ಮಳೆ ನಿಂತು ಹೋದ ಮೇಲೆ ….

ಮಳೆ ನಿಂತು ತುಂಬಾ ಹೊತ್ತಾಗಿದೆ. ಕೆಲಸ ಮುಗಿಸಿ ನಡೆದು ಬರುವ ದಾರಿಯಲ್ಲಿ ಸಂಜೆಯ ತಂಗಾಳಿಯ ಹಿತವಾದ ಚಾಮರ ಸೇವೆ. ಹಸಿ ಮಣ್ಣಿನ ಕಂಪು ಸೇರಿ ಮಧುರ ರಾಗವೊಂದು ಮಿಡಿಯುತ್ತಿತ್ತು. ಆದರೂ ದಿನವಿಡೀ ಬದುಕಿನ ಸಂತೆಯಲ್ಲಿ ವ್ಯವಹರಿಸಿ ಈ ನಿಶ್ಯಬ್ಧತೆಯೇ ಅಸಹನೀಯ ಅನಿಸುತ್ತಿದೆ. ಇತ್ತೀಚಿಗೆ ಗಲಾಟೆಗೆ ಮನಸ್ಸು ಒಗ್ಗಿಕೊಂಡು ಬಿಟ್ಟಿದೆ. ಎಲ್ಲಾ ಮೌನವಾದರೆ ಅಂತರಂಗದ ಆಕ್ರಂದನ ಸ್ಪಷ್ಟವಾಗಿ ಕೇಳಿಸುತ್ತದೆ. ಈಗಲೂ ಹಾಗೆ ಆಯಿತು ಏನೋ ರೋದನ ಮನ ತುಂಬಿಕೊಂಡಿತು. ತಕ್ಷಣ ಕೈಗೆ ಅಂಟಿಕೊಂಡಿದ್ದ ಮೊಬೈಲಿಗೆ ಇಯರ್ ಫೋನ್ ಚುಚ್ಚಿ ನಾನೇ ನನ್ನಿಂದ ಬಿಡಿಸಿಕೊಂಡೆ.

ಅರ್ಥವಿಲ್ಲದ ಸಾಹಿತ್ಯದ ಜೊತೆಗೆ ಕಿವಿ ಗಡಚ್ಚಿಕ್ಕುವ ಮ್ಯುಸಿಕ್ ಸಿಗಲಿಲ್ಲ. ಭಾವನೆಗಳೇ ಪದಗಳಾದ ಜಯಂತ ಕಾಯ್ಕಿಣಿಯ ಸಾಲು ಸೋನು ನಿಗಮನ ಉಸಿರಲ್ಲಿ ಪ್ರವಹಿಸುತ್ತಿತ್ತು. ಮತ್ತೆ ನಾನು ಕಾಲಘಟ್ಟದ ಮೇಲೆ ನಿಂತು ಬಂದು ಹೋದ ಕಾಮನ ಬಿಲ್ಲನ್ನು ನೋಡ ತೊಡಗಿದೆ. ಪ್ರೀತಿಯೆಂದು ಕರೆಯಲಾಗದಾದರೂ ಬಿಟ್ಟು ಹೋದ ನೆನಪು ಇಷ್ಟು ತಬ್ಬಿಕೊಳ್ಳುವುದೇಕೆ? ಕಾಡುವ ಹಾಡಿನ ಆ ಸಾಲುಗಳಲ್ಲಿ ಅವನ ಆಲಾಪವೇಕೆ? ಎಲ್ಲಾ ಇದ್ದರೂ ಭರಿಸಲಾಗದ ಶೂನ್ಯವೊಂದು ಇದೆಯೇಕೆ? ಮಳೆಗಾಲದಲ್ಲಿ ಮಳೆ ಬರದಿದ್ದರೂ ಮನಸ್ಸು ಒದ್ದೆಯಾಗುವುದೇಕೆ??

ಸ್ವಲ್ಪ ಇದನ್ನೇ ಯೋಚಿಸಿದರೆ ಎಲ್ಲರಿಗೂ ಈ ವಿರಹ ಕಾಮನ್‌. ಹೃದಯದಲ್ಲಿ ಹೆಜ್ಜೆಗುರುತುಗಳು ಇದ್ದೇ ಇರುತ್ತವೆ. ಅವೇ ತುಂಬಿ ಮನದ ತುಂಬಾ ಕೊಚ್ಚೆಯಾಗಿದ್ದೂ ಇದೆ.ಎಲ್ಲಾ ಸಂತೃಪ್ತ ಎಂದು ಯಾವ ಜೀವಿಯು ಇಲ್ಲ.ಕಣ್ಣೀರಿನ ಬಿಸಿ ಸುಡದಿದ್ದರೆ ಸಂತಸದ ಮುಗುಳ್ನಗೆಯನ್ನು ಆಳವಾಗಿ ಆಸ್ವಾದಿಸಲಾದೀತೆ?ಅದಕ್ಕೆ ನಲಿವಿನಷ್ಟೆ ನೋವಿಗೂ ಕೂಡ ಪ್ರಾಮುಖ್ಯತೆ ಇದೆ. ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವುದೇ ಜೀವನ ಎಂಬುದು ಎಲ್ಲಾ ಟೈಮಲ್ಲೂ ಸತ್ಯ ಅನಿಸುತ್ತದೆ.

