ಭ – ವಿಷ್ಯ

ಕನ್ನಡಿ ಮತ್ತೊಮ್ಮೆ ನೋಡುವಾಗ “ನೆರಿಗೆ ತೀಡಿದಷ್ಟು ಸುಕ್ಕು ಹಟ ಮಾಡುವ ಕೂದಲು” ಈ ಸಾಲು ನೆನಪಾಯಿತವಳಿಗೆ, ನಗುತ್ತಾ ಮೊಬೈಲಿನಲ್ಲಿ ಟೈಮ್ ನೋಡಿ ಕಾಲೇಜು ಬಸ್ಸು ಹಿಡಿಯಲು ಹೆಜ್ಜೆ ಹಾಕಿದಳು. ಬೆಳಗಿನ ಮುಂಜಾವಿನಲ್ಲಿ ಮುಸಕನ್ನು ಕಲಕುತ್ತಾ ಬರುವ ಆ ಹಳದಿ ಬಸ್ ಅವಳಿಗೆ ಏನೋ ಇಷ್ಟ. ಹೀಲ್ಸ್ ಹಾಕಿದ ಪಾದಗಳನ್ನು ಮೆತ್ತಗೆ ನಡೆಸಿ ಕೂತವಳಿಗೆ ಹೊಸ ದಿನದ ಸುಪ್ರಭಾತ ಕಿವಿಯಲ್ಲಿ ಕೇಳುತ್ತಿತ್ತು.

ಗಡಿಬಿಡಿಯಿಂದ ಕೆಲಸಕ್ಕೆ ಜಾರುತ್ತಿದ್ದ, ದಿನವೂ ಒಂದೇ ತರವಿರುವ ಊರು ಕಣ್ಣ ಮುಂದಿನ ಕಿಟಕಿಯಲ್ಲಿ ಓಡುತ್ತಿತ್ತು. ಕುತೂಹಲದಿಂದ ನೋಡುತ್ತಿದ್ದ ಅವಳಿಗೆ ಆ ಚಿತ್ರ ಒಂದು ಎಕ್ಸಾಮ್ ಪೇಪರ್ ನಂತೆ ಗೋಚರಿಸುತ್ತಿತ್ತು. ಇನ್ನೊಂದು ವರ್ಷ ಮುಗಿದರೆ ಈ ಓದು ಎಂಬ ಕಂಫರ್ಟ್ ಝೋನಿಂದ ಆ ಸಾಧನ ಕೇರಿಗೆ ಇಳಿಯಲು ಪ್ರಶ್ನೆಗಳು ಕಾಡುತ್ತಿದ್ದವು. ಏನಾದರೂ ಸಾಧಿಸಬೇಕೆಂಬ ಹಂಬಲ ಎದೆಯಲ್ಲಿ ದೀಪ ಹಚ್ಚಿಟ್ಟಿತ್ತು. ಹೈಸ್ಕೂಲಿನ ಸಮಾಜ ಮೇಷ್ಟರು ಹೇಳುವಂತೆ IAS, ರಾಜಕಾರಣ ಎಲ್ಲಾ ಕಣ್ಣ ಮುಂದೆ ಬಂದು ನಿಲ್ಲುತ್ತಿತ್ತು. ಮುಂದಿನ ಪ್ರಜೆಗಳಾದ ಮಕ್ಕಳ ಮೇಲೆ ನಂಬಿಕೆ ಇಟ್ಟು ಮದುವೆಯಾಗಿ ಬಿಡೋಣವೇ ಅನ್ನಿಸುತ್ತಿತ್ತು. ನನ್ನ ಪಾಡಿಗೆ ಸಾಫ್ಟವೇರ್ ಎಂಬ ಬುರ್ಖಾ ಧರಿಸಿ ದುಡ್ಡಿಗಾಗಿ ದುಡಿಯಲೇ ಅಂದುಕೊಳ್ಳುತ್ತಿದ್ದಳು. ಏನು ಮಾಡಿದರೆ ತಾನು ಹುಟ್ಟಿದ ನಾಡಿಗೆ ಸ್ವಲ್ಪವಾದರೂ ಉಪಯೋಗವಾಗುತ್ತದೆ ಎಂದೂ ಕೂಡ ಮನಸು ಒಮ್ಮೊಮ್ಮೆ ಯೋಚಿಸುತ್ತಿತ್ತು.

