ಎಲ್ಲೋ ಸಿಕ್ಕಿದ ಪತ್ರ… !

ಪ್ರಿಯ ಓದುಗ,

ನಾನು ಹುಟ್ಟಿದ್ದು 1974 ರಲ್ಲಿ ಅಂತೆ. ಆಗಿನದ್ದೇನು ಹೆಚ್ಚಿನ ನೆನಪಿಲ್ಲ. ನೆನಪಿನಲ್ಲಿರುವುದೆಂದರೆ ಒಂದು ಬಣ್ಣದ ತೊಟ್ಟಿಲು, ನನ್ನನ್ನು ಎತ್ತಿ ಇಡುವಾಗ ಕೇಳುತ್ತಿದ್ದ ಬಳೆಗಳ ಸದ್ದು, ಬಂದು ಹೋಗುವರೆಲ್ಲರ ಕಾಲುಗಳು. ಆಗ ನಾನು ಎಲ್ಲವನ್ನು ಬರೀ ನೋಡುತ್ತಿದ್ದೆ, ಕೆಲವೊಮ್ಮೆ ಕೇಳುತ್ತಿದ್ದೆ. 1983 ಜನವರಿ 1 ನೇ ತಾರೀಖು ಎಲ್ಲರೂ ಏನೋ ಸಂಭ್ರಮದಲ್ಲಿ ಇರಬೇಕಾದರೆ ನನಗೆ ಸ್ವಲ್ಪ ಸ್ವಲ್ಪವಾಗಿ ಈ ಜಗತ್ತಿನ ಅರಿವಾಗಿ ತೊಡಗಿತು. ಕಾಲ ವರುಷಗಳ ಲೆಕ್ಕದಲ್ಲಿ ಕಳೆಯುತ್ತಿದೆ. ಆಗಲೇ ಸಾಕಷ್ಟು ದಾರಿ ಕ್ರಮಿಸಿಬಿಟ್ಟಿದೆ. ನಾನೆಲ್ಲೋ ಮಧ್ಯದಲ್ಲಿ ಬಂದು ಸೇರಿ ಕೊಂಡಿದ್ದೇನೆ. ಇಂದು ಮತ್ತೊಂದು ಹೊಸ ವರುಷದ ಮೊದಲ ದಿನ. ಹೀಗೆ ಕೆಲವು ವಿಚಾರಗಳ ಜ್ಞಾನೋದಯವಾಯಿತು.

ಆದರೆ ನನಗೆ ನಿಂತ ನೆಲವು ಕೂಡ ಆಶ್ಚರ್ಯ ಅನಿಸುತ್ತಿತ್ತು. ಈ ಗಟ್ಟಿ ವಸ್ತು ಯಾವುದೆಂದು ಮುಟ್ಟಿ ಮುಟ್ಟಿ ನೋಡುತ್ತಿದ್ದೆ. ಈ ಅಪರಿಚಿತ ಪರಿಸರದಲ್ಲಿ ನನಗೆ ನನ್ನ ಅಪ್ಪ ಅಮ್ಮನ ಜೊತೆಯಿತ್ತು. ಹೇಗೋ ಈ ಬಿಗಿಯಾದ ಎಳೆಯಲ್ಲಿ ಸಿಕ್ಕಿ ಕೊಂಡೆನೆನಿಸಿತು. ನಾನು ಎಲ್ಲಿಂದಲೋ ಬಂದೆ ಈ ಜಗತ್ತಿಗೆ ಎಂದು ಯಾವಾಗಲೂ ಭಾಸವಾಗುತ್ತಿತ್ತು. ಆದರೆ ನನ್ನ ಮೂಲ, ದಿನ ಕಳೆದಂತೆ ಮಾಸತೊಡಗಿತು. ನೆನಸಿಕೊಳ್ಳಲು ಯತ್ನಿಸಿದಾಗ ಭ್ರಮೆ , ಕಲ್ಪನೆ ಸೇರಿ ನಿಜವಾದ ಮೂಲ ತಪ್ಪಿಯೇ ಹೋಗುತ್ತಿತ್ತು. ಕೊನೆಗೆ ಒಂದು ದಿನ ನಾನು ನನ್ನ ಭೂತ ಕಾಲ ನೆನಪಿಸಿಕೊಳ್ಳುವುದನ್ನು ನಿಲ್ಲಿಸಿಬಿಟ್ಟೆ. ಅಲ್ಲಿಂದ ಮನಸು ಸ್ವಲ್ಪ ಶಾಂತವಾಯಿತು ಆದರೆ ನನ್ನೊಳಗೇ ಒಂದು ನಿಗೂಢತೆಯನ್ನು ನನಗೆ ಸಿಗದಂತೆ ಬಚ್ಚಿಟ್ಟ ಹಾಗಾಯಿತು.

