ರೂಪ ರೂಪಗಳನ್ನು ದಾಟಿ

image

ನನ್ನ ಹೆಸರು ಕರಿರಾಜ. ನಾನೊಬ್ಬ ಗೌಡರ ಹುಡುಗ.ಇಲ್ಲೇ ಶಿವಮೊಗ್ಗ ಜಿಲ್ಲೆಯ ಹೊಸಳ್ಳಿ ನನ್ನ ಊರು. ಮನೆಯಲ್ಲಿ ಮೂರರಲ್ಲಿ ಒಂದು ಎಂದು ಬೆಳೆದವನು.ಶಾಲೆಯ ಬಗ್ಗೆ ಹೇಳುವುದಾದರೆ ಯಾವುದೇ ಗುರುಗಳಿಗೂ ನನ್ನ ನೆನಪಿಲ್ಲ. ತುಂಬಾ ಓದುವ ವಿದ್ಯಾರ್ಥಿಯಾಗಲಿ , ತಂಟೆಕೋರ ಹುಡುಗನಾಗಲೀ ನಾನಾಗಿರಲಿಲ್ಲ.ಹೇಗೋ ಎಲ್ಲಾ ತರಗತಿಗಳನ್ನು ಸಾಮಾನ್ಯವಾಗಿ ಪಾಸು ಮಾಡಿಕೊಂಡು ಕಾಲೇಜು ಸೇರಿದೆ. ವೆಂಕ್ಟೇಸ ಸುಲಭ ಎಂದು ಹೇಳಿದ ಒಂದೇ ಕಾರಣಕ್ಕಾಗಿ B.com ಸೇರಿ ಡಿಗ್ರಿಯನ್ನು ಪಡೆದೆ.

ಇಂದಿನವರೆಗೆ ನಾನು ನನ್ನ ಬಗ್ಗೆ ಎಂದೂ ತಲೆ ಕೆಡಿಸಿಕೊಂಡವನಲ್ಲ. ಜನರೆಲ್ಲ ಕೈ ಮಾಡಿ ತೋರಿಸದಂತೆ ಗುಂಪಲ್ಲಿ ಗೋವಿಂದ ಎಂದು ಎಲ್ಲರೊಳಗೊಂದಾಗುವ ಸರಳ,  ಸಭ್ಯ ಜೀವಿ. ಸ್ನೇಹಿತರ ಗುಂಪಲ್ಲಿ ಯಾರು ಯಾರಿಗಾದರೂ ಲೈನು ಹೊಡೆಯಬೇಕಾದರೆ ಹಿಂದೆ ನಿಂತು ಕೋರಸ್ ಕೊಡುವ, ಎಲ್ಲಾ ಕೈ ಎತ್ತಿದರೆ ಜೈ ಅನ್ನುವ ಹೀಗೆ ಆಟಕ್ಕಿದ್ದರೂ ಲೆಕ್ಕಕಿಲ್ಲದಂತ ಕೆಲಸಗಳು ನನ್ನ ಹವ್ಯಾಸ.

