ಒಂದು ಆಕಸ್ಮಿಕ

ಅದೊಂದು ವಾರದ ದಿನ . ಮಂಗಳವಾರ ಅಥವಾ ಬುಧವಾರ ಇದ್ದಿರಬಹುದು. ಇವೆರಡಕ್ಕೆ ಅಷ್ಟು ವ್ಯತ್ಯಾಸವೆ ಇಲ್ಲ ಹೇಗಿದ್ದರೂ.  ಆಫೀಸಿನಲ್ಲಿ ಮೀಟಿಂಗ್ ಮೇಲೆ ಮೀಟಿಂಗ್ ಗಳಾಗಿ ಮಾಡಬೆಕಾದ ಕೆಲಸ ಮಾಡಲು ಸಮಯವೇ ಆಗಿರಲಿಲ್ಲ. ಹೊರಡುವ ಟೈಮಿಗೆ ಕ್ರಿಟಿಕಲ್ ಎಂದು ಎಕ್ಸಟೆಂಡ್ ಮಾಡಬೇಕಾಯಿತು. ಏನೇ ಮಾಡಿದರೂ ಅದಕ್ಕೊಂದು ಕೊನೆಯೇ ಕಾಣದೇ ಬುಕ್ ಮಾಡಿದ್ದ ಆಫೀಸ್ ಟ್ರಾನ್ಸಪೋರ್ಟ ಕೂಡ ಮಿಸ್ಸಾಗಿತ್ತು. ಗಂಟೆ ಹತ್ತಕ್ಕೆ ಸಮೀಪಿಸುತ್ತಿತ್ತು. ಗಂಡ, ಮನೆ, ಮಕ್ಕಳು ಎಂದಾದ ಮೇಲೆ ಅದಕ್ಕಿಂತಲೂ ಹೆಚ್ಚು ಹೊತ್ತು ಆಫೀಸನಲ್ಲೇ ಠಿಕಾಣಿಯಾದರೆ ಮನೆಗೆ ಸೇರಿಸುವ ಸಂಭವ ತೀರ ಕಡಿಮೆ.

ದಿಗ್ಗನೆದ್ದು ಓಡುತ್ತಾ ಮೊಬೈಲ್ ನೋಡಿದರೆ 9 ಮಿಸ್ ಕಾಲ್ ಗಳು hubby ನಂಬರಿಂದ ಕುಣಿಯುತ್ತಿದ್ದವು. ತೀರ ಹಾಲು ಸೀದು ಹೋದ ವಾಸನೆ ಬರಲಾರಂಭಿಸಿತು. ಧೈರ್ಯ ಮಾಡಿ ಕಾಲ್ ಬ್ಯಾಕ್ ಮಾಡಿದರೆ ಎಲ್ಲಿದಿಯಾ ? ಬದುಕಿದಿಯಾ ಎಂಬ ಅರ್ಥದ ಪ್ರಶ್ನೆ.  ಆಫೀಸನಲ್ಲಿ ತುಂಬಾ ಕೆಲಸ ಕ್ಯಾಬ್ ಮಿಸ್ ಆಯ್ತು ಎಂದು ಬಾಂಬ್ ಗೆ ಕಿಡಿ ತಾಕಿಸಿದೆ. ನಿಶ್ಯಬ್ದವಾಗಿ ಫೋನ್ ಕಟ್ ಆಯಿತು. ಕೆಲವೊಮ್ಮೆ ಏನು ಮಾತಿಲ್ಲದೇ ಅತೀ ಕರ್ಕಶ ಸ್ಪೋಟವಾಗುತ್ತದೆ. ಈಗಲೂ ಅದೇ ಆಗಿತ್ತು.

