ಆಹಾ!!… ಮಳೆ!

ಮಳೆಯಂದರೆ ಹಾಗೆಯೇ … ಹಟಮಾಡುವ ಮನಸು ತಾಯಿಯ ಲಾಲಿ ಕೇಳಿದ ಮಗುವಿನಂತೆ ಶಾಂತವಾಗುತ್ತದೆ. ಮಳೆಯ ಧೋ ಶಬ್ದದಲ್ಲಿ ಎದೆಯ ಕೂಗು ಕೇಳುವುದೇ ಇಲ್ಲ.ಬಿಡಲಾರದೆ ಕೊನೆಯ ಬಾರಿಗೆ ಮುತ್ತಿಕ್ಕಿ ಧುಮುಕುವ ಚಿಟ ಪಟ ಹನಿಯ ನೋಡುವುದೇ ಚಂದ, ತೆಳುವಾದ ಸೀರಿಯಂತೆ ನೆಲಕೆ ಸುತ್ತಿ ಹರಿಯುವ ಕೆಂಪು ನೀರಿನ ಮೇಲೆ ನಡೆದಾಡುವುದೇ ಅಪೂರ್ವ, ಕಾರಂಜಿಯಂತೆ ಪುಟಿಯುವ ಸೋರಿದ ನೀರಿನ ಆ ಗಡಿಬಿಡಿಯಲ್ಲಿ ಸಿಕ್ಕ ಪಾತ್ರೆ, ಅಂಗಳವೇ ತಣ್ಣನೆ ಕಾವಲಿಯಂತಾಗಿ ಬೀಳುವ ಹನಿಯ ದೋಸೆಗಳು,ರಭಸದ ಸೆಳತಕ್ಕೆ ತೂಗುವ ಕಪ್ಪು ಛತ್ರಿ, ಪಾಚಿಗಟ್ಟಿ ವೆಲ್ವೆಟ್ಟಿನಂತಾದ ನೆಲದ ಮೇಲೆ ಕಾಲಿಡುವ ಸಂಭ್ರಮ, ಏನೋ ಒಂಥರ ಆಕಾಶದ ಪ್ರೇಮನಿವೇದನೆಗೆ ಈ ಮಳೆರಾಯ ದೂತನಂತೆ ಬಂದು ಇಳೆಯ ಕಿವಿಗೆ ಪಿಸುಗುಡುತ್ತಿದ್ದಾನೆ ಅನಿಸುತ್ತದೆ.

ಆದರೆ ಇವತ್ತೇಕೊ.. ಭೂಮಿ ಒಲ್ಲೆ ಎಂದು ಬಿಟ್ಟಿದ್ದಾಳೆ. ಅಂಥ ಮಳೆಯಲ್ಲದಿದ್ದರೂ ಆ ನಿಲ್ಲದ ಸುರಿತಕ್ಕೆ ಐರನ್ ಮಾಡಿದ ಫಾರ್ಮಲ್ಸ್ ಹಾಳಾಗಿ ಹೋಗಿದೆ. ಶೂ ಸಾಕ್ಸ ಒಳಗೆ ನೀರು ತುಂಬಿ ಕಾಲೇ ಒಂದು ಪಾಚಿಯಲ್ಲಿ ಹುಟ್ಟಿದ ಹುಳದಂತಾಗಿದೆ. ಇನ್ನು ನೆನೆದು ಓಡಲಾರದಂತೆ ಬಸ್ ತೆವಳುತ್ತಿದೆ.ಅನಂತ ದೂರದವರೆಗೂ ಹಬ್ಬಿರುವ ಟ್ರಾಫಿಕ್ ನಲ್ಲಿ ಮನೆಯ ದಾರಿ ಇನ್ನೂ ದೂರವಾಗುತ್ತಿದೆ. ಒದ್ದೆ ಮೈಯಲ್ಲಿ ಮುಚ್ಚಿದ ಬಸ್ಸಿನಲ್ಲಿ ಕುಳಿತು ಒಂದು ಇಡ್ಲಿಯಾದಂತೆ ಅನಿಸುತ್ತಿದೆ. ಸುತ್ತ ಮುತ್ತಲಿನ ವಾಸನೆ ಶ್ವಾಸ ಕೋಶ ತುಂಬಿ ಬಲವಂತವಾಗಿ ಪ್ರಾಣಾಯಾಮ ಮಾಡಿಸುತ್ತಿದೆ. ಕೆಸರಿನ ಹೊಳೆಯಲ್ಲಿ ಸಾಗುವ ಕಾಗದದ ದೋಣಿಯಂತೆ ವಾಹನಗಳು ಸಿಕ್ಕಿಕೊಂಡಿವೆ,ತಲೆಗೆ ಬಿದ್ದ ನೀರು ಅಕ್ಷಿ ಅಕ್ಷಿ ಎಂದು ಹೊರ ಬರುತ್ತಿದೆ. ಪ್ರೇಮ ನಿವೇದನೆಯಂತು ಬೆಂಗಳೂರಿನಲ್ಲಿ ಸಾರಾಸಗಾಟಾಗಿ ತಿರಸ್ಕೃತವಾಗಿದೆ ಇನ್ನಾದರೂ ತಿರುಗಿ ಹೋಗು ಮಾರಾಯ ಮಳೆರಾಯ…

