ಹೀಗೊಂದು ಬಸ್ಸಿನ ಕಥೆ

ತುಂಬಾ ಚಿಕ್ಕಂದಿನಿಂದಲೂ ನನಗೆ ಬಸ್ ಎಂದರೆ ಬಹಳ ಭಯ. ಕೆಲವೊಂದು ಭಯಗಳು ಹೇಗೋ ಮನಸಿನಾಳದಲ್ಲಿ ಕುಳಿತು ಬಿಟ್ಟಿರುತ್ತದೆ. ಇದು ಪೂರ್ವಜನ್ಮದ ಅವಸಾನದ ಸಮಯದಲ್ಲಿ ಸಂಭವಿಸಿರಬಹುದಾದ ಯಾವುದಾದರೂ ದುರ್ಘಟನೆಯ ಪರಿಣಾಮವೇನೋ ಎಂದು ನನ್ನ ಅನುಮಾನ. ಚಿಕ್ಕ ಮಕ್ಕಳಿಗೆ ಸಾಧಾರಣವಾಗಿ ಭಯ ಅಂದರೆ ಗೊತ್ತಿರುವುದಿಲ್ಲ. ಆದರೆ ಕೆಲವೊಂದು ಬಾರಿ ಬೆಂಕಿಗೆ, ನೀರಿಗೆ, ಹಾವಿಗೆ, ಕತ್ತಲಿಗೆ, ಜನಜಂಗುಳಿಗೆ ಕಾರಣವಿಲ್ಲದೆ ವಿಪರೀತ ಹೆದರಿ ಬಿಕ್ಕಳಿಸಿ ಅಳುವ ಮಕ್ಕಳನ್ನು ನೋಡಿರಬಹುದು. ಹೀಗೆಯೇ ನನಗೆ ನನ್ನ ನೆನಪಿನ ಪುಟಗಳನ್ನು ಸಾಧ್ಯವಿರುವಷ್ಟು ಹಿಂತೆಗೆದು ನೋಡಿದರೆ ಈ ಬಸ್ಸಿನ ಭಯ ಕಾಣುತ್ತದೆ. ಆದರೆ ಕಾರ್ಯ ಕಾರಣ ಸಂಬಂಧ ಯಾವುದೂ ಕಾಣುವುದಿಲ್ಲ.

image

ಅದರ ದೈತ್ಯ ದೇಹ, ದೊಡ್ಡ ಚಕ್ರ, ಭುಸುಗುಡುವ ಸದ್ದು, ತಲೆ ಸುತ್ತುವ ವಾಸನೆ, ಕೈ ಹೊರಹಾಕಿದರೆ ಕಟ್ ಮಾಡುವ ಕಿಟಕಿಗಳು, ದುಡ್ಡು ತರದಿದ್ದರೂ ಚೇಂಜ್ ತರಬೇಕೆನ್ನುವ ಕಂಡಕ್ಟರ್, ತನ್ನದೇ ವಿಶೇಷ ಬಾಗಿಲಿನಿಂದ ವಿಚಿತ್ರವಾಗಿ ಹಾರುವ ಡ್ರೈವರ್ ಹೀಗೆ ಇವೆಲ್ಲವೂ ಬುದ್ಧಿ ತಿಳಿಯುವ ಮುಂಚೆಯೇ ಹೆದರಿಕೆ ಹುಟ್ಟಿಸಿಬಿಟ್ಟಿದ್ದವು. ಬಹುಶಃ ಹೀಗಾಗಿಯೇ ನಾನು ಹೆಚ್ಚು ಹೊರಗೆ ಆಟವಾಡಲು,ತಿರುಗಲು ಹೋಗದೆ ಸುರಕ್ಷಿತವಾದ ಬಸ್ ನುಗ್ಗಲು ಆಗದ ಮನೆಯ ಒಳಗಡೆಯೇ ಅಂಟಿಕೊಂಡು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಂಡೆ. ಇದು ಅತಿಶಯ ಅನ್ನಿಸಿದರೂ ಮನೆ ಹೊರಗಿಗಿಂತ ಬಾಲ್ಯದಲ್ಲಿ ನಾನು ಒಳಗಿದ್ದುದೇ ಹೆಚ್ಚು . ಹೀಗಿದ್ದರೂ ಕೂಡ ಮನೆಯೊಳಗೆ ಬಸ್ ನುಗ್ಗಿದಂತೆ ಕನಸು ಬೀಳುವುದು ಸಾಮಾನ್ಯವಾಗಿತ್ತು.

