ಕೊನೆಯನೆಂದು ಮುಟ್ಟದಿರು

ವಜ್ರ ವೈಢೂರ್ಯಗಳು ರತ್ನ ಖಚಿತ ಕಿರೀಟಗಳು
ಹರಿತ ಖಡ್ಗವದು, ಬಿಲ್ಲು ಬಾಣಗಳು
ಚಿನ್ನದ ಬತ್ತಳಿಕೆ
ದೈತ್ಯ ಗದೆಯು,ರಾಜ ಲಾಂಛನವು, ಛತ್ರ ಚಾಮರಗಳು
ವೈಭವೋಪೇತ ಬಯಲದು ಆದರೂ
ಅಷೈಶ್ವರ್ಯಗಳ ನಡುವೆ ಕಣ್ಣೀರಿಡುತಿತ್ತು
ಕುರುಕ್ಷೇತ್ರ

ಬಾಣದಿಂದ ಚುಚ್ಚಿ ಹೋರಾಡಿದವನ ಮನಸಲ್ಲಿ
ಕಚ್ಚುವ ನಾಗರ
ಧರ್ಮದಿಂದಲೇ ಹೋರಾಡಿದೆಯೆಂದು ಕಾಡುವ ಹಿರಿತನ ಹಿರಿಯವನಿಗೆ
ಅಜ್ಞಾತದಲ್ಲೂ ಹೊಟ್ಟೆ ತುಂಬಾ ಉಂಡವನಿಗೆ
ಈಗ ಹಸಿವಿಲ್ಲವೇಕೆ
ಹಠದಂತೆ ಮುಡಿ ಕಟ್ಟಿದ ಮೇಲೂ ಕಣ್ಣಲೇಕೆ ನೀರು
ಸೂತ್ರಧಾರನ ಬೆರಳು ಗೀರಿತೆ? ಕಡಿದ ದಾರದಿಂದ

ಇಲ್ಲಿ ಸೊತವರೆಲ್ಲಾ ಸತ್ತರು,  ಗೆದ್ದವರೆಲ್ಲಾ ಸೋತರು
ಯುದ್ಧ ಮಾಡುವಾಗ ಇದ್ದದ್ದು ಭಾರಿ
ಹುಮ್ಮಸ್ಸು
ಗುರಿ ಮುಟ್ಟಿದಾಗ ನಕ್ಕಿದ್ದು  ಬರೀ
ಶೂನ್ಯಭಾವ
ಕತ್ತಲು-ಬೆಳಕಿನ ಆಟದಲ್ಲಿ ಜಯ ಅಪಜಯಕ್ಕೆ
ಅರ್ಥವೇನು
ಮನದ ಸೂರ್ಯ ಮುಳುಗದಂತೆ ಸಾಗುತಿರಲಿ ಭಾರತ ನಿರಂತರ

Advertisements

9 thoughts on “ಕೊನೆಯನೆಂದು ಮುಟ್ಟದಿರು

 1. ರವಿ ಕಾಣದ್ದನ್ನ ಕವಿ ಕ೦ಡ..ಹ್ಹಾ!! ಮಾತು….
  ಅದ್ಭುತ ದೃಷ್ಟಿಕೋನ..
  ಸೋಲನ್ನ ಕ್ಷಣಿಕ ಅ೦ತ ಹೇಳಿ ಸಾ೦ತ್ವಾನ ನಡೆಯುತ್ತೆ
  ಗೆಲುವನ್ನ ಕ್ಷಣಿಕವಾಗಿಸಿ ವಾಸ್ತವದ ಪ್ರಜ್ಞೆ ಜಾಗೃತಗೊಳಿಸಿದ್ದೀರಿ…ಇಷ್ಟವಾಯ್ತು…

  Liked by 2 people

  1. ಸೋಲು ಗೆಲುವಿಗಿಂತ ಯುದ್ಧ ಯಾವಾಗಲೂ ಇರಬೇಕು ಅನ್ನಿಸುತ್ತೆ. ಪ್ರಾಣ ಶಕ್ತಿ ಪ್ರವಹಿಸುತ್ತಾ ಚಲನೆಯಲ್ಲಿ ಇರುವುದೇ ಬದುಕು..

