ಕರೆಯದೆ ಬಂದ ಅತಿಥಿ

ಅದು ರಾತ್ರಿ ಮೂರು ಗಂಟೆಯ ಸಮಯ. ತುಂಬಾ ಚೆನ್ನಾಗಿಯೇ ನಿದ್ದೆ ಆವರಿಸಿತ್ತು ಅದು ಹೇಗೋ ಸ್ವಲ್ಪ ಎಚ್ಚರವಾಗಿ ಕಣ್ಬಿಟ್ಟೆ. ಮಲಗಿದ್ದ ರೂಮಿನ ಮೂಲೆಯಲ್ಲಿ, ಕಬೋರ್ಡಿನ ಕೆಳಗೆ ಗಾಢ ಕತ್ತಲು. ಕತ್ತಲೆಂದರೆ ವಿಚಿತ್ರ ಆಕೃತಿ ನೋಡಿದಂತಾಗುವುದು ಸಾಮಾನ್ಯ. ನನಗೆ ಆಗಲೂ ಹಾಗೆಯೇ ಅಲ್ಲೊಂದು ಮನುಷ್ಯಾಕೃತಿ ಕಂಡಿತು. ಯೋಚಿಸಲು ಸಮಯವೇ ಇರದೆ ನನ್ನ ಗಂಟಲು ಕೂಗಿಕೊಂಡಿತ್ತು. ಕೂಗಿ ಕೊಳ್ಳುವುದೆಂದರೆ ನಾವು ಊಹಿಸಿಕೊಂಡತಲ್ಲ, ಎದೆಯಾಳದಿಂದ ಬರುವ ಅಸಹಾಯಕತೆಯ ನರಳಾಟದ ಅಸ್ಪಷ್ಟ ಕಿರುಚಾಟ. ಅದಕ್ಕೊಂದು ಅಕ್ಷರವಾಗಲಿ,ಪದವಾಗಲಿ ಇರಲಿಲ್ಲ. ಇದ್ದೆಲ್ಲಾ ಶಕ್ತಿ ಕೂಡಿಸಿಕೊಂಡು ಕೂಗಿದುದಕ್ಕೆ ಅದರ ಶಬ್ಧವು ಕರ್ಕಶವಾಗಿ ಹೆಪ್ಪುಗಟ್ಟಿದ ಮೌನವನ್ನು ಮಿಂಚಿನಂತೆ‌ ಸೀಳಿತ್ತು.

ಈಗ ಆಕೃತಿಯಂತೆ ಕಂಡಿದ್ದ ಆ ಮನುಷ್ಯ ಎದ್ದು ಓಡಿದ. ಎದೆ ಝಲ್ಲೆನಿಸುವ ಹಾಗೆ ಕ್ಷಣಮಾತ್ರದಲ್ಲಿ ಕಣ್ಮರೆಯಾದ ಆ ಕಪ್ಪು ಮನುಷ್ಯ ಮನೆಗೆ ನುಗ್ಗಿದ ಕಳ್ಳ ಎಂಬ ಸತ್ಯ ಆ ಅಪರಾತ್ರಿಯಲ್ಲಿ ದೊಡ್ಡ ಆಘಾತವಾಗಿತ್ತು. ನಿದ್ದೆಯ ನಶೆಯಲ್ಲಿ ಕೂಗಿ ಕೊಂಡಾಗ , ಅವನು ತಿರುಗಿ ಕಣ್ಣಲಿ ಕಣ್ಣಿಟ್ಟು ನೋಡಿದಾಗ ಕಂಡ ಆ ಅಪರಿಚಿತ ನೋಟಕ್ಕೆ ಇನ್ನೂ ಭಯ ಬೀಳುತ್ತೇನೆ. ನಿದ್ದೆಯ ಮತ್ತಿನಿಂದ ಅನಾಮತ್ತಾಗಿ ಜಾಗೃತ ಜಗತ್ತಿಗೆ ಎತ್ತಿ ಎಸೆದಂತಾಗಿತ್ತು.

ಇದೇ ಸಮಯಕ್ಕೆ ನನ್ನ ತಮ್ಮ ಕೂಡ ಎದ್ದು ಯಾರು ಯಾರು ಎಂದು ಕಿರುಚಿಕೊಂಡ. ಕಳ್ಳ ಹೊರಗೋಡಿದ ಮೇಲೆ ತೆರೆದುಕೊಂಡಿದ್ದ ಬಾಗಿಲನ್ನು ದೊಪ್ಪೆಂದು ಹಾಕಿಕೊಂಡೆ. ತೀರ ಪರಿಚಿತವಾಗಿದ್ದ ನಮ್ಮ ಪ್ರೀತಿಯ ಮನೆ ಆ ಕ್ಷಣದಲ್ಲಿ ಗುರುತಿಲ್ಲದ ರಣರಂಗದಂತೆ ಕಂಡಿತ್ತು. ಆಫೀಸಿನ ಲ್ಯಾಪ್ ಟಾಪ್ ಬ್ಯಾಗ್, ಮೊಬೈಲ್ , ಪರ್ಸ್ ಎಲ್ಲಾ ಕಳುವಾಗಿ ಹೋಗಿದ್ದವು. ಕೂದಲು ಸೋಂಕದಂತೆ ಬದುಕುಳಿದ ನಮ್ಮ ಶರೀರದ ಬೆಲೆ ಮುಂದೆ ಇನ್ಯಾವುದು ಮುಖ್ಯ ಅನಿಸಲಿಲ್ಲ. ಆದರೂ ಮಿಂಚಿನಂತೆ ಘಟಿಸಿದ್ದನ್ನು ಸತ್ಯವೇ ಎಂದು ನಂಬಲು ಇಬ್ಬರಿಗೂ ಕಷ್ಟವಾಗುತಿತ್ತು. ಸೆಕೆಗೆ ಅರ್ಧ ತೆರೆದಿದ್ದ ಕಿಟಕಿಯಿಂದ ಇನ್ನೊಂದು ಕಿಟಕಿ ತೆರೆದು ಅಲ್ಲಿಂದ ಕೈಹಾಕಿ ಬಾಗಿಲಿನ ಎರಡು ಚಿಲಕ ಸರಿಸಿ ಆತ ಒಳ ಬಂದಿದ್ದ.