ಮನೆ ಬಿಟ್ಟು ಓದಲು ಗೂಡು ಬಿಟ್ಟ ಹಕ್ಕಿಯಂತೆ ಹಾರಿ ಹೋದ ಮೇಲೆ ಶಿವಮೊಗ್ಗ ಬಸ್ ಸ್ಟಾಂಡಲ್ಲಿ ಮೊದಲ ಬಾರಿಗೆ ತುಂಬಾ ದೂರ ಒಂಟಿಯಾಗಿ ಪ್ರಯಾಣ ಮಾಡಬೇಕಾದಾಗ ಹದಿನಾರು ವರ್ಷವಾಗಿದ್ದರೂ ಎದೆ ನಡುಗಿತ್ತು. ಆದರೂ ಮನೆಗೆ ಹೋಗುವ ಖುಷಿ ಮುಂದೆ ಅದು ಗೌಣವಾಗಿತ್ತು. ಬಸ್ಸಿನಲ್ಲಿ ಹಿಂದಕ್ಕೆ ಅಥವಾ ಮಧ್ಯದಲ್ಲಿ ಕುಳಿತರೆ ಬಸ್ಸಿನ ವಾತಾವರಣದಲ್ಲಿ ಅಂಟಿಕೊಂಡಂತೆ. ಅದಕ್ಕೆಂದೇ ಹೆಚ್ಚಾಗಿ ನಾನು ಮುಂದಿನ ಸೀಟಿನಲ್ಲೇ ಕುಳಿತು ಇಳಿದು ಬಿಡುತ್ತೇನೆ. ಹೊರನೋಟವೇ ಪ್ರಧಾನವಾಗುವುದರಿಂದ ಅಷ್ಟಾಗಿ ಬಸ್ಸಿನ ದೇಹದೊಳಗೆ ಸೇರಿದಂತಾಗುವುದಿಲ್ಲ.

ಹೀಗೆ ಮೊದಲ ಸಲ ಕೂಡ ಫಸ್ಟ್ ಸೀಟಿನಲ್ಲಿ ಡ್ರೈವರ್ ಹಿಂದೆ ನನ್ನ ಸೂಟುಕೇಸಿಟ್ಟು ಗುಬ್ಬಚ್ಚಿಯಂತೆ ಕುಳಿತಿದ್ದೆ. ಯಾವುದೋ ಪರೀಕ್ಷೆ ಮುಗಿಸಿ ಹೊರಟಿದ್ದರಿಂದ ಕಾಡುವ ನಿದ್ದೆ ಬೇರೆ. ಅದರಲ್ಲೂ ಕಿಟಕಿಯ ಸೀಟಲ್ಲದೆ ಮಧ್ಯದ ಸೀಟು ಸಿಕ್ಕಿತ್ತು. ಕಣ್ಣು ಮುಚ್ಚಿದರೆ ಕಮ್ಮರಡಿ ಪಾಸಾಗುವುದೆಂದು ನಾಲ್ಕು ತಾಸಿನ ಊರಿಗೆ ಮೊದಲ ಹತ್ತು ನಿಮಿಷದಿಂದಲೇ ಕಾಯತೊಡಗಿದೆ. ಆದರೂ ಕೂಡ ಏನೋ ಸುಸ್ತು ನಾನು ಕಣ್ಣು ಮುಚ್ಚುವಂತೆ ಮಾಡಿತು.

ಅಂದು ನಾನು ಇದುವರೆಗೆ ಕೇಳಿರದಂತಹ ನಿಶ್ಯಬ್ದ ಆ ಬಸ್ಸಿನೊಳಗೆ. ಒಂದೇ ಸಮನಾಗಿ ಮಂಡಗದ್ದೆಯ ಕಾಡಿನ ಮಧ್ಯೆ ಬಸ್ಸು ಓಡುತ್ತಿತ್ತು. ಹಿಂದಿನ ಸೀಟಿನ ದಪ್ಪ ಹೊಟ್ಟೆಯವನ ನೆಮ್ಮದಿಯ ಗೊರಕೆ ಸದ್ದು ಬಿಟ್ಟರೆ, ಬಸ್ಸಿನ ಮೆಲುವಾದ ಚಕ್ರ ತಿರುಗುವ ಸದ್ದು ಮಾತ್ರ ಕೇಳುತ್ತಿತ್ತು. ಅದೂ ಕೂಡ ಏಕತಾನತೆಯಲ್ಲಿ ಕೂಡಿ , ನಿರಂತರವಾದ ಸಪ್ಪಳವಾಗಿ ನಿಶ್ಯಬ್ದವೇನೋ ಅನ್ನಿಸುವಷ್ಟು ಕಿವಿಗಳಿಗೆ ಹೊಂದಿಕೊಂಡಿತ್ತು. ಅದೆಂಥಾ ಭಯಂಕರ ಕನಸೋ ನನಗೆ ನೆನಪಿಲ್ಲ. ಅದೇ ಕನಸು ಇಂಥಾ ನೀರವ ಮೌನ ಮುರಿದು ಗಟ್ಟಿಯಾಗಿ ನನ್ನ ಕಿರುಚಿಕೊಳ್ಳುವಂತೆ ಮಾಡಿದ್ದು. ಅಂದರೆ ಎಲ್ಲಾ ಸೈಲೆಂಟಾಗಿ ಇರಬೇಕಾದರೆ ನಾನು ನಿದ್ದೆ ಮಾಡಿ, ಕನಸು ಕಂಡು, ಅದರಲ್ಲಿ ಕಿರುಚಿಕೊಂಡು ಬೆಚ್ಚಿ ಎದ್ದಿದ್ದೆ. ಎಷ್ಟು ಜೋರಾಗಿ ಕಿರುಚಿದ್ದೆನೆಂದರೆ ಡ್ರೈವರ್ ಕೂಡ ಒಮ್ಮೆ ಹಿಂದಿರುಗಿ ನೋಡಿದ.