ಹೀಗೆ ಗುಪ್ತ ಗಾಮಿನಿ ನದಿಯಲ್ಲಿ ಒಮ್ಮೆ ಕಾಲಾಡಿಸಿದವಳು ಶಾರಿ (ಶಾರದೆ). ಇವಳು ಹಾಲುಗೆನ್ನೆಯ ಶ್ವೇತಕನ್ಯೆ.. ನೀವಂದು ಕೊಡಂತೆ ನನ್ನದು ಕಡು ಕಪ್ಪು ಬಣ್ಣ. ಯಾವುದೇ ಬಟ್ಟೆ  ನನಗೆ ಚೆನ್ನಾಗಿ ಕಾಣುವುದಿಲ್ಲ. ಮಾತನಾಡುತ್ತಿದ್ದರೆ ಮುಖವನ್ನು ಯಾರೂ ದಿಟ್ಟಿಸಿ ನೋಡುವುದಿಲ್ಲ. ತೀರ ಸ್ನಾನ ಆಗದೆ ಬೆಳಿಗ್ಗೆ ಅಂಗಡಿಗೆ ಹೋದರೆ ಕಳ್ಳನಂತೆ ನೋಡುವುದು ಸಹಜ. ಇದೆಲ್ಲಾ ನಾನು ಹುಟ್ಟಿನಿಂದ ಹೊತ್ತು ಬಂದಿರುವುದು. ಬೇಸರವೆಲ್ಲಾ ಮುಗಿದು ಮಾಮೂಲಾಗಿ ಹೋಗಿದೆ,  ಅಷ್ಟಾಗಿಯೂ ಬಿಳಿ ಹುಡುಗರೊಡನೆ ನಾನು ಬೆರೆಯುವುದು ಇಲ್ಲ. ಈ ಶಾರಿಯ ವಿಚಾರ ಮರೆತು ಬಿಟ್ಟೆ. ನಮ್ಮ ಕ್ಲಾಸಿನ ರಾಮಚಂದ್ರ ಕೂಡ ಇಷ್ಟ ಪಡುತ್ತಿದ್ದನಂತೆ. ನನಗಿಂತ accounts ನಲ್ಲಿ ಒಂದೆರಡು ಮಾರ್ಕ್ಸ ಕಡಿಮೆ ಆದರೂ ಬೆಳ್ಳಗೆ ಬುದ್ಧಿವಂತನಂತೆ ಕಾಣುತಿದ್ದ.ಆದ್ದರಿಂದ ನಾನು ಶಾರಿಯ ಕಡೆಗೆ ನೋಡುವುದನ್ನು ನಿಲ್ಲಿಸಿ ಬಿಟ್ಟೆ.

ಒಂದು ಕುರಿಮಂದೆಯಲ್ಲಿ ತಳ್ಳಿಸಿ ಕೊಂಡು ಬಂದಂತೆ ನಾನೀಗ ವೃತ್ತಿಜೀವನಕ್ಕೆ ಕಾಲಿಟ್ಟಿದ್ದೆ. ಇಲ್ಲಿ ನನಗೆ ಗುಂಪಿನಲ್ಲಿ ಹಾಸು ಹೊಕ್ಕಾಗಲು ಯಾವುದೇ ಗೆಳೆಯರ ಗ್ಯಾಂಗ್ ಸಿಗಲಿಲ್ಲ. ಕೆಲಸ ಎಷ್ಟೇ ಮಾಡಿದರೂ ಏನೋ ಅತೃಪ್ತಿ, ಅಸಹನೆ ಕಾಡುತಿರುತ್ತಿತ್ತು. ಪ್ರೆಸೆಂಟೇಷನಗಳಲ್ಲಿ ನಾರ್ಥ್ ಇಂಡಿಯನ್ ಹುಡುಗರನ್ನು ನೋಡುತ್ತಾ ಮೈ ಮರೆಯುವ ಹುಡುಗಿಯರು ನನ್ನ ಪ್ರೆಸೆಂಟೇಷನ್ ಮಾತ್ರ ಕೇಳಿ ಪ್ರಶ್ನಿಸುತ್ತಿದ್ದರು.
ಎಥ್ನಿಕ್ ಡೇ, ಟೀಂ ಲಂಚಗಳಲ್ಲಿ ಕ್ಯಾಮರ ಗನ್ನಿನಂತೆ ಕಂಡು ಶೂಟ್ ಮಾಡಿದ್ದು ಕೊಂದಂತೆ ಅನಿಸುತಿತ್ತು. ಎಲ್ಲಾ ಕಾರ್ಯಕ್ರಮಗಳಲ್ಲಿ ಕದ್ದು ಮುಚ್ಚಿ ಓಡಾಡುತ್ತಿದ್ದೆ. ಈ ಫೇಸ್ ಬುಕ್ ಹಾವಳಿಯಿಂದಾಗಿ ಕುರೂಪ ಜಗಜ್ಜಾಹೀರಾದಂತಾಗಿ ಕುಗ್ಗಿ ಹೋಗಿದ್ದೆ. ಬೆಂಗಳೂರಿನ ಮಾಲ್,ಮೆಕ್ ಡಿ, ಪಿಜ್ಜ ಹಟ್ ಗಳಲ್ಲಿ ಎಷ್ಟೇ ಪ್ರಯತ್ನ ಪಟ್ಟರೂ ನನ್ನ ರೂಪ ಹೊಂದಿಕೊಳ್ಳದೆ  ದೃಷ್ಟಿಬೊಟ್ಟಿನಂತೆ ಅಣಗಿಸುತ್ತಿತ್ತು.

