇನಿಂಗ್ ‘ ಎಂದಾಗ ಎಂತದೋ ಸಂಭ್ರಮವೆಂಬಂತೆ ಟೀ ಹೀರುತ್ತಾ ಹೋಗಿ ವಿಂಡೋಗಳ ಹಿಂದೆ ಅಡಗಿ ನಿಂತುಕೊಳ್ಳುತ್ತೇವೆ. ಆಕಾಶವೇ ತೂತಾದಂತೆ ಆರ್ಭಟಿಸಿಕೊಂಡು ಸುರಿಯುವ ಮಳೆಯಲ್ಲಿ, ಜಗತ್ತಿನ ಮಹಾಯಜ್ಞ ಒಂದರಲ್ಲಿ ಮರೆತು ಹೋಗಿರುವ ಜೀವಿಯಂತೆ ಹೊರಗಿನವರಾಗುತ್ತೇವೆ. ಫಾರ್ಮಲ್ ಶೂ ಗಳಿಗೆ ಚೂರು ಕೆಸರು ಮೆತ್ತದಂತೆ ಕ್ಯಾಬ್ ಹತ್ತುವಾಗ, ನಾವು ಇದೇ ಮಣ್ಣಲ್ಲೇ ಹುಟ್ಟಿದ ಜೀವಿಗಳಾ? ಎಂದು ಆಶ್ಚರ್ಯವಾಗುತ್ತದೆ. ನಮ್ಮದೇ ಕಮಿಟಮೆಂಟುಗಳ ಸಾವಿರಾರು ಎಳೆಗಳ ಸುಳಿಗೆ ಸಿಕ್ಕು ಬಂಧಿಯಾಗಿರುವಾಗ ನಾವು ಕಳೆದುಕೊಂಡಿದ್ದು ಏನು ಎಂದು ಕೂಡ ಅರ್ಥವಾಗದ ಮನೋಭಾವ. ಬಹುಶಃ ಈ ಭಾವವೇ ಎಲ್ಲಿ ಹೋದರೂ ಹಿಂಬಾಲಿಸುವ ಆ ಖಾಲಿ ಖಾಲಿ ಖಾಲಿತನ.

ಹೀಗೆ ಮನಸಿನ ಮಾತು ಕೇಳಿ ಹೊರಗೆ ಹೊರಟು ಪ್ರಕೃತಿಯಲ್ಲಿ ಒಂದಾದರೆ ಸಿಗುವ ಪ್ರಯೋಜನವೇನು? ಮನಸಿಗೆ ನೆಮ್ಮದಿ, ಒತ್ತಡದ ಮನಸ್ಥಿತಿಯಿಂದ ಹೊರಬರಬಹುದು ಎಂದು ಒಂದು ಅಧ್ಯಯನ ಹೇಳುತ್ತದೆ. ನಮ್ಮ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚುತ್ತದೆ. ಸಹನೆ , ಶಾಂತ ಮನೋಭಾವ ದೊರಕುತ್ತದೆ. ಎಷ್ಟೋ ಸುಪ್ತ ರೋಗಗಳಿಗೆ ಇದು ಮದ್ದಾಗಿದೆ. ಇವೆಲ್ಲ ಪ್ರಯೋಗ ಮಾಡಿ ಕಂಡುಕೊಂಡಿರುವ ಸತ್ಯಗಳು. ಮಾನಸಿಕವಾಗಿ , ದೈಹಿಕವಾಗಿ ಆರೋಗ್ಯದ ಮೇಲೆ ಒಳ್ಳೆಯ ಪರಿಣಾಮಗಳಾಗುತ್ತವೆ. ಇದಲ್ಲದೆ ಅಂತರಿಕವಾಗಿ ವ್ಯಕ್ತಿತ್ವ ಕೂಡ ವಿಕಸನಗೊಳ್ಳುತ್ತದೆ