ಇದಾಗಿ ಸ್ವಲ್ಪ ವರುಷಗಳಲ್ಲಿ ಸುತ್ತ ಮುತ್ತಲಿನ ಬಗೆಗೆ ಯೋಚಿಸ ತೊಡಗಿದೆ. ಮೊದಲಿಗೆ ಇವರೆಲ್ಲಾ ಏಕೆ ನನ್ನನ್ನು ನೋಡಿಕೊಳ್ಳುತ್ತಿದ್ದಾರೆ ಎಂದು ಪ್ರಶ್ನೆ ಮೂಡುತಿತ್ತು. ಏನೋ ಆಗಬೇಕಾಗಿದೆ ಯಾರೋ ಮುನ್ನೆಡೆಸುತ್ತಿದ್ದಾರೆ ಎಂದು ನಂಬಿಕೊಂಡೆ, ಬೇರಲ್ಲೂ ಹೋಗಲು ಆಯ್ಕೆಯೂ ಇರಲಿಲ್ಲ. ನಂತರ ಸಾವಿರ ಸಾವಿರ ಮುಖಗಳು ಕಾಣ ತೊಡಗಿದವು. ಅಚ್ಚರಿಯೇನಂದರೆ ಎಲ್ಲಾ ಮುಖದಲ್ಲೂ ಕಣ್ಣು, ಕಿವಿ, ಬಾಯಿಯೇ ಇದ್ದರೂ ಎಲ್ಲವು ವಿಭಿನ್ನವಾಗಿದ್ದವು.

ಎಲ್ಲರೂ ನನ್ನ ಹಾಗೆ ಇಲ್ಲಿ ಗೊತ್ತು ಗುರಿ ಇಲ್ಲದೆ ಬಂದಿದ್ದಾರೆ ಅನಿಸಿತು. ಆದರೆ ಯಾರ ಒಳಗೂ ಅರ್ಥವಾಗುತ್ತಿರಲಿಲ್ಲ. ಎಲ್ಲರೂ ನನ್ನ ಕ್ರಿಯೆಗೆ ಸ್ಪಂದಿಸುವ ಪ್ರತಿಕ್ರಿಯೆಯಾಗಿದ್ದರಷ್ಟೆ . ನನ್ನ ಪ್ರಪಂಚದಲ್ಲಿ ನಟಿಸಲೆಂದು ರೂಪುಗೊಂಡ ಪಾತ್ರಗಳು ಎಂದೆನಿಸಿತು. ಅದಕ್ಕೆ ಒಮ್ಮೆ ತೀರ್ಮಾನಿಸಿ ಬಿಟ್ಟೆ ಎಲ್ಲರೂ ಮಿಥ್ಯ, ಯಾವುದೋ ಸತ್ಯದಂತೆ ಕಾಣುವ ಬಿಂಬವೆಂದು.

