ನನ್ನವಳು

ಭಾನುವಾರದ ರಾತ್ರಿ ಎಷ್ಟು ಪ್ರಯತ್ನಿಸಿದರೂ ನಿದ್ದೆ ಸುಳಿಯುತ್ತಿಲ್ಲ. ಕೊನೆಗೆ ಕಣ್ಣು ಬಿಟ್ಟುಕೊಂಡು ಮಗುವಂತೆ ನಿದ್ರಿಸುತ್ತಿದ್ದ ನಿನ್ನೇ ನೋಡುತ್ತಿದ್ದೆ. ಇತ್ತೀಚೆಗೆ ಏಕೋ ನೀನು ಮಾತನಾಡದೆ ಸುಮ್ಮನೆ ಇದ್ದಾಗ ಹೆಚ್ಚು ಇಷ್ಟವಾಗುತ್ತೀಯ ಕಣೆ…

‌ನಾನು ನಿನ್ನ ನೋಡಿದ್ದು ಪಂಚಲಿಂಗೇಶ್ವರ ಬಸ್ಸಿನಲ್ಲಿ. ನನಗೆ ಗೊತ್ತಿತ್ತು ಹತ್ತಿದ ಕೂಡಲೇ ಕಿಟಕಿ ಪಕ್ಕ ಕುಳಿತು ಹೊರ ನೋಡುತ್ತಾ ಮನಸಲ್ಲೇ ನಗುವ ನೀನು, ನನ್ನನ್ನು ಗಮನಿಸಿಯೇ ಇಲ್ಲವೆಂದು. ಆ ನಿರ್ಲಕ್ಷ್ಯವೇ ಸೆಳಯಿತು ನೋಡು. ಹೊಸ ಚಪ್ಪಲಿ ಹಾಕಿಕೊಂಡು ವಾರೆಗಣ್ಣಿನಿಂದ ನೋಡುತ್ತಾ ಸುಮ್ಮನೆ ನಗುವ ನಿನ್ನ ಗೆಳತಿಯರಿಗಿಂತ ಹುಡುಗರ ಗುಂಪಿನ ಕಡೆಗೆ ತಪ್ಪಿಯು ನೋಡದ ನೀನು ನನಗಿಷ್ಟವಾದೆ.

ಈಗಿನ ನಿನ್ನ ಕೆಂಪು ಕೆನ್ನೆ, ಹವಳದ ತುಟಿ, ರೇಷ್ಮೆ ಕೂದಲು ಆಗಿನ್ನೂ ಹರೆಯಕ್ಕೆ ಕಾಲಿಟ್ಟಿದ್ದವು. ನಿನಗೆ ಅವುಗಳ ಅರಿವೇ ಇರಲಿಲ್ಲ ಕಟ್ಟಿದ ಜಡೆ, ಹಣೆಗಿಟ್ಟ ಕುಂಕುಮ ಬಿಟ್ಟರೆ ನಿರಾಭರಣ ಸಾಮಾನ್ಯ ಹುಡುಗಿ ನೀನು. ಹೊಳಪು ಕಂಗಳೇ ನಿನ್ನ ಅಲಂಕಾರ, ಅದೇನೋ ನಿನ್ನ ಚತುರತೆಯೇ ಅತೀ ಆಕರ್ಷಕ. ತುಂಬಾ ಬುದ್ಧಿವಂತೆ‌ ಗೊತ್ತಾ ನೀನು ?