ನಾವೆಲ್ಲರೂ ಸುಪ್ತವಾಗಿ ಪ್ರಕೃತಿಯನ್ನು ಪ್ರೀತಿಸುತ್ತೇವೆ. ಆ ರಾಜಮಾತೆಯ ಮಡಿಲಲ್ಲಿ ನಮ್ಮ ಎದೆಯ ಕೂಗೆಲ್ಲ ಶಾಂತವಾಗಿ ನೆಮ್ಮದಿ ಸಿಗುತ್ತದೆ. ಇಬ್ಬನಿ ತಬ್ಬಿದ ಹೂಗಳನ್ನು ನೋಡುತ್ತಾ ಆಸ್ವಾದಿಸುತ್ತೇವೆ. ಅಗಾಧ ಸಾಗರವನ್ನು ಅಚ್ಚರಿಯ ಕಂಗಳಲ್ಲಿ ತುಂಬಿಕೊಳ್ಳುತ್ತಾ ಅದರಲ್ಲೇ ಒಂದಾಗುತ್ತೇವೆ. ಇವೆಲ್ಲವೂ ನಾವು ನಮಗೆ ತಿಳಿಯದಂತೆ ಪ್ರಕೃತಿಯನ್ನು ಅಪ್ಪಿಕೊಳ್ಳುವ ಪರಿ. ನಮ್ಮ ಮೂಲಗುಣ ಈ ಸುಂದರ ಕ್ಷಣಗಳಲ್ಲಿ ವ್ಯಕ್ತವಾಗುತ್ತದೆ ಆದರೆ ಹೇಗೋ ಜಗದ ವ್ಯಾಪಾರದಿಂದ ಇದೆಲ್ಲ ಮುಚ್ಚಿ ಹಿಂದೆ ಸರಿದು ಹೋಗಿದೆ. ನಮ್ಮನ್ನು ಹುಡುಕಿಕೊಳ್ಳುವ ಈ ದಾರಿಯನ್ನು ಮತ್ತೆ ತೆರೆದು ಅಲ್ಲಿ ಪಯಣಿಸಬೇಕಿದೆ. ಎಲ್ಲರೂ ಬದುಕಿನ ಆತ್ಯಂತ ಸಂತೋಷದ ಕ್ಷಣಗಳಲ್ಲಿ ಅವರನ್ನು ಮರೆಯುತ್ತಾರಂತೆ. ನಮ್ಮ ಇರವನ್ನೇ ಮರೆಸುವಷ್ಟು ಮಂತ್ರಮುಗ್ಧರನ್ನಾಗಿಸುವ ಶಕ್ತಿ ಪ್ರತಿ ಸಲ ಪ್ರಕೃತಿಯ ಮಡಿಲಲ್ಲಿ ಅನುಭವವಾಗುತ್ತದೆ ಅಲ್ಲವೇ? ಇಂತಹ ಒಂದು ಅಪೂರ್ವ ಅನುಭವವನ್ನು ನಾವು ಮರು ಸೃಷ್ಟಿಸಬಹುದ? ಇದರಿಂದ ನಾವು ಮತ್ತಷ್ಟು ಆಹ್ಲಾದಕರವಾಗಿಯು, ಸಂತೋಷಕರವಾಗಿಯು,ಶಕ್ತಿಯುತವಾಗಿಯು ಬದುಕಬಹುದ? ಈ ಅನುಭವವನ್ನು ನಾವು ಬೇಕೆಂದಾಗ ಪಡೆಯಬಹುದ? ನಗರಗಳೇನು ಬೇರೆ ಗ್ರಹದಲ್ಲಿ ಇಲ್ಲವಲ್ಲ, ಇಲ್ಲಿಯೇ ಇದೇ ಸುಂದರ ಭೂಮಿಯಲ್ಲಿ ಇರೋದು ತಾನೆ. ನೋಡುವ ಕಣ್ಣಿದ್ದರೆ ಪ್ರಕೃತಿ ತನ್ನೆಲ್ಲ ಸೌಂದರ್ಯದೊಂದಿಗೆ ರಾರಾಜಿಸುತ್ತಾಳೆ.

1.      ಸುಮ್ಮನೆ ಮನೆಯ ಟೆರೇಸ್ ಮೇಲೆ ಹತ್ತಿ ನಿಂತು ಆಕಾಶವನ್ನೊಮ್ಮೆ ನೋಡಿದರೆ ಅಲ್ಲೊಂದು ರಮಣೀಯ ಸ್ವರ್ಗವೇ ಕಾಣುತ್ತದೆ. ಇದು ಜ್ಞಾನವನ್ನು ಹೆಚ್ಚಿಸಿ , ಕುತೂಹಲವನ್ನು ಕೆರಳಿಸಿ ಹೊಸ ಆಯಾಮವೊಂದನ್ನು ತೋರಿಸುತ್ತದೆ.

2.      ಸಂಜೆಯ ಪ್ರಕೃತಿಯನ್ನೊಮ್ಮೆ ಸವಿದರೆ ಅದೊಂದು ಸುಂದರ ಚಿತ್ರವಾಗಿ ಕಾಣುತ್ತದೆ. ತಂಪಾದ ಗಾಳಿಯ ಸ್ಪರ್ಶದಲ್ಲಿ ಟಿ.ವಿ ಯಲ್ಲಿ ಬರುತ್ತಿದ್ದ ಅತಿ ಮುಖ್ಯ ಧಾರಾವಾಹಿ ಕೂಡ ಸಪ್ಪೆಯೆನಿಸುತ್ತದೆ.

