ದೀಪಾವಳಿಯ ಶುಭಾಷಯಗಳು

image

ಅವತ್ತು ನಮಗೆ ಬರಿ ಪಟಾಕಿಯದೇ ಯೋಚನೆ. ಹಿಂದಿನ ದಿನವಷ್ಟೇ ಬಸ್ಸಲಿ ಬಂದಿದ್ದನ್ನು ನಾವಿಬ್ಬರೂ ಭಾಗ ಮಾಡಿಕೊಳ್ಳುತ್ತಿದ್ದೆವು. ಒಂದೊಂದೇ ಇದ್ದ ದೊಡ್ಡ ಪಟಾಕಿಗಳನ್ನು ಭಾಗ ಮಾಡೋದು ಹೇಗೆ ಅಂತ ಜಗಳ ನಡೆಯುತ್ತಿತ್ತು. ಯಾವಾಗಲೂ ಪಟಾಕಿಯ ಹೊಸ ಪರಿಮಳದೊಂದಿಗೆ ದೀಪಾವಳಿ ಹಬ್ಬ ಹೊಮ್ಮುತ್ತದೆಯಲ್ಲವೇ?

ನಾಲ್ಕು ದಿನಗಳ ಭರ್ಜರಿ ಹಬ್ಬ , ನೀರು ತುಂಬುವ ಹಬ್ಬದಂದು ಶುರುವಿಟ್ಟಿತು. ಸಂಜೆಯಷ್ಟೊತ್ತಿಗೆ ಬಚ್ಚಲಿನ ಹಂಡೆ,  ಬಾಮಿಯನ್ನೆಲ್ಲಾ ತಿಕ್ಕಿ ತೊಳೆದು ಸಿಂಗರಿಸಿದ್ದೆವು. ಹಂಡೆಯ ಸುತ್ತ ರಂಗೋಲಿ ಬಿಡಿಸಿ, ಹಿಂಡ್ಲಚ್ಚಿ ಕಾಯಿಯ ಮಾಲೆ ಹಾಕಿ ಏನೋ ಹಬ್ಬದ ಕಳೆ ಹಿತ್ತಲಿಗೂ ಬರುವಂತಾಗಿತ್ತು. ಪಟಾಕಿಯನ್ನೆಲ್ಲಾ ಮತ್ತೆ ಮತ್ತೆ ಮುಟ್ಟಿ ನೋಡಿ ಹಾಸಿಗೆಯ ಪಕ್ಕವೇ ಇಟ್ಟುಕೊಂಡು ನಿದ್ದೆಗೆ ಜಾರಿದ್ದೆವು.

ಮಾರನೆಯ ದಿನವೇ ನರಕ ಚತುರ್ದಶಿ ಅಥವಾ ಎರೆದು ಕೊಳ್ಳುವ ಹಬ್ಬ. ಇದು ತೀರ ಮುಂಜಾನೆ ನಾಲ್ಕು ಗಂಟೆಗೆ ಶುರುವಾಗುತ್ತದೆ. ದೇವರ ಮುಂದೆ ಕೂರಿಸಿ ತಲೆಗೆ ಎಣ್ಣೆ ಹಾಕಿ,  ನಂತರ ಮೈತುಂಬಾ ಎಣ್ಣೆ ಬಳಿದುಕೊಂಡು ‘ಅಭ್ಯಂಜನ’ ಕ್ಕೆ ಸಿದ್ದವಾಗ ಬೇಕಿತ್ತು. ಅಜ್ಜಿ ಮೈಗೆ ಎಣ್ಣೆ ಹಚ್ಚುತ್ತಿದ್ದರೆ ಕುಂಭೀಪಾಕ ಶಿಕ್ಷೆಯೇನೋ ಅನ್ನುವಷ್ಟು ಅಳುತ್ತಿದ್ದೆವು. ಹಬ್ಬದ ದಿನದ ಹೊಡೆಯೋದು ಏಕೆ ಎಂದು ಅಜ್ಜಿ ತಡೆದರೂ ಅಮ್ಮನಿಂದ ಒಂದು ಬಿಗಿಸಿಕೊಂಡ ಮೇಲೆಯೇ ದೊಡ್ಡ ಸ್ನಾನ. ವರ್ಷದ ಕೊಳೆಯಲ್ಲ ಕಳೆಯಿತು ಎಂದು ಅಪ್ಪ ಹೇಳುತ್ತಿದ್ದರು. ನಂತರ ಹೊಸ ಬಟ್ಟೆಯ ಗರಿ ಗರಿಯೊಡನೆ ದೀಪಾವಳಿಯ ಮೊದಲ ಪಟಾಕಿ ಸಿಡಿಸುತ್ತಿದ್ದೆವು.  ಆಮೇಲೆ ಎಲ್ಲರ ಹೆಸರು ಕರೆದು ಆ ಎಂದರೆ ‘ಕೆರಕ’ ಎನ್ನುವ ಆಟವಂತೂ ಅವತ್ತಿಗೆ ಮಾತ್ರ ಇನ್ನು ಹೆಚ್ಚು ಖುಷಿ ಕೊಡುತ್ತದೆ.