ಬಂದು ಮರೆಯಾಗುವ ನೂರು ಪ್ರಶ್ನಾರ್ಥಕಗಳು ಪೂರ್ಣವಿರಾಮವಾಗುವಂತೆ ಬದಲಿಸಿದ್ದು ಚಿರಪರಿಚಿತ ಕಾಲೇಜು ಕಟ್ಟಡ. ಸುಮ್ಮನೆ ಇಳಿದು ನಾಜೂಕಾಗಿ ಕ್ಲಾಸಿನ ಗದ್ದಲದಲ್ಲಿ ಮುಳುಗಿದಾಗ ಶುರುವಾಯಿತು ಹಿಂದಿನ ದಿನದ ಪಾಠ.

ಮೌನವೇ ದೊಡ್ಡ ಕರ್ಕಶ ಶಬ್ದವಾಗಿ , ಉಸಿರಾಟ ಬಿಗಿಯಾಗಲು ಕಣ್ಣೆವೆಗಳನ್ನು ಚೂರು ಕದಲಿಸಿದಳು. ಗೋಡೆಗಳಿಗೆ ಎಡೆಬಿಡದೆ ಮಾತು ಕಲಿಸುತ್ತಿರುವ ಲೆಕ್ಚರರ್ ಕಾಣಿಸಿದರು. ಸ್ವಲ್ಪ ಕಿವಿ ಕೊಟ್ಟು ಆಲಿಸಲು, ಪಠ್ಯಪುಸ್ತಕ ಓದುತ್ತಿರುವುದು ಅರ್ಥವಾಯಿತು. ಅದಕ್ಕಿಂತ ಹೆಚ್ಚಿನದಾದ ಏನೂ ಅರ್ಥವಾಗದೆ ನಾಲ್ಕು ಗೋಡೆಗಳ ಮಧ್ಯೆ ಚಲನೆಯಲ್ಲಿದ್ದ ಒಂದು ವಸ್ತುವಿನ ಕಡೆ ಕಣ್ಣು ಹಾಯಿಸಿದಳು. ಅದು ಪಕ್ಕದ ಸಾಲಿನಲ್ಲಿ ಕುಳಿತ ಹುಡುಗ ತಿರುಗಿಸುತ್ತಿದ್ದ ಪೆನ್ನು!  ಅವನು ಕುಳಿತ ಶೈಲಿ ಇನ್ನೂ ಆಕರ್ಷಕ ಅನಿಸಿತು. ಏಕಾರಾಗದಲ್ಲಿ ಹರಿಯುತ್ತಿದ್ದ ಪಂಡಿತರ ಪಾಠ ಕಿವಿಗೆ ತಲುಪದಾಯಿತು.

ಕ್ರಿಯೆಗೆ ಪ್ರತಿಕ್ರಿಯೆಯಂತೆ ಆತ ಅವಳಿಗೆ ಕಣ್ಣು ಕೂಡಿಸಿದ. ಜಗತ್ತು ಮರೆಯಲು ಈ ನೋಟ ಸಾಕು ಅದರಲ್ಲೂ ಅಪರಿಚಿತರದಾದರೆ ಇನ್ನೂ ಸುಲಭ. ಪ್ರೀತಿಯೇ ಪ್ರವಹಿಸಿತು ಎಂದು ಹೇಳಲಾಗುವುದಿಲ್ಲ ಆದರೆ ದಿನದ ಕಾಲಹರಣಕ್ಕೆ ಒಂದು ದಾರಿಯಾಯಿತು. ಈಗೆಲ್ಲಾ ಬಸ್ಸಲಿ ಭವಿಷ್ಯದ ಯೋಚನೆ ಕಾಡದೆ ಅವನ ಮುಗಳ್ನಗೆಯೊಂದೇ ಮನದುಂಬಿ ಮೇಸೇಜು ಕುಟ್ಟುತ್ತಾ ಕುಳಿತು ಬಿಡುತ್ತಾಳೆ.

