ಮತ್ತೆ ‘ಮರಳಿ ಮಣ್ಣಿಗೆ’

image

‘ಮರಳಿ ಮಣ್ಣಿಗೆ’ 415 ಪುಟಗಳ ಒಂದು ಸುಧೀರ್ಘ ಕಾದಂಬರಿ. ಇದನ್ನು ಮುಗಿಸಿದ ತಕ್ಷಣ ಮತ್ತೊಮ್ಮೆ ಶುರು ಮಾಡಬೇಕೆಂದಿನಿಸಿತು. ಅಷ್ಟೊಂದು ಹಚ್ಚಿಕೊಳ್ಳುವ,  ಮೆಚ್ಚಿಕೊಳ್ಳುವ ಬರಹ ಕಾರಂತರದ್ದು. ಮಂಗಳೂರಿನ ಸೊಗಸನ್ನು ಎಳೆ ಎಳೆಯಾಗಿ ಬಿಚ್ಚಿಡುವ ಸಾಲುಗಳು ಉಡುಪಿ,ಮಂಗಳೂರು, ಕುಂದಾಪುರವನ್ನು ಹತ್ತಿರವಾಗಿಸಿ , ಘಟ್ಟದ ಕೆಳಗೆ ಒಂದು ಹತ್ತು ವರ್ಷ ಬದುಕಿ ಬಂದಂತೆನಿಸಿದೆ. 
ಈ ಕಥೆಯಲ್ಲಿ ಇಷ್ಟೊಂದು ಕಾಡುವುದು ಏನು ಎಂದು ಆಶ್ಚರ್ಯವಾಗುತ್ತದೆ. ಇತ್ತೀಚಿಗೆ ಈ ಸಾಲಿನಲ್ಲಿ ಬರುವ ಕಾದಂಬರಿಗಳೆಲ್ಲಾ out dated ಅಥವಾ ಅಪ್ರಸ್ತುತ ಎಂಬ ಭಾವನೆ ಇದೆ. ತೀರ ಕಂಪ್ಯೂಟರ್ ಯುಗದಲ್ಲಿ,  ಸಾಫ್ಟವೇರ್ ಹಾವಳಿಯಲ್ಲಿ,  ಮೊಬೈಲ್ 4G ನೆಟ್ ವರ್ಕ್ ಅಲ್ಲಿ ಯಾರು ಭತ್ತ, ಕೊಯ್ಲು,  ಮಳೆಗಾಲ, ಹಪ್ಪಳ, ಮದುವೆ, ಮಕ್ಕಳು,  ಮೊಮ್ಮಕ್ಕಳು, ಮರಿ ಮಕ್ಕಳು, ಸಂಪ್ರದಾಯ ಎಂದು ಅಪ್ಪನ ಆಲದ ಮರಕ್ಕೆ ಸುತ್ತುತ್ತಾರೆ. ಇದೆಲ್ಲಾ ಈಗ ಇರದಿದ್ದರೂ ಅದನ್ನು ಕುರಿತ ಓದಿನಿಂದಾಗುವ ಉಪಯೋಗವಾದರೂ ಏನು? 9 ಗಂಟೆ ಇಶ್ಯೂ ಎಂದು ತಲೆಬಿಸಿ ಮಾಡಿಕೊಂಡು ಬಂದು, ಸಿಗುವ ಎರಡು ಗಂಟೆ ದೂಡಲು ರಿಮೋಟ್ ಹಿಡಿದು , ವೈ ಫೈ ಕನೆಕ್ಟ್ ಮಾಡುವ ಬದಲು ಯಾರಾದರೂ ಓದುತ್ತಾರ? ಅದರಲ್ಲೂ outdated ಅನಿಸಿದ್ದನ್ನು?

ಆದರೂ ಇಷ್ಟೆಲ್ಲಾ ಆಧುನಿಕ ಅನುಕೂಲತೆಯ ಮಧ್ಯೆಯು ಈ ಕಥೆ ಕಾಡುತ್ತದೆ. ಕಾಲದ ಹಂಗಿಲ್ಲದೇ ವಿಭಿನ್ನವಾಗ,ವಿಶೇಷವಾಗಿ ನಿಲ್ಲುತ್ತದೆ. ಎಷ್ಟೇ ವಿಕಾಸ ಹೊಂದಿ, ಯಾವುದೇ ಗ್ರಹ ತಲುಪಿದರು ಪ್ರತಿ ಮನುಷ್ಯನ ಕೋಶದಲ್ಲಿ ಪೂರ್ವಜರ ಹೆಜ್ಜೆಯಿದೆ, ಮಣ್ಣಿನ ಗುಣವಿದೆ. ಅದು ಎಲ್ಲೇ ಹೋದರೂ ಮರಳಿ ಮಣ್ಣಿಗೆ ಬರುವಂತೆ, ತುಡಿಯುವಂತೆ ಮಾಡುತ್ತದೆ. ವಿಚಿತ್ರ ಜೀವನ ವ್ಯಾಪಾರದ ನಡುವೆ ನಿಂತು ಅದರ ಮೂಲವನ್ನೇ ಕೆದಕಿ ತೋರಿಸುವ ನಾಲ್ಕು ತಲೆಮಾರುಗಳ ಚಿತ್ರವೇ ಈ ಕಾದಂಬರಿ.