ನಿನಗೆ ಗೆಳೆಯರು ಕಡಿಮೆಯೇ, ಅದಕ್ಕೆಂದೇ ಲೈಬ್ರರಿಯ ನಿನ್ನದೇ ಲೋಕದಲ್ಲಿ ನಾ ಬಂದು ತೇಜಸ್ವಿ ಹೋದರಂತೆ ಎಂದು ಕಣ್ಣಲ್ಲಿ ಕಣ್ಣಿಟ್ಟು ಮಾತಾಡಿದಾಗ ಅದೆಂಥ ಸುದೀರ್ಘ ಸ್ನೇಹಕ್ಕೆ ನೀ ಜೊತೆಯಾದೆ. ಅಲ್ಲಿಂದ ನಿನ್ನದೇ ಪುಟ್ಟ ಪ್ರಪಂಚಕ್ಕೆ ನನ್ನ ಕರೆದೊಯ್ದೆ. ಅದೆಷ್ಟು ಕಾನ್ಫಿಡೆನ್ಸ್ ನಿನಗೆ .. ಜೀವನ ಪ್ರೀತಿ ನಿನಗೆ.. ಪ್ರತಿ ಮಳೆ ಹನಿಯ ಕಥೆ ಹೇಳುತ್ತಿದ್ದವಳು ನೀನೇನಾ? ನೀನು ನನಗೆ ಸುಂದರ ಅನಿಸುವುದು ನೀನು ಕೊಟ್ಟ ಆ ಸುಂದರ ಬದುಕಿನ ಅನುಭೂತಿ ಇಂದ ಕಣೆ ಹುಡುಗಿ..

ಅದೆಷ್ಟು ಕನಸಿತ್ತು. ಕಾರು-ಬೈಕು ಎಂದು ನಾ ಚಾಯ್ಸ್ ಕೇಳುತ್ತಿದ್ದರೆ ನಿನ್ನೊಂದಿಗೆ ಬೆಳದಿಂಗಳ ರಾತ್ರಿಯಲ್ಲಿ ನಡೆಯಬೇಕು ಅಂತಿದ್ದೆ. ಹೊಸ ಮನೆಯ ಚಿತ್ರ ನಾ ಬರೆಯುತ್ತಿದ್ದರೆ ಆಕಾಶದ ನಕ್ಷತ್ರ ನೋಡುತ್ತಾ ಮಲಗಬೇಕು ಅನ್ನುತ್ತಿದ್ದೆ. ನಿನ್ನ ಕನಸುಗಳೇ ನನ್ನ ಗುರಿಗಳಾದವ? ನಿನ್ನ ಒಳ್ಳೆಯತನದಿಂದ ನಾ ಎಲ್ಲೂ ದಾರಿ ತಪ್ಪಲೇ ಇಲ್ಲವಲ್ಲೆ.

ನಿನ್ನೊಂದಿಗೆ ನಡುರಾತ್ರಿಯ ತನಕ ಮಾಡುತ್ತಿದ್ದ ಮೆಸೇಜುಗಳು ಸುಮಧುರ ನೆನಪು ಕಣೆ. ನೋಡು ನೀ ಪಕ್ಕದಲ್ಲೇ ನನ್ನ ಹೆಂಡತಿಯಾಗಿದ್ದರೂ ನನಗೆ ಸಂತೋಷದ ಕ್ಷಣಗಳು ಬರೀ ನೆನಪು ಮಾತ್ರ. ನಿನಗೆ ಈಗ ನೋಕಿಯಾ ಸೆಟ್ ಕೊಟ್ಟು, ತಿಂಗಳಿಗೆ 2000 ಮೆಸೇಜಿದ್ದರೆ ನನ್ನೊಂದಿಗೆ ಮೊದಲ ಹಾಗೆ ಮಾತನಾಡುತ್ತೀಯ ? ಗಂಟೆ ಗಟ್ಟಲೆ ಹರಟೆ ಹೊಡೆಯುತ್ತಾ ಜಗತ್ತಿನ ಎಲ್ಲಾ ವಿಚಾರ ಮಾತಾಡಿದ್ದ ನಾವು ಇಂದೇಕೆ ಈ ಮೌನದ ಶಿಕ್ಷೆಯಲ್ಲಿದ್ದೇವೆ ? ಮುಗಿಯಿತಾ ಎಲ್ಲಾ ಸರಕು? ವಾಟ್ಸಪ್ ಲಿ ನಾವು ನಿಜವಾಗಿ ಮಾತನಾಡಿದ ಹಾಗೆ ನಿನಗೆ ಅನಿಸುತ್ತಾ?

