ಹಳೆ ಕಥೆ…

ಒಂದಾನೊಂದು ಕಾಲದಲ್ಲಿ , ನರ್ಮದಾ ನದಿ ತೀರದಲ್ಲಿ ಮಾಹಿಷ್ಮತಿ ಎನ್ನುವ ದೇಶವಿತ್ತು. ಬಾಹುಬಲಿ ರಾಜನು ಆ ಸಾಮ್ರಾಜ್ಯವನ್ನು ಆಳುತ್ತಿದ್ದನು. ರಾಜನಿಗೆ ಬಲಗೈ ಬಂಟನಂತೆ ಕಟ್ಟಪ್ಪನೆಂಬ  ಸೇನಾಧಿಪತಿಯಿದ್ದನು. ರಾಜನ ಮುಂದಾಲೋಚನೆಯಿಂದ, ಚಾಣಕ್ಷ್ಯತನದಿಂದ ಸೇನಾಧಿಪತಿಗಳ ವೀರ ಪೌರುಷಗಳಿಂದ ರಾಜ್ಯ ಸುಭಿಕ್ಷವಾಗಿ,ನೆಮ್ಮದಿಯಾಗಿತ್ತು.

image

ಹೀಗಿರಲು ಒಂದು ದಿನ ಪರ್ಶಿಯಾ ದೇಶದಿಂದ ಅಸ್ಲಾಮ್ ಖಾನ ಎಂಬ ವರ್ತಕನೊಬ್ಬ ಕಟ್ಟಪ್ಪನನ್ನು ಭೇಟಿಯಾಗಲು ಬರುತ್ತಾನೆ.ಆತ ಉಡುಗೊರೆಯೆಂದು ಅಮೂಲ್ಯ ಖಡ್ಗವೊಂದನ್ನು ಕಟ್ಟಪ್ಪನಿಗೆ ಒಪ್ಪಿಸುತ್ತಾನೆ.ಕಟ್ಟಪ್ಪ ಅಂತಹ ಮಹತ್ವದ ಖಡ್ಗ ಆಳುವ ದೊರೆಗಳ ಬಳಿ ಇದ್ದರೆ ಶೋಭೆಯೆಂದು ರಾಜನಿಗೆ ಕೊಡುತ್ತಾನೆ.

ರಾಜ ಕೆಲವು ದಿನಗಳ ತರುವಾಯ ಶಸ್ತ್ರಾಭ್ಯಾಸದಲ್ಲಿ ನಿರತನಾಗಿರಲು ಅದೇ ಖಡ್ಗದಿಂದ ಪೆಟ್ಟು ಬಿದ್ದು ಎಡಗೈ ಕಿರು ಬೆರಳು ತುಂಡಾಗಿ ಬಿಡುತ್ತದೆ. ನೋವಿನಿಂದ ರಾಜ ಮಲಗಿರಲು ಅವನ ಚಿಕ್ಕಪ್ಪ ಬಿಜ್ಜಳ ದೇವ ಇದು ಸೇನಾಧಿಪತಿಯ ಸಂಚು ಎಂದು ಅನುಮಾನಿಸುತ್ತಾನೆ. ಇದೇ ಸಮಯಕ್ಕೆ ಬಂದ ಕಟ್ಟಪ್ಪ ಪರಿಸ್ಥಿತಿ ನೋಡಿ ಆಗುವುದೆಲ್ಲಾ ಒಳ್ಳೆಯದಕ್ಕೆ ಎಂದು ನುಡಿಯುತ್ತಾನೆ. ನರಳುತ್ತಿದ್ದ ರಾಜ ಅಸಾಧ್ಯ ಕೋಪದಿಂದ ಕೆಂಡ ಮಂಡಲನಾಗಿ ಏನೆಂದಿರಿ ? ಎಂದು ಗುಡುಗುತ್ತಾನೆ. ಮತ್ತೆ ಮತ್ತೆ ಕಟ್ಟಪ್ಪ ಒಳ್ಳೆಯದೇ ಆಯಿತು ಎಂದು ತನ್ನ ಪಟ್ಟು ಬಿಡದೆ ವಾದ ಮಾಡುತ್ತಾನೆ. ಕೊನೆಗೆ ರಾಜನಿಗೆ ಸಿಟ್ಟು ಬಂದು ರಾಜನಿಂದನೆಯ ಆರೋಪ ಹೊರಿಸಿ ಸೇನಾಧಿಪತಿ ಮತ್ತವನ ಕುಟುಂಬವನ್ನು ರಾಜ್ಯದಿಂದಲೇ ಹೊರಗಟ್ಟಿಸುತ್ತಾನೆ.