ಕೋಡಿಯಲ್ಲಿ ಸಂಸಾರದ ಸಾಗುವಿಕೆಗಾಗಿ ದುಡಿಮೆಯನ್ನೇ ನಂಬಿರುವ ಕೋದಂಡ ರಾಮ ಐತಾಳರ ಮನೆತನ. ಅವರ ಮಗ ರಾಮ ಐತಾಳ,  ಅವರ ಎರಡು ಸಂಸಾರ – ಪಾರೋತಿ ಮತ್ತು ಸತ್ಯಭಾಮ. ಮನೆಗೆ ಮೂಲ ಕಂಬದಂತೆ ನಿಲ್ಲುವ ರಾಮ ಐತಾಳರ ವಿಧವೆ ತಂಗಿ ಸರಸೋತಿ. ಇನ್ನು ಸತ್ಯಭಾಮ – ರಾಮ ಐತಾಳರ ಪುತ್ರರತ್ನ ಲಕ್ಷ್ಮಿ ನಾರಾಯಣ ಐತಾಳ ಅಲಿಯಾಸ್ ಲಚ್ಚ. ಅವನ ಹೆಂಡತಿ ನಾಗವೇಣಿ , ಅವಳ ಮಗ ರಾಮ ಐತಾಳ. ಇವರು ಕಥೆಯ ಮುಖ್ಯ ಭೂಮಿಕೆಯಲ್ಲಿರುತ್ತಾರೆ. ಇನ್ನು ಶೀನಮಯ್ಯ, ಒರಟ ಮಯ್ಯ ಇದೇ ಊರಿನವರಾಗಿ ಇವರ ಏಳು – ಬೀಳು ನೋಡುವವರು. ಇಲ್ಲಿ ಪ್ರತಿ ಪಾತ್ರಗಳು ಜೀವನದ ಒಂದೊಂದು ಮುಖ. ಎಲ್ಲರ ಮನೋಧರ್ಮವು ಸಹಜ ಜೀವನದ ವಿಧ ವಿಧ ತಳಮಳವನ್ನು ಬಿಂಬಿಸುತ್ತದೆ. ಓದಿ ಕೊಂಡು ಹೋದಂತೆಲ್ಲಾ ಜೀವನದ ಪೂರ್ಣ ಚಿತ್ರಣ ದೊರಕುತ್ತದೆ. ಕಾಲದಿಂದ ಕಾಲಕ್ಕಾಗುವ ಬದಲಾವಣೆಗಳು ಅದಕ್ಕೆ ಜನರ ಸ್ಪಂದನ,  ದಿಕ್ಕು ತಪ್ಪುವುದು, ಸಿರಿತನ, ಬಡತನ ಹೀಗೆ ಪ್ರತಿ ಪುಟಗಳು ನೂರಾರು ಪಾಠ ಹೇಳುತ್ತದೆ.

ಇದು ಒಂದು ಅದ್ಭುತ ಕೃತಿ. ಓದಿದ ನಂತರ ಬದುಕಿನ ಅನುಭವಗಳ ಸಾರ ತಿಳಿದುಕೊಂಡತಾಗುತ್ತದೆ. ಇನ್ನೂ ವಿವರಿಸಿದರೆ ಎಲ್ಲಾದರೂ ಕಥೆ ಸ್ವಾರಸ್ಯ ಉಕ್ಕಿ ಬಿಡಬಹುದು. ಅದಕ್ಕೆ ಓದದ್ದಿದ್ದರೆ ಓದಿಬಿಡಿ.

Advertisements

5 thoughts on “ಮತ್ತೆ ‘ಮರಳಿ ಮಣ್ಣಿಗೆ’

 1. ಈಗಿನ ಧಾವಂತದ ಬದುಕಿನಲ್ಲಿ ನಮಗೆ ಯಾವುದಕ್ಕು ಬಿಡುವಿಲ್ಲ ಎನ್ನುವುದು ಕೆಲಸದ ಮಟ್ಟಿಗೆ ಎಷ್ಟು ನಿಜವೊ, ಬದುಕಿನ ಕಲಿಕೆಯ ಮಟ್ಟಿಗೆಯು ಅಷ್ಟೆ ನಿಜ. ಹಿಂದಿನ ನಿಧಾನ ಗತಿಯ ಬದುಕಿನಲ್ಲಿ ಕಲಿಕೆಯು ತನ್ನದೇ ಆದ ಸಹಜ ಗತಿಯಲ್ಲಿ ಆಗುತ್ತಿತ್ತು ಎಲ್ಲರಿಗು ಒದಗುವ ಹಾಗೆ. ಈಗ ಕಲಿತು ಜೀರ್ಣೊಸಿಕೊಂಡು ಅದನ್ನು ಅನುಭವದ ತುಣುಕಾಗಿಸಿಕೊಳ್ಳುವ ಮೊದಲೆ ಸಮಯ ಜಾರಿ, ಹೇಗೊ ಹಾರಿ ನೆಗೆದು ಎಲ್ಲೊ ಹೊರಬಿದ್ದು ಮಾಯವಾಗಿ ಹೋಗಿರುತ್ತದೆ. ಹೀಗೆ ಕಳುವಾದ ಅನುಭವ ಮತ್ತೆ ಬೇಕಾದಾಗ ಹೊಸತಿಂದ ಕಲಿಕೆ ಆರಂಭಿಸುವ ಅನಿವಾರ್ಯ ಹುಟ್ಟಿಸುತ್ತಾ.