   Liked by 2 people

   1. ಯುದ್ಧವೇನೋ ನಿರ೦ತರವೆ…ಆದರೆ ಮುನ್ನಡೆ-ಹಿನ್ನಡೆ ಇರಲೇಬೇಕಾಗುತ್ತೆ..ಯಾಕ೦ದ್ರೆ ಒ೦ದು ಆಶಾಭಾವ ಇರಬೇಕಾಗುತ್ತೆ ನೋಡಿ…ಆ ಹಿನ್ನಡೆ ಮುನ್ನಡೆಗಳೇ ನಾವ೦ದುಕೊಳ್ಳೊ ಸೋಲು-ಗೆಲುವು ಅನ್ನಬಹುದೆ?

    Liked by 3 people

   2. ನದಿಯಂತೆ ಬದುಕು…. ಪ್ರಹಾವಿದ್ದರೂ, ಸುಳಿ ಇದ್ದರೂ, ಶಾಂತತೆ ಇದ್ದರೂ ಹರಿವುದು ನಿರಂತರ..

    Liked by 2 people

 2. ನಿರಂತರ ಹುಡುಕಾಟ ಮಾನವನ ಅಂತಃಪ್ರಜ್ಞೆಯಲ್ಲಿರುವ ಸುಪ್ತವಾದ-ನಿಗೂಢವೆನಿಸುವ-ತೀವ್ರ ಬಯಕೆಯ ಅಂತಃಸತ್ವವೇನೊ ಅನಿಸುತ್ತದೆ. ಅದರ ನಿಲ್ಲದ ಮೊರೆತ ಶಾಂತಿಯನ್ನು ಕದಡಿ ಕದನ ಬಯಸುವಷ್ಟೆ ಸಹಜವಾಗಿ, ಕದನದಲ್ಲಿ ಶಾಂತಿಗೆ ಗಿರಕಿ ಹಾಕುತ್ತದೆ. ಸೋಜಿಗವೆಂದರೆ ಅದನ್ನೆಲ್ಲ ಕಂಡುಂಡು ಮನಗಳು ನಿರ್ಲಿಪ್ತವಾದರೂ ಆ ಹುಡುಕಾಟ ನಿಲ್ಲುವುದಿಲ್ಲ; ಮತ್ತಾರೊ ದೊಂದಿ, ಕಂದಿಲು ಹೊತ್ತಿಸಿ ನಡೆದಿರುತ್ತಾರೆ – ಮತ್ತೊಂದು ಜಾಗ, ಮತ್ತೊಂದು ಹೆಸರು, ಮತ್ತೊಂದು ನೆಪದಲ್ಲಿ..

  ಈ ಯುದ್ದ ವಾಸ್ತವದಲ್ಲಿ ಭೌತಿಕವಾಗಿ ನಡೆದಷ್ಟೆ ಸಹಜವಾಗಿ ಅಂತರಂಗಿಕವಾಗಿ, ಆಂತರ್ಯದಲ್ಲೂ ನಡೆಯುವುದು ಅದರ ಮತ್ತೊಂದು ಸೋಜಿಗ !

