ಅನಂತದೂರದ ಸ್ಟಾಪು

ಸೋಮವಾರ,ಮಂಗಳವಾರ, ಬುಧವಾರಗಳು ಮಹಾಭಾರತದ ಅರ್ಜುನ ವಿಷಾದ ಯೋಗದಂತೆ. ಸೋಮವಾರ ಮುಂಜಾನೆ ಶುರುವಾಗುವ ಯುದ್ಧ/ಕೆಲಸ ಏಕೆ ಮಾಡಬೇಕೆಂಬ ಗೊಂದಲದಿಂದ ಹಿಡಿದು ಕೃಷ್ಣ ತಳ್ಳಿದ ಮೇಲೆ ವಿಧಿಯಿಲ್ಲದೆ ಪ್ರಾರಂಭಿಸುವ ಸಮರದಂತೆ.ಹೀಗೆ ಒಂದು ದಿನ ಸೂರ್ಯಾಸ್ತದ ಸಮಯ ಯುದ್ಧ ಮುಗಿಸಿಕೊಂಡು ಡೇರೆಗೆ ಮರಳುವಂತೆ ನಾನು ಕೂಡ ಅಂದಿನ ಕೆಲಸ ಮುಚ್ಚಿಟ್ಟು ಮನೆಗೆ ಹೊರಟ್ಟಿದ್ದೆ.

ಚಡಪಡಿಸುತ್ತಾ ಲಿಫ್ಟಿನಲ್ಲಿ ಕೆಳಗಿಳಿದು ಆಫೀಸ್ ಬಸ್ ಕಡೆಗೆ ಓಡಿದರೆ ಕಣ್ಣ ಮುಂದೆಯೇ ಕನಿಕರವಿಲ್ಲದೆ ಚಲಿಸಿ ಮಿಸ್ ಆಯಿತು. ಕೊನೆಗೆ ಸೋತ ಓಟಗಾರನಂತೆ ಇದ್ದೆಲ್ಲಾ ಶಕ್ತಿಯನ್ನು ಒಟ್ಟುಗೂಡಿಸಿ ಸುಮಾರು 1 km ದೂರದಲ್ಲಿರುವ ಬೆಂಗಳೂರಿನ ಹೆಮ್ಮೆಯ bmtc ಬಸ್ ಸ್ಟಾಪಿನ ಕಡೆ ಹೆಜ್ಜೆ ಹಾಕಿದೆ.

ಕಾಯಿಸಿ ಕಾಯಿಸಿ ಬಂದ ಬಸ್ಸಿನಲ್ಲಿ ಊರ ಜಾತ್ರೆಗಿಂತ ಹೆಚ್ಚು ರಷ್ ಇತ್ತು.ಸಹ ಪ್ರಯಾಣಿಕರ ಬೆಂದ ಮುಖಗಳ ನೋಡುತ್ತಲೇ ಆ ಮಾನವ ಸಮುದ್ರಕ್ಕೆ ಹಾರಿದೆ.

image

ಜನರ ತಿಕ್ಕಾಟ, ಗುದ್ದಾಟ, ತಿಣುಕಾಟಗಳು ಆಟದ ಎಲ್ಲಾ ನಿಯಮಗಳ ಮೀರಿ ಗೆದ್ದಿತ್ತು.ಹೈ ಹೀಲ್ಡ್ಸ್ ಲಲನೆಯರು ಪಕ್ಕದವರನ್ನು ಚುಚ್ಚಿ ‘ಸ್ಸಾರಿ…’ ಎಂದು ನಲಿಯುತ್ತಿದ್ದರು.ಮುಂದೆ ಹತ್ತಿದ ನಾನು ಕೊನೆಸ್ಟಾಪೆಂದು ತಳ್ಳಿಸಿಕಂಡು ಬಸ್ಸಿನ ಮಧ್ಯಭಾಗಕ್ಕೆ ಅಂದರೆ ಗಂಡಸರ ವಲಯದ ಆರಂಭದಲ್ಲಿದ್ದೆ.

ಬೀಡಿ,ಸಿಗರೇಟು,ಸಾರಾಯಿ,ಸೆಂಟು,ಬೆವರು,ಯಾವುದೋ ಕರಿದ ತಿಂಡಿ ಹೀಗೆ ನೂರೆಂಟು ಸುವಾಸನೆಗಳು ಗಾಳಿಯಲ್ಲಿ ಬೆರತು ಉಸಿರಾಡದಿರುವುದು ಹಿತವಾಗಿತ್ತು.ಹಣ್ಣುಗಾಯಿ ನೀರುಗಾಯಿಯಾಗಿದ್ದ ನನಗೆ ಘನೀಭವಿಸಿದ ಟ್ರಾಫಿಕ್ನಲ್ಲಿ ಗಮ್ಯ ಅನಂತ ದೂರದಲ್ಲಿ ದೂರವಾಗುತ್ತಿತ್ತು.ಹೀಗೆ ಒಂದು ದುರದೃಷ್ಟಕರ ಪ್ರಯಾಣದಲ್ಲಿ ಭಾಗಿಯಾದವರ ಮುಖಗಳು ನಿರ್ಜೀವವಾಗಿತ್ತು.ಆದರೆ ಎಲ್ಲಾ ಮುಖಗಳಲ್ಲಿಯೂ ಅತ್ಯಂತ ಕುರೂಪ ಮತ್ತು ಕೊಳೆಯಾದ ಮುಖ ನನ್ನ ಪಕ್ಕನಿಂತು ನನ್ನನ್ನೇ ದಿಟ್ಟಿಸುತ್ತಿತ್ತು.