ಈ ನೋವಿಗೆ ನೂರಾರು ಮದ್ದು ಇದೆ. ಹೊಟ್ಟೆ ತುಂಬಾ ಕುಡಿದು ಜಗವನ್ನೇ ಮರೆಯುವುದು, ಹೊಗೆಯ ಗೂಡಲ್ಲಿ ಜಗತ್ತು ಕಾಣದಿರಲೆಂದು ಕಣ್ಣು ಮುಚ್ಚುವುದು, ಹೃದಯಕ್ಕೆ ಪೆಟ್ಟಾಯಿತೆಂದು ತಮ್ಮನ್ನೇ ಕಳೆದುಕೊಂಡು ಜೀವಂತ ಶವವಾಗುವುದು, ಮನುಷ್ಯರ ಮೇಲೆ ಅಸಹ್ಯ ಬಂದು ದ್ವೇಷಿಸುವುದು, ಗುರಿಯನ್ನು ಮರೆತು ನಿರಾಸಕ್ತಿಯಿಂದ ಒಂಟಿಯಾಗುವುದು. ಹೀಗೆ ಮನಸೆಂಬ ದಾರಿ ತಪ್ಪಿದ ಕುದುರೆಯನ್ನು ಅದರ ಪಾಡಿಗೆ ಬಿಟ್ಟು ಬಿಡುತ್ತೇವೆ. ಆದರೆ ಜೀವನ ಎಂದರೆ ಒಂದು ಅದ್ಭುತ, ಸೃಷ್ಟಿಯ ಪ್ರತಿ ಕಣವೂ ಆಶ್ಚರ್ಯಕರ ಇಂಥ ಬೃಹತ್ ಬ್ರಹ್ಮಾಂಡದಲ್ಲಿ ಅಣುವಿನಲ್ಲಿ ಪರಮಾಣುವಂತಿರುವ ನಾವು ಈ ಅಮೂಲ್ಯ ಅದ್ಭುತವನ್ನು ಇನ್ನೊಂದು ಹೆಸರಿಲ್ಲದ ಅಂಶಕೆ ಬಿದ್ದು ಕಳೆದು ಕೊಳ್ಳುವುದು ದುರದೃಷ್ಟಕರ.

ಏನೇ ಇದ್ದರೂ ಏನೇ ಇರದಿದ್ದರೂ ಬದುಕಿನ ಬಗ್ಗೆ ಆಸಕ್ತಿ ಮಾತ್ರ ಇರಲೇಬೇಕು. ಮಳೆಯ ಹಾಡಿಗೆ ಶೋಕಗೀತೆ ರಾಗವೇ ಈಗ ಎದೆಯಲ್ಲಿ ವಿಜಯಭೇರಿ ಬಾರಿಸುತ್ತಿತ್ತು.

Advertisements

10 thoughts on “ಮಳೆ ನಿಂತು ಹೋದ ಮೇಲೆ ….

  1. ಈ ಬರಹದ ಭಾವದಲೆಲ್ಲೋ ನನ್ನನ್ನೂ ಕ೦ಡುಕೂ೦ಡ೦ತನಿಸುತಿದೆ….. ಹೃದಯಕ್ಕೆ ಹತ್ತಿರವೆನಿಸುತ್ತಿದೆ….. Wonderful writing….. just got lost in the flow 🙂

    Liked by 2 people

  2. ಹಾಡಿನ ಆ ಸಾಲುಗಳಲ್ಲಿ ಅವನ ಆಲಾಪವೇಕೆ? ಎಲ್ಲಾ ಇದ್ದರೂ ಭರಿಸಲಾಗದ ಶೂನ್ಯವೊಂದು ಇದೆಯೇಕೆ? ಮಳೆಗಾಲದಲ್ಲಿ ಮಳೆ ಬರದಿದ್ದರೂ ಮನಸ್ಸು ಒದ್ದೆಯಾಗುವುದೇಕೆ??.. ತುಂಬಾ ಇಷ್ಟವಾದವು ಸಾಲುಗಳು 🙂

    Liked by 1 person

  3. ಎಲ್ಲರ ಮನದಲ್ಲೂ ಎಲ್ಲೋ ಮೂಲೆಯಲ್ಲಿ ಅಡಗಿರುವಂಥ ಭಾವವನೆಗಳು. ಹಸಿಯಾಗಿ ಅಕ್ಷರಕ್ಕಿಳಿಸಿರುವೆ, well written 😊

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s