ಮೇಲಿನವರಿಗೆ ಸ್ಟೇಟಸ್ ಕಳಿಸುವಷ್ಟರಲ್ಲಿ ನನ್ನ ಸ್ಟೇಟಸ್ ಮ್ಯಾರೀಡ್ ನಿಂದ ಕಾಂಪ್ಲಿಕೇಟಡ್ ಗೆ ಸ್ವಿಚ್ ಆಗಿತ್ತು. ಹೊರಗೆ ಬಂದರೆ ಹೋಗುವುದಾದರೂ ಎಲ್ಲಿಗೆ. ಮನೆಗೆ ಹೋಗಲು ಈ ರಾತ್ರಿ ಬಸ್ ಹಿಡಿಯುವುದು ಅಸಾಧ್ಯ, ಆಫೀಸ್ ಕ್ಯಾಬ್ ಗೆ ಇನ್ನು ಒಂದು ಗಂಟೆ ಕಾದು ಬುಕ್ ಮಾಡಬೇಕು. ಅಷ್ಟರಲ್ಲಿ ಹನ್ನೊಂದು, ಹನ್ನೆರಡಾಗುತ್ತದೆ. ನೀರವ ಮೌನದಲ್ಲಿ ಎದೆ ಬಡಿತ ಹೆಚ್ಚಾಗಿ ಮನೆ ಸೇರಬೇಕೆಂಬ ತವಕ ಕೂಡ. ಮತ್ತೊಮ್ಮೆ hubby ಗೆ ಫೋನಾಯಿಸಿ ಹೇಗೆ ಬರಲಿ ಗೊತ್ತಾಗುತ್ತಿಲ್ಲ ಎಂದಷ್ಟೇ ಹೇಳಿದೆ.  ಈ ಸಲ ಬರ್ತೀನಿ ಎಂದು ಫೋನ್ ಕಟ್ಟಾಯಿತು.

ಒಳಗಿರಲಾರದೆ ರೋಡಿನ ತುದಿಗೆ ಬಂದು ನಿಂತೆ. ತಪ್ಪು ನನ್ನದೇ, ಆದರೆ ಹೇಗೆ ಎಂದು ಗೊತ್ತಾಗುತ್ತಿರಲಿಲ್ಲ. ತರಕಾರಿ ತರಲು ಕೂಡ ಹೊರ ಹೋಗದವರು ಈಗ ಇಷ್ಟು ದೂರ ಬರಬೇಕಿತ್ತು. ಆ irritation ಅರ್ಥ ಆಗಿ ನನಗಿನ್ನು ಹಿಂಸೆಯಾಗತೊಡಗಿತು. ಅವಲಂಬನೆ ಕೆಲವು ಸಲ ನರಕವಾಗಿ ಬಿಡುತ್ತದೆ. ಕಾಯುವ ಸಮಯ ಕೂಡ ಹೆಚ್ಚಾಗಿ ಬೇಸರ ಕೋಪವಾಗಿ ಕುದಿಯುತ್ತಿತ್ತು. ಅಸಹಾಯಕವಾಗಿ ನನ್ನ ಮೇಲೆ ತಿರುಗಿದ ಕೋಪವನ್ನು ಆಫೀಸನವರಿಗೆ ಮನಸಾರೆ ಶಪಿಸುತ್ತಾ ಹೋಗಿ ಬರುವ ಕಾರನ್ನೆಲ್ಲಾ ಡ್ಯೂಟಿ ಪೋಲಿಸ್ ನಂತೆ ವಾಚ್ ಮಾಡುತ್ತಿದ್ದೆ.

ಕೊನೆಗೂ ಆ ತಿರುವಿನಲ್ಲಿ ಕಾಯುತ್ತಿದ್ದ ಸಮಯ ಬಂದಿತ್ತು. ಮೌನದ ಅಟ್ಟಹಾಸದಲ್ಲೇ ಒಳ
ಕುಳಿತು ಸಾರಿ ಎಂದು ಶುರು ಮಾಡಿದೆ. ಏಕೋ ಒಳಗೆಲ್ಲಾ ನಿರ್ವಾತ ತುಂಬಿಕೊಂಡು ಶಬ್ದದ ಸಂಚಲನವೇ ನಿಂತಿತ್ತು. ಪಾಪುಗೆ ಹುಷಾರಿಲ್ಲ ಎಂದು ಅವರು ಮಾತು ಮುಗಿಸಿದ್ದರು. ಕೇಳಲೂ ಬಹಳಷ್ಟಿದೆ,  ಆದರೆ ಎಲ್ಲೋ ಗಂಟಲು ಕಟ್ಟಿದಂತಾಗಿ ಮೂಕಳಂತೆ ಕುಳಿತೆ. ಕಾರ್ ಓಡುತಿತ್ತು, ನನ್ನ ಕಡೆಗೆ ದೃಷ್ಟಿಯು ಹಾಯಿಸಬಾರದೆಂದು ದಾರಿ ಮೇಲೆ ಅವರ ಕಣ್ಣು ಕೀಲಿಸಿದಂತಿತ್ತು.

