ಸ್ವರ್ಣ ಗೌರಿ ವ್ರತ

ಇದು ಎಂಟನೆಯ ಗೌರಿ ವ್ರತ. ಆದರೂ ಇನ್ನೂ ಅತ್ತೆಯವರು ಹೇಳಿದ ಮೊದಲ ಗೌರಿ ವ್ರತ ಈಗ ಕೇಳಿದಂತಿದೆ. ಮದುವೆಯಾಗಿ ಇನ್ನು ವರುಷವಾಗಿರಲಿಲ್ಲ. ಅತ್ತೆ ಕರೆದು ನಮ್ಮಲ್ಲಿ ಗೌರಿ ಪೂಜೆ ಮಾಡುವ ಪರಿಪಾಠವಿದೆ ಎಂದಿದ್ದರು. ನಾನು ನನಗೆ ರೂಢಿಯಿದೆ , ಅಮ್ಮ ಮಾಡುವಾಗ ನಾನೇ ಎಲ್ಲಾ ಅಣಿ ಮಾಡುತ್ತಿದ್ದುದು ಎಂದು ಕೊಚ್ಚಿಕೊಂಡಿದ್ದೆ.

ಆದರೆ ಇದು ಅಮ್ಮ ಮನೆಯಲ್ಲೇ ಮಾಡುವ ಪೂಜೆಯಂತಲ್ಲ ಎಂದು ಗಣೇಶ ಚೌತಿಯ ವಾರದ ಹಿಂದೆಯೆ ಅನಿಸಿತ್ತು. ಮೊದಲಿಗೆ ನಾಗಂದಿಗೆ ಮೇಲಿದ್ದ ತಾಮ್ರದ ಚೊಂಬನ್ನು ಭಾವ ಹುಡುಕಿ ತೆಗೆದು ಕೊಟ್ಟರು. ಆಗಲೇ ಮನೆಯಲ್ಲಿ ಗೌರಿಯ ನೆರಳು ಬಂದ ಹಾಗಾಯಿತು. ಮನೆಗೆ ದೂರದಲ್ಲಿದ್ದ ಇಬ್ಬರು ನಾದಿನಿಯರು ಆಗಮಿಸಿದ್ದಾಯಿತು.ಆ ತಂಬಿಗೆಯನ್ನು ಫಳ ಫಳ ಹೊಳೆಯುವಂತೆ ತಿಕ್ಕಿ, ಜಗಳಿಯಲ್ಲಿದ್ದ ಪುಟ್ಟ ಕೋಣೆಯನ್ನು ಎರಡು ಸಲ ಸಾರಿಸಿ ಒರೆಸಿದ್ದೆವು. ಪುಟ್ಟ ತಂಬಿಗೆಯ ಮುಖಕ್ಕೆ ಕಣ್ಣು ಬರೆದು, ಹಣೆಗಿಡಿಸಿ, ಇವರ ಚಿಕ್ಕಮ್ಮ ತಂದ ಕಾಸಿನ ಸರವನ್ನೇರಿಸಿದಾಗ ದೇವರನ್ನೇ ಹಬ್ಬಕ್ಕೆ ಅಣಿಗೊಳಿಸಿದ ಸಂತಸ ಮನೆಯಲ್ಲಿ. ಅಂಗಳಕ್ಕೆ ದೊಡ್ಡ ರಂಗೋಲಿಯೊಂದನ್ನು ರಾತ್ರಿಯೇ ಹಾಕಿದ್ದೆವು. ಬೆಳಿಗ್ಗೆ ಎದ್ದು ಸ್ನಾನ ಮುಗಿಸಿ ಅತ್ತೆ ಇಡಿಸಿದ ಹಸಿರು-ಕೆಂಪು ಬಳೆಯನ್ನು ಕೈತುಂಬ ಇಟ್ಟಾಗ ಮನೆಯಲ್ಲಾ ಈ ಸದ್ದಿನ ಜೊತೆ ಗಲಗಲ ನಕ್ಕಂತಾಯಿತು.