ಅಷ್ಟರಲ್ಲೇ ಈ ಹುಡುಕಾಟಕ್ಕೆ ಬಲವಾದ ಒಂದು ದಾರಿ ಸಿಕ್ಕಿತು. ಅದೇ ಎಲ್ಲರೂ ಕೈ ಮುಗಿಯುತಿದ್ದ ದೇವರು. ಅಲ್ಲಿಂದ ಎಲ್ಲಾ ಪ್ರಶ್ನೆಗಳಿಗೂ ಉತ್ತರ ದೇವರಲ್ಲೇ ಹುಡುಕಲು ಶುರು ಮಾಡಿದೆ. ಆದರೆ ಈಗ ಉಲ್ಲೇಖಿಸಬೇಕಾದ ಬೆಳವಣಿಗೆ ಏನಾಯಿತೆಂದರೆ,  ಅಕ್ಕ ಪಕ್ಕದಲ್ಲಿದ್ದ ಜನರು ಅಳಲು,ನಗಲು,ಕೋಪಿಸಿಕೊಳ್ಳಲು, ಉದ್ವೇಗ ಪಡಲು ಅಭ್ಯಾಸ ಮಾಡಿಕೊಂಡಿದ್ದರು. ನನಗೆ ಮನಸ್ಸಿನಲ್ಲಿ ಭಾವನೆಗಳೇ ಬರುತ್ತಿರಲಿಲ್ಲ. ಆದರೆ ಒಮ್ಮೆ ಅವರು ನಕ್ಕಾಗ ನಾನು ನಕ್ಕೆ.  ಆಗ ನನಗೆ ಬದುಕುವುದು ಸರಾಗ ಎನಿಸುವಂತ ಅನುಭವವಾಯಿತು. ಅಲ್ಲಿಂದ ನಾನು ಈ ಸುಲಭ ದಾರಿಗಿಳಿದೆ. ಎಲ್ಲಾ ಭಾವನೆಗಳನ್ನು ನಕಲು ಮಾಡ ತೊಡಗಿದೆ. ನಾನು ಕೂಡ ಉತ್ತಮ ಪ್ರತಿ ಸ್ಪಂದನೆ ನೀಡುವ ಪ್ರತಿಕ್ರಿಯೆಯಾಗಿ ಬೆಳೆಯ ತೊಡಗಿದೆ. ಈ ಅಂಶ ನನ್ನನ್ನು ಸಮಾಜದೊಳಗೆ ಸೇರಿಸಿತು. ನನ್ನ ಭೂತ ಕಾಲವನ್ನು ಮರೆತ ಹಾಗೆ ನಾನು ವರ್ತಮಾನವನ್ನು ಮರೆತು ಎಲ್ಲರಂತೆ ಬದುಕಲು ಅನುಮೋದಿಸಿ ತೊಡಗಿದೆ.

ಆದರೆ ಅಂತರ್ಗತವಾಗಿ ನನ್ನ ಹುಡುಕಾಟ ಇನ್ನು ಮುಂದುವರಿದಿತ್ತು. ಆಗ ನಾನು ಎಲ್ಲರ ಮಾತಿನಲ್ಲಿ ಈ ಸೃಷ್ಟಿಯ ಬಗೆಗೆ ಏನಾದರೂ ಮಾಹಿತಿ ಇರಬಹುದೆಂದು ಹುಡುಕ ತೊಡಗಿದೆ. ಆದರೆ ಆ ಬಗ್ಗೆ ಏನೂ ಮಾತನಾಡುತ್ತಿರಲಿಲ್ಲ,  ಅದೊಂದು ಸದಾ ಇದ್ದ ಸಾಮಾನ್ಯ ಜ್ಞಾನದಂತಿತ್ತು. ನನಗೆ ಆ ಜ್ಞಾನ ಇರದಿರಬಹುದು ಎಂದು ಎಂದೋ ಬರೆದಿಟ್ಟ ಪುಸ್ತಕಗಳನ್ನು ಓದಲು ಪ್ರಾರಂಭಿಸಿದೆ. ಆದರೆ ಪುನಃ ಅದು ಅಗಾಧವಾದ ವಿಚಾರಗಳನ್ನು ತೆರೆದಿಟ್ಟಿತು ಇದರಲ್ಲಿ ಯಾವುದು ಬೇಕು? ಯಾವುದು ಸತ್ಯ?  ಎಂದು ಇನ್ನಷ್ಟು ಗೋಜಲಾಯಿತು. ದೇವರು ಎಂದು ನಂಬಿ ಬಹಳಷ್ಟು ಪ್ರಶ್ನೆಗಳನ್ನೇ ಮನಸಿನಿಂದ ತೆಗೆದು ಹಾಕಿದೆ.