ನಂದೇ ತಪ್ಪು ನಂದೇ ತಪ್ಪು ಎಂಬ ಪಾಪಪ್ರಜ್ಞೆಯ ವಿನಃ ಇನ್ನೇನು ನನಗೆ ಕಾಣಿಸುತ್ತಿರಲಿಲ್ಲ. ಇದೇ ಕಾರಿನಲ್ಲಿ ನಾವಿಬ್ಬರೂ ಹತ್ತಿರವಾಗಿದ್ದೆವು. ಮದುವೆಗೆ ಮುಂಚಿನ ಎಷ್ಟೋ ಚಿತ್ತಾರಗಳು ಇಲ್ಲಿ ಕುಳಿತ ಕೂಡಲೇ ಕಚಗುಳಿ ಇಡುತ್ತಿತ್ತು. ಇಲ್ಲೇ ಪಾಪುವನ್ನು ಎತ್ತಿಕೊಂಡು ನಾವಿಬ್ಬರೂ ಸಾವಿರ ಕನಸು ಕಟ್ಟಿದ್ದೆವು. ಕಾರಿರುಳಿನಲ್ಲಿ ವೈಟ್ ಫೀಲ್ಡ್ ದಾಟಿಸುವ ಕಪ್ಪು ರಸ್ತೆಗಳಲ್ಲಿ ಎಲ್ಲೋ ಅವೆಲ್ಲಾ ಕಳೆದು ಹೋದವು. ಒಂದು ಅಡಿಯ ಈಗಿನ ಅಂತರ ಜ್ಯೋತಿರ್ವರ್ಷಗಳಷ್ಟು ದೂರವನ್ನು ನೆನಪಿಸುತ್ತಿತ್ತು.

ಏನು ಮಾಡೋದು?  ಕೆಳಗಂತೂ ಇಳಿದು ಓಡಲಾಗುವುದಿಲ್ಲ. ಸಂಸಾರ ನೌಕೆಯ ಒಂದು ಗಾಲಿಯಾಗಿ ಸುತ್ತಲೇ ಬೇಕು. ಅಯಾಚಿತವಾಗಿ ಕೈ ಸಾಂಗ್ ಪ್ಲೇ ಮಾಡಿತ್ತು. “ಇಷ್ಟು ಕಾಲ ಒಟ್ಟಿಗಿದ್ದೂ ಎಷ್ಟು ಬೆರೆತರೂ” ಈ ಹಾಡು ಇದ್ದರೆ ಚೆನ್ನಾಗಿತ್ತು.  ಮತ್ತಷ್ಟು ಶೋಕ ಸಾಗರದಲ್ಲಿ ಭಾವದಲೆಗಳ ಮೇಲೆ ಮುಳುಗ ಬಹುದಿತ್ತು. ಆದರೆ ಪ್ಲೇ ಆಗಿದ್ದೇ ಬೇರೆ …. ಯೇ ರಾತೇ .. ಯೇ ಮೌಸಮ್.. ನದಿ ಕಾ ಕಿನಾರಾ .. ಯೇ ಚಂಚಲ್ ಹವಾ… ಎಂದು ಮೃದು ಮಧುರ ಕಂಠದಿಂದ ಶುರುವಾಯಿತು.