ಹೀಗೆ ತೋರಿಕೆಯ ಬದುಕಿನಲ್ಲಿ ಮುಖವಾಡವಿಲ್ಲದೆ ನಾನು ಹಿಂದೆ ಬೀಳುತಿದ್ದೆ.ಒಮ್ಮೆ ಯಾವುದೋ ಟ್ರೈನಿಂಗ್ ಮೇಲೆ ಚೆನ್ನೈಗೆ ಹೋಗಬೇಕಾಗಿ ಬಂತು. ಶಾಪಗ್ರಸ್ತ ಊರಿನಂತೆ ಎಲ್ಲರಿಂದ ಬೈಸಿಕೊಳ್ಳುತ್ತಿದ್ದ ಊರು ನನಗೂ ಏನೋ ಕುತೂಹಲ. ಬೆಂಕಿಯ ಬೇಗೆಯಿದ್ದ ಊರಿಗೆ ಮೊದಲು ಕಾಲಿಟ್ಟಾಗ ಮಂಗಳೂರಿನ ನಾಲ್ಕರಷ್ಟು ಹೆಚ್ಚು ಸೆಕೆ ಅನಿಸಿತ್ತು. ಹೇಗೂ ಆಫೀಸಿನ ಏ.ಸಿ ಯಲ್ಲಿ ಮುಂದಿನ ಕಾರ್ಯ-ಕಲಾಪಗಳು ಶುರುವಾಯಿತು. ತಮಿಳನ್ನು ಬಿಟ್ಟು ಬೇರೆ ಭಾಷೆಯಾಡದ ಜನ, ನನಗಿಂತಲೂ ಕಪ್ಪಿದ್ದ ಮುಖಗಳು, ಸದಾ ಯಾವುದೋ ಫಿಲ್ಮಿನ ಗುಂಗಲ್ಲೇ ಇರುವುದನ್ನು ನೋಡಿದಾಗ ಬೆಂಗಳೂರಿನ ಟೆಕ್ಕಿಗಳಿಗಿಂತ ವಾಸಿಯೆನಿಸಿದ್ದೇನೊ ನಿಜ.

ಆಗ ನನಗೆ ಕಾಣಿಸಿದವರು ವಿಲ್ಲಾಪುರಂ ಚಿನ್ನ ಪಿಳ್ಳೈ ರಾಮಲಿಂಗಂ ಇವರದು ಅಷ್ಟಾವಕ್ರ ಸ್ವರೂಪ, ಕತ್ತಲೆಗೆ ಭಯವಾಗುವ ಕಪ್ಪು ಬಣ್ಣ, ತುಂಬಾ ಮುಂದೆ ಬಂದಿರುವ ಹಲ್ಲು, ದೊಡ್ಡ ಮೂಗು,  ಸಾಲದಕ್ಕೆ ಮುಖದ ತುಂಬಾ ಮೊಡವೆಗಳು ಸುಟ್ಟ ಕಲೆಯಂತೆ. ಆದರೂ ಇಂಥ ಮನುಷ್ಯ ಇಡೀ ಕೋಣೆಯನ್ನೇ ಸೆಳೆದಿದ್ದರು. ಅಲ್ಲಿದ್ದ ಅಷ್ಟು ಜನ ಇವರ ವ್ಯಕ್ತಿತ್ವಕ್ಕೆ ಮಾರು ಹೋಗಿದ್ದರು. ಇವರು ಬೆನ್ನು ತಟ್ಟಿ ನಗುತ್ತಿದ್ದರೆ ದೊಡ್ಡಣ್ಣ ಭೇಟಿಯಾದಂತೆ ಭಾಸವಾಗುತ್ತಿತ್ತು.ಮೊದಲ ಬಾರಿಗೆ ನನ್ನಲ್ಲಿ ಆತ್ಮ ವಿಶ್ವಾಸವೊಂದು ಇವರನ್ನು ನೋಡಿ ಚಿಗುರೊಡೆಯಿತು.ಕಾಲು ಕುಂಟಾಗಿದ್ದರೂ ಬದುಕಿಗೇ ಸವಾಲು ಹಾಕಿ ಮೇಲೆ ಬಂದಿದ್ದರು. ಇವರನ್ನು ನೋಡಿಯೇ ಕಣ್ಣಿಂದ ನಿಸ್ಸಾರ ಜೀವನದ ಪೊರೆ ಸರಿಯಿತು. ನನ್ನಲಿರುವ ಅಳುಕಿಗೆ ನನ್ನ ರೂಪವನ್ನು ನೆಪವಾಗಿಟ್ಟಿರುವೆ ಎಂಬ ಜ್ಞಾನೋದಯವಾಯಿತು. ಈಗ ನನಗೆ ಎಲ್ಲರಲ್ಲಿಯೂ ಅಂತಃ ಶಕ್ತಿ ಕಾಣುತ್ತದೆ. ನನ್ನ ಕಣ್ಣುಗಳು ಅವರ ಮುಖವಾಡವನ್ನು ತೂರಿ ಕಣ್ಣುಗಳನ್ನು ಇರಿಯುತ್ತದೆ. ನನಗೆ ಗೊತ್ತಿಲ್ಲದೆ ಧೈರ್ಯ ಎದೆಯಾಳದಲ್ಲಿ ಸ್ವಲ್ಪ ತಡವಾಗಿಯಾದರೂ ಉದ್ಭವಗೊಂಡಿತು.

Advertisements

4 thoughts on “ರೂಪ ರೂಪಗಳನ್ನು ದಾಟಿ

  1. ಯಾರಾರಿಗೊ ಯಾವುದಾವುದೊ ವಿಷಯಕ್ಕೆ ಕಾಡುವ ಕೀಳರಿಮೆ ವ್ಯಕ್ತಿಯ ಸಾಧಕ ಶಕ್ತಿಯ ಅಂತಃಸತ್ವವನ್ನೆ ಕುಗ್ಗಿಸಿ ನಿಸ್ತೇಜವಾಗಿಸಿಬಿಡುವುದು ನಿಜಕ್ಕೂ ಮನಃಶಕ್ತಿಯ ಬಲ ಮತ್ತು ದೌರ್ಬಲ್ಯಗಳೆರಡಕ್ಕು ಹಿಡಿದ ಕನ್ನಡಿ.. ಸಾಧನೆಯ ಫಲಿತವೊಂದೆ ಅದನ್ನು ಗೆಲ್ಲಿಸುವ ರಾಮಬಾಣ.. ಅದನ್ನು ಚೆನ್ನಾಗಿ ಚಿತ್ರಿಸಿದ್ದೀರಾ.. ಆ ಚೆನ್ನೈ ವ್ಯಕ್ತಿ ನಿಜ ಜೀವನದ ಪಾತ್ರವೆ?

    Liked by 1 person

    1. 😊 😊 ಅಲ್ಲ , ಆದರೆ ಅದಕ್ಕೆ ಹತ್ತಿರದ ವ್ಯಕ್ತಿತ್ವವಿರುವ ಮಹಿಳೆಯೊಬ್ಬರನ್ನು ನೋಡಿದ್ದೆ ಅದು ಕಥೆಯ ಎಳೆಯಲ್ಲಿ ಸ್ವಲ್ಪ ಬದಲಾಗಿ ಬಂದಿದೆ..

      Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s