ಜೀವಮಾನದಲ್ಲಿ ಕನಸಲ್ಲಿ ಕನವರಿಸದಿದ್ದ ನಾನು ಅಂದು ತುಂಬಿದ ಬಸ್ಸಿನಲ್ಲಿ, ಪಿನ್ ಡ್ರಾಪ್ ಸೈಲೆನ್ಸಿನಲ್ಲಿ ಕಿರುಚಿದ್ದೆ. ಅಂದಿನ ನಾಚಿಕೆಗೆ ಅಲ್ಲೇ ಬಸ್ ಬ್ಲಾಸ್ಟ್ ಆಗಿ ಜನರೆಲ್ಲಾ ಆ ಕಡೆ ತಿರುಗಬಾರದೇ ಅನಿಸಿತ್ತು. ಹೆಂಗಸರು, ಗಂಡಸರು, ಮಕ್ಕಳು, ಮುದುಕರು ನನ್ನನ್ನೇ ಎವೆಯಿಕ್ಕದೆ ನೋಡುತ್ತಿದ್ದರು. ನನ್ನ ಗಲಾಟೆಗೆ ನಿದ್ದೆಯಿಂದೆದ್ದ ಮಗುವೊಂದು ಅಳಲು ಶುರುವಿಟ್ಟಿತು.

ಸ್ಕೂಲಿನ ತರಹ ಗಲಾಟೆ ಯಾರು ಮಾಡಿದರು ಎಂದಾಗ ನಟಿಸುವ ಜಾಣ್ಮೆಯಂತೆ ನಾನು ಕೂಡ ಏನು ಆಗಿರದಂತೆ ಕಿರುಚಿದ್ದು ಯಾರು ಎಂದು ಹುಡುಕತೊಡಗಿದೆ. ಆದರೆ ಅಲ್ಲಿಯೂ ಕೂಡ ನನ್ನ ಅದೃಷ್ಟ ಕೈ ಕೊಟ್ಟಿತು. ಕಿರುಚಿಕೊಂಡು ಬೆಚ್ಚಿಬಿದ್ದುದರಿಂದ ಕೈಲಿ ಮುದ್ದೆ ಮಾಡಿದ್ದ ಕರ್ಚೀಫ್, ದುಡ್ಡು, ಟಿಕೆಟ್ ಚೆಲ್ಲಾಪಿಲ್ಲಿಯಾಗಿ, ಅನಾಥವಾಗಿ ಬಸ್ಸಿನಲ್ಲಿ ಹಂಚಿ ಹೋಗಿತ್ತು. ಐವತ್ತರ ನೋಟನ್ನು ಕೈಲಿ ಹಿಡಿದುಕೊಂಡಿದ್ದೇ ತಪ್ಪು, ಟಿಕೆಟ್ ಕಳೆದು ಕೊಳ್ಳುವಂತಿರಲಿಲ್ಲ. ಬೇರೆ ದಾರಿ ಇಲ್ಲದೆ ಎದ್ದು ಎಲ್ಲವನ್ನು ಹೆಕ್ಕತೊಡಗಿದೆ. ಅರವತ್ತು ಕಣ್ಣುಗಳ ದೃಷ್ಟಿಯ ಲೈಮ್ ಲೈಟಿನಲ್ಲಿ ನಾನು ಹಿಂಡಿದ ನಿಂಬೆಯಂತಾಗಿದ್ದೆ.

16 thoughts on “ಹೀಗೊಂದು ಬಸ್ಸಿನ ಕಥೆ

  1. ಬಾಲ್ಯದಲ್ಲಿ ಹೀಗೆಯೇ , ಕೆಲವೊಂದು ವಸ್ತುವಿನೊಂದಿಗೆ ಅವಿನಾಭಾವ ಪ್ರೀತಿಯೂ, ಹೆದರಿಕೆಯೂ ಅಕಾರಣವಾಗಿ ಮೂಡಿರುತ್ತದೆ.. ನನ್ನಲ್ಲೂ ಅಂಥಹ ದೊಡ್ಡ ಪಟ್ಟಿಯೇ ಇದೆ .. ಅದೇನೇ ಇರಲಿ .. ನವಿರಾದ ಬರಹ .. ಇಷ್ಟವಾಯ್ತು .. 🙂

    Liked by 1 person

Leave a reply to Suparna Cancel reply