ಯಾವುದೇ ಹಬ್ಬವಿರಲಿ ಬೆಳಗಿನ ತಿಂಡಿಯಾಗಿ ಉಪ್ಪಿಟ್ಟು, ಅವಲಕ್ಕಿಯೇ ಜಾಸ್ತಿ. ಆದರೆ ದೀಪಾವಳಿಯಲ್ಲಿ ಚೀನಿಕಾಯಿ ಕಡುಬನ್ನೇ ಮಾಡಬೇಕು. ಅಪ್ಪ ಹೇಳುವಂತೆ ತನ್ನ ಸಾವಿನ ಜೊತೆಗೆ ಕೆಟ್ಟದ್ದನ್ನೆಲ್ಲಾ ಎಳೆದುಕೊಂಡು ಹೋದ ನರಕಾಸುರನ ಪಿಂಡ ಅದು. ಅವನ ಪ್ರಸಾದದಂತೆ ನಾವೆಲ್ಲರೂ ತಿನ್ನಲೇ ಬೇಕು. ನಂತರ ಮಧ್ಯಾಹ್ನದ ಹಬ್ಬದೂಟ ಮತ್ತೆ ಪಟಾಕಿಗಳ ಗಲಾಟೆ.

ಮೂರನೆಯ ದಿನವೇ ಅಮಾವಾಸ್ಯೆ. ಲಕ್ಷ್ಮಿ ಪೂಜೆ ಎಂದು ಸಾಗುವ ಆ ದಿನ . ಕೆಲವೊಂದು ಕಡೆ ಅಂಗಡಿ ಪೂಜೆ ಕೂಡ ಅವತ್ತು ಮಾಡುತ್ತಾರೆ. ಆಗಲೇ ಪಟಾಕಿಗಳು ರಸ್ತೆಯಲ್ಲಿ ಹೊತ್ತಿಕೊಂಡು,  ರಾಕೆಟ್ ಯಾರದೋ ಮನೆಯ ಮೇಲೆ ಬಿದ್ದು, ಹತ್ತಿರ ಹೋದಾಗ ಹೋದಾಗ ಹೊತ್ತಿಕೊಳ್ಳುವ ಟುಸ್ ಪಟಾಕಿಗಳ ಹಾವಳಿ ಹೆಚ್ಚಾಗುವುದು.

ಕೊನೆದಿನದ ಬಲಿಪಾಡ್ಯಮಿಯಷ್ಟೊತ್ತಿಗೆ ಪಟಾಕಿಗಳೆಲ್ಲಾ ಮುಗಿದು ಇನ್ನೊಂದಷ್ಟು ತರಲು ಅಂಗಡಿಗೆ ಓಡುತ್ತಿದ್ದೆವು. ಬೆಳಿಗ್ಗೆ ಗೋಪೂಜೆಯೊಂದಿಗೆ ಪ್ರಾರಂಭ, ಭಾಗೀರಥಿಗೆ ಮೈತೊಳೆದು ಅರಿಶಿಣ ಕುಂಕುಮದಿಂದ ಅಲಂಕರಿಸಿ ಗೋಮಾಲೆ ಹಾಕಿ,  ಹುಗ್ಗಿ ನೈವೇದ್ಯ ನೀಡಿ, ಜಾಗಟೆಯೊಂದಿಗೆ ಹೊರಗೆ ಕಳಿಸುತ್ತಿದ್ದೆವು. ತುಳಸೀ ಕಟ್ಟೆಯಲ್ಲಿ ಮಣ್ಣಿನಿಂದ ಮಾಡಿದ ಬಲಿ ಚಕ್ರವರ್ತಿಯನ್ನು ಪ್ರತಿಷ್ಠಾಪಿಸಿ ಬಲೀಂದ್ರ ಪೂಜೆಯಾಗುತ್ತದೆ. ಹೋಳಿಗೆ ನೈವೇದ್ಯದೊಂದಿಗೆ ಹೊಸ್ತಿಲು ಪೂಜೆ, ಆಯುಧ ಪೂಜೆ ಮನೆಯ ಎಲ್ಲಾ ಕಡೆ ಆರತಿ, ಅಗರ ಬತ್ತಿಯ ಘಮದೊಡನೆ ಮುಕ್ತಾಯವಾಗುತ್ತದೆ.