ನಂತರ ಸುಮಾರು ಒಂದು ಮಾಸದ ನಂತರ ಬಾಹುಬಲಿಗೆ ರಾಜಸಭೆಯಲ್ಲಿ ಈಶಾನ್ಯ ದಿಕ್ಕಿನಲ್ಲಿ ಹುಲಿಗಳ ಹಾವಳಿ ಹೆಚ್ಚಾಗಿದೆಯೆಂದು ದೂರು ಬರುತ್ತದೆ. ರಾಜನು ಸ್ವತಃ ತನ್ನ ಅಂಗ ರಕ್ಷಕರೊಡನೆ ಬೇಟೆಗೆ ಹೊರಡುತ್ತಾನೆ. ರಾಜ್ಯದ ಈಶಾನ್ಯ ದಿಕ್ಕಿನಲ್ಲಿ ದುರ್ಗಮ ಕಾಡು ಅಲ್ಲಿಯ ಪಕ್ಕದ ಸಣ್ಣ ಊರಾದ ಮಾಸಲ ಪುರದ ಜನತೆಗೆ ಈ ಹುಲಿಗಳ ಕಾಟ. ರಾಜ ಹುಲಿ ಹುಡುಕುತ್ತಾ ಕಾಡನ್ನು ಪ್ರವೇಶಿಸುತ್ತಾನೆ. ದಟ್ಟವಾಗಿ ಬೆಳೆದ ವೃಕ್ಷರಾಶಿಯ ನಡುವೆ ಮುಂದೆ ಸಾಗುವುದೇ ಕಷ್ಟವಾಗುತ್ತದೆ. ರಾಜನಿಗೆ ಹುಲಿಯ ಗರ್ಜನೆ ಕೇಳಿದಂತಾಗಿ ರಭಸದಿಂದ ಮುಂದುವರೆಯುತ್ತಾನೆ. ಮುಂಜಾನೆ ಹೊರಟ ತಂಡ ಸಂಜೆಯ ಹೊತ್ತಿಗೆ ದಿಕ್ಕಾಪಾಲಾಗಿ ಬಾಹುಬಲಿಯು ಬೇರೆಯಾಗುತ್ತಾನೆ.

ತುಂಬಾ ದೂರ ಗಮಿಸಿದ ಆತನಿಗೆ ದಿಕ್ಕು ತಪ್ಪಿ ರಾತ್ರಿಯಾದರೂ ಹಿಂದಿರುಗಲಾಗದೆ ದೈತ್ಯ ಕಾಡಿನ ಮಧ್ಯೆ ಸಿಕ್ಕಿಕೊಳ್ಳುತ್ತಾನೆ. ಮರದ ಬುಡವೊಂದರಲ್ಲಿ ವಿಶ್ರಮಿಸಿದ ಆತ ಹಾಗೆ ಕಣ್ಣು ಮುಚ್ಚಿ ನಿದ್ದೆ ಹೋಗುತ್ತಾನೆ. ಕಣ್ಣು ತೆರೆದಾಗ ನರಭಕ್ಷಕರ ಗುಂಪೊಂದು ಅವನನ್ನು ಸೆರೆ ಹಿಡಿದು ಬಿಟ್ಟಿರುತ್ತಾರೆ. ಆ ಗುಂಪಿನ ರಾಜ ಕಾಲಕೇಯ. ಅಂದಿಗೆ ಅವರ ದೇವರ ವ್ರತದ ಕೊನೆ ದಿನ ಬಲಿಗಾಗಿ ಅರಸುತ್ತಿದ್ದವರಿಗೆ ರಾಜ ಸಿಕ್ಕಿ ಬಿದ್ದಿದ್ದ. ಕಾಲಕೇಯ ಅವನನ್ನು ವಧಾಸ್ಥಾನದಲ್ಲಿರಿಸಿ ಶಿರಛ್ಛೇದನ ಮಾಡಲು ತನ್ನ ಕತ್ತಿ ಎತ್ತುತ್ತಾನೆ. ಆಗ ಬಂದ ಆ ಗುಂಪಿನ ಪೂಜಾರಿ ಬಾಹುಬಲಿಯ ತುಂಡಾದ ಕಿರು ಬೆರಳನ್ನು ನೋಡಿ ಊನವಾದ ಬಲಿ ದೇವರಿಗೆ ನಿಶಿದ್ಧವೆಂದು ನಿಲ್ಲಿಸುತ್ತಾನೆ. ಬಲಿ ನೀಡದೆ ಬಾಹುಬಲಿಯನ್ನು ತಿನ್ನಲೂ ಆಗದೆ ಆಹಾರವನ್ನು ಇಟ್ಟು ಕೊಳ್ಳಲು ಆಗದೆ ಅವನನ್ನು ಕಾಲಕೇಯ ಬಿಟ್ಟು ಬಿಡುತ್ತಾನೆ.

