ಒಂದು ಊಟದ ಮನೆಯ ಕಥೆ !!

ನಮ್ಮನೇಲಿ ಇವರು ಹೋದ ಮೇಲೆ ನಾನು ಊರಲ್ಲಿ ಯಾವುದೇ ಕಾರ್ಯಕ್ರಮಕ್ಕೂ ಅಷ್ಟು ಹೋದವಳಲ್ಲ.ಆದರೆ ಈ ಮಳೆಗಾಲದಲ್ಲಿ ತೋಟ ದಾಟಿ ಮೇಲಿನ ಮನೆ ಸೀನಣ್ಣ ನಮ್ಮನೆ ತನಕ ಬಂದು ನೀವು ಹಿರಿಯೋರು ಪ್ರಸಾದ ಕೊಡಲಿಕ್ಕೆ ಆದರೂ ವೈದಿಕಕ್ಕೆ ಬರಲೇಬೇಕು ಎಂದು ಕರೆದು ಹೋಗಿದ್ದ. ನಿರ್ವಾಹ ಇಲ್ಲದೆ ಇಂಬಳ ಕಚ್ಚಿಸಿಕೊಂಡು ಅವರ ಮನೆಗೆ ಹೋಗಬೇಕಾದರೆ ನನಗೆ ಸಾಕು ಸಾಕಾಗಿತ್ತು.ವೈದಿಕ ನಡುಮನೆಲಿ ಆಗ್ತಾ ನಾವು ಹೆಂಗಸರು ಚೌಕಿಲಿ ಕೂತು ಖಾಲಿಯಾದ ಹಪ್ಪಳ ಸಂಡಿಗೆ ಬಗ್ಗೆನೆ ಹರಟುತ್ತಾ ಇದ್ದರು. ನಾನು ಶಾಂತ ಕೊಟ್ಟಿದ್ದ ಕಾಪಿ ಕುಡಿತ ಊಟಕ್ಕೆ ಬಾಳೆಲೆ ಕಾಯಿಸುತ್ತಾ ಕೂತಿದ್ದೆ.

ಸೀನಣ್ಣನ ಕೊನೆ ಮಗಳು ಬೆಂಗಳೂರಿನಲ್ಲಿ ಕೆಲಸಕ್ಕೆ ಇರೋಳು ಮನೆಗೆ ಬಂದಿದ್ದಳು. ಹಣೆಗೆ ಇಡದೇ, ಕೈಗೆ ಬಳೆ ಹಾಕದೆ ಇದ್ದರೂ ಚಂದ ಕಾಣ್ತಿದ್ದಳು. ಕಣ್ಣು ತುಂಬಾ ಕಪ್ಪು ಬಳಿದು ಕೊಂಡು ಉಪ್ಪರಿಗೆ ಮೇಲೆ ಕೆಳಗೆ ಓಡಾಡುತ್ತಿದ್ದಳು. ಈಗಿನ ಕಾಲದ ಮಕ್ಕಳು ಫೋನ್ ಎಲ್ಲಿ ಕೆಳಗೆ ಇಡುತ್ತಾವೆ . ಆದರೆ ಈ ಹುಡುಗಿ ಫೋನ್ ಮುಂದೆ ನಗೋದು, ಹೇಗೆ ಹೇಗೊ ನಿಲ್ಲೋದು, ಮುಖ ತಿರುಗಿಸೋದು ಅಮ್ಮ ಕರೆದರೆ ಆ ಅನ್ನೋದು ಬಿಟ್ಟು ಎದ್ದು ಹೋಗ್ತಿರಲಿಲ್ಲ. ಆಮೇಲೆ ನನಗು ಗೊತ್ತಾಯ್ತು ಫೋಟೊ ತೆಕ್ಕೊಳದಂತೆ.  ಸೀನಣ್ಣನ ಸೋದರತ್ತೆಗೆ ಸೊಂಟ ಬಿದ್ದೋಗಿದೆ ಅವಳನ್ನು ಎಬ್ಬಿಸಿ ಪೋನ್ ಮುಂದೆ ಈ ಹುಡುಗಿ ನಗುತ್ತಾ ಕಣ್ಣು ಅಗಲಿಸಿದ್ದು ಆಯ್ತು.