Advertisements

7 thoughts on “ಆಹಾ!!… ಮಳೆ!

  1. ಮಳೆಯ ವೈವಿಧ್ಯಗಳೆ ಅಚ್ಚರಿ, ನಿಗೂಢತೆಗಳ ವಿಸ್ಮಯಕರ ಸಂಗಮ. ಒಂದು ದಿವ್ಯ ಅನುಭೂತಿಯಂತೆ ಚೇತೋಹಾರಿಯಾಗಿ ಪುಳಕದ ಪಲುಕುಗಳೆಬ್ಬಿಸುತ್ತ, ಕಿಟಕಿಯಿಂದಲೊ, ಅಂಗಳದಿಂದಲೊ, ಬಾಗಿಲಿಗೊರಗಿಯೊ ಗಂಟೆಗಟ್ಟಲೆ ನೋಡುತ್ತ ಮೈ ಮರೆಯುವಂತೆ ಮಾಡುವ ಪರಿ ಒಂದೆಡೆ. ಅದರ ರೋಷಾವತಾರದ ಕೆನ್ನೀರಿನಲ್ಲಿ ಸಿಕ್ಕಿ ಮೈ, ಮನಸೆಲ್ಲ ಒದ್ದೆಯಾಗಿ, ಆ ಶೀತಲತೆ ಆಳಕ್ಕಿಳಿದು ಅಂತರಂಗದ ಕಣಕಣವನ್ನು ತಲುಪಿ ನಡುಗಿಸುವಾಗ ‘ಏನಿದರ ರಚ್ಚೆಯಪ್ಪಾ?’ ಎಂದು ಹೇಸಿಕೊಳುವಂತೆ ಮಾಡುವ ಪರಿಯೂ ಅದರದೆ. ಅದೇನೆ ಇದ್ದರೂ ಕವಿ ಮನದ ಹೃದಯಗಳಿಗೆ ಮಾತ್ರ ಮಳೆಯೆಂಬುದು ಒಂದು ಅದ್ಭುತ ಲಹರಿ. ಮನದ ಭಾವನೆಗಳು ಮಳೆಯಂತೆಯೆ – ‘ಧೋ’ ಎಂದು ಸುರಿದು ಹುಚ್ಚೆದ್ದು ಕುಣಿದಾಡುವಂತೆಯೆ, ಎಲ್ಲಾ ಮುಗಿಸಿ ಖಾಲಿಯಾಗಿ ಮಂಕು ಹಿಡಿದು ಸುಮ್ಮನೆ ತಣ್ಣಗೆ ಕೂತುಬಿಡುವುದು.

    .. ನಿಮ್ಮ ಮಳೆಯ ಲಹರಿ ಅದರ ಭಾವೋನ್ಮಾದವೆಲ್ಲವನ್ನು ಚೆನ್ನಾಗಿ ಕಟ್ಟಿಕೊಟ್ಟಿದೆ…:-)

    Liked by 4 people

  2. ಚೆನ್ನಾಗಿ ಹೇಳ್ದೆ ನೋಡು!
    ನಿನ್ನೆಯ ಮಳೆ ಅಕ್ಷರಶಃ ಹಿಂಗೆ ಆಗಿತ್ತು….. ಮೋಡಕ್ಕೆ ತೂತು ಬಿತ್ತೇನೋ ಅನ್ನೋಂಗಾಗಿತ್ತು…

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s