ಇಷ್ಟೆಲ್ಲಾ ಆಗಬೇಕಾದರೆ ಹುಡುಕಾಟ ಮಂಕಾಗಿ ತೊಡಗಿತು. ನಾನು ಕೂಡ ಎಲ್ಲರಂತೆ ಬಾಳಿ ಬದುಕ ಬೇಕೆನಿಸಿತು. ಅನಿಶ್ಚಿತ ಬದುಕು ಎಂದು ಸಂಸಾರ ಮಾಡಿಕೊಂಡು ಗಟ್ಟಿಯಾಗಿ ಕುಳಿತು ಕೊಂಡೆ. ಅಪ್ಪ ಅಮ್ಮ ಹೆಂಡತಿ ಮಗು ಎಂದು ಅಂಟಿಕೊಂಡು ಬದುಕನ್ನು ಇನ್ನಷ್ಟು ಸ್ಪಷ್ಟ ಮಾಡಿಕೊಳ್ಳಲು ಯತ್ನಿಸಿದೆ. ಕೆಲವೊಮ್ಮೆ ಸಂಸಾರ,ಸಮಾಜವೇ ಸತ್ಯ ನನ್ನ ಹುಡುಕಾಟ ಮೂರ್ತವಲ್ಲದ ಮರೀಚಿಕೆ ಅನಿಸಿತು. ನನ್ನ ಜೀವನದ ಅಂತಿಮಕಾಲ ಸನ್ನಿಹಿತವಾಗಿದೆ. ಈಗಲೂ ಕೂಡ ಪರಲೋಕದ ಬಗೆಗೆ ನನ್ನ ಕುತೂಹಲ ಜೀವಂತವಾಗಿದೆ. ಮತ್ತೆ ಇಲ್ಲಿಗೆ ಬಂದಾಗ ನನ್ನ ಜೀವನ ಹೀಗೆಯೇ ಪುನಾರಾವರ್ತನೆಯಾಗಬಾರದೆಂದು ಈ ಜ್ಞಾನವನ್ನು ಇಟ್ಟುಕೊಂಡು ಸಾಯಬೇಕಾಗಿದೆ. ಆದರೆ ಹೇಗೆ? ಏನನ್ನು ಸಾಯುವಾಗ ತೆಗೆದುಕೊಂಡು ಹೋಗಲಾಗುವುದಿಲ್ಲ.  ಅದಕ್ಕೆಂದೇ ಈ ಪತ್ರದಲ್ಲಿ ಬರೆದಿಟ್ಟಿರುವೆ. ಇದು ಯಾರಿಗೇ ಸಿಕ್ಕರೂ ಇದನ್ನು ನನಗೆ ತಲುಪಿಸುವ ಪ್ರಯತ್ನವನ್ನು ದಯವಿಟ್ಟು ಮಾಡಿ. ನಾನು ಎಲ್ಲಾದರೂ ಎಲ್ಲರಂತೆ ಮತ್ತೆ ಹುಟ್ಟಿರುತ್ತೇನೆ.

Advertisements

3 thoughts on “ಎಲ್ಲೋ ಸಿಕ್ಕಿದ ಪತ್ರ… !

 1. ಪತ್ರವೊಂದು ತನ್ನ ಕಥೆ ಹೇಳಿಕೊಳ್ಳುವ ಕಲ್ಪನೆಯೆ ವಿನೂತನ, ಅದರಲ್ಲೂ ಇದು ‘ಟೈಮ್ ಅಂಡ್ ಡೇಟ್ ಸ್ಟ್ಯಾಂಪ್’ ಇಲ್ಲದ ಕಾಲಾತೀತ ಪರಿಧಿಯ ಕಾಡುವ ಪತ್ರ ! ಸಿಕ್ಕಿದವರು ಅದರ ಮಾಲೀಕರಿಗೆ ದಯವಿಟ್ಟು ಹಿಂತಿರುಗಿಸಿ ಬಿಡಿರೆಂಬ ಬಲವಾದ ಮನವಿಯಿದ್ದರು, ನಿಜಕ್ಕು ಇದು ಪ್ರತಿ ಓದುಗನಿಗೆ ಸಿಕ್ಕ ಪತ್ರವಾದ ಕಾರಣ, ಪ್ರತಿಯೊಬ್ಬನಲ್ಲು ಉದ್ಭವಿಸುವ ಪ್ರಶ್ನೆ – ಪತ್ರವನ್ನು ಯಾರಿಗೆ ಹಿಂದಿರುಗಿಸುವುದು ? ವಿಳಾಸದರಿವಿಲ್ಲದ ಜಗದಲ್ಲಿ ಎಲ್ಲೆಂದು ಹುಡುಕುವುದು ? ಅದು ಪ್ರತಿಯೊಬ್ಬ ಓದುಗರ ಅವರದೇ ಆದ ಪತ್ರವೆಂದು , ಅದರ ಇಂಗಿತ ವಿಳಾಸವು ಅವರದೇ ಆಗಿದೆಯೆನ್ನುವ ಸತ್ಯದರ್ಶನ ಅದೆಷ್ಟು ಓದುಗರ ನಿಲುಕಿಗೆ ಸಿಲುಕಿ ಗೋಚರವಾಗುವುದೊ ಎನ್ನುವುದು ಕೂಡ ಕುತೂಹಲಕರ ಅಂಶ.