2 thoughts on “ಭ – ವಿಷ್ಯ

  1. ಪ್ರಾಯದ ವಯಸಿನ ಕನಸು, ಆಸೆ, ಆಕಾಂಕ್ಷೆ ತಳಮಳ, ಸಂದಿಗ್ದತೆ, ಗೊಂದಲ ಇತ್ಯಾದಿಗಳೆಲ್ಲದರ ಕಲಸು ಮೇಲೋಗರ ಪ್ರತಿ ಹೆಜ್ಜೆಯಲ್ಲು ಪ್ರಭಾವ ಬೀರುವುದು ಸಹಜ ಗುಣಧರ್ಮ. ಯಾವುದೊ ಗಹನ ಪ್ರಶ್ನೆಗಳ ಚಕ್ರವ್ಯೂಹದೊಳಹೊಕ್ಕು ಮತ್ತಾವುದೊ ನೇರ ಸಂಬಂಧಿಸಿದಂತೆ ಕಾಣದ ಉತ್ತರ ಹುಡುಕಿ ಸಂಭ್ರಮಿಸುವುದು ಒಂದು ಕಡೆಯಾದರೆ, ಆ ಸಂಘಟನೆಗಳ ಕ್ಷಿಪ್ರ ವೇಗ ಒಂದು ರೀತಿಯಲ್ಲಿ ಪ್ರಾಯದ ಸಂಧಿಕಾಲದ ಚಂಚಲತೆಯ ಕುರುಹೂ ಆಗುತ್ತದೆ. ಅದೆಲ್ಲ ಭಾವೋನ್ಮೇಶಗಳನ್ನ ಎಂದಿನಂತೆ ಕೆಲವೆ ಸಾಲುಗಳಲ್ಲಿ ಹಿಡಿದಿಟ್ಟ ಬಗೆ ಇಷ್ಟವಾಯ್ತು. ಸಮಸ್ಯೆಗೆ ಉತ್ತರ ಸರಿಯೊ ತಪ್ಪೊ ಎನ್ನುವುದಕ್ಕಿಂತ ಏನೊ ಒಂದು ರೀತಿಯಲ್ಲಿ ಪರಿಹಾರ ಕಂಡುಕೊಳ್ಳುವ ರೀತಿ ಪ್ರಾಯದ ಯುವ ಮನದ ನೈಜ ಚಿತ್ರವೆನಿಸುತ್ತದೆ.

    Liked by 2 people

  2. ಸಮಸ್ಯೆಗೆ ಪರಿಹಾರ ಎನ್ನುವುದಕ್ಕಿಂತ ಬದುಕಿನ ಸಂಧಿಕಾಲದಲ್ಲಿ ಪ್ರಭಾವ ಬೀರುವ ಬೇರೆ ಬೇರೆ ವಿಚಾರಗಳ ಒಂದು ಸಂದಿಗ್ಧತೆಯನ್ನು ಇಲ್ಲಿ ಕಥೆಗೆ ಇಳಿಸಲು ಪ್ರಯತ್ನಿಸಿರುವೆ. ಸಹಜ ಮನೋಧರ್ಮವಾಗಿ ಎಲ್ಲರಿಗೂ ಬದುಕಿನ ಬಗೆಗೆ ಒಂದು ಕಲ್ಪನೆಯಿಂದ, ಗುರಿಯೋ ಇದ್ದೇ ಇರುತ್ತದೆ. ಆದರೆ ಅದು ಪರಿಸರದ ( ಇಲ್ಲಿ ಮುಖ್ಯವಾಗಿ ಕಾಲೇಜು, ಕ್ಲಾಸು, ಶಿಕ್ಷಕರು) ವಿವಿಧ ಆಯಾಮಗಳಿಂದ ವಿಚಲಿತವಾಗುತ್ತದೆ . ಅದನ್ನೇ ಒಂದೇ ದೃಷ್ಟಿಯಿಂದ ಚಿತ್ರಿಸಲು ಪ್ರಯತ್ನಿಸಿದೆ. ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s