  Liked by 2 people

 3. ನನಗೆ ಪುಸ್ತಕವೊಂದರಲ್ಲಿ ಓದಿದ ಸಾಲು ನೆನಪಾಗುತ್ತಿದೆ – ಪ್ರೇಮಿ ಭೌತಿಕವಾಗಿ ಪ್ರೇಮಿಸುವುದಕ್ಕಿಂತ, ತಾನು ಪ್ರೇಮಿಸುತ್ತಿದ್ದೇನೆಂಬ ‘ಭಾವವನ್ನು’ ಹೆಚ್ಚು ಪ್ರೇಮಿಸುತ್ತಾನಂತೆ.. ಅದು ಹುಟ್ಟಿಸುವ ನಿರೀಕ್ಷೆ, ತರಲೆ – ತಾಪತ್ರಯ, ಸರಸ – ವಿರಸ – ಸಂತಸಗಳೆಲ್ಲದರ ಭಾವೋತ್ಕರ್ಷ ಬಗೆಬಗೆಯ ಆಶಯಗಳಾಗಿ ಹೃದಯದಲ್ಲಿ ಠೇವಣಿಯಾಗುತ್ತಲೆ ಇರುತ್ತದೆಯೇನೊ ಅನಿಸುತ್ತದೆ. ಹೀಗಾಗಿ ಭೌತಿಕ ಪ್ರೇಮ ಕಳಚಿಕೊಂಡರು ಖಾಲಿಯಾಗದೆ ಪೇರಿಸಿಕೊಂಡಿದ್ದ ‘ಭಾವ ಠೇವಣಿ’ ಆ ಮೊದಲಿನ ಕಲ್ಪನಾ ಲೋಕದ ಲಹರಿಯಿಂದ ಹೊರಬರಬಿಡದೆ ಅಲ್ಲೆ ಸುತ್ತು ಹೊಡೆಸುತ್ತಿರುತ್ತದೆ – ಪ್ರಾಯಶಃ ಅದರದೆ ಆದ ‘ರೇ’ ಪ್ರಪಂಚದಲ್ಲಿ… ಆ ಮಿಕ್ಕುಳಿದ ಭಾವ ಠೇವಣಿ ಖಾಲಿಯಾಗುವತನಕ (ಅಥವಾ ಅದನ್ನು ವ್ಯಯಿಸಲು ಸಾಧ್ಯವಾಗುವ ಮತ್ತೊಂದು ಪ್ರೇಮ ದೊರಕುವತನಕ) ಪ್ರೇಮಿಯ ‘ಪ್ರೇಮಲೋಕ’ ಅಸ್ತಿತ್ವದಲ್ಲಿದ್ದುಬಿಡುತ್ತದೆಯೆನ್ನೋಣವೆ ? ಕೆಲವರಲ್ಲಿ ಅದು ದುರಂತ ಪ್ರೇರಕವಾದರೆ ಮತ್ತಲವರಿಗೆ ಮತ್ತೇನೊ ಸಾಧನೆಯ ಏರುಮೆಟ್ಟಿಲೂ ಆಗಬಹುದು.. ಮತ್ತೆ ಕೆಲವರನ್ನು ಅತಂತ್ರವಾಗಿಸಿಬಿಡಲೂಬಹುದು.. ಹೀಗಾಗಿ ಒಂದುವೇಳೆ ಪ್ರೇಮಿತ್ವ ಉಳಿದರೂ ಅದೇ ಒರಿಜಿನಲ್ ಪ್ರೇಮಿಯ ಸತ್ವ-ತತ್ವ ಉಳಿದಿರಲಾರದು ಎನಿಸುತ್ತದೆ.. ಕಾಲಾನುಕ್ರಮೇಣ ಅದು ತಾಳುವ ರೂಪವೆ ಬದಲಾದರೂ ಅಚ್ಚರಿಯಿಲ್ಲ. ಅದೇನೆ ಆದರೂ ಪ್ರೇಮವೆನ್ನುವ ವಸ್ತು ಸದಾ ನಿರಂತರ ಚರ್ಚೆಯ ವಸ್ತುವಾಗಿ ಕಾಡುವುದರಲ್ಲಿ ಅನುಮಾನವಿಲ್ಲ – ಪರ ವಿರೋಧಗಳ ಹುಟ್ಟು ಹಾಯಿಸುತ್ತ…

  ಇದೇ ಬ್ಲಾಗಿನಲ್ಲಿ ಓದಿದ ‘ಕೊನೆಯನೆಂದು ಮುಟ್ಟದಿರು ‘ ಕವನದ ಈ ಸಾಲುಗಳು ಪ್ರೇಮಕ್ಕೂ ಕೂಡ ಅನ್ವಯಿಸುವ ವ್ಯಾಖ್ಯಾನವಾಗಬಹುದೆನಿಸುತ್ತದೆ (ಪ್ರೇಮವೆನ್ನುವ ರಾಮಾಯಣವೂ ಒಂದು ತರಹ ನಿರಂತರ ಭಾರತದಂತೆಯೆ ತಾನೆ !?)

  ಇಲ್ಲಿ ಸೊತವರೆಲ್ಲಾ ಸತ್ತರು, ಗೆದ್ದವರೆಲ್ಲಾ ಸೋತರು
  ಯುದ್ಧ ಮಾಡುವಾಗ ಇದ್ದದ್ದು ಭಾರಿ
  ಹುಮ್ಮಸ್ಸು
  ಗುರಿ ಮುಟ್ಟಿದಾಗ ನಕ್ಕಿದ್ದು ಬರೀ
  ಶೂನ್ಯಭಾವ
  ಕತ್ತಲು-ಬೆಳಕಿನ ಆಟದಲ್ಲಿ ಜಯ ಅಪಜಯಕ್ಕೆ
  ಅರ್ಥವೇನು
  ಮನದ ಸೂರ್ಯ ಮುಳುಗದಂತೆ ಸಾಗುತಿರಲಿ ಭಾರತ ನಿರಂತರ

  Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s