ಅದೊಂದು ಮಾಂತ್ರಿಕ ಹಾಡು. ಆ ಬೇಸರದ ರಾತ್ರಿಯನ್ನು ಅನುರಾಗದ ಬೆಳದಿಂಗಳಾಗಿ ಬದಲಾಯಿಸಿತು. ತಂಪು ಗಾಳಿ,  ಆ ಮೌನ, ಆ ಇರುಳು,  ಅದರೊಂದಿಗೊಂದು ಅಪೂರ್ವ ಗೀತೆ ಎಲ್ಲಾ ಸೇರಿ ನಮ್ಮ ಗಾಯಕ್ಕೆ ಔಷಧ ಹಚ್ಚಿದವು. ಸುಮ್ಮನೇ ಒಂದು ಅದ್ಭುತ ಪ್ರಕೃತಿಯ ನೈಜತೆಯಲ್ಲಿ ನಮ್ಮಿಬ್ಬರ ನಗುವೊಂದು ಕಡಿಮೆಯೆನಿಸಿ ನಾವಿಬ್ಬರೂ ಎಲ್ಲ ಮರೆತು ಮುಗುಳ್ನಗೆಯೊಂದನ್ನು ಹಂಚಿ ಕೊಂಡಿದ್ದಷ್ಟೆ. ಕಿನ್ನರರ ಕೋಲಿಗೆ ಸಿಕ್ಕು ಸಿಟ್ಟು, ಅಸಹನೆ, ಬೇಸರವೆಲ್ಲಾ ಬರೀ ಪ್ರೀತಿ,ಪ್ರೀತಿ,ಪ್ರೀತಿಯಾಗಿ ಮಾರ್ಪಾಡಾಗಿತ್ತು. ಅವತ್ತು ಆ ಹಾಡು ಪ್ಲೇ ಆಗಿದ್ದು ನಂಗೆ ಅತೀ ಸಂತೋಷ ಕೊಟ್ಟ ಒಂದು ಆಕಸ್ಮಿಕ.

10 thoughts on “ಒಂದು ಆಕಸ್ಮಿಕ

  1. ಸಾಮಾನ್ಯವಾಗಿ ಕೋಪ ಬೇಸರ ಅಸಹನೆ ಸಿಟ್ಟಿನ ಹಿಂದೆಯಿರುವುದು ನೈಜ ಕಾಳಜಿ ಮತ್ತು ಏನಾಯೊತೊ ಎನ್ನುವ ಆತಂಕ. ಅದನ್ನು ನಿವಾರಿಸಲು ಬೇಕಾದ್ದು ಒಂದು ಸಣ್ಣ ಮ್ಯಾಜಿಕ್ ಮೊಮೆಂಟ್ – ‘ಸಾರಿ ‘ ಎನ್ನುವ ಪದದಲ್ಲೊ, ಸನಿವೇಶಕ್ಕೆ ಹೊಂದುವ ಹಾಡಲ್ಲೊ ಅಥವಾ ಅಂತದ್ದೆ ಮತ್ತಾವುದರಲ್ಲೊ…

    ಅದರ ಅರಿವಿರದೆ ಬರಿ ಮೌನವನ್ನು ಮಾತ್ರ ಹಾಸಿ ಹಾಗೆ ಬಿಟ್ಟುಬಿಟ್ಟರೆ ಪರಿಸ್ಥಿತಿ ಬಿಗಾಡಾಯಿಸುವುದೆ ಹೆಚ್ಚು.

    ಆ ಗಳಿಗೆಯ ಸಂವೇದನೆ, ಸ್ಪಂದನಗಳನ್ನು ಬಲು ಸುಂದರವಾಗಿ ಹಿಡಿದಿಟ್ಟ ಕಥನ, ತುಂಬಾ ಹಿಡಿಸಿತು.😊

    Liked by 2 people

  2. ಕೆಲವೊಮ್ಮೆ ಮಾತಿಲ್ಲದೆ ಅತೀ ಕರ್ಕಶ ಸ್ಪೋಟವಾಗುತ್ತದೆ… ಅಂತೆಯೇ ಮೌನದಲ್ಲೇ ಒಲವ ಝರಿಯೂ ದುಮ್ಮಕ್ಕುತ್ತದೆ. ಸಿಂಪಲ್ಲಾಗಿ ಚೆನ್ನಾಗಿದೆ ಬರಹ. ….ಏ ರಾತೇ, ಏ ಮೌಸಮ್ ಇಷ್ಟದ ಹಾಡು..

    Liked by 2 people

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s