ಕಿರಗೂರಿನ ಗಯ್ಯಾಳಿಗಳು

kiragurina14316m

ಕಿರಗೂರಿನ ಗಯ್ಯಾಳಿಗಳು ನಾನು ಓದಿ ಮರೆತೆನೋ ಅಥವಾ ಓದದೆಯೇ ಮರೆತೆನೆಂದು ಅಂದು ಕೊಳ್ಳುತ್ತಿರುವೆನೋ ಇನ್ನೂ ಸ್ಪಷ್ಟವಾಗಿಲ್ಲ. ಈ ಚಿತ್ರಕೆ ಹೋದದು ಕೂಡ ಆಕಸ್ಮಿಕವಾದ್ದರಿಂದ, ನೋಡುವಾಗ ನೆನಪಿಸಿಕೊಂಡರೂ ನೆನಪಾಗದೆ ಪೂರ್ತಿ ಅಚ್ಚರಿಯಲ್ಲೇ ಕೊನೆಗೊಂಡಿತು. ಚಿತ್ರ ಬಹಳ ಹಿಡಿಸಿ ತುಂಬಾ ಚೆನ್ನಾಗಿದೆ ಅನಿಸಿತ್ತು . ಆದರೆ ಕಥೆಯನ್ನು ಓದದೆ ಚಿತ್ರದ ಬಗೆಗಿನ ಭಾವನೆಗಳನ್ನು ಬರಹಕ್ಕಿಳಿಸಿದರೆ ಪೂರ್ಣ ಅನಿಸುವುದಿಲ್ಲ.ಅದಕ್ಕೆಂದೇ ಈಗ ಪುಸ್ತಕ ಓದಿದ ಮೇಲೆ ಮತ್ತೊಮ್ಮೆ ಕಿರಗೂರಿನಲ್ಲಿ ತಿರುಗಾಡಿದಂತೆ ಅನಿಸಿ ಸಿನಿಮಾ ಇನ್ನು ರಂಗೇರಿ ನೆನಪಿಗೆ ಬರುತ್ತಿದೆ.

ಈ ಕಥೆ ಎಷ್ಟು ಚಿಕ್ಕದೆಂದರೆ ಓದಿ ಮರೆತಿರಲು ಸಾಕು. ೫೦ಪುಟಗಳಿರುವ ಕಥೆ ನಿಮಗೆ ನಿಗೂಢ ಮನುಷ್ಯರು, ನರಭಕ್ಷಕ ಚಿರತೆ , ಕರ್ವಾಲೋ ಪ್ರಭಾವ ಬೀರಿದಷ್ಟು ಬೀರುವುದಿಲ್ಲ. ಸಾಧಾರಣ ಕಥೆಯಾಗಿ, ಬಹುಪಾಲು ಪ್ರಶ್ನೆಯಾಗಿ , ಯಾವುದು ಸರಿ – ಯಾವುದು ತಪ್ಪು ಎಂಬ ವಿಮರ್ಶೆಯಲ್ಲೇ ನಿಲ್ಲಿಸುತ್ತದೆ ಪೂರ್ಣಚಂದ್ರರ ಮೂಲಕಥೆ. ಆದರೆ ಸಿನಿಮ ಆವೃತ್ತಿ ಸಾಕಷ್ಟು ತಿದ್ದಿಕೊಂಡು ಅಭೂತಪೂರ್ವವಾಗಿ ಮೂಡಿಬಂದಿದೆ. ಸಾಮಾನ್ಯವಾಗಿ ಕಾದಂಬರಿ ಸಿನಿಮಾ ಆಗುವಾಗ ಸಾಕಷ್ಟು ವೈಭವಗಳನ್ನು ಕಳೆದುಕೊಳ್ಳುತ್ತದೆ. ಆದರೆ ಇದು ಕಥೆಯಾದುದಕೋ ಏನೋ ಇನ್ನಷ್ಟು ವೈಭವವನ್ನು ಚಿತ್ರದಲ್ಲಿ ಗಿಟ್ಟಿಸಿಕೊಂಡಿದೆ.