ಈಗ ಕಳೆದುಕೊಂಡ ವಸ್ತುಗಳ ಕನವರಿಕೆ ಶುರುವಾಯಿತು. ಇರುವುದಕ್ಕಿಂತ ಹೋದುದಕ್ಕೆ ತುಡಿತ ಹೆಚ್ಚು ಎನ್ನುವ ಹಾಗೆ ಮತ್ತೆ ಮತ್ತೆ ಹಾಗೆ ಮಾಡಬಹುದಿತ್ತು ಹೀಗೆ ಮಾಡಬಹುದಿತ್ತು ಎಂದು ಪರಿತಪಿಸಿದೆವು. ಈ ಹೊತ್ತಿಗೆ ಹೊರಗಡೆ ಸಾಕಷ್ಟು ಸದ್ದು ಕೇಳಿಸಿತು ಕೂಗಿ ಕೊಂಡಿದಕೆ ಜನ ಸೇರಿರಬಹುದು ಎಂಬ ಧೈರ್ಯದಿಂದ ಬಾಗಿಲು ತೆರೆದೆವು. ಆಗ ಗೊತ್ತಾದುದೇನಂದರೆ ಅನುಮಾನಸ್ಪದವಾಗಿ ಇಬ್ಬರು ನಮ್ಮ ಮನೆಯ ಮುಂದೆ ಸುಮಾರು ಅರ್ಧ ಗಂಟೆಯಿಂದ ಓಡಾಡುತ್ತಿದ್ದರು. ಅದೆಲ್ಲೋ ರಾತ್ರಿ ಇಡೀ ಬಣ್ಣ ಬಳಿಯುತ್ತಿದ್ದ ಹುಡುಗರಿಗೆ ಸಂದೇಹ ಬಂದು ಈಗ ಇಲ್ಲಿ ಜಮಾಯಿಸಿದ್ದರು. ಇವರನ್ನು ನೋಡಿ , ಜೊತೆಗೆ ನಾವು ಎಚ್ಚರವಾದ ಮೇಲೆ ಕಳ್ಳ ಹೆದರಿ ಒಂದನೇ ಫ್ಲೋರಿಂದ ಹಾರಿ ಓಡಿ ಹೋಗಿದ್ದ. ಅತೀ ಭಾರವಾಗಿದ್ದ ಲ್ಯಾಪ್ ಟಾಪ್ ಬ್ಯಾಗ್ ಹಿಡಿದು ಹಾರಲಾಗದೆ ಅದು ನನ್ನ ಅದೃಷ್ಟಕ್ಕೆ ಅಲ್ಲೇ ಕೈ ಜಾರಿತ್ತು. ಆಶ್ಚರ್ಯದ ಜೊತೆ ಅನುಮಾನದಿಂದಲೇ ಬ್ಯಾಗನಲ್ಲಿದ್ದ ವಸ್ತುಗಳನ್ನು ಪರಿಶೀಲಿಸ ತೊಡಗಿದೆ. ಮೊಬೈಲ್ ಮತ್ತು ದುಡ್ಡು ಬಿಟ್ಟು ಉಳಿದೆಲ್ಲಾ ಸಾಮಾನುಗಳು ಹಾಗೆಯೇ ಇದ್ದವು.

ಮುಂದಿನದೆಲ್ಲಾ ಅದೇ ಘಟನೆಯ ಕಾಡುವ ಕಹಿ ನೆನಪುಗಳು. ನಂಬಿಕಸ್ಥ ಆಸರೆಯಾಗಿದ್ದ ಮನೆ ಈಗ ಕಾಗೆ ಹೊಕ್ಕ ಗೂಡಂತಾಗಿದೆ. ಅಲ್ಲಿ ಅಸಹಾಯಕತೆ, ಅಶಾಂತಿಯ ಸ್ಪಷ್ಟ ಕುರುಹನ್ನು ಅವನು ಬಿಟ್ಟು ಹೋಗಿದ್ದಾನೆ. ಕತ್ತಲಿನ ಮೇಲೆ ಭಯದ ನೆರಳು ಬಿದ್ದಿರುವುದರಿಂದ ಇರುಳು ಇನ್ನಷ್ಟು ಹೆದರಿಸುತ್ತದೆ. ಸುತ್ತಲಿನ ಸಮಾಜದ ಮೇಲಿನ ಭರವಸೆ ಈಗ ಭೀತಿಯಾಗಿದೆ. ಬಯಲಿನಲ್ಲಿ ಬದುಕುವುದಕ್ಕೂ ಮನೆಯೊಳಗೆ ಬದುಕುವುದಕ್ಕೂ ಅಂತರ ಕಡಿಮೆಯೇನೋ ಅನಿಸುತ್ತದೆ. ಕರೆಯದವರ ಅಕ್ರಮ ಪ್ರವೇಶ ಅಭದ್ರತೆಯ ನಾಂದಿ ಹಾಡಿ ಎಚ್ಚರಿಕೆಯ ಗಂಟೆ ಬಡಿದು ಹೋಗಿದೆ.

Advertisements

2 thoughts on “ಕರೆಯದೆ ಬಂದ ಅತಿಥಿ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s