ರಾಜ್ಯಕ್ಕೆ ಹಿಂದಿರುಗಿದ ಬಾಹುಬಲಿ, ಕಟ್ಟಪ್ಪನನ್ನು ಹುಡುಕಿ ಈ ಪ್ರಕರಣ ಹೇಳುತ್ತಾನೆ. ನಿಮ್ಮ ಮಾತಿನಂತಲೇ ಆಯಿತೆಂದು ಸೇನಾಧಿಪತ್ಯವನ್ನು ಮತ್ತೆ ನೀಡುತ್ತಾನೆ. ಆದರೂ ಬಾಹುಬಲಿಗೆ ಆಗುವುದೆಲ್ಲಾ ಒಳ್ಳೆಯದಕ್ಕೆ ಎಂದು ನಂಬಲಾಗುವುದಿಲ್ಲ ಇದು ಕೇವಲ ಆಕಸ್ಮಿಕವಿರಬಹುದಲ್ಲ ಅನಿಸುತ್ತದೆ. ಆಗ ಮತ್ತೆ ಕಟ್ಟಪ್ಪನನ್ನು ಕೆಣಕಿ ನಿಮ್ಮ ಗಡಿಪಾರು ಕೂಡ ಒಳ್ಳೆಯದಕ್ಕೆ ಆಯಿತೋ ಎಂದು ಪ್ರಶ್ನಿಸುತ್ತಾನೆ. ಕಟ್ಟಪ್ಪ ತಟ್ಟನೆ ಉತ್ತರಿಸುತ್ತಾನೆ ಇಲ್ಲದಿದ್ದರೆ ಪ್ರಭುಗಳ ಬದಲು ಎಲ್ಲ ಅಂಗ ಸರಿಯಿದ್ದ ನಾನು ನರಭಕ್ಷಕರ ಬಲಿಯಾಗುತ್ತಿದ್ದೆ.

ಇದೊಂದು ನೈಜ ಜಾನಪದ ಕಥೆ. ಗೌಪ್ಯತೆ ಕಾಪಾಡಲು ಪಾತ್ರ ಬದಲಿಸಲಾಗಿದೆ. ನಿಜಜೀವನದಲ್ಲಿ ಇದಕ್ಕೆ ಖಂಡಿತ ಹೋಲಿಕೆಯಿದೆ. ಎಷ್ಟೋ ಸಲ ಆದ ಆಕ್ಸಿಡೆಂಟ್ ಒಂದು ಸಾವನ್ನು ತಪ್ಪಿಸಲಿಕ್ಕೆ ಇರಬಹುದು, ಕಳೆದು ಕೊಂಡ ಹಣ ಇದ್ದಿದ್ದರೆ ಮತ್ತಷ್ಟು ನಷ್ಟವಾಗುತ್ತಿತ್ತೇನೋ, ಆ ಕಂಪೆನಿಲಿ ರಿಜೆಕ್ಟ್ ಆಗಿದಕ್ಕೆ ಇನ್ನು ಒಳ್ಳೆ ಆಫರ್ ಬರಬಹುದು, ಸೋತಿದಕ್ಕೆ ಇಷ್ಟು ಧೈರ್ಯ ಬಂದಿದ್ದಿರಬಹುದು.

ಹೀಗೆ ಏನೇ ಆದರೂ ಏನೇ ಹೋದರೂ ಒಮ್ಮೆ ನೆನಪಿಸಿಕೊಳ್ಳಿ “ಆಗುವುದೆಲ್ಲಾ ಒಳ್ಳೆಯದಕ್ಕೆ”. ಕಳೆದುಕೊಂಡಿದ್ದು ಮತ್ತೆಲ್ಲೋ ಸಿಕ್ಕೇ ಸಿಗುತ್ತದೆ.

6 thoughts on “ಹಳೆ ಕಥೆ…

  1. ಓದುತ್ತಿದ್ದ ಹಾಗೆ ಇತ್ತೀಚೆಗೆ ನೋಡಿದ ಇದೆ ಹಿನ್ನಲೆಯ ಬಾಹುಬಲಿ ಚಿತ್ರದ ಕಥೆ ನೆನಪಾಯಿತು (ಮತ್ತು ಭಾಗ ಎರಡರ ಕಥೆಯೇನಿರಬಹುದೆಂದೂ ಸುಳಿವು ಸಿಕ್ಕಿದಂತಾಯ್ತು!) 🙂

    ಆಗುವುದೆಲ್ಲ ಒಳ್ಳೆಯದಕ್ಕೆನ್ನುವ ಮಾತು ನಿಜವೆ ಆದರು, ಆ ಫಲಿತ ನಿಲುಕಿಗೆ ಸಿಗುವುದು ನಂತರದಲೆಲ್ಲೊ. ಹೀಗಾಗಿ ಅದು ಸಂಭವಿಸಿದ ಹೊತ್ತಲ್ಲಿ ವಿವೇಚನೆಯಿಲ್ಲದೆ, ದುಡುಕಿ ಅನಗತ್ಯ ಪರಿಣಾಮಕ್ಕೆ ಮೂಲವಾಗುವುದು ಅಪರೂಪವೇನಲ್ಲ.

    Liked by 1 person

  2. ಚಂದ ಉಂಟು 🙂 ಬೆರಳು ಊನ ಆದ ಕಥೆ ಕೇಳಿದ್ದೆ ಆದ್ರೆ ಅದ್ರಲ್ಲಿ ಬಾಹುಬಲಿ, ಕಟ್ಟಪ್ಪ ಇರ್ಲಿಲ್ಲ 😉
    ನೆನಪಾಯ್ತು ಹಳೇದೊಂದು ಕಥೆ 🙂 🙂

    Liked by 1 person

Leave a comment