ಬೆಂಗಳೂರಿಗರಿಗೆ ಹಳ್ಳಿಯ ಸ್ವಾದ ತೋರಿಸಿದರೆ, ಹಳ್ಳಿಗರಿಗೆ ನಮ್ಮ ಹಳ್ಳಿ ಇಷ್ಟು ಚಂದವೇ ಎಂದು ಬೆರಗು ಉಂಟುಮಾಡುತ್ತದೆ ಛಾಯಾಗ್ರಹಣ. ಕ್ಯಾಮೆರ ವರ್ಕ್ ಇತ್ತೀಚಿನ ಚಿತ್ರಗಳಲ್ಲಿ ಚೆನ್ನಾಗಿಯೇ ಬರುತ್ತಿದೆ ಅದರೆ ಅದಕ್ಕೆ ಹಳ್ಳಿಯ ಸೊಗಡು ಪಾತ್ರಗಳಲ್ಲಿ, ವೇಷ ಭೂಷಣಗಳಲ್ಲಿ, ಸಂಭಾಷಣೆಯಲ್ಲಿ ಜೊತೆ ಸೇರಿಸಿರುವುದು ಇದರ ಹೆಗ್ಗಳಿಕೆ. ಈಗಿನ ಕಾಲದಲ್ಲಿ ಇಂಥ ಚಿತ್ರ ಮಾಡಲು ಐದಾರು ದಶಕಗಳಷ್ಟು ಹಿಂದೆ ಹೋಗಿ ಅಲ್ಲಿನ ಕಪ್ಪು ಬಿಳುಪು ಬಣ್ಣಗಳನ್ನು ಎರವು ತಂದು ಅದನ್ನು ಇಂದಿನ ಮಾಡ್ರನ್ ಮಹಿಳೆಯರಿಗೆ ಅಂದವಾಗಿ ಕೂರಿಸಿರುವುದೇ ನೋಡಲು ಹಬ್ಬ. ಇದರಲ್ಲಿ ಚಿತ್ರತಂಡದ ಪರಿಶ್ರಮ ಎದ್ದು ಕಾಣುತ್ತದೆ.

ಕಥೆಯ ಬಗೆಗೆ ಬಹಳಷ್ಟು ಮಾತನಾಡುವುದಿದೆ. ಮೂಲ ತಿರುಳಿಗೆ ಧಕ್ಕೆ ಬರದಂತೆ ಚಿತ್ರದಲ್ಲಿ ವಿಸ್ತರಿಸಿದ್ದಾರೆ. ಕೇವಲ ಗಂಡು ಹೆಣ್ಣಿನ ಮೇಲೆ ದೌರ್ಜನ್ಯ ಮಾಡುತ್ತಾನೆ ಎಂದಾಗಲಿ, ಹೆಣ್ಣು ಗಯ್ಯಾಳಿಯಾಗಿ ಗಂಡನ್ನು ಮಾನಸಿಕವಾಗಿ ಶೋಷಿಸುತ್ತಾಳೆ ಎಂದಾಗಲಿ ಹೇಳಲಾಗುವುದಿಲ್ಲ. ಯಾವುದು ಹೆಚ್ಚು ಸರಿ ಎಂದು ತಿಳಿದಾಗ ಮಾತ್ರ ಗಂಡು ಅಥವಾ ಹೆಣ್ಣಿನ ಪರ ವಹಿಸುವುದು ಸೂಕ್ತವಾಗುತ್ತದೆ. ದಿನವಿಡೀ ಸಾರಾಯಿ ಕುಡಿದು ಬದುಕಿನ ಸೂತ್ರವೇ ತಪ್ಪಿಹೋಗಿ ದಾರಿಯಲ್ಲೆಲ್ಲೋ ಸಿಗುವ ಗಂಡಸಿಗೆ ಗಯ್ಯಾಳಿ ಹೆಂಗಸು ಸರಿ. ವ್ಯವಹಾರ ಜ್ಞಾನವೇ ಇಲ್ಲದೆ ಕಣ್ಣು ಮುಚ್ಚಿಕೊಂಡು ಕಾಲಿಡುವ ಗಂಡಸಿಗೆ ಹೆಚ್ಚುಮಾತಿನ ಚತುರೆ ಹೆಣ್ಣು ಜೋರು ಮಾಡುವುದು ಸರಿ. ಅಂದ ಅಲಂಕಾರದಲ್ಲಿ ಮುಳುಗಿ ಸ್ವಾರ್ಥಿಯಾಗುವ ಹೆಂಗಸಿಗೆ ಗಂಡ ಬಯ್ಯುವುದು ಸರಿ. ಚಂಡಿ ಹೆಂಡತಿ ತಿಳಿಯದೆ ಸಂಸಾರದ ಗುಟ್ಟನ್ನೆಲ್ಲ ಊರಲ್ಲಿ ವಾರ್ತೆಯಂತೆ ಬಿತ್ತರಿಸಿದರೆ ಗಂಡ ಅಂಕೆಯಲ್ಲಿ ಇಡಲೇ ಬೇಕು. ಹೀಗೆ ಆಯಾ ಸಂಧರ್ಭಕ್ಕೆ ತಕ್ಕಂತೆ ವರ್ತಿಸಬೇಕೇ ಹೊರತು ಹೆಂಡತಿಯೆಂದರೆ ಪತಿ ಪಾರಾಯಣೆಯಾಗಿ ಪೂಜೆ ಮಾಡುವುದಲ್ಲ. ಗಂಡ ಎಂದ ಕೂಡಲೇ ಯಮ ಕಿಂಕರನಂತೆ ಶಿಕ್ಷಿಸುವುದು ಅಲ್ಲ.