ಹೋಗಲಿ ಬಿಡು, ನಿನ್ನ ಕನಸು ಬೆಂಗಳೂರಿಗೆ ಬಂದ ಮೇಲೆ ವಾಸ್ತವಕ್ಕೆ ನಡುಗಿಬಿಟ್ಟಿತು ಅಲ್ವಾ? ಹೆಣ್ಣು ಹುಡುಗಿಯಾದರೂ ಎಷ್ಟು ವಿಶ್ವಾಸದಿಂದ ಕೆಲಸಕ್ಕೆ ಅಲೆದೆ. ಅದೇನೋ ದುಡಿಯಬೇಕೆಂಬ ಅದಮ್ಯ ಬಯಕೆ ನಿನಗೆ. ಜವಾಬ್ದಾರಿಯು ಇತ್ತು ನಂಗೊತ್ತು. ಆದರೂ ಒಂದು ಕಿಡಿಯಂತೆ ಕಾದು ನಾವಿಬ್ಬರೂ ಈ ಮಹಾಸಾಗರದಲ್ಲಿ ಒಂದಷ್ಟು ಜಾಗ ಸಂಪಾದಿಸಿದೆವು. ನೆನಪಿದೆಯಾ ? ಸೋತ ಸಂಜೆ, ಅನ್ ಫಿಟ್ ಅನಿಸಿಕೊಂಡ ಇಂಟರ್ ವ್ಯೂ, ದುಡ್ಡಿಲ್ಲದೆ ಕನಸು ತೊರೆದು ಬಸ್ ಹತ್ತಿದ್ದು, ಚಿಕ್ಕಪನ ಅಳಿಯನ ಸೋದರತ್ತೆಯ ಮೈದುನನ ಯಾವುದೋ ಫ್ರೆಂಡ್ ರೆಫರೆನ್ಸ್ ಮೇಲಿಗೆ ತಿಂಗಳುಗಟ್ಟಲೆ ಜಿಮೇಲಿನಲ್ಲಿ ಕಾಯುತ್ತಿದುದು. ಕೊನೆಗೊಂದು ದಿನ ಸಿಕ್ಕ ಕೆಲಸ, ಅಲ್ಲಿಯ ನಡೆ , ಬಿಡು ಅದೆಲ್ಲಾ ನಮ್ಮನ್ನು ಅನ್ನ ಹಾಕಿ ಬೆಳೆಸಿದವು.

ಆದರೆ ನಮ್ಮಲ್ಲಿ ಪ್ರೀತಿ ಎಂದೂ ವಾಗ್ದಾನವಾಗಿರಲಿಲ್ಲ. ನೀನು ನನಗೆ  ಬಾಯಿಬಿಟ್ಟು ಹೇಳದೆ ಜೊತೆಗಿದ್ದೆ. ನಾನು ನೀ ಕೇಳದೆಯೇ ನಿನ್ನೆಲ್ಲಾ ಹೆಜ್ಜೆಗೆ ಬೆಂಗಾವಲಾದೆ. ಆಮೇಲೇನಾಯಿತು? ಅದೆಲ್ಲಿ ನಿನಗೆ ಇಲ್ಲಿಯ ಗಾಳಿ ಸೋಕಿತು ?ಈ ಜನರಿಗೆ ಯಾಕಷ್ಟು ತಲೆ ಕೆಡಿಸಿಕೊಳ್ಳುತ್ತೀಯ, ದಂತದ ಬೊಂಬೆಯ ಹಾಗೆ ಆಗಿದ್ದೀಯ ಆದರೆ ನಿನಗೆ ಸೌಂದರ್ಯ ಅಂದರೆ ಅದೇನೋ ರೇಜಿಗೆ ಅಲ್ಲವಾ.. ಯಾರಿಗೆ ತೋರಿಸಲು ಈ ಪರಿವರ್ತನೆ ಚಿನ್ನಾ ? ಯಾರಿಗೂ ಕೇರ್ ಮಾಡದ ನೀನು ಇಂದೇಕೆ ಕೊಲೀಗ್ ಜೊತೆ ಕಾರ್ ತೆಗೆದು ಕೊಳ್ಳುವ ಜಿದ್ದಿಗೆ ಬಿದ್ದಿದೀಯ ? ಕನ್ಯಾಕುಮಾರಿಯ ಭೂಶಿರದಲ್ಲಿ ಭಾರತದ ನೋಡಬೇಕು ಅಂದಿದ್ದೆ ನೆನಪಿದೆಯಾ? US ವೀಸಾದ ಗುಂಗಲ್ಲಿ ನಿನ್ನ ಕನಸುಗಳೇ ಬದಲಾದವು. ಪಟ್ಟಿ ಮಾಡುತ್ತಾ ಹೋದರೆ ಬೇಜರಾಗತ್ತೆ ಕಣೆ. ಬದಲಾವಣೆ ಜಗದ ನಿಯಮ , Change is the only constant ಆದರೂ ಒಳ್ಳೆಯ ಬದಲಾವಣೆ ಆಗಬೇಕು. ಏನಿದು ಉಸಿರು ಗಟ್ಟಿಸುವಂತ ವಾತಾವರಣ.