ಉಪವಾಸದಲ್ಲಿ ಇದ್ದರೂ ಸಂಭ್ರಮದಲ್ಲಿ ಹಸಿವು ಗೊತ್ತಾಗುತ್ತಿರಲಿಲ್ಲ. ಇನ್ನು ಹೆಣ್ಣು ಮಕ್ಕಳ ಹಬ್ಬವಾದ್ದರಿಂದ ಅವರಿಗೆ ಬಯ್ಯುವ ಹಾಗಿಲ್ಲವೆಂಬ ಅಲಿಖಿತ ನಿಯಮ ಬೇರೆ. ಮನೆಯಲ್ಲಿ ಎಂದಿನ ತಿಂಡಿ-ತೀರ್ಥದ ಗಲಾಟೆ ಇರಲಿಲ್ಲ.ಮೊದಲೆ ಪೇರಿಸಿಟ್ಟ ಪುಟ್ಟ ಗೌರಿ,ಆರತಿ,ಕಳಶ,ತೆಂಗಿನ ಕಾಯಿ, ಗೆಜ್ಜೆ ವಸ್ತ್ರ,ಗೌರಿ ದಾರ,ನೈವೇದ್ಯದ ಬುಟ್ಟಿಯನ್ನು ಹೊತ್ತು ಜಗಲಿಗೆ ಬಂದು ಕುಳಿತಾಗಲೇ ನನಗೆ ಈ ಹಬ್ಬದ ಉದ್ದ,ಅಗಲ,ಆಳ ಗೊತ್ತಾಗಿದ್ದು. ಸುಮಾರು ಇಪ್ಪತ್ತೈದು ಹೆಂಗಸರು ಅಲ್ಲಿ ನೆರೆದಿದ್ದರು ಎಲ್ಲರ ಕೈಯಲ್ಲು ಹೀಗೆ ಒಂದು ಬುಟ್ಟಿ. ಎಲ್ಲರೂ ರೇಷಿಮೆ ಸೀರೆ, ಡಜನ್ ಬಳೆ , ಒಂದಷ್ಟು ಒಡವೆ ತೊಟ್ಟು ಕಂಗೊಳಿಸುತ್ತಿದ್ದರು.  ಅತ್ತೆ ಮತ್ತು ಹಿರಿಯ ಮುತ್ತೈದೆಯರಿಬ್ಬರು ಗಂಗೆ ತಂದರು. ಮಾವ ಜಗಲಿಯ ಪುಟ್ಟ ಕೋಣೆಯಲ್ಲಿ ಗೌರಿ ಕಲಶವನ್ನಿಟ್ಟರು.ಆಗ ಗಿಜಿಗಿಜಿಗುಟ್ಟುತ್ತಿದ್ದ ಮಹಿಳಾ ಮಣಿಗಳು ತಟ್ಟನೆ ಶಾಂತರಾಗಿ ತಮ್ಮ ಗೌರಿಯ ಉಪಾಸನೆಯಲ್ಲಿ ತೊಡಗಿದರು. ಮಾವ ಉಚ್ಛ ಕಂಠದಲ್ಲಿ ಮಂತ್ರ ಹೇಳುತ್ತಾ ಅಷ್ಟು ಜನಕ್ಕೆ ಪೂಜೆ ಮಾಡಿಸುತ್ತಿದ್ದರು. ಬೆಳ್ಳಿ ಬಟ್ಟಲುಗಳ, ಗೆಜ್ಜೆಗಳ, ಪುಟ್ಟ ಗಂಟೆಗಳ, ಮಧುರ ಸ್ವರಗಳೆಲ್ಲಾ ಮಿಳಿತಗೊಂಡು ದೈವಿಕ ವಾತವರಣವೊಂದು ಸೃಷ್ಟಿಯಾಗಿತ್ತು. ಸ್ವರ್ಣ ಗೌರಿಯ ಸಂಚಲನ ಕಣ್ಣಿನ ಹೊಳಪಿನಲ್ಲಿ, ಮುಖದ ಮಂದಹಾಸದಲ್ಲಿ ಕಾಣುತ್ತಿತ್ತು.