ಕಿರಗೂರಿನ ಗಯ್ಯಾಳಿಗಳು ಕೂಡ ಹೀಗೆಯೇ ಸಾರಾಯಿ ಕುಡಿದು ಬಲಗೆಟ್ಟ, ಜಾತಿ ವಿಚಾರದಲ್ಲಿ ಮತಿಗೆಟ್ಟ ಗಂಡಸರಿಗೆ ಮತ್ತು ಸಮಾಜಕ್ಕೆ ಅವರದೇ ಅದ ರೀತಿಯಲ್ಲಿ ಸಡ್ಡು ಹೊಡೆದು ನಿಂತಿದ್ದಾರೆ. ಹಳ್ಳಿಯಲ್ಲಿ ಹೆಂಗಸರು ಹೀಗೆ ಜೋರಾಗಿಯೇ ಇರುವವರು ಎಂದು ತಪ್ಪು ತಿಳಿಯಬೇಡಿ ಹಳ್ಳಿಗಳಲ್ಲಿ ಮುಸುರೆ ತಿಕ್ಕುವುದೇ ಪರಮ ಧೇಯ್ಯವೆಂದು ಎದಿರು ಮಾತನಾಡದೆ ಹೆಂಗಸರು ಇದ್ದಾರೆ. ಒಟ್ಟಿನಲ್ಲಿ ಈ ಸಿನಿಮಾ, ಈ ಕಥೆ ಹೆಣ್ಣು ಗಂಡುಗಳ, ಹಳ್ಳಿ ನಗರಗಳ ವ್ಯತ್ಯಾಸ ತೋರಿಸುವುದಕ್ಕೆ ಅಲ್ಲ. ಪರಿಸ್ಥಿತಿ ಹಾದಿ ತಪ್ಪಿದಾಗ ಹೇಗೆ ಅನಿರೀಕ್ಷಿತ ಮೂಲಗಳಿಂದ ಬದಲಾವಣೆ ಸಾಧ್ಯ ಎನ್ನಲಷ್ಟೇ.

ಚಿತ್ರದಲ್ಲಿ ಒಂದೊಂದು ಪಾತ್ರಗಳನ್ನು ಬೆಳೆಸಿರುವ ಪರಿ ಅಧ್ಬುತ. ಪ್ರತಿ ಪಾತ್ರ ಬಂದಾಗಲೂ ಅರಿವಿಲ್ಲದಂತೆ ಪರಿಚಿತ ಮುಗುಳ್ನಗೆ ಯೊಂದು ಮೂಡುತ್ತದೆ. ಹಿರಿಯ ಕಲಾವಿದರು, ರಂಗಭೂಮಿಯ ಕುಶಲರು ಒಂದೊಂದು ವಿಶೇಷ ಪತ್ರದಲ್ಲಿ ಕಾಣಿಸಿಕೊಂಡು ಮೆರುಗು ನೀಡಿದ್ದಾರೆ. ಚಿತ್ರ ವಲ್ಗರ್ ಆಗಿದೆ ಅಷ್ಟೊಂದು ಬೈಗುಳಗಳು ಬೇಕಿರಲಿಲ್ಲ. ಪುಸ್ತಕದಲ್ಲೂ ಕೂಡ ನನಗೆ ಹಾಗೆ ಅನ್ನಿಸಲಿಲ್ಲ. ಮೊದಲರ್ಧದಲ್ಲಿ ಅರ್ಧ ಬೀಪ್ ಇಲ್ಲದ ಸೆನ್ಸಾರ್ ಮೌನದಿಂದಲೇ ತುಂಬಿತ್ತು. ಅದೊಂದು ಬಿಟ್ಟರೆ ಇದೊಂದು ಕಲಾರಸಿಕರಿಗೆ ಹಬ್ಬದೂಟ ನೀಡುವ ಚಿತ್ರ.

 

3 thoughts on “ಕಿರಗೂರಿನ ಗಯ್ಯಾಳಿಗಳು

  1. ನನಗೆ ಈ ಚಿತ್ರ ನೋಡಿ ಕಿರಗೂರಿನ ಗೈಯ್ಯಾಳಿಗಳು ಎನ್ನುವ ಬದಲಾಗಿ ಕಿರಗೂರಿನ ಗಟ್ಟಿಗಿತ್ತಿಯರು ಎಂದು ಕರೆದರೆ ಸರಿಯೇನೊ ಅನ್ನಿಸಿತು. ಚಿತ್ತದ ಬಗ್ಗೆ ವಿವರಣೆ ಚೆನ್ನಾಗಿದೆ.

    Liked by 1 person

Leave a comment