ಮಧ್ಯಾಹ್ನದ ಹಬ್ಬದೂಟವಾದ ಮೇಲೆ ಸಂಜೆಗೆ ದೀಪೋಳಿಗೆ ಕಾರ್ಯಕ್ರಮ ಚೌಡಿ, ರಣ, ನಾಗ, ಬ್ರಹ್ಮ,  ತೋಟದ ಹತ್ತಿರ,  ದೇವಸ್ಥಾನದಲ್ಲಿ, ಮನೆಯ ಹತ್ತಿರ ಒಂದೊಂದು ದೀಪದ ಕೋಲನ್ನಿಟ್ಟು “ದೀಪ್ ದೀಪೋಳಿಗೆ , ಅವರ ಮನೆ ಹೋಳಿಗೆ, ಇವರ ಮನೆ ಹೋಳಿಗೆ ” ಎಂದು ಸಿಕ್ಕವರ ಹತ್ತಿರ ಊರಿನಲ್ಲಿ ಕೂಗುತ್ತಾ ಹೊರಡುವುದು. ಸಂಜೆ ದೀಪದ ಸಾಲನ್ನಿಟ್ಟು ಮನೆಯ ಅಲಂಕರಿಸಿ ಮತ್ತೊಂದು ಪುಟ್ಟ ಪೂಜೆ ಮಾಡಿದರೆ ಕಾರ್ತೀಕ ಮಾಸ ಪೂರ್ತಿ ಹಚ್ಚುವ ದೀಪಗಳಿಗೆ ಪ್ರಾರಂಭದಂತೆ. ರಾತ್ರಿ ಹಬ್ಬದ ಸಡಗರದಲ್ಲಿ ಮಲಗಿದ ಮೇಲೆ ಬಂದು ಹಾಡುವ ಅಂಟಿಗೆ ಪಿಂಟಿಗೆಯವರು. ಎರಡು – ಮೂರು ತಂಡದಲ್ಲಿ ಬಂದು ಪಟಾಕಿ ಹೊಡೆದು ಎಬ್ಬಿಸಿ ಸಾಂಪ್ರದಾಯಿಕ ಹಾಡು ಹಾಡುವ ಈ ಪರಂಪರೆ ದೀಪಾವಳಿಯಲ್ಲಿ ಇನ್ನೊಂದು ವಿಶೇಷ. 

ಹೀಗೆ ಮುಗಿಯುವ ದೀಪಾವಳಿ.  ಮುಗಿಯಿತು ಎಂದು ಅನಿಸುವುದೇ ಇಲ್ಲ. ದಿನ ನಿತ್ಯ ಬೆಳಗುವ ದೀಪ, ದೇವಸ್ಥಾನದ ದೀಪೋತ್ಸವ,ತುಳಸೀ ಪೂಜೆ, ಲಕ್ಷ ದೀಪ ಇವೆಲ್ಲವೂ ದೀಪಾವಳಿಯನ್ನು ತಿಂಗಳುಗಳ ಕಾಲ ನಡೆಸುತ್ತವೆ.