ಬಣ್ಣದ ಗೌರಿದಾರವನ್ನು ಕಟ್ಟಿಕೊಂಡು , ಕಲೆಯ ಅನಾವರಣದಂತೆ ಗೆಜ್ಜೆ ವಸ್ತ್ರವೇರಿಸಿ, ಭಕ್ತಿಯಿಂದ ಬಾಗಿನ ಕೊಟ್ಟು ನಮಸ್ಕರಿಸಿ, ನೈವೇದ್ಯ ಹಂಚಿದಾಗ ಆ ವರ್ಷದ ಗೌರಿ ವ್ರತ ಸಾಂಗವಾಗಿ ನೆರವೇರಿತ್ತು. ಅಲ್ಲಿಂದ ಪ್ರತಿ ವರ್ಷ ಈ ಹಬ್ಬವೆಂದರೆ ನನಗೆ ಅಚ್ಚು ಮೆಚ್ಚು.  ಮನದ ಗಂಗೆಯಲ್ಲಿ ಗೌರಿಯನ್ನು ಆವಾಹಿಸಿ ಮನೆಯಲ್ಲಿ ಕಲರವನ್ನೆಬ್ಬಿಸುವ,  ಏನೇ ಕಲಹವಿದ್ದರು ದಾರ ಕಟ್ಟುವಾಗ, ಬಾಗಿನ ಕೊಡುವಾಗ ಕಾಲಿಗೆ ಬಿದ್ದು ಎಲ್ಲಾ ಕಳೆದುಕೊಳ್ಳುವಂತೆ ಮಾಡುತ್ತಾ ಹೊಸ ಚೇತನ ನೀಡುತ್ತದೆ. ಕಾತರಿಸುತ್ತಿದ್ದ ಹಬ್ಬ ಮತ್ತೆ ಬಂದಿದೆ. ನನ್ನ ಪೂಜೆ ಈಗ ಪ್ರಾರಂಭಿಸಬೇಕಿದೆ.

2 thoughts on “ಸ್ವರ್ಣ ಗೌರಿ ವ್ರತ

  1. ತುಂಬಾ ಮುಖ್ಯವಾದ ಒಂದು ಭಾಗ ಬಿಟ್ಟುಹೋಗಿದೆ ಮನೂ, ಹಬ್ಬ- ವ್ರತ ಏನೇ ಆಗಲೀ ಅವುಗಳ ಅವಿಭಾಜ್ಯ ಅಂಗ ಔತಣ. ಪ್ರತೀ ಹಬ್ಬಕ್ಕೂ ಅದರದೇ ಆದ ವಿಶೇಷ ಖಾದ್ಯಗಳೂ, ಮಡಿಯಲ್ಲಿ ಮಾಡುವ ನೈವೇದ್ಯಗಳೂ ಇರುತ್ತವಷ್ಟೇ? ಮನೆಯ ಹೆಣ್ಣುಮಕ್ಕಳೆಲ್ಲ ಸೇರಿ ಅಡಿಗೆ ತಯಾರಿಸುವಾಗಿನ ರಸ ನಿಮಿಷಗಳು ಸೇರಿದ್ದರೆ ಈ ಲೇಖನ ಮತ್ತಷ್ಟು ರುಚಿಕಟ್ಟಾಗಿರುತ್ತಿತ್ತು. Still, its a winner, ಹಬ್ಬ ಕಣ್ಣಿಗೆ ಕಟ್ಟಿದಂತೆ ಚಿತ್ರಿತವಾಗಿದೆ.😊

    Liked by 1 person

  2. ಹೌದಲ್ಲಾ … !!!!! ಮರೆತು ಹೋಯ್ತು… ತುಂಬಾ ಹಬ್ಬನ ಮಿಸ್ ಮಾಡಿಕೊಂಡು ಬರೆದ ನಾಲ್ಕು ಸಾಲುಗಳು… ಅಷ್ಟೊಂದು ಯೋಚಸಲೇ ಇಲ್ಲ…

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s