3.      ಸೂರ್ಯಾಸ್ತ, ಸುರ್ಯೋದಯವನ್ನು ದಿನ ನಿತ್ಯ ನೋಡುವುದರಿಂದ ಹೊಸ ಹುರುಪು, ಹಳೆಯ ತಪ್ಪುಗಳನ್ನು ಸರಿಪಡಿಸಿ ಮುಂದೆ ಹೋಗುವ ಮನೋಬಲ ಬೆಳೆಯುತ್ತದೆ ಅನ್ನುತ್ತಾರೆ.

4.      ಮುಂಜಾನೆ ಮಂಜಲ್ಲಿ ವಾಕಿಂಗ್ ಹೋಗುವಾಗ ತೆರೆದು ಕೊಳ್ಳುವ ಪ್ರಪಂಚ ನೀವು ರಾತ್ರಿ ೧೨ ಗಂಟೆಯವರೆಗೆ ಎದ್ದು ಕುಳಿತಿದ್ದರೂ ಕಾಣುವುದಿಲ್ಲ. ಈಗಂತೂ ಎಲ್ಲ ದೇಹ ಸೌಂದರ್ಯಕ್ಕಾಗಿಯಾದರು ವಾಕಿಂಗ್ ಹೋಗುವುದು ಮಾಮೂಲಾಗಿ ಬಿಟ್ಟಿದೆ.

5.      ಮನೆಯ ಮುಂದುಗಡೆಯ ಪುಟ್ಟ ಜಾಗದಲ್ಲೇ ಒಂದೆರಡು ಪಾಟುಗಳನಿಟ್ಟರೆ ಗಿಡಗಳು ಒಳ್ಳೆಯ ಗೆಳೆಯರಾಗುತ್ತಾರೆ.

6.      ಪ್ರಾಣಿಗಳನ್ನು ಸಾಕುವುದರಿಂದ ಅಥವಾ ಬರೀ ಗಮನಿಸುವುದರಿಂದ ನಾವು ಬಹಳಷ್ಟು ಕಲಿಯಬಹುದು. ಅವುಗಳ ಚಿತ್ರ ವಿಚಿತ್ರ ಜೀವನ ಶೈಲಿಯಿಂದ ಹೊಸ ಹೊಸ ಆಲೋಚನೆಗಳು, ಸೃಜನಾತ್ಮಕ ಚಿಂತನೆಗಳು ಬೆಳೆಯುತ್ತದೆ.

ಪ್ರಕೃತಿಯೆಂದರೆ ಬರಿ ಗಿಡಮರಗಳಲ್ಲದೆ ಇದರಲ್ಲಿ ಬಹುಮುಖ್ಯ ಭಾಗವಾಗಿ ಮನುಷ್ಯರು, ಬೇರೆ ಪ್ರಾಣಿಗಳು ಇದ್ದಾವೆ. ಜನರೊಂದಿಗೆ ಬೆರೆಯಲು, ಅರಿಯಲು ಈ ಪ್ರಕೃತಿ ಫೇಸ್ ಬುಕ್ಕಿಗಿಂತ ಬಹಳ ದೊಡ್ಡದಾದ ಅಂಗಳವನ್ನು ನಿರ್ಮಿಸಿಕೊಟ್ಟಿದೆ. ನಮ್ಮ ಅಹಂನ ಕೋಟೆಯೊಳಗೆ ಸೆರೆಯಾಗದೆ ಹೊರಬಂದು ಇದನ್ನು ಶೋಧಿಸಬೇಕಿದೆ. ಮಕ್ಕಳಿಗೂ ಕೂಡ ಬರಿ ಟಿ.ವಿ, ಮೊಬೈಲ್, ಲ್ಯಾಪ್ ಟಾಪ್ ಪ್ರಪಂಚವನ್ನು ಮಾತ್ರ ತೋರಿಸದೆ ಸುಂದರ ಜೀವಂತ ಜಗತ್ತಿನ ಪರಿಚಯ ಮಾಡಿಸಬೇಕು. ಹೊರಬರಲು ದೊಡ್ಡ ಅಡ್ಡಿಯೆಂದರೆ ಮನುಷ್ಯರ ಮೇಲಿನ ನಂಬಿಕೆಯೇ ಹೊರಟು ಹೋಗಿರುವುದು, ಎಲ್ಲೇ ಹೋದರು ಅಪಾಯದ ವಾಸನೆಯೇ ಹರಡಿರುವಾಗ ನಮ್ಮ ರಕ್ಷಣೆಯ ಜೊತೆಗೆ ಕೋಶದಿಂದ ಹೊರಗೆ ಬರಬೇಕು.