Advertisements

12 thoughts on “ದೀಪಾವಳಿಯ ಶುಭಾಷಯಗಳು

 1. ಸಾಕ್ಷಾತ್ ಹಬ್ಬ ಮಾಡ್ದಂಗಾಯ್ತು. ಮಿಸ್ಸಿಂಗ್ ಅಜ್ಜನ್ಮನೆ ಹಂಡೆ ನೀರು ಸ್ನಾನ 😢

  Liked by 2 people

  1. ಪಟಾಕಿ ಬಿಟ್ರೆ ಹಂಡೆ ನೀರು ಸ್ನಾನನೆ ದೀಪಾವಳಿಯ ದೊಡ್ಡ excitement … ಆದರೆ ಈಗೆಲ್ಲೂ ಆ ಅವಕಾಶನೇ ಇಲ್ಲ

   Liked by 1 person

 2. ಮಲೆನಾಡಲ್ಲಿ ದೀಪಾವಳಿ ಹಬ್ಬ ಇಷ್ಟು ಚೆನ್ನಾಗಿ ಆಚರಿಸ್ತೀರ ಅಂತ ಗೊತ್ತೇ ಇರ್ಲಿಲ್ಲ! Very nice write up Manu 🙂 ನಿನಗೂ ದೀಪಾವಳಿಯ ಶುಭಾಶಯಗಳು 🙂

  Liked by 1 person

  1. ಹು ಮಧು… ದೀಪಾವಳಿಗೆ ತುಂಬಾ ಆಚಾರಗಳಿವೆ ಇಲ್ಲಿ. ಒಂದೊಂಥರ ಕಥೆಗಳಿವೆ … thank u

   Like

 3. ಪರದೇಶದಲಿದ್ದುಕೊಂಡು ಬಿಜಿನೆಸ್ ಟ್ರಿಪ್ ಮಾಡ್ತಾನೇ, ದೀಪಾವಳಿ ಹಬ್ಬ ಆಚರಿಸಿದ ಹಾಗೆ ಆಯ್ತು, ನಿಮ್ಮ ಬರಹದ ಕೃಪೆಯಿಂದ. ದೀಪಾವಳಿ ಶುಭಾಶಯಗಳು 🙂

  Liked by 1 person

 4. ಹಬ್ಬದ ಜೋರು ಸಖತ್ತಾಗಿದೆ. ಹಾಗೆ ಹಬ್ಬದ ನಂತರದ ದಿನದ ಮಾರಾಶಿ ಕಾಯಿ ಒಡೆದದ್ದು ಒಣಗಿಸೊ ಪರದಾಟ, ಯಾರ ಮನೆಗೆ ಹೋದರು ಕಾಯಿ ಹೋಳಿಗೆ ನೆನಪಿಸಿಬಿಟ್ರಿ.

  Liked by 1 person

 5. ೨೦೧೫ ರ ಬರವಣಿಗೆನ ಈಗ ನೋಡ್ತಾ ಇದ್ದೀನಿ,ಯಾಕೊ ಬೆಳೆದು ದೊಡ್ಡವರಾದದ್ದು ತಪ್ಪಾಯ್ತಾ ಅನ್ನಿಸ್ತಿದೆ!! ಹ್ಹ್ ,ದೀಪಾವಳಿ ಇನ್ನು ಬಂದಿಲ್ಲ,ನಾನು ಹಾಗೆ ನಿಮ್ಮ ಗೈರು ಹಾಜರಿ ಗಮನಿಸ್ದೆ ಹಾಗೆ ಕಣ್ಣಾಡಿಸಿದೆ ಈ ಬರವಣಿಗೆ ಸಿಕ್ತು . ಈ ರಿಪ್ಲೈ ನೋಡಿ ನಿಮ್ಮ ಮನಸಿಗೆಂದ್ರು ಬಂದು ಅದು ಬರವಣಿಗೆಯಾಗಿ ಮೂಡಿಬಂದ್ರೆ ನಾನು ಬರೆದದ್ದು ಸಾರ್ಥಕ ಅನ್ಸುತ್ತೆ..

  Liked by 1 person

  1. ನಿಮ್ಮ ಗಮನಕ್ಕೆ ನನ್ನ ನಮನಗಳು… ಧನ್ಯವಾದಗಳು.. ಯಾಕೋ ಬರೆಯಲು , ಹೇಳಲು , ಕೇಳಲು ಏನೂ ಇಲ್ಲವಾಗಿದೆ… ನೋಡಣ ಮತ್ತೆ ಲೇಖನಿ ಮುನಿಸು ತೊರೆದು ಬಳಿ ಬರಬಹುದೇನೋ.

   Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s