ನೀನು ಕಾಲದ ಜೊತೆ ಉರುಳುವ , ಬೆಳವಣಿಗೆಗೆ ತೆರೆದುಕೊಂಡ ಇಂದಿನ ಮಾರ್ಡನ್ ಮಹಿಳೆ. ನಿನ್ನ ಸಾಧನೆ ನಿಜಕ್ಕೂ ಗ್ರೇಟ್. ನೀನು ಸ್ವತಂತ್ರವಾಗಿ ನಿಂತು ಮಹತ್ವಾಕಾಂಕ್ಷೆಯಿಂದ ಮನ್ನುಗುತ್ತಿರುವೆ. ಪ್ರಪಂಚವೇ ಇಷ್ಟೊಂದು ಮುಂದುವರಿಯುತ್ತಿರುವಾಗ ನಾವು ಕೂಡ ಟೆಕ್ನಾಲಜಿ ಜೊತೆಗೆ ಓಡಬೇಕು ಎಂದು ಈಗ ಮಲಗುವ ಮೊದಲು ಹೇಳುತ್ತಿದ್ದೆ. ಈ ರೇಸಲ್ಲಿ ನಿನ್ನ ಉತ್ಸಾಹ ನನಗಿಂತ ನಿನ್ನನ್ನು ಮುಂದೆ ಓಡಿಸಿದೆ. ಅಂತರ ಹೆಚ್ಚಾಗಿದೆ , ನಾನು ಬಂದು ಕೂಡಿ ಕೊಳ್ಳುತ್ತೇನೆ. ಅಷ್ಟರಲ್ಲಿ ನಿನ್ನನ್ನೇ ಕಳೆದು ಕೊಳ್ಳಬೇಡ. ದಿನಾ ಜಗಳವಾಡುವಾಗ ನಿನ್ನನ್ನು ಮತ್ತೆ ನೀನಾಗಿ ನೋಡಬೇಕು ಎಂದು ಬಯಸುತ್ತೇನೆ. ನೀನೆ ಏಕೋ ನಿನಗಿಂತ ಹೆಚ್ಚಾಗಿ ಕಂಪೆನಿಯ ನೌಕರಳಾಗಿ ಇರಲು
ಒದ್ದಾಡುತ್ತಿರುವೆ. ಬಾ ಚಿನ್ನಾ ಮತ್ತೆ ಸುಂದರ ಬದುಕನ್ನು ಬದುಕೋಣ.

4 thoughts on “ನನ್ನವಳು

 1. ಹಣದ ಹೊಳೆಯಲಿ ತೇಲುತಾ ತೇಲುತಾ, ಕನಸುಗಳು ಈಜುಬಾರದೆ
  ಮುಳುಗಿ ಉಸುರುಗಟ್ಟುತ್ತಿವೆ…..
  Everyone has dreams, but how many are willing to stake their lives to fulfill these dreams?
  -Sadguru
  ಸೂಪರ್ ಸೆ ಊಪರ್…

  Liked by 2 people

  1. ಎಲ್ಲ ಭಾವನೆಗಳನ್ನೂ ಒಂದೇ ಗುಕ್ಕಿನಲ್ಲಿ ಹರಿದು ಮುಕ್ಕಿಕೊಳ್ಳುವ ಬೆಂಗಳೂರಿನ ಧಾವಂತದ ಜೀವನದ ಬಗ್ಗೆ ಸರಳವಾಗಿ ಅದ್ಭುತವಾಗಿ ಬರೆದಿದ್ದೀರ.

   Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s