ಅಂಥ ಮುಖವನ್ನು ಒಮ್ಮೆ ನೋಡಿದೆ ಅಷ್ಟೇ ….ಅದನ್ನು ಮರೆಯಲು ಹೆಣಗಾಡ ತೊಡಗಿದೆ.ಇಳಿಯುವವರಿಗಿಂತ ಹತ್ತುವವರೆ ಹೆಚ್ಚಾಗಿ ಬಸ್ ಕಾದ ನೀರಂತೆ ಕುದಿಯುತಿತ್ತು.ಎಷ್ಟೇ ಒದ್ದಾಡಿದರೂ ನಿಂತಲ್ಲಿಂದ ಒಂದಿಂಚು ಕದಲಲಾಗಲಿಲ್ಲ.ನನ್ನ ಪಕ್ಕ ನಿಂತವನಾದರೂ ಇಳಿದುಕೊಳ್ಳಲಿ ಎಂದು ಪ್ರಾರ್ಥಿಸಿದೆ.

ಆಗ ಅವನ ಚೈನಾ ಸೆಟ್ಟಿನಲ್ಲಿ ಹಾಕಿದ ಹಾಡೊಂದು ಇಂಪಾಗಿ ನನ್ನ ಕಿವಿಯ ತುಂಬಿತು.
ನಾ ನೋಡು ಹೀಗಾದೆ, ನೀ ಬಂದ ತರುವಾಯ..
ನೀ ಹೀಗೆ ಕಾಡಿದರೆ, ನಾನಂತು ನಿರುಪಾಯ..

ಈ ಎರಡೇ ಸಾಲಿಗೆ ಅಲ್ಲಿ ನನಗೊಂದು ಜಗತ್ತು ಸೃಷ್ಟಿಯಾಯಿತು.

ಹೆಚ್ಚು ಕಡಿಮೆ ನಾನೀಗ ಹುಚ್ಚನಾಗಿ ಹೋದಂತೆ, ಹಚ್ಚಿಕೊಂಡ ಮೇಲೆ ನಿನ್ನಾ..
ಕಷ್ಟವಾದರೇನಂತೆ…ಸ್ಪಷ್ಟವಾಗಿ ಕೂಗು ಇಷ್ಟ ಬಂದ ಹಾಗೆ ನನ್ನಾ…

ಇಂಥ ಪದಗಳಲ್ಲಿ ನನ್ನನ್ನು ನಾನೇ ಮರೆಯುವಾಗ ಆ ನೂಕು ನುಗ್ಗಾಟ ಹೇಗೆ ನೆನಪಾಗುತ್ತದೆ.

ಈಗ ಮೂಡಿದ ಪ್ರೇಮಗೀತೆಗೆ, ನೀನೆ ಸುಂದರ ಶೀರ್ಷಿಕೆ ಆದೆಯಾ..
ನನ್ನೆಲ್ಲ ಭಾವಗಳು ನಿನಗೆಂದೇ ಉಳಿತಾಯ,
ಅದ ನೀನೆ ದೋಚಿದರೆ, ನಾನಂತು ನಿರುಪಾಯ..

ಕವಿಯ ಕಲ್ಪನೆಗೆ ಅಲ್ಲಿನ ಉದ್ವೇಗ ತಿಳಿಯದಂತೆ ಕರಗಿ ಶಾಂತವಾಗಿತ್ತು.

ಹಾಡಿನ ಸಾಲಿನಲಿ ನಾ ಸಿಕ್ಕಿ ಹಾಕಿಕೊಂಡಿದ್ದರೆ ಹಾಡು ಮುಂದುವರಿದಿತ್ತು.

ದಿನ ರಾತ್ರಿ ನನಗೀಗ ಕನಸಲ್ಲೇ ವ್ಯವಸಾಯ,
ದಿನಗೂಲಿ ನೀಡುವೆಯಾ….

ಹಾಡು ಕೇಳದಂತಾಯಿತು.ತಿರುಗಿ ನೋಡಿದರೆ ನನ್ನ ಪಕ್ಕದವನು ಮೊಬೈಲು ಹಿಡಿದು ಇಳಿಯುತ್ತಿದ್ದ.ನಾನು ನಗುತ್ತಾ ಬೇಸರದಿಂದ ಆ ಹಾಡಿಗೆ ಬೀಳ್ಕೊಟ್ಟೆ.ಆ ಹಾಡಿನ ಗುಂಗಲ್ಲೆ ಇನ್ನು ಮುಳುಗಿರುವಾಗ ನನ್ನ ಅನಂತ ದೂರದ ಸ್ಟಾಪು ಬಂದಿತ್ತು.

5 thoughts on “ಅನಂತದೂರದ ಸ್ಟಾಪು

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s