  ಹುಟ್ಟಿದ ಜೀವಿಯೊಂದು ತಾನು ಕಣ್ಣು ತೆರೆದ ಹೊತ್ತಿನಿಂದ ಕಡೆಯುಸಿರಿರುವವರೆಗು ತನ್ನ ಸುತ್ತಲ ಜಗಕ್ಕೆ ತೆರೆದುಕೊಳ್ಳುತ್ತ, ಸ್ಪಂದಿಸುತ್ತ, ದಿಗ್ಬ್ರಮಿಸುತ್ತ, ಸಂಭ್ರಮಿಸುತ್ತ, ಭ್ರಮೆ, ಭ್ರಾಂತಿಗಳನ್ನನುಸರಿಸುತ್ತ ಹಾಗೆಯೆ ಪರಿಸರಕ್ಕನುಗುಣವಾಗಿ ತನ್ನನ್ನು ಪರಿವರ್ತಿಸಿಕೊಂಡು ಸಾಗುವ ಪರಿ ಕೂತುಹಲಕಾರಿಯಾಗಿ ಬಿಚ್ಚಿಕೊಳ್ಳುತ್ತ ಹೋಗುತ್ತದೆ. ಆ ಅನಾವರಣದಲ್ಲೆ ಗೋಚರಾಗೋಚರ ಸ್ತರದಲ್ಲಿ ಅಂತರ್ಗತವಾದ ಹುಡುಕಾಟ ‘ತಾನಾರು ? ತನ್ನ ಮೂಲವೇನು? ತನ್ನ ಸೃಷ್ಟಿಯಾದ ಉದ್ದೇಶವೇನು?’ ಮುಂತಾಗಿ ಉತ್ತರವಿಲ್ಲದ ಪ್ರಶ್ನೆಗಳ ಗಹನತೆಯಲ್ಲಿ ಕಳುವಾಗುವ ಭೀತಿಗೆ, ಆ ಹೊತ್ತಿನಲ್ಲಿ ಸಿಕ್ಕ ಲೌಕಿಕ-ಭೌತಿಕ ಪರಿಸರದ ಜಂಜಾಟದಲ್ಲೆ ಮುಳುಗಿ, ಅಲ್ಲೆ ಉತ್ತರ ಹುಡುಕುವ ಪರಿಹಾರಕ್ಕೆ ಶರಣಾಗಿ ಮುನ್ನಡೆಯುವುದು ವಾಸ್ತವ ಜಗದ ಹೊಂದಾಣಿಕೆ ಮನೋಭಾವಕ್ಕೆ ಹಿಡಿದ ಕನ್ನಡಿಯಂತೆ ಭಾಸವಾಗುತ್ತದೆ. ಕೊನೆಗೆ ಬಹುತೇಕ ಎಲ್ಲರ ಬದುಕಿನಲ್ಲಿಯ ಕಥೆಯಂತೆ, ‘ಅಂತಿಮ ಉತ್ತರ ಸಿಗದ ಮುಗಿಯದ ಹುಡುಕಾಟದಲ್ಲೆ ಜೀವನ ಮುಗಿದುಹೋಗುತ್ತಿದೆಯಲ್ಲಾ ? ‘ ಎಂಬ ಖೇದ ಮತ್ತು ‘ಪ್ರಸ್ತುತದಲ್ಲಿ ಗಳಿಸಿದ್ದೆಲ್ಲವನ್ನು ಮತ್ತೆ ಮೊದಲಿನಿಂದಾರಂಭಿಸಿ ಅದೇ ಚಕ್ರವನ್ನು ಪದೇ ಪದೇ ಪುನರಾವರ್ತಿಸದಿರಲು’ ನೆನಪಿನೋಲೆಯಂತೆ ತನಗೆಂದೆ ಪತ್ರವೊಂದನ್ನು ಬರೆದಿಟ್ಟು ಹೋಗುತ್ತದೆ, ಜನ್ಮಾಂತರದಲ್ಲೂ ಯಾರಾದರು ತಲುಪಿಸಿಯಾರು ಎಂಬ ಆಶಯದಲ್ಲಿ. ಒಂದು ಬಗೆಯ ಕರ್ಮಾಂತರಗಳ ನಿವ್ವಳ ಮೊತ್ತ ಜನ್ಮಾಂತರಕ್ಕು ಅಂಟಿಕೊಂಡು ಬರುತ್ತದೆನ್ನುವ ಪರಾಂಪರಾಗತ ನಂಬಿಕೆಯನ್ನು ಪತ್ರವೊಂದರ ಸಾಂಕೇತಿಕತೆಯಲ್ಲಿ ಸೆರೆಹಿಡಿದ ಬಗೆ ಅನನ್ಯ ಮತ್ತು ಮನೋಜ್ಞ.