  ಅಂತಹ ಕಳುವಾಗುತ್ತಿರುವ ಜೀವನಾನುಭವದ ತುಣುಕುಗಳನ್ನು ಗ್ರಹಿಸುವ ಒಂದು ವಿಧಾನವೆಂದರೆ ಈ ಬಗೆಯ ಪುಸ್ತಕಗಳು. ಕಥೆಯ ಆವರಣದಲ್ಲೆ ಜೀವನದ ಪಕ್ವತೆ, ಪ್ರಬುದ್ದತೆಗಳ ಸಾರವನ್ನು ಒಗ್ಗೂಡಿಸಿ ನಮ್ಮರಿವಿಗೆ ನಿಲುಕದಂತೆ ನಮಗುಣಿಸುವುದು ಈ ರೀತಿಯ ಪುಸ್ತಕಗಳ ವೈಶಿಷ್ಠ್ಯ. ಗೊತ್ತು ಗುರಿಯಿಲ್ಲದೆ ಓಡತೊಡಗುವ ಆಧುನಿಕರು ಒಂದು ಭ್ರಮನಿರಸನ ಹಂತ ತಲುಪಿ ಮತ್ತೆ ಮೂಲ ಬೇರು ಕೊಂಡಿಗಳನ್ನು ತಡಕುವಾಗಲೂ ಅವರನ್ನು ಅತೀ ಕ್ಷಿಪ್ರ ಯಾನದಲ್ಲಿ ಅದರತ್ತ ಒಯ್ಯುವುದೂ ಈ ರೀತಿಯ ಪುಸ್ತಕಗಳೆ. ಹೀಗಾಗಿ ಇದು ಸದಾ ಪ್ರಸ್ತುತವೆನ್ನುವುದರಲ್ಲಿ ಎರಡು ಮಾತಿಲ್ಲವಾದರು ಅದು ಆಗುವ ಸಮಯ ವ್ಯಕ್ತಿಗತವಾಗಿ ಬೇರೆ ಬೇರೆಯಿರುತ್ತದೆ ಎನ್ನುವುದು ವಾಸ್ತವ ಸಂಗತಿ.

  ಕಾರಂತರ ಅಂತಹ ಒಂದು ಅದ್ಭುತ ಕೃತಿಯನ್ನು ಪರಿಚಯಿಸಿ ಮತ್ತೆ ಮಣ್ಣಿಗೆ, ಬೇರಿಗೆ ತುಡಿಯುವ ತಪನೆಗೆ ಚಾಲನೆ ಕೊಟ್ಟಿದ್ದೀರ ನಿಮ್ಮ ಬರಹದ ಮೂಲಕ. ಕತೆಯ ಹಂದರ ಬಿಚ್ಚದೆ, ಹೂರಣ ತೆರೆದಿಡದೆ ಕಥೆಯಲ್ಲಿ ಏನು ನಿರೀಕ್ಷಿಸಬಹುದೆನ್ನುವುದನ್ನು ಸಂಕ್ಷಿಪ್ತವಾಗಿ ಕಟ್ಟಿಕೊಟ್ಟಿದ್ದೀರ, ಪುಸ್ತಕ ಓದಲು ಪ್ರೇರೇಪಿಸುವ ಹಾಗೆ. ಧನ್ಯವಾದಗಳು .

  Liked by 1 person

  1. ಪುಸ್ತಕ ಓದಬೇಕೋ ಬೇಡವೋ.. ಅಥವಾ ಓದಿದರೂ ಪ್ರಯೋಜನ ಏನು ಎನ್ನುವ ಪ್ರಶ್ನೆಗೆ ನಿಮ್ಮ ಪ್ರತಿಕ್ರಿಯೆಯಲ್ಲಿ ಉತ್ತರ ಇದೆ. ಇದು ಲೇಖನವನ್ನು ಪೂರ್ಣಗೊಳಿಸುತ್ತದೆ . ಧನ್ಯವಾದಗಳು

   Liked by 1 person

 2. ಕಾರ೦ತರ ಪುಸ್ತಕಗಳು ಕೆಲವು ಓದಿದ್ದೀನಿ. ಇದನ್ನು ಇನ್ನು ಓದಬೇಕಷ್ಟೆ. ನೀವು ಹೇಳಿದ೦ತೆ ಮರಳೆ ಮಣ್ಣಿಗೆ. ಎಷ್ಟೇ ದೂರ ಬ೦ದರೂ ಹಳೆಯ ಹೆಜ್ಜೆಗಳನ್ನು ಮೆಲುಕು ಹಾಕಲೇಬೇಕು.

  Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s