ಎಷ್ಟೋ ಮನಸುಗಳಲ್ಲಿ ಪ್ರೀತಿ, ಅಕ್ಕರೆ, ಸಂಬಂಧಗಳು ಎಂಬ ಮೃದು ಮಧುರ ಭಾವಗಳು ಮರೆಯಾಗುತ್ತಿದೆ ಅಥವಾ ಬೇರೆ ಅರ್ಥ ಪಡೆದುಕೊಳ್ಳುತ್ತಿದೆ. ಇದಕ್ಕಾದರೂ ಮಕ್ಕಳ್ಳನ್ನು ಪ್ರಕೃತಿಯ ಮಡಿಲಿಗೆ ಹಾಕಿ ಅದನ್ನು ಅನುಭವಿಸುವ ಪರಿಯನ್ನು ಕಲಿಸಬೇಕು. ಒಳ್ಳೆಯ ಮನುಷ್ಯರಾಗಿ, ಒಳ್ಳೆಯ ಮನಸ್ಸಿನವರಾಗಿ, ಸದೃಡರಾಗಿ,ಧೈರ್ಯವಂತರಾಗಿ ಬೆಳೆಯಲು ಅನುಭವ ಪಡೆದ ಪಕ್ವ ಮನಸ್ಸು  ಅವಶ್ಯಕ. ಅದಕ್ಕೆ ಪ್ರಕೃತಿಯೇ ಪ್ರಯೋಗ ಶಾಲೆ. ಎಷ್ಟೇ ಓದಿದರೂ,ಇಂಟರ್ನೆಟಗಳಲ್ಲಿ ನೋಡಿದರು ತಿಳಿಯದಷ್ಟು ಒಮ್ಮೆ ಪರಿಸರಕ್ಕೆ ಒಡ್ಡಿಕೊಂಡರೆ ಅನುಭವವಾಗಿ ಅರ್ಥವಾಗಿ ಬಿಡುತ್ತದೆ. ಹೀಗೆ ಪ್ರಕೃತಿಯಲ್ಲಿ ಬೆರೆತು, ಕಲಿಯುತ್ತ, ಬೆಳೆಯುತ್ತ ಬದುಕುವುದು ಇಂದಿನ ಯಾಂತ್ರಿಕ ಬದುಕಿನ ಗಾಲಿಯಲ್ಲಿ ತಿರುಗಲು ಅವಶ್ಯವಾಗಿ ಬೇಕಾಗುತ್ತದೆ.

ನಮಗೇನೋ ಬಾಲ್ಯದಲ್ಲಿ ಇವೆಲ್ಲ ಅಯಾಚಿತವಾಗಿ ಸಿಕ್ಕಿತ್ತು .ಅದಕ್ಕೆಂದೇ ಹೃದಯದ ಒಂದು ಮೂಲೆಯಲ್ಲಿ ಈ ಭಾವ ಸದಾ ಜಾಗೃತವಾಗಿರುತ್ತದೆ. ಆದರೆ ಮುಂದಿನ ಜನಾಂಗಕ್ಕೆ ಇದನ್ನು ಸಾಗಿಸುವುದು ಈ ಟೆಕ್ನಾಲಜಿ ಯುಗದಲ್ಲಿ ಕಷ್ಟವಾಗಿದೆ. ರಿಲ್ಯಾಕ್ಸ್ ಗಾಗಿ ಟ್ಯಾಬ್ ಚೇಂಜ್ ಮಾಡಿ ಫೇಸ್ಬುಕ್ ಅಥವಾ ಗೇಮ್ ಆಡಬೇಕು. ಅದನ್ನು ಬಿಟ್ಟು ಹೊರಬಂದು ಸ್ವಲ್ಪ ಕಾಲ ಪ್ರಕೃತಿಯನ್ನು ಕಣ್ಣರಳಿಸಿ ನೋಡುವುದು ಮೈಗೂ, ಮನಸಿಗೂ ಅರೋಗ್ಯಕರ. ಉತ್ತಮ ದೇಹಕ್ಕೆ, ಉತ್ತಮ ಪರಿಸರಕ್ಕೆ, ಉತ್ತಮ ದೇಶಕ್ಕೆ ಪ್ರಕೃತಿಯೊಂದಿಗಿನ ಒಂದು ಸ್ನೇಹ ಒಳ್ಳೆಯ ಉಡುಗೊರೆ. ಸ್ವಲ್ಪ ಮನಸಿನ ಬಾಗಿಲು ತೆರೆದು ಹೊರಗೆ ಬಂದು ಈ ಅನುಭೂತಿಯನ್ನು ಅನುಭವಿಸಬೇಕಿದೆ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s