  ಇಷ್ಟು ಪುಟ್ಟ ಕಥಾನಕದಲ್ಲೆ ಅಷ್ಟೆಲ್ಲ ಗಹನತೆಯನ್ನು ತುಂಬಿ ರಸವತ್ತಾಗಿ ಬಡಿಸಿದ ಕಥಾನಕ ಶೈಲಿ ಇಲ್ಲಿನ ಮತ್ತೊಂದು ‘ಹೈ ಲೈಟು’. ಇದರಿಂದಾಗಿಯೆ ಪ್ರತಿ ಓದುಗನಿಗು ಅವರವರ ಸ್ತರ, ಜ್ಞಾನ, ಅನಿಸಿಕೆಗಳಿಗನುಗುಣವಾದ ಯಥಾರ್ಥಗಳನ್ನು ಬಿಚ್ಚಿಡುತ್ತ ಎಲ್ಲರಿಗು ಆಪ್ತವಾಗುವ ಒಂದು ಅಪರೂಪದ ಲಾಲಿತ್ಯ ತಂತಾನೆ ಆರೋಪಿತವಾಗಿಬಿಡುತ್ತದೆ.

  ಅಂಥಹ ಅನುಭಾವದ ರಸದೌತಣಕ್ಕೆ ಧನ್ಯವಾದಗಳು!

  Liked by 1 person

 2. ಗಂಭೀರ-ಸಂಕೀರ್ಣ ವಿಚಾರಗಳನ್ನೆಲ್ಲಾ ಸರಳವಾಗಿ ಕಥೆಯಾಗಿಸೋ ಪ್ರಯತ್ನ ಚೆನ್ನಾಗಿದೆ. It wasn’t easy to read.. the idea took some time to sink in ; ಆಯ್ಕೆಯ ವಿಷಯವೇ ಹಾಗಿದೆ. ಇಷ್ಟವಾಯ್ತು ಮನು 😊

  Liked by 2 people

 3. ಸತ್ಯವೆಂಬುದೇನು ಬ್ರಹ್ಮಾಂಡ ತಾಂಡವದಿ
  ನೃತ್ಯವೇ ಸತ್ಯವಲ ಕಡಲಲೆಯ ಬಾಳೊಳ್
  ಮಿಥ್ಯೆಯೆಂಬುದೇ ಮಿಥ್ಯೆ ಜೀವನಾಟಕ ಸತ್ಯ
  ಕೃತ್ಯವಿದು ಬೊಮ್ಮನದು ಮಂಕುತಿಮ್ಮ

  Liked by 2 people

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s