ಧೋ ಅಂತ ಒಂದೆ ಸಮನೆ ಸುರಿಯೊ ಮಳೆಗೆ ಗರಿ ಗರಿ ವಡೆ, ಹಲಸಿನ ಹಣ್ಣಿನ ಮುಳಕ, ಸಿಕ್ಕಿನುಂಡೆ ಊಟ ಗಡದ್ದಾಗಿತ್ತು. ಆದರೆ ಆ ಮಗು ಮೊಬೈಲಲ್ಲಿ ಸಿಗ್ನಲ್ ಇಲ್ಲ ಅಂತ ಸಣ್ಣ ಮುಖ ಮಾಡಿಕೊಂಡು ಕೂತಿತ್ತು.ಕಳಲೆ ಮಜ್ಜಿಗೆ ಹುಳಿ ಆಗಿ ಮಾವಿನ ಹಣ್ಣಿನ ಪಾಯಸ ಬರುವಷ್ಟರಲ್ಲಿ ಮಳೆ ಆರ್ಭಟ ಜೋರಾಗಿತ್ತು. ಅಂಗಳದಲ್ಲಿ ನೀರು ನಿಂತು ಸಣ್ಣ ಕೆರೆಯಂತಾಯಿತು. ಜೊತೆಗೆ ಸುರಿವ ಮಳೆ ಸೇರಿ ತಣ್ಣೀರು ಕುದಿಯುವಂತೆ ಕಾಣುತಿತ್ತು. ಜಗಲೀಲಿ ಊಟಕ್ಕೆ ಕೂತ ಈ ಮಗು ಎದ್ದು ಫೋಟೊ ತೆಗೆಯೊಕ್ಕೆ ಓಡಿತು. ಪಾಚಿ ಕಟ್ಟಿದ ಕಲ್ಲಿನ ಮೇಲೆ ನಿಂತು ತಾನು ಕಾಣುವಂತೆ ಉಲ್ಟಾ ಹಿಡಿದು ಸರ್ಕಸ್ ಮಾಡುತ್ತಾ ಪೋಟಕ್ಕೆ ನಕ್ಕಿದ್ದಷ್ಟೆ ಧಡಲ್ಲನೆ ಜಾರಿ ಬಿದ್ದು ಬಿಟ್ಟಳು.ಅಷ್ಟೊತ್ತಿನವರೆಗೆ ಕುಂಟನ ಕೋಲಂತೆ ಕೈಗೆ ಅಂಟಿದ್ದ ಫೋನು ಆ ಕೆಸರಿನ ಕೆರೆಯ ಮಧ್ಯ ಹೋಯಿತು. ಅಡಿಗೆಯವರು ಬಡಿಸೋದನ್ನು ಬಿಟ್ಟು ಎತ್ತಕ್ಕೆ ಹೋದರು. ಎದ್ದಮೇಲೆ ಗಾಯ, ಕೊಚ್ಚೆ ಎಣಿಸದೆ ಫೋನು ಹುಡುಕಲಾಯಿತು.ಅಂತು ಮೂರು ನಾಲ್ಕು ಚೂರಾದ ಫೋನು ತೆಗೆದುಕೊಂಡು , ಅಳುತ್ತಾ ಊಟವನ್ನು ಮಾಡದೆ ಹೋದಳು. ಇದರ ಮಧ್ಯೆ  ಶ್ರೀಪಾದ ರಾಯರು ಬೇಕಾದರೆ ನಂದು ತಗೊ ಕೂಸೆ ಎಂದು ಈಗಾಗಲೆ ಹಳತಾದ ಅವರ ಹೊಸ ಫೋನು ಹಿಡಿದುಆ ಮಗುವಿನ ಕಣ್ಣು ಕೆಂಪಾಗಿಸಿದ್ದರು. ಅಷ್ಟರಲ್ಲಾಗಲೆ ಮಜ್ಜಿಗೆ ಅನ್ನ ಮುಗಿದು ಎಲ್ಲಾ ಕೈ ತೊಳೆಯಲು ಎದ್ದಿದ್ದರು ನಾನು ಎದ್ದು ಆ ಪಾಚಿ ಕಟ್ಟಿದ ಕಲ್ಲ ಮೇಲೆ ನಿಂತು ಸರದಿಯಲ್ಲಿ ಕಾಯ ತೊಡಗಿದೆ.

Advertisements

3 thoughts on “ಒಂದು ಊಟದ ಮನೆಯ ಕಥೆ !!

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s