ಶಿವಮೊಗ್ಗೆಯಲ್ಲಿ ..

ಚಲಿಸುತ್ತಲೆ ಕಳೆದ ಒಂದು ರಾತ್ರಿಯದು
ನಾ ಊರಿಗೆ ಬರುವ ದಾರಿಯದು

ನನ್ನೂರಿಗಿಂತ ನನ್ನ ಸೆಳೆಯುವ ಒಂದು ಊರು
ಅಲ್ಲಿರುವುದು ಸಾವಿರ ಭಾವನೆಗಳ ಬಣ್ಣದ ತೇರು
ಓದಲು ಬಂದ ಷೋಡಶಿಗೆ ಕಾಡಿದ್ದು ಬಲುಜೋರು
ಆಮೇಲೆ ಮುದ್ದಿಸಿ ಕೊಟ್ಟ ನೆನಪು ನೂರು

ಭಯದ ಹೆಜ್ಜೆಗಳಿವೆ ಅಲ್ಲಿನ ರಸ್ತೆಗಳಲ್ಲಿ
ಮನೆ ತೊರೆದ ಒಂಟಿತನವಿದೆ ತಿರುವುಗಳಲ್ಲಿ
ಕನಸು ಕರಗಿದ ಬೇಸರವಿದೆ ಸಂಜೆಗಳಲ್ಲಿ
ಆದರೂ ಊರು ಮುನ್ನೆಡಿಸಿತ್ತು ಧೈರ್ಯದಲ್ಲಿ

ಒಡೆದ ಚೂರುಗಳಲ್ಲೇ ಮತ್ತೆ ಕನಸು ಕಟ್ಟಿದ್ದೆ
ಗುರಿಯೊಂದು ಕಂಡು ದಾರಿಯ ನಾನೇ ಮಾಡಿದ್ದೆ
ಸದಾ ಸಾಧನ ಕೇರಿಯಲಿ ಕಳೆದು ಹೋಗುತ್ತಿದ್ದೆ
ಮಾತು ಕಥೆಯಿಲ್ಲದ ಬರೀ ಮೌನದ ಮುದ್ದೆ

ಗೆಳತಿಯರ ಗುಂಪಿನ ಲಗ್ಗೆ ವಾಸದಲ್ಲಿ ವಸಂತ
ಹಕ್ಕಿಗಳ ಚಿಲಿಪಿಲಯಿರಲು ಇನ್ನೆಲಿಯ ಏಕಾಂತ
ಹರೆಯದ ಸ್ನೇಹದ ಬೆಸುಗೆ ಇಂದಿಗು ಅನಂತ
ಪದಗಳು ಸೋತಿದೆ ಬಣ್ಣಿಸಲು ಆ ಜೀವಿತ

ಯವ್ವನದ ಮೊದಲ ನಾಚಿಕೆಯ ಮೊಡವೆಯಿದೆ
ರಾತ್ರಿಯಡೀ ಮಾತಾಡಿದ ಗುಟ್ಟು ಅಲ್ಲಿದೆ
ಪ್ರೀತಿಯೆಂದು ಕಾಡಿದ ಮನಸಿನ ತುಂಟತನವಿದೆ
ಮೌನದಲ್ಲಿ ಮಾತಾಡಿಸಿದ ಕಣ್ಣಿನ ಭಾಷೆಯಿದೆ

ಈಗ ಇವೆಲ್ಲಾ ನೆನಪು ಮಧುರ ಯಾತನೆಗೆ
ಎಲ್ಲೋ ಕೈ ಜಾರಿ ಕಳೆದ ಕೊಡುಗೆ
ಜೀವನವೇ ಒಂದು ಓದದ ಹೊತ್ತಿಗೆ
ನಾ ಅಂಟಿಕೊಂಡಿರುವೆ ಆ ಓದಿದ ಹಾಳೆಗೆ

3 thoughts on “ಶಿವಮೊಗ್ಗೆಯಲ